ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕಿಯರ ಸಾಗರ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ
ADVERTISEMENT

`ಒಮ್ಮೆ ಹುಡುಗಿ ಜೊತೆ ಪ್ರೀತಿ ಬೆಳೆದ ಮೇಲೆ ಹುಡುಗ ಲೈಯರ್ (ಸುಳ್ಳುಗಾರ) ಆಗಲೇ ಬೇಕಾಗುತ್ತದೆ~ ಎಂದು ಚಟಾಕಿ ಹಾರಿಸಿದರು ತೆಲುಗಿನ ನಟ ದೇವಗಿಲ್. ಅದು `ಸಾಗರ್~ ಚಿತ್ರದ ಚಿತ್ರೀಕರಣ ಒಂದು ಹಂತ ಪೂರೈಸಿದ ಸಂಭ್ರಮವನ್ನು ಚಿತ್ರತಂಡ ಹಂಚಿಕೊಂಡ ಕ್ಷಣ. ಸಾಗರ್ ಎಂಬ ವಿಶಾಲ ಅರ್ಥದ ಹೆಸರಿನ ಚಿತ್ರಕ್ಕೆ ಲೈಯರ್ ಬಾಯ್ ಎಂಬ ಅಡಿಬರಹ ಏಕೆ ಎಂದು ತೂರಿಬಂದ ಪ್ರಶ್ನೆಗೆ ನಾಯಕ ಪ್ರಜ್ವಲ್ ದೇವರಾಜ್ ಉತ್ತರ ಹುಡುಕತೊಡಗಿದರು. ಅವರನ್ನು ಬಚಾವ್ ಮಾಡಿದ್ದು ದೇವಗಿಲ್. ತೆಲುಗಿನ `ಮಗಧೀರ~ದಲ್ಲಿ ಖಳನಾಯಕರಾಗಿ ಕಾಣಿಸಿಕೊಂಡಿದ್ದ ದೇವಗಿಲ್ ಈ ಚಿತ್ರದ ಮೂಲಕ ಕನ್ನಡಕ್ಕೆ ಆಮದಾಗಿದ್ದಾರೆ. ಕನ್ನಡದಲ್ಲಿ ಪದಾರ್ಪಣೆ ಮಾಡಲು ಅತ್ಯುತ್ತಮ ಅವಕಾಶ ಸಿಕ್ಕಿದೆ ಎಂದ ದೇವಗಿಲ್, ನಟಿ ರಾಧಿಕಾ ಪಂಡಿತ್ ಅಭಿನಯವನ್ನು ಕೊಂಡಾಡಿದರು. ಅವರಿಂದ ನಾನು ಕಲಿಯುವುದು ಸಾಕಷ್ಟಿದೆ ಎಂದರು.

ಚಿತ್ರದ ಮೂವರೂ ನಾಯಕಿಯರು ನಗು ತುಳುಕಿಸುತ್ತಾ ವೇದಿಕೆ ಮೇಲೆ ಕುಳಿತಿದ್ದರು. `ಚಿತ್ರಕಥೆ ಇಷ್ಟವಾಯಿತು. ಚಿತ್ರದಲ್ಲಿ ಎಷ್ಟು ನಾಯಕಿಯರಿದ್ದಾರೆ ಎಂಬುದು ಮುಖ್ಯವಲ್ಲ. ನನ್ನ ಪಾತ್ರದಲ್ಲಿ ಅಭಿನಯಕ್ಕಿರುವ ಅಂಶವಷ್ಟೆ ನನಗೆ ಮುಖ್ಯ~ ಎಂದು ರಾಧಿಕಾ ಪಂಡಿತ್ ಚಿತ್ರದಲ್ಲಿನ ತಮ್ಮ ಪಾತ್ರವನ್ನು ಮೆಚ್ಚಿಕೊಂಡರು.


`ಮೂವರು ನಾಯಕಿಯರಿದ್ದಾರೆ, ನಾನು ಲಕ್ಕಿ~ ಎಂದು ನಕ್ಕರು ಪ್ರಜ್ವಲ್ ದೇವರಾಜ್. ಶ್ರೀಮಂತ ಮನೆತನದ ಹುಡುಗನ ಪಾತ್ರ ಅವರದ್ದು. `ಆಸ್ಟ್ರೇಲಿಯಾದಲ್ಲಿ ಓದುವ ಹುಡುಗ ನಿಶ್ಚಿತವಾದ ತನ್ನ ಮದುವೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಕಥೆ ಇದು~ ಎಂದು ಸಂಕ್ಷಿಪ್ತವಾಗಿ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

ನಟಿ ಹರಿಪ್ರಿಯಾಗೆ ಹುಡುಗ ತನ್ನನ್ನು ಇಷ್ಟಪಡದಿದ್ದರೆ ಸಾಕು ಎಂದು ಬಯಸುವ ಪಾತ್ರವಂತೆ. ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಚಿತ್ರರಂಗದಲ್ಲಿ ತಳವೂರಲು ಆಗಿಲ್ಲ. ಈ ಚಿತ್ರದ ಬಳಿಕ ಎಲ್ಲರೂ ತಮ್ಮನ್ನು ಗುರುತಿಸುವಂತಾಗುತ್ತದೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ಭಾರತೀಯ ಹುಡುಗಿಯ ಪಾತ್ರ ಮಾಡಿರುವ ನಟಿ ಸಂಜನಾಗೆ ಉಳಿದಿಬ್ಬರು ನಾಯಕಿಯರ ಮಧ್ಯೆ ಕಳೆದುಹೋಗುತ್ತೇನೆಂಬ ಭಯ ಆವರಿಸಿತ್ತಂತೆ. ಆದರೆ ಅವರ ಪಾತ್ರಕ್ಕಿರುವ ಮಹತ್ವ ನೋಡಿದಾಗ ಅದು ಹುಸಿಯಾಯಿತಂತೆ.

ಕೆ.ಎಸ್.ಕುಮಾರ್ ತೆಲುಗಿನ ಚಿತ್ರಕ್ಕಾಗಿ ಸಿದ್ಧಪಡಿಸಿದ್ದ ಕಥೆಯನ್ನು ಕನ್ನಡದಲ್ಲಿ ಮಾಡಬೇಕೆಂದು ಹಕ್ಕು ಪಡೆದು ತಂದವರು ಕೋಟಿ ನಿರ್ಮಾಪಕ ರಾಮು. `ಫ್ರೆಂಡ್ಸ್~, `ಚೆಲ್ಲಾಟ~ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಎಂ.ಡಿ.ಶ್ರೀಧರ್‌ಗೆ ರಾಮು ಬ್ಯಾನರ್‌ನಲ್ಲಿ ಇದು ಮೊದಲ ಚಿತ್ರ. ಆ್ಯಕ್ಷನ್, ಕಾಮಿಡಿ, ಪ್ರೀತಿ ಎಲ್ಲವೂ ಸಮ್ಮಿಳಿತವಾಗಿರುವ ಪಕ್ಕಾ ಕೌಟುಂಬಿಕ ಚಿತ್ರ ಎಂದು ಶ್ರೀಧರ್ ವಿವರಿಸಿದರು.

ಪ್ರಜ್ವಲ್ ಅಭಿನಯದ `ಮೆರವಣಿಗೆ~ ಇಷ್ಟವಾಗಿತ್ತು. ಅದಕ್ಕಾಗಿಯೇ ಅವರನ್ನು ಚಿತ್ರಕ್ಕೆ ಸೂಚಿಸಿದೆ ಎಂದರು ರಾಮು.

ಮೂವರು ನಾಯಕಿಯರಿದ್ದರೂ ಚಿತ್ರದಲ್ಲಿ ನನಗೆ ಎದುರಾಗುವುದು ರಾಧಿಕಾ ಪಂಡಿತ್ ಮಾತ್ರ ಎಂದು ನಟ ಆದಿ ಲೋಕೇಶ್ ನಗುತ್ತಲೇ ಹುಸಿ ಬೇಸರ ವ್ಯಕ್ತಪಡಿಸಿದರು.

ಗುರುಕಿರಣ್ ಸಂಗೀತ ನಿರ್ದೇಶನಕ್ಕೆ ಕವಿರಾಜ್ ನಾಲ್ಕು ಹಾಡುಗಳನ್ನು ರಚಿಸಿದ್ದಾರೆ. 39 ದಿನಗಳ ಸತತ ಟಾಕಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಹಾಡುಗಳ ಚಿತ್ರೀಕರಣಕ್ಕೆ ಸಾಗರದಾಚೆ ಹಾರಲಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT