ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಫಲಕ ತೆರವು: ವಾತಾವರಣ ಬಿಗು

Last Updated 22 ಅಕ್ಟೋಬರ್ 2012, 5:20 IST
ಅಕ್ಷರ ಗಾತ್ರ

ಕಂಪ್ಲಿ: ಇಲ್ಲಿಗೆ ಸಮೀಪದ ದೇವಸಮುದ್ರ ಗ್ರಾಮದ 2ನೇ ವಾರ್ಡ್‌ನಲ್ಲಿ ಹಾಕಲಾಗಿದ್ದ ಭಕ್ತ ಕನಕದಾಸ ಯುವಕ ಸಂಘದ ನಾಮಫಲಕ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ತಲೆದೋರಿದ್ದ ಬಿಕ್ಕಟ್ಟು ಅಧಿಕಾರಿಗಳು ಮತ್ತು ಪೊಲೀಸರ ಮಧ್ಯಸ್ಥಿಕೆಯಿಂದ ತಾತ್ಕಾಲಿಕವಾಗಿ ಉಪಶಮನವಾಗಿದೆ.  

ಗ್ರಾಮದ ಶೇಖರಗೌಡ ಎಂಬುವವರ 1.10 ಎಕರೆಯನ್ನು ಅದೇ ಗ್ರಾಮದ ಕೋರಿ ದೊಡ್ಡಬಸಪ್ಪ ಎನ್ನುವವರು ಖರೀದಿ ಮಾಡಿದ್ದರು. ಅವರು ಖರೀದಿಸಿದ ಭೂಮಿಯ ಎಂಟು ಸೆಂಟ್ ಜಾಗೆಯಲ್ಲಿ ಭಕ್ತ ಕನಕದಾಸ ಯುವಕ ಸಂಘದ ನಾಮಫಲಕವನ್ನು ಹಾಕಲಾಗಿತ್ತು.

ಕೋರಿ ದೊಡ್ಡಬಸಪ್ಪ ಎನ್ನುವವರು ನಾಮಫಲಕ ಹಾಕಿದ ಸ್ಥಳವೂ ತಮಗೆ ಸೇರಿದ್ದು, ಅದನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ನಂತರ ಸರ್ವೆ ಕಾರ್ಯ ನಡೆದು ನಾಮಫಲಕವಿದ್ದ ಸ್ಥಳ ದೊಡ್ಡಬಸಪ್ಪ ಅವರಿಗೆ ಸೇರಿದ್ದಾಗಿ ತಹಶೀಲ್ದಾರರು ದೃಢಪಡಿಸಿದರು.

ನಂತರ ನಾಮಫಲಕ ತೆರವುಗೊಳಿಸಲು ಶುಕ್ರವಾರ ಸಂಜೆ ತಹಶೀಲ್ದಾರರು ಗ್ರಾಮಕ್ಕೆ ಭೇಟಿ ನೀಡಿದಾಗ  ಸಂಘದ ಕೆಲವರು ಅಡ್ಡಿಪಡಿಸಿದರು. ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಮತ್ತು ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆಯಿತು.

ಹಲವು ವರ್ಷಗಳ ಹಿಂದೆ ಶೇಖರಗೌಡ ಎಂಬುವವರು ಸಂಘದ ನಾಮಫಲಕ ಹಾಕಿಕೊಳ್ಳಲು ಒಪ್ಪಿಗೆ ನೀಡಿದ್ದರು. ಆದರೆ ಇದೀಗ ಖರೀದಿ ಮಾಡಿರುವ ಕೋರಿ ದೊಡ್ಡಬಸಪ್ಪ ಅಡ್ಡಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾಮಫಲಕ ತೆರವುಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಪರಿಸ್ಥಿತಿ ಗಂಭೀರ ಹಂತ ತಲುಪುವುದನ್ನು ಅರಿದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಪರಸ್ಪರರ ನಡುವೆ ಮಾತುಕತೆ ನಡೆಸಿ ವಾತಾವರಣ ತಿಳಿಗೊಳಿಸಿದರು. ರಾಜಿ ಮಾಡಿಕೊಳ್ಳಲು ಇದೇ 30ರ ವರೆಗೆ ಅವಕಾಶ ನೀಡಲಾಗಿದೆ.

ಸಿಪಿಐ ಆರ್. ಹನುಮಂತಪ್ಪ, ಪಿಎಸ್‌ಐ ಎನ್. ಆನಂದ ಮತ್ತು ಸಿಬ್ಬಂದಿ ಗ್ರಾಮದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT