ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಕೆ; ಮುಖಂಡರ ಬಲ ಪ್ರದರ್ಶನ

Last Updated 16 ಏಪ್ರಿಲ್ 2013, 9:48 IST
ಅಕ್ಷರ ಗಾತ್ರ

ವಿಜಾಪುರ: ನಗರದಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆ ಅಬ್ಬರ ಜೋರಾಗಿತ್ತು. ಎಲ್ಲೆಲ್ಲೂ ಬಿಜೆಪಿ-ಜೆಡಿಎಸ್ ಧ್ವಜಗಳು ರಾರಾ ಜಿಸುತ್ತಿದ್ದವು.

ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರೆ, ಇತರ ಅಭ್ಯರ್ಥಿಗಳು ಕೆಲವೇ ಕೆಲವು ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ವಿಜಾಪುರ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅಪ್ಪು ಪಟ್ಟಣಶೆಟ್ಟಿ, ಜೆಡಿಎಸ್ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ, ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಎಂ. ಬಾಗವಾನ, ಕೆಜೆಪಿ ಅಭ್ಯರ್ಥಿ ಡಾ.ಬಾಬು ನಾಗೂರ, ಬಬಲೇಶ್ವರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿಜುಗೌಡ ಪಾಟೀಲ, ಬಿಜೆಪಿ ಅಭ್ಯರ್ಥಿ ಎಂ.ಎಸ್. ರುದ್ರಗೌಡರ, ನಾಗಠಾಣ ಮೀಸಲು ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿ ವಿಠ್ಠಲ ಕಟಕಧೋಂಡ, ಬಿಜೆಪಿ ಅಭ್ಯರ್ಥಿ ನಾಗೇಂದ್ರ ಮಾಯವಂಶಿ, ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಮತ್ತಿತರರು ನಾಮಪತ್ರ ಸಲ್ಲಿಸಿದರು.

ಬಲ ಪ್ರದರ್ಶನ: ಅಪ್ಪು ಪಟ್ಟಣಶೆಟ್ಟಿ ಹಾಗೂ ಬಸನಗೌಡ ಪಾಟೀಲ ಯತ್ನಾಳ ಅವರು ನಾಮಪತ್ರ ಸಲ್ಲಿಸುವ ಸಂದರ್ಭವನ್ನು ತಮ್ಮ ಬಲಾಬಲ ಪ್ರದರ್ಶನಕ್ಕೆ ಬಳಸಿಕೊಂಡಂತಿತ್ತು.

ಅಪ್ಪು ಅವರು ಜೋರಾಪುರ ಪೇಟೆಯ ಶಂಕರಲಿಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವೆುರವಣಿಗೆಯಲ್ಲಿ ಆಗಮಿಸಿದರೆ, ಯತ್ನಾಳ ಅವರು ಸಿದ್ಧೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವೆುರವಣಿಗೆಯಲ್ಲಿ ಆಗಮಿಸಿದರು. ಈ ಇಬ್ಬರ ವೆುರವಣಿಗೆಯಲ್ಲಿಯೂ ಅಪಾರ ಸಂಖ್ಯೆಯ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.

ಬಬಲೇಶ್ವರದ ಬಿಜೆಪಿ ಅಭ್ಯರ್ಥಿ ಎಂ.ಎಸ್. ರುದ್ರಗೌಡರ, ನಾಗಠಾಣ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಂದ್ರ ಮಾಯವಂಶಿ ಜಂಟಿಯಾಗಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು. ಬಬಲೇಶ್ವರ ಜೆಡಿಎಸ್ ಅಭ್ಯರ್ಥಿ ವಿಜುಗೌಡ ಪಾಟೀಲ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.

ಭಾನುವಾರವಷ್ಟೇ ಟಿಕೆಟ್ ಘೋಷಣೆಯಾಗಿದ್ದ ವಿಜಾಪುರ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಎಂ. ಬಾಗವಾನ, ಪಕ್ಷದ ಪದಾಧಿಕಾರಿಗಳು-ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.

ಅಚ್ಚರಿಯ ಬೆಳವಣಿಗೆಯಲ್ಲಿ ನಾಗೂರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಬಾಬು ನಾಗೂರ ಅವರು ವಿಜಾಪುರ ನಗರ ಕ್ಷೇತ್ರದಲ್ಲಿ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಬಿಗಿ ಭದ್ರತೆ: ಮೂರು ಕ್ಷೇತ್ರಗಳ ನಿರ್ವಾಚಣಾಧಿಕಾರಿಗಳ ಕಚೇರಿ ಇರುವ ಇಲ್ಲಿಯ ಮಿನಿ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಕೇಂದ್ರದ ಹೊರಗೆ ಅರೆ ಸೇನಾ ಪಡೆಯ ಯೋಧರನ್ನು ನಿಯೋಜಿಸಲಾಗಿತ್ತು. ಎಸ್ಪಿ ಅಜಯ್ ಹಿಲೋರಿ, ಎಎಸ್‌ಪಿ ಆರ್. ಚೇತನ ಸ್ಥಳದಲ್ಲಿ ಬೀಡು ಬಿಟ್ಟು ಭದ್ರತೆಯ ಉಸ್ತುವಾರಿ ನೋಡಿಕೊಂಡರು.

ಜಿಲ್ಲಾ ಪಂಚಾಯ್ತಿ ಮಾರ್ಗದ ಅರ್ಧ ರಸ್ತೆಯಲ್ಲಿಯೇ ಕಾರ್ಯಕರ್ತರನ್ನು ತಡೆಯಲಾಗುತ್ತಿತ್ತು. ಅಭ್ಯರ್ಥಿ ಸೇರಿ ಐವರನ್ನು ಮಾತ್ರ ಒಳಬಿಡಲಾಗುತ್ತಿತ್ತು. ಮೆರವಣಿಗೆಯ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT