ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವ ಪ್ರಶ್ನಿಸಿದವರಿಗೆ ದೋನಿ ತಿರುಗೇಟು

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಪರ್ತ್: ತಮ್ಮ ನಾಯಕತ್ವವನ್ನು ಪ್ರಶ್ನಿಸಿದ ಟೀಕಾಕಾರರಿಗೆ ಹಾಗೂ ತಂಡದೊಳಗೆ ಬಿರುಕಿದೆ ಎಂದು ಗುಲ್ಲೆಬ್ಬಿಸಿದವರಿಗೆ ಮಹೇಂದ್ರ ಸಿಂಗ್ ದೋನಿ ತಿರುಗೇಟು ನೀಡಿದ್ದಾರೆ.

`ಬಿಯರ್ ಕುಡಿದ ಆಸ್ಟ್ರೇಲಿಯಾ ತಂಡದ ಬೆಂಬಲಿಗರು ಭಾರತ ತಂಡದ ಡ್ರೆಸಿಂಗ್ ಕೋಣೆಯಲ್ಲಿ ಬಿರುಕು ಕಾಣಿಸಲೆಂದು ಕನಸು ಕಾಣುತ್ತಿದ್ದಾರೆ. ನಾಯಕತ್ವದ ವಿಷಯದಲ್ಲಿ ತಂಡದಲ್ಲಿ ಒಡಕು ಉಂಟಾಗಿದೆ ಎನ್ನುವ ಭ್ರಮೆ ಅವರಿಗೆ...~ ಎಂದು ಕಟುವಾಗಿ ನುಡಿದಿದ್ದಾರೆ `ಮಹಿ~.

ತಂಡದಲ್ಲಿ ಒಡಕಿದೆ ಎಂದು ವಿಶ್ಲೇಷಣೆ ಮಾಡಿ ಸುದ್ದಿ ಹರಡಿದ ಮಾಧ್ಯಮಗಳ ವಿರುದ್ಧ ತಿರುಗಿಬಿದ್ದಿರುವ ಅವರು ಮತ್ತಿನಲ್ಲಿನ ಕನಸು ಯಾವತ್ತೂ ನಿಜವಾಗುವುದಿಲ್ಲವೆಂದು ವ್ಯಂಗ್ಯವಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಮುನ್ನಾದಿನವಾದ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವು ಮಾಜಿ ಕ್ರಿಕೆಟಿಗರು ಕೂಡ ತಮ್ಮ ಬಗ್ಗೆ ಟೀಕೆ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. `ತಪ್ಪು ಮಾಡಿದಾಗ ಹಾಗೂ ತಪ್ಪು ಮಾಡದಿರುವಾಗ ಎಲ್ಲವೂ ಅವರಿಗೆ ಒಂದೇ ರೀತಿಯಾಗಿ ಕಾಣಿಸುತ್ತದೆ~ ಎಂದು ತಿರುಗೇಟು ನೀಡಿದರು.

ಕಾಂಗರೂಗಳ ನಾಡಿನಲ್ಲಿನ ಪ್ರೇಕ್ಷಕರ ವರ್ತನೆಯ ಬಗ್ಗೆಯೂ ಅಸಮಾಧಾನಗೊಂಡಿರುವ ಅವರು `ಬೆಳಿಗ್ಗೆ ಅವರು ಚೆನ್ನಾಗಿಯೇ ಇರುತ್ತಾರೆ. ನಮ್ಮಂದಿಗೆ ಸೌಹಾರ್ದಯುತವಾಗಿಯೇ ಇರುತ್ತಾರೆ. ಆದರೆ ಚಹಾ ವಿರಾಮದ ಹೊತ್ತಿಗೆ ಎಲ್ಲವೂ ಬದಲಾಗಿರುತ್ತದೆ. ಕೆಲವು ಬ್ಯಾರಲ್ ಬೀಯರ್ ಉರುಳಿದಾಗ ವರ್ತನೆಯೇ ಬದಲಾಗುತ್ತದೆ. ನಮ್ಮ ವಿರುದ್ಧ ಕೆಟ್ಟ ಮಾತುಗಳು ಹರಿದು ಬರುತ್ತವೆ~ ಎಂದು ಹೇಳಿದರು.

ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮೈಕಲ್ ಸ್ಲಾಟರ್ ಅವರು `ಸತತ ಎರಡು ಸೋಲಿನ ನಂತರ ಭಾರತ ತಂಡದ ಬೆಂಬಲಿಗರ ಉತ್ಸಾಹ ಕುಗ್ಗಿದೆ~ ಎಂದು ಹೇಳಿದ್ದನ್ನು ವ್ಯಂಗ್ಯ ಮಾಡಿದ ದೋನಿ `ಅದು ಸತ್ಯವಲ್ಲ. ನಿಜವಾಗಿ ಹೇಳುವುದಾದರೆ ಹಾಗೆಂದು ಭಾವಿಸುತ್ತಿರುವುದು ಸ್ಲಾಟರ್. ಅದನ್ನು ನಮ್ಮ ತಂಡದ ಅಭಿಮಾನಿಗಳ ಮೇಲೆ ಹೇರುತ್ತಿದ್ದಾರೆ. ಜನರನ್ನು ಸಮಾಧಾನ ಪಡಿಸುವುದೆಂದರೆ ಸೋಲಿನ ನಂತರ ನಾಲ್ಕಾರು ಗಂಟೆ ಅಂಗಳದ ನಡುವೆ ಕುಳಿತು ಕಣ್ಣೀರು ಸುರಿಸುವುದೇ? ಅವರ (ಸ್ಲಾಟರ್) ಅಭಿಪ್ರಾಯ ಹಾಗಿದೆ. ಅದು ಪ್ರೌಢ ಮನಸ್ಸಿಗೆ ಒಪ್ಪುವ ಮಾತಲ್ಲ~ ಎಂದರು.

ಅಭ್ಯಾಸ ಮಾಡದೇ ವಿರಾಮ ಪಡೆಯುತ್ತಾರೆಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ದೂರಿನ ಕುರಿತು ಕೇಳಿದ ಪ್ರಶ್ನೆಗೆ ದೋನಿ `ನಾವು ಕಠಣ ಅಭ್ಯಾಸ ಮಾಡುತ್ತೇವೆ. ಪ್ರತಿ ದಿನ ಸುಮಾರು ನಾಲ್ಕು ತಾಸು ನೆಟ್ಸ್‌ನಲ್ಲಿ ತಾಲೀಮು ನಡೆಸುತ್ತೇವೆ. ಅಗತ್ಯವಿದ್ದಷ್ಟು ವಿರಾಮ ಸಿಗುವಂತೆಯೂ ಮಾಡಲಾಗುತ್ತದೆ. ಹಾಗೆ ಮಾಡುವುದರಿಂದ ಆಟಗಾರರು ಚೈತನ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ~ ಎಂದು ಪ್ರತಿಕ್ರಿಯಿಸಿದರು.

ಸರಣಿಯಲ್ಲಿ ಪುಟಿದೇಳುವ ವಿಶ್ವಾಸ ವ್ಯಕ್ತಪಡಿಸಿದ ಅವರು `ಕೆಲವು ಪಂದ್ಯಗಳಲ್ಲಿ ಸೋಲಿನ ನಂತರ ಬೇಸರ ಆಗುವುದು ಸಹಜ. ಆದರೆ ಪ್ರಬಲ ಪೈಪೋಟಿ ನೀಡಿದ ಸಮಾಧಾನ ಇರಬೇಕು. ಆ ನಿಟ್ಟಿನಲ್ಲಿ ಖಂಡಿತ ಪ್ರಯತ್ನ ಮಾಡಲಾಗುವುದು~ ಎಂದು ಭರವಸೆ ನೀಡಿದರು.

ತಂಡದಲ್ಲಿರುವ ಪ್ರಮುಖ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಮಟ್ಟದಲ್ಲಿ ಆಡದಿರುವ ಕಡೆಗೆ ಗಮನ ಸೆಳೆದಾಗ `ಇದೇನು ಮೊದಲಲ್ಲ. ಹಿಂದೆಯೂ ಇಂಥ ಪರಿಸ್ಥಿತಿಯನ್ನು ತಂಡ ಎದುರಿಸಿದೆ. ಕ್ರಿಕೆಟ್ ಜೀವನದಲ್ಲಿ ಕೆಲವೊಮ್ಮೆ ಹೀಗೆ ಆಗುತ್ತದೆ. ಅನುಭವಿ ಆಟಗಾರರು ಈ ಸಂಕಷ್ಟದಿಂದ ಹೊರಬರುವ ಆತ್ಮಬಲ ಹೊಂದಿದ್ದಾರೆ~ ಎಂದು ತಿಳಿಸಿದರು.

ಸೆಹ್ವಾಗ್ ಸ್ಪಷ್ಟನೆ: ಗುಂಪುಗಾರಿಕೆಗೆ ತಾವು ಕಾರಣವೆಂದು ಸುದ್ದಿ ಹರಡಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ವೀರೇಂದ್ರ ಸೆಹ್ವಾಗ್ `ನಾವು ಸ್ನೇಹಯುತವಾಗಿ ಇದ್ದೇವೆ ಎನ್ನುವುದೇ ನಮ್ಮ ತಂಡದ ದೊಡ್ಡ ಶಕ್ತಿ. ಅದನ್ನು ಹೊರಗಿನವರೂ ಸ್ಪಷ್ಟವಾಗಿ ಅರಿಯಬೇಕು~ ಎಂದಿದ್ದಾರೆ.

`ತಂಡವು ಸೋಲುತ್ತಿದ್ದಾಗ ಹೀಗೆ ಸಲ್ಲದ ಮಾತುಗಳು ಕೇಳಿಸುವುದು ಸಹಜ. ಆದರೆ ಅದಾವುದೂ ಸತ್ಯವಲ್ಲ. ಒಂದು ತಂಡವಾಗಿ ನಾವೆಲ್ಲಾ ಆಡುತ್ತಿದ್ದೇವೆ ಎನ್ನುವುದೊಂದೇ ನಿಜ~ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT