ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಮಹಾಪೂರಕ್ಕೆ ಕರಾವಳಿ ಸಜ್ಜು

ಬಿಜೆಪಿಯ ಆರು ಅಭ್ಯರ್ಥಿಗಳಿಂದ ಇಂದೇ ನಾಮಪತ್ರ
Last Updated 15 ಏಪ್ರಿಲ್ 2013, 6:45 IST
ಅಕ್ಷರ ಗಾತ್ರ

ಮಂಗಳೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಕೇವಲ ಮೂರು ದಿನ ಬಾಕಿ ಉಳಿದಿದ್ದು, ಸೋಮವಾರ `ಶುಭದಿನ' ಎಂಬ ಕಾರಣಕ್ಕೆ ಬಹುತೇಕ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.

ಬಿಜೆಪಿಯಿಂದ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದ್ದು, ಅವರೆಲ್ಲರೂ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಯೋಗೀಶ್ ಭಟ್, ಕೃಷ್ಣ ಪಾಲೆಮಾರ್, ಎಸ್.ಅಂಗಾರ ಇವರಲ್ಲಿ ಪ್ರಮುಖರು. ಮಂಗಳೂರಿನ ಚಂದ್ರಹಾಸ್ ಉಳ್ಳಾಲ್ ಮಧ್ಯಾಹ್ನ 12ಕ್ಕೆ, ಕೃಷ್ಣ ಪಾಲೆಮಾರ್ 12.30ಕ್ಕೆ ಹಾಗೂ ಯೋಗೀಶ್ ಭಟ್ 12.40ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಕಾಂಗ್ರೆಸ್‌ನಿಂದ ಜೆ.ಆರ್.ಲೋಬೊ ಮತ್ತು ವಸಂತ ಬಂಗೇರ ಅವರೂ ಸಹ  ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಸುಳ್ಯದಲ್ಲಿ ಡಾ.ರಘು ಅವರು ಕೂಡ ನಾಮಪತ್ರ ಸಲ್ಲಿಸುವುದು ಬಹುತೇಕ ನಿಶ್ಚಿತವಾಗಿದೆ. ಆದರೆ ರಮಾನಾಥ ರೈ, ಯು.ಟಿ.ಖಾದರ್ ಸಹಿತ ಇತರರು ಅಂತಿಮ ದಿನವಾದ ಬುಧವಾರ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

ಜೆಡಿಎಸ್‌ನಿಂದ ಯಾರು ಯಾವಾಗ ನಾಮಪತ್ರ ಸಲ್ಲಿಸಬೇಕು ಎಂಬ ಬಗ್ಗೆ ಭಾನುವಾರ ರಾತ್ರಿಯವರೆಗೂ ಚರ್ಚೆ ನಡೆದೇ ಇತ್ತು. ಎಸ್‌ಡಿಪಿಐನ ಇಬ್ಬರು ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಇತರ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಸಹ ದೊಡ್ಡ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತವಾಗಿದೆ.

ನಾಮಪತ್ರ ಸಲ್ಲಿಸುವುದಕ್ಕೆ ಮೊದಲಾಗಿ ನಡೆಸುವ ಮೆರವಣಿಗೆಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು ನೆಟ್ಟಿದೆ. ಹೀಗಾಗಿ ಈ ಹಿಂದಿನಂತೆ ಭಾರಿ ಗೌಜು, ಗದ್ದಲವಿಲ್ಲದೇ ನಾಮಪತ್ರ ಸಲ್ಲಿಕೆ ಕಾರ್ಯಗಳು ಕೊನೆಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

ನಾಮಪತ್ರಗಳ ಜತೆಗೆ ಸಲ್ಲಿಸುವ ಆಸ್ತಿ ವಿವರಗಳ ಬಗ್ಗೆಯೂ ಜನರಲ್ಲಿ ಕುತೂಹಲ ಸಹಜವಾಗಿ ನೆಲೆಸಿದೆ.

ಪುತ್ತೂರಿನ ಬಿಕ್ಕಟ್ಟು: ಭಾನುವಾರ ಪ್ರಕಟವಾದ ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ ಸಹ ಪುತ್ತೂರಿನ ಬಿಕ್ಕಟ್ಟು ಬಗೆಹರಿಯದೆ ಇರುವುದು ವಿಶೇಷ. ಹೀಗಾಗಿ ಕ್ಷೇತ್ರದಲ್ಲಿ ಒಂದು ರೀತಿಯ ವಿಚಿತ್ರ ಕುತೂಹಲ ನೆಲೆಸಿದೆ.

ಮಂಗಳೂರು ಉತ್ತರದಲ್ಲಿ ವಿಜಯಕುಮಾರ್ ಶೆಟ್ಟಿ, ಕೃಪಾ ಆಳ್ವ ಅವರ ಕನಸುಗಳನ್ನು ಧ್ವಂಸಮಾಡಿ ಮೊಯಿದಿನ್ ಬಾವ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯಲ್ಲಿ ಮೂಡುಬಿದಿರೆ ಮತ್ತು ಬೆಳ್ತಂಗಡಿಯಲ್ಲಿ  ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಜಿಜ್ಞಾಸೆ ಭಾನುವಾರ ರಾತ್ರಿಯವರೆಗೂ ಮುಂದುವರಿದಿದ್ದು, ಮೂಡುಬಿದಿರೆಯಲ್ಲಿ ಉಮಾನಾಥ ಕೋಟ್ಯಾನ್ ಅವರತ್ತ ಪಕ್ಷದ ಒಲವು ಇದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ಗೆ ಕಾಪು ಕಗ್ಗಂಟು
ಪಡುಬಿದ್ರಿ:
  ನಾಮಪತ್ರ ಸಲ್ಲಿಸಲು ಅಂತಿಮ ದಿನ ಸಮೀಪಿಸುತ್ತಿದ್ದರೂ ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟು ಭಾನುವಾರವೂ ಕೊನೆಗೊಂಡಿರಲ್ಲಿಲ್ಲ. ಕರಾವಳಿಯಲ್ಲಿ ಪುತ್ತೂರು ಮತ್ತು ಕಾಪು ಕ್ಷೇತ್ರಗಳು ಪಕ್ಷಕ್ಕೆ ತೀವ್ರ ತಲೆನೋವು ತಂದಿತ್ತಿವೆ.

ಕಾಪು ಕ್ಷೇತ್ರದಲ್ಲಿ ಆರಂಭದಲ್ಲಿ 19 ಆಕಾಂಕ್ಷಿಗಳ ಹೆಸರು ಇದ್ದರೂ ಕೊನೆ ಕ್ಷಣದಲ್ಲಿ ಇದು 5ಕ್ಕೆ ಇಳಿದಿತ್ತು. ವಸಂತ ಸಾಲ್ಯಾನ್, ಸುರೇಶ್ ಶೆಟ್ಟಿ ಗುರ್ಮೆ, ಎಂ.ಎ.ಗಫೂರ್, ಹರೀಶ್ ಕಿಣಿ, ದಿವಾಕರ ಶೆಟ್ಟಿ ಇವರಲ್ಲಿ ಯಾರಿಗೆ ಎಂಬ ಕುತೂಹಲ ಇರುವಾಗಲೇ ವಿನಯಕುಮಾರ್ ಸೊರಕೆ ಅವರ ಹೆಸರೂ ಕೇಳಿಸಿದೆ. ಬಿಕ್ಕಟ್ಟು ಬಗೆಹರಿಸಲು ಪಕ್ಷದ ಮುಖಂಡರಂತೂ ಭಾನುವಾರ ರಾತ್ರಿ ನಿದ್ದೆಗೆಡುವುದು ಅನಿವಾರ್ಯ ಎನ್ನಲಾಗುತ್ತಿದೆ.

ಜೆಡಿಎಸ್: ಭುಗಿಲೆದ್ದಿದೆ ಬಿಕ್ಕಟ್ಟು?
ಮಂಗಳೂರು ದಕ್ಷಿಣ ಕ್ಷೇತ್ರದಿಂದ ಡಿ.ಎಂ.ಅಸ್ಲಾಂ ಅವರನ್ನು ಕಣಕ್ಕೆ ಇಳಿಸಲು ಕೊನೆಯ ಕ್ಷಣದಲ್ಲಿ ಜೆಡಿಎಸ್ ನಿರ್ಧರಿಸಿದ್ದಕ್ಕೆ ಇಡೀ ಜಿಲ್ಲೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ ಎಂದು ಹೇಳಲಾಗಿದ್ದು, ಪಕ್ಷದ ಇತರ ಅಧಿಕೃತ ಅಭ್ಯರ್ಥಿಗಳು ತಾವು ನಾಮಪತ್ರ ಸಲ್ಲಿಸದೆ ಇರಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಂಬೈಗೆ ತೆರಳಿದ್ದ ಅಮರನಾಥ ಶೆಟ್ಟಿ ಅವರು ಸಹ ಭಾನುವಾರ ರಾತ್ರಿ ನಗರಕ್ಕೆ ವಾಪಸಾಗಿದ್ದರೂ, ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸುವುದು ಸಂಶಯದಿಂದ ಕೂಡಿದೆ ಎನ್ನಲಾಗಿದೆ. ಮಂಗಳೂರು ದಕ್ಷಿಣದಲ್ಲಿ ಎಸ್.ಪಿ.ಚೆಂಗಪ್ಪ ಅವರಿಗೆ ಟಿಕೆಟ್ ನೀಡಲು ಈ ಮೊದಲು ನಿರ್ಧರಿಸಲಾಗಿತ್ತು. ಈ ಬಗ್ಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸದಾಶಿವ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ, `ಕೊನೆಯ ಕ್ಷಣದ ಸಭೆಗಳು ನಡೆಯುತ್ತಿವೆ, ಅಭ್ಯರ್ಥಿಗಳ ವಿಚಾರದಲ್ಲೇ ಚರ್ಚೆ ನಡೆಯುತ್ತಿದೆ' ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT