ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗಳ ಹಾವಳಿ: ಜನರಲ್ಲಿ ಆತಂಕ

Last Updated 2 ಸೆಪ್ಟೆಂಬರ್ 2013, 8:59 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ನಾಗರಿಕರ ನಿದ್ರೆ ಕೆಡಿಸಿವೆ. ಹಗಲು- ರಾತ್ರಿ ಎನ್ನದೆ ರಾಜಾರೋಷವಾಗಿ ನಾಯಿಗಳು ತಂಡೋಪ ತಂಡವಾಗಿ ನಗರದ ಹಲವು ಬಡಾವಣೆಗಳ ರಸ್ತೆಗಳಲ್ಲಿ ಸಂಚರಿಸುತ್ತಿರುವುದು ನಗರದ ನಿವಾಸಿಗಳಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ!

ರಸ್ತೆ, ಬಸ್ ನಿಲ್ದಾಣ, ಶಾಲಾ- ಕಾಲೇಜು ಆವರಣಗಳ ಬಳಿ ಗುಂಪು- ಗುಂಪಾಗಿ ಸಾಗುವ ನಾಯಿಗಳು ಜನರನ್ನು ಹೆದರಿಸುತ್ತಿವೆ. 15ರಿಂದ 20ಕ್ಕೂ ಹೆಚ್ಚು ನಾಯಿಗಳು ಗುಂಪಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತ ನಿತ್ಯ ಒಂದಿಲ್ಲೊಂದು ರಸ್ತೆಯಲ್ಲಿ ಸಂಚರಿಸುತ್ತ, ಮಕ್ಕಳು ಮತ್ತು ಮಹಿಳೆಯರಲ್ಲಿ ಹೆದರಿಕೆ ಆವರಿಸುವಂತೆ ಮಾಡಿವೆ.

ಕಳೆದ ತಿಂಗಳ ರಂಜನ್ ಹಬ್ಬದ ದಿನ ಇಲ್ಲಿನ ರಾಮಯ್ಯನಗರದಲ್ಲಿ ಬೀದಿ ನಾಯಿಗಳ ಗುಂಪೊಂದು ಆರು ವರ್ಷದ ಬಾಲಕ ಸಾಹಿಲ್ ಪಾಷಾ ಎಂಬಾತನ ಮಾಲೆ ದಾಳಿ ಮಾಡಿ, ಕಚ್ಚಿದ್ದವು. ಈ ಘಟನೆಯಲ್ಲಿ ಬಾಲಕನ ಹುಬ್ಬು, ಹಣೆ, ಕೈ- ಕಾಲಿಗೆ ತೀವ್ರ ಗಾಯಗಳಾಗಿದ್ದವು. ರಾಮನಗರ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ಸಲುವಾಗಿ ಆ ಬಾಲಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು.

ಬೀದಿ ನಾಯಿಗಳ ಬೇಟೆಗೆ ಮುಗ್ಧ ಮಕ್ಕಳು ಸಿಲುಕುತ್ತಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ. ರಸ್ತೆಗಳಲ್ಲಿ ರೌಡಿಗಳ ರೀತಿಯಲ್ಲಿ ಸಂಚರಿಸುವ ಈ ನಾಯಿಗಳಿಗೆ ಹೆದರಿ ಪೋಷಕರು ತಮ್ಮ ಮಕ್ಕಳನ್ನು ರಸ್ತೆಗಎ ಆಟವಾಡಲು ಕಳುಹಿಸದ ವಾತಾವರಣ ಸೃಷ್ಟಿಯಾಗಿದೆ. ಶಾಲೆಗಳ ಬಳಿ ಎಚ್ಚರದಿಂದ ಇರುವಂತೆ ಮಕ್ಕಳಿಗೆ ಹೇಳಲಾಗುತ್ತಿದೆ. ಅಲ್ಲದೆ ಮಕ್ಕಳು ತಮ್ಮ ಬ್ಯಾಗ್‌ಗಳ ಜತೆಗೆ ನಾಯಿಗಳನ್ನು ಓಡಿಸಲು ಕೋಲುಗಳನ್ನು ಹಿಡಿದುಕೊಂಡು ಶಾಲೆಗೆ ಹೋಗಬೇಕಾದ ದುಃಸ್ಥಿತಿ ರಾಮಗರದಲ್ಲಿ ಇದೆ.

ಜಿಲ್ಲಾ ಕೇಂದ್ರದಲ್ಲಿ ನಾಯಿಗಳ ಹಾವಳಿಯಿಂದ ಜನತೆ ಆತಂಕದ ಸ್ಥಿತಿಯಲ್ಲಿದ್ದರೂ ಇಲ್ಲಿನ ನಗರಸಭೆ ತಲೆಕೆಡಿಸಿಕೊಂಡಿಲ್ಲ. ನಾಯಿಗಳನ್ನು ಹಿಡಿಯುವ ಅಥವಾ ಸಂತಾನಹರಣ ಚಿಕಿತ್ಸೆಗೂ ಒಳಪಡಿಸುವ ಕೆಲಸಕ್ಕೂ ಮುಂದಾಗಿಲ್ಲ. ಇದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗಿ ನಗರದ ಜನರಿಗೆ ಉಪಟಳ ನೀಡುತ್ತಿವೆ ಎಂದು ನಾಗರಿಕರು ಆರೋಪಿಸುತ್ತಾರೆ.

`ನಗರದಲ್ಲಿ ಎಲ್ಲೆಂದರಲ್ಲಿ ಮಾಂಸದ ಅಂಗಡಿಗಳು ತಲೆಯೆತ್ತಿವೆ. ಈ ಅಂಗಡಿಯವರು ಮಾಂಸದ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡದೆ, ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ನಾಯಿಗಳ ಹಿಂಡು ಹೆಚ್ಚಾಗಿವೆ' ಎಂದು ಕೆಂಪೇಗೌಡನಗರದ ನಿವಾಸಿ ಎಚ್.ಪಿ.ನಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

`ಮನೆಯ ಗೇಟಿನ ಮುಂದೆಯೇ ಹತ್ತಾರು ನಾಯಿಗಳು ನಿತ್ಯ ಓಡಾಡುತ್ತವೆ. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಮತ್ತು ಶಾಲೆಯಿಂದ ಕರೆತರುವಾಗ ನಾಯಿಗಳನ್ನು ಓಡಿಸುವುದೇ ದೊಡ್ಡ ಕೆಲಸವಾಗುತ್ತದೆ. ಅಲ್ಲದೆ ಮಕ್ಕಳನ್ನು ರಸ್ತೆಯಲ್ಲಿ ಆಡಲು ಬಿಡದ ಸ್ಥಿತಿ ಇದೆ' ಎಂದು ಅವರು ಪ್ರತಿಕ್ರಿಯಿಸಿದರು.

`ಬೆಂಗಳೂರಿನ ಚಂದ್ರಾ ಬಡಾವಣೆ ಸೇರಿದಂತೆ ಹಲವೆಡೆ ನಾಯಿಗಳು ಕೆಲ ವರ್ಷಗಳ ಹಿಂದೆ ಮಕ್ಕಳನ್ನು ಬಲಿತೆಗೆದುಕೊಂಡಿದ್ದವು. ಅಂತಹ ಕಹಿ ಘಟನೆಗಳು ರಾಮನಗರದಲ್ಲಿ ಉಂಟಾಗಬಾರದು ಎಂದು ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚರವಹಿಸಿ ನಾಯಿಗಳ ಉಪಟಳದಿಂದ ನಾಗರಿಕರನ್ನು, ಮುಗ್ದ ಮಕ್ಕಳನ್ನು ಪಾರು ಮಾಡಬೇಕು' ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT