ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವ ತೊರೆಯಲಾರೆ: ದೋನಿ

`ಜವಾಬ್ದಾರಿಯಿಂದ ನುಣುಚಿಕೊಳ್ಳುವುದಿಲ್ಲ; ನನ್ನ ಭವಿಷ್ಯ ಆಯ್ಕೆದಾರರಿಗೆ ಬಿಟ್ಟದ್ದು'
Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಕೋಲ್ಕತ್ತ: `ದೋನಿ ಅತ್ಯುತ್ತಮ ನಾಯಕ ಎನಿಸಿರಬಹುದು. ಆದರೆ ಟೆಸ್ಟ್‌ನಲ್ಲಿ ಭಾರತ ಹೀಗೆ ಸೋಲು ಕಾಣುತ್ತಿರುವಾಗ ನಾಯಕರಾದವರ‌್ಯಾರು ಹೆಚ್ಚು ಕಾಲ ಉಳಿಯಲಾರರು' ಎಂದು ಕಪಿಲ್ ದೇವ್ ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ನುಡಿದಿದ್ದರು. ಆದರೆ ಸದ್ಯಕ್ಕೆ ನಾಯಕತ್ವ ತೊರೆಯಲಾರೆ ಎಂದು ದೋನಿ ಭಾನುವಾರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕ ನುಡಿದಿದ್ದಾರೆ.

`ಸೋಲಿನ ಹೊಣೆ ಹೊತ್ತು ನಾಯಕತ್ವ ತೊರೆಯಬಹುದು. ಆದರೆ ಜವಾಬ್ದಾರಿಯಿಂದ ನುಣುಚಿಕೊಂಡರು ಎಂಬ ಅಪವಾದ ಹೊತ್ತುಕೊಳ್ಳಲು ನಾನು ಬಯಸುವುದಿಲ್ಲ. ತಪ್ಪು ತಿದ್ದಿಕೊಳ್ಳಲು ಪ್ರಯತ್ನಿಸುತ್ತೇನೆ. ಆಟಗಾರರನ್ನು ಮತ್ತೆ ಒಟ್ಟುಗೂಡಿಸಿ ಸಮಾಲೋಚನೆ ನಡೆಸುತ್ತೇನೆ. ಆದರೆ ನನ್ನ ಭವಿಷ್ಯದ ಬಗ್ಗೆ ಆಡಳಿತ ಹಾಗೂ ಆಯ್ಕೆ ಸಮಿತಿ ನಿರ್ಧಾರ ತೆಗೆದುಕೊಳ್ಳಬಹುದು' ಎಂದಿದ್ದಾರೆ.

ದೋನಿ ಸಾರಥ್ಯದಲ್ಲಿ ಭಾರತ ತಂಡ ಇತ್ತೀಚಿನ 16 ಟೆಸ್ಟ್‌ಗಳಲ್ಲಿ 10ರಲ್ಲಿ ಸೋಲು ಕಂಡಿದೆ. ಈ ರೀತಿ ಇತ್ತೀಚಿನ ವರ್ಷಗಳಲ್ಲಿ ಆಗಿರಲಿಲ್ಲ. ಜೊತೆಗೆ ಈಗ ಸ್ವದೇಶದಲ್ಲಿಯೇ ಸತತ ಎರಡು      ಟೆಸ್ಟ್‌ಗಳಲ್ಲಿ ಸೋಲು ಎದುರಾಗಿದೆ. ಆದರೆ ಕ್ರಿಕೆಟ್ ಮಂಡಳಿಯಾಗಲಿ ಅಥವಾ ಆಯ್ಕೆ ಸಮಿತಿಯಾಗಲಿ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಕ್ರೀಡಾ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ.

`ತಂಡದ ಮೇಲಿನ ನಿಯಂತ್ರಣವನ್ನು ದೋನಿ ಕಳೆದುಕೊಂಡಿದ್ದಾರೆ. ಜೊತೆಗೆ ಗೊಂದಲಕ್ಕೆ ಒಳಗಾಗಿದ್ದಾರೆ. ಅವರ ತಂತ್ರಗಳೂ ಸೂಕ್ತವಾಗಿಲ್ಲ. ಬದಲಾಗಿ ಪಿಚ್ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡವರಂತೆ ಕಾಣುತ್ತಿದ್ದಾರೆ' ಎಂದು ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಕೆ.ಶ್ರೀಕಾಂತ್ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಮಹಿ ಕ್ರಮವನ್ನು ಟೀಕಿಸಿದ್ದಾರೆ.

ನಿಜವಾದ ಸವಾಲು ಎದುರಿದೆ: `ಎಲ್ಲರೂ ಉತ್ತಮ ಪ್ರದರ್ಶನ ನೀಡುತ್ತಿರುವಾಗ ತಂಡ ಮುನ್ನಡೆಸುವುದು ಸುಲಭ. ಆಗ ನಾಯಕನ ಅಗತ್ಯವೇ ಇರುವುದಿಲ್ಲ. ಆದರೆ ಸಮಸ್ಯೆಯಲ್ಲಿ ಸಿಲುಕಿದ್ದಾಗ ತಂಡವನ್ನು ಅಪಾಯದಿಂದ ಮೇಲೆತ್ತಲು ನಾಯಕನ ಅಗತ್ಯವಿರುತ್ತದೆ. ಈಗ ನನ್ನ ಎದುರು ಸವಾಲು ಬಂದು ನಿಂತಿದೆ. ಆ ಸವಾಲು ಸ್ವೀಕರಿಸಲು ನಾನು ಸಿದ್ಧ' ಎಂದು ದೋನಿ ನುಡಿದಿದ್ದಾರೆ. `ಈ ಸೋಲಿಗೆ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಪ್ರಮುಖ ಕಾರಣ. ಬ್ಯಾಟ್ಸ್‌ಮನ್‌ಗಳು ಉತ್ತಮ ಮೊತ್ತ ಕಲೆಹಾಕದಿದ್ದರೆ ಬೌಲರ್‌ಗಳು ಏನು ಮಾಡಲು ಸಾಧ್ಯ?' ಎಂದಿದ್ದಾರೆ.

`ಇದು ನನ್ನ ನಾಯಕತ್ವದ ಅವಧಿಯ ಕೆಟ್ಟ ಗಳಿಗೆ ಎಂದು ಒಪ್ಪಿಕೊಳ್ಳುವುದಿಲ್ಲ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಹೋದ ವರ್ಷ ಸೋಲು ಕಂಡಿದ್ದು ನಮ್ಮ ಸ್ಥೈರ್ಯ ಕುಗ್ಗಿಸಿದೆ. ಅದು ಇಲ್ಲೂ ಮುಂದುವರಿದಿದೆ. ಆದರೆ ತಂಡದ ಆಯ್ಕೆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ' ಎಂದು ಅವರು ಹೇಳಿದ್ದಾರೆ.
ಜಹೀರ್ ಖಾನ್ ಅವರ ಕಳಪೆ ಫಾರ್ಮ್ ಹಾಗೂ ಫಿಟ್‌ನೆಸ್ ಬಗ್ಗೆ ಪ್ರತಿಕ್ರಿಯಿಸಿದ ಮಹಿ, `ಖಂಡಿತ ಅವರು ಫಿಟ್ ಆಗಿದ್ದಾರೆ. ಸ್ಥಿರ ಪ್ರದರ್ಶನ ನೀಡಲು ಅವರು ಖಂಡಿತ ಪ್ರಯತ್ನ ಹಾಕುತ್ತಿದ್ದಾರೆ. ಆದರೆ ಕೆಲ ವಿಷಯಗಳು ಅಂದುಕೊಂಡಂತೆ ನಡೆಯುತ್ತಿಲ್ಲ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT