ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗೂ ಶಾಲೆ

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

`ಆಹಾ! ಎಂಥ ಕೂಲ್ ಕೂಲ್! ಹೊರಗೆ ಎಷ್ಟೇ ಬಿಸಿಲಿದ್ದರೂ ಇಲ್ಲಂತೂ ತಂಪು ತಂಪು. ಮಜವೋ ಮಜ~ ಎನ್ನುತ್ತ ಈಜುಕೊಳದಲ್ಲಿ ಝೂಂ ಎಂದು ಈಜಾಡುತ್ತಿರುವ ಇವರನ್ನು ಇಲ್ಲಿ ನೋಡುವುದೇ ಬಲು ಸೊಗಸು.

ಉದ್ದನೆಯ ಕೂದಲಿನ ಚೆಲುವೆಯರು, ಕೆಂಪುಮೂತಿಯ ಸುಂದರಾಂಗರು, ಕೃಷ್ಣ ಸುಂದರಿಯರು ಒಬ್ಬರಾ, ಇಬ್ಬರಾ...! ಸರ್ಜಾಪುರ ರಸ್ತೆಯ ಚಿಕ್ಕಬೆಳ್ಳಂದೂರು ಬಳಿ ಇರುವ ಈ ಈಜುಕೊಳಕ್ಕೆ ಇಳಿದ ಸುಂದರ, ಸುಂದರಿಯನ್ನು ನೋಡುವುದೇ ಆನಂದ.

ಯಾರ ಹಂಗೂ ಇಲ್ಲದೇ, ಯಾರಾದರು ತಮ್ಮನ್ನು ನೋಡುತ್ತಿದ್ದಾರೆ ಎಂಬ ನಾಚಿಕೆಯೂ ಇಲ್ಲದೇ ನಿಸ್ಸಂಕೋಚವಾಗಿ   ಈಜಿನಲ್ಲಿಯೇ ಇವರು ಮಗ್ನ.
ಅಷ್ಟೇ ಏಕೆ? ಈಜಿ ಸುಸ್ತಾದ ನಂತರ ರಿಲಾಕ್ಸ್ ಮಾಡಿಕೊಳ್ಳಲು ಇವರಿಗಾಗಿಯೇ ಪ್ರತ್ಯೇಕ ಉದ್ಯಾನ ಮೀಸಲು. ಇದರ ನಂತರ ಅಲ್ಲಿಯೇ ವಿಹಾರ. ಅಂದಹಾಗೆ ಇವರೆಲ್ಲ ಯಾರು ಎಂದುಕೊಂಡ್ರಿ. ಇವರೇ ಅವರು... ಮನೆಯನ್ನು ಕಾವಲು ಕಾಯುವವರು! ಮನುಷ್ಯರ ಭಾಷೆಯಲ್ಲಿ `ನಾಯಿ, ಶ್ವಾನ~ಗಳು.

ಹೌದು. ಇದು ಶ್ವಾನಗಳಿಗೆಂದೇ ಮೀಸಲಾದ ಈಜುಕೊಳ ಹಾಗೂ ಉದ್ಯಾನ! ಶ್ವಾನಗಳ ಜೊತೆ ಬೆಕ್ಕುಗಳಿಗೂ ಇಲ್ಲುಂಟು ಜಾಗ.

ರಾಜ್ಯದಲ್ಲಿಯೇ ಪ್ರಥಮ ಎನ್ನಬಹುದಾದ ಈ ನೂತನ ಪ್ರಯೋಗಕ್ಕೆ ಕೈಹಾಕಿರುವುದು ಶ್ವಾನಪ್ರಿಯರ ಗುಂಪು. `ಪಾ ಅಂಡ್ ಕ್ಲಾ~ ಹೆಸರಿನ ಈ `ಡಾಗ್ಸ್ ರೆಸಾರ್ಟ್~ನಲ್ಲಿ ಶ್ವಾನಗಳಿಗೆ ಎಲ್ಲ ರೀತಿಯ ತರಬೇತಿ ನೀಡಲಾಗುತ್ತದೆ.

ಮನುಷ್ಯನಿಂದ ಭಿನ್ನವಲ್ಲ: ಈ ಕ್ಲಬ್‌ನ ರೂವಾರಿ ಅದ್ನಾನ್ ಖರೇಷಿ ಹೇಳುವಂತೆ, ಮನುಷ್ಯನ ಆರೋಗ್ಯವೃದ್ಧಿಗೆ ಏನೇನು ಬೇಕು ಹೇಳಿ ಎಂದರೆ `ಒಂದಿಷ್ಟು ವ್ಯಾಯಾಮ, ವಾಕಿಂಗ್, ಜಾಗಿಂಗ್, ರನ್ನಿಂಗ್, ಜಂಪಿಂಗ್, ಸ್ವಿಮ್ಮಿಂಗ್... ಹೀಗೆ ಉದ್ದನೆಯ ಪಟ್ಟಿ ಇಡುತ್ತೇವೆ. ಹಾಗಂತ ಮನುಷ್ಯ ಮಾತ್ರ ಆರೋಗ್ಯದಿಂದ ಇದ್ರೆ ಸಾಕೆ.. ಆತನ ಮೆಚ್ಚಿನ ಪ್ರಾಣಿಗಳಿಗೂ ಇವೆಲ್ಲ ಬೇಕಲ್ವಾ. ಅದಕ್ಕಾಗಿಯೇ ನಾವೆಲ್ಲ ಸ್ನೇಹಿತರು ಸೇರಿ ಇಂಥಾದ್ದೊಂದು ಕ್ಲಬ್ ಆರಂಭಿಸಲು ಯೋಚನೆ ಮಾಡಿದ್ವಿ. ಅದಕ್ಕಾಗಿಯೇ ಇದನ್ನು ಸ್ಥಾಪನೆ ಮಾಡಿದ್ವಿ~.

`ಪಾಶ್ಚಿಮಾತ್ಯ ದೇಶಗಳಲ್ಲಿ ಶ್ವಾನಗಳಿಗೆ  ಪ್ರತ್ಯೇಕ ಉದ್ಯಾನ, ಆಟದ ಮೈದಾನ, ಈಜುಕೊಳ ಇತ್ಯಾದಿಗಳು ಇವೆ. ಆದರೆ ನಮ್ಮಲ್ಲಿ ಇದ್ಯಾವುದೂ ಇಲ್ಲ. ಸಾಲದು ಎಂಬುದಕ್ಕೆ ಉದ್ಯಾನದ ಒಳಗೆ ಅವುಗಳನ್ನು ಕರೆದುಕೊಂಡು ಹೋಗಲು ಬಿಡುವುದಿಲ್ಲ. ಇದರಿಂದ ಶ್ವಾನಗಳು ಮನೆಯಲ್ಲಿ ಇರುವ ಸೌಲಭ್ಯಗಳಿಗೆ ಅಡ್ಚಸ್ಟ್ ಮಾಡಿಕೊಂಡು ಹೋಗಬೇಕಾಗುತ್ತದೆ. ಮೂಕ ಪ್ರಾಣಿಯೆಂದು ನಾವು ಅವುಗಳಿಗೆ ಈ ರೀತಿ ಮಾಡುವುದು ಸರಿಯಲ್ಲ. ಇವೆಲ್ಲ ಗಮನದಲ್ಲಿ ಇಟ್ಟುಕೊಂಡು ಕ್ಲಬ್  ಆರಂಭಿಸಿದ್ವಿ~ ಎನ್ನುತ್ತಾರೆ ಖುರೇಷಿ.

`ಪ್ರವೇಶವಿಲ್ಲ~ ಫಲಕದಿಂದ ಬೇಸರ: `ಉದ್ಯಾನದಲ್ಲಿ ಶ್ವಾನಗಳಿಗೆ ಪ್ರವೇಶವಿಲ್ಲ~, `ದಯವಿಟ್ಟು ಸಾಕುಪ್ರಾಣಿಗಳನ್ನು ಈ ಆವರಣದೊಳಗೆ ಒಳಗೆ ತರಬೇಡಿ~ ಇತ್ಯಾದಿ ನಾಮಫಲಕಗಳಿಂದ ಬೇಸತ್ತ ನಾವು ಇಂಥದ್ದೊಂದು ಕ್ಲಬ್ ಏತಕ್ಕೆ ಸ್ಥಾಪನೆ ಮಾಡಬಾರದು ಎಂದು ಯೋಚನೆ ಬಂತು. ಪ್ರಾಣಿಪ್ರಿಯರೆಲ್ಲ ಸೇರಿಕೊಂಡು ನಡೆಸಿದ ಪ್ರಯತ್ನದ ಫಲವೇ ಈ ಕ್ಲಬ್ ಎನ್ನುವುದು ಅವರ ಉತ್ತರ.  

ನಾಯಿಗಳಿಗೆ ಈಜು ಇಷ್ಟ. ಅಲ್ಲದೇ ಅವುಗಳಿಗೆ ಈಜು ಬಹಳ ಮುಖ್ಯ. ಅವಕ್ಕೆ 15ನಿಮಿಷದ ಈಜು 15 ಮೈಲಿಗಳ ನಡಿಗೆಗೆ ಸಮ ಎನ್ನುತ್ತಾರೆ `ಕ್ಯುಪಾ~ದ ಟ್ರಸ್ಟಿ ಸಂಧ್ಯಾ ಮಾದಪ್ಪ.

ಬೆಂಗಳೂರಿನಲ್ಲಿ ಶ್ವಾನಗಳಿಗೆ ಸಿಂಗರಿಸುವುದು ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹೊಸ ಕಾನ್ಸೆಪ್ಟ್. ಅಷ್ಟೇ ಅಲ್ಲದೇ ಮಹಿಳೆಯರಂತೆ ಫೇಷಿಯಲ್ ಕೂಡ ಇವುಗಳಿಗೆ ಮಾಡುವ ವ್ಯವಸ್ಥೆಯೂ ಇಲ್ಲುಂಟು. ಈಗ ಇಂಥದ್ದೊಂದು ಕ್ಲಬ್ ಸ್ಥಾಪನೆ  ಶ್ವಾನಗಳ ರಕ್ಷಣೆಗೆ ಹೊಸದೊಂದು ಸೇರ್ಪಡೆ ಎಂದು ಅವರು ಹೇಳುತ್ತಾರೆ.

`ಬೆಂಗಳೂರಿನ ಕೆಲವು ಹೋಟೆಲ್‌ಗಳಲ್ಲಿ ಶ್ವಾನಗಳನ್ನು ಒಳಗೆ ಬಿಡುತ್ತಾರೆ. ಹೆಚ್ಚಿನ ಹಣ ನೀಡಿದರೆ ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಒಳಬಿಡುವ ಪರಿಪಾಠವಿದೆ. ಆದರೆ ಉದ್ಯಾನ ಎನ್ನುವುದು ಇಲ್ಲ. ಮುಂಬೈನಲ್ಲಿ ಶ್ವಾನಗಳಿಗಾಗೇ ಉದ್ಯಾನ, ತರಬೇತಿ ಕೇಂದ್ರಗಳು ಇವೆ ಆದರೆ ಇಲ್ಲಿ ಇಲ್ಲ~ ಎನ್ನುತ್ತಾರೆ ಪೆಟ್ ಮ್ಯಾನೇಜ್‌ಮೆಂಟ್ ಕಂಪೆನಿಯ ನಿರ್ದೇಶಕ ಆನಂದ ವಿಶ್ವನಾಥ.

ಸಾಕುಪ್ರಾಣಿಗಳು ಅದರಲ್ಲೂ ಮುಖ್ಯವಾಗಿ ಶ್ವಾನಗಳಿಗೆ ವ್ಯಾಯಾಮ ಕಡ್ಡಾಯವಾಗಿ ಬೇಕಾಗುತ್ತದೆ. ವ್ಯಾಯಾಮ ನೀಡದೆ ಹೋದರೆ, ಹಲ್ಲು ಬರುವ ಹೊತ್ತಿನಲ್ಲಿ ಅವು ಪೀಠೋಪಕರಣ ಸೇರಿದಂತೆ ಸಿಕ್ಕಿದ್ದನ್ನೆಲ್ಲಾ ಜಗಿಯಲು ಆರಂಭಿಸುತ್ತವೆ ಎನ್ನುವುದು ಅವರ ಅನುಭವದ ಮಾತು.

ಈಗಾಗಲೇ 60 ಶ್ವಾನಗಳು ಹಾಗೂ 10 ಬೆಕ್ಕುಗಳ ಮಾಲೀಕರು ಈ ಸಂಘದ ಸದಸ್ಯರಾಗಿದ್ದಾರೆ. ಈಜು, ಬೋರ್ಡಿಂಗ್, ಡೇ ಕೇರಿಂಗ್, ಟ್ರೇನಿಂಗ್, ಗ್ರೂಮಿಂಗ್ ಎಲ್ಲ ಸೌಲಭ್ಯಗಳೂ ಇಲ್ಲುಂಟು. `ಸಾಕು ಪ್ರಾಣಿಗಳ ಮಾಲೀಕರಿಗೆ ಶಾಂತಿ ನೆಮ್ಮದಿ ಸಿಗಬೇಕು ಎನ್ನುವುದೇ ಇಲ್ಲಿನ ಉದ್ದೇಶ. ಇದೇ ಕಾರಣಕ್ಕೆ ಒಂದೇ ಸೂರಿನಡಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ತಜ್ಞ ತರಬೇತುದಾರರು, ಪ್ರಾಣಿಗಳಿಗೆ ಎಲ್ಲ ರೀತಿಯ ಸುರಕ್ಷತೆ ಇಲ್ಲಿದೆ.

ಇನ್ನೊಂದು ಮಾತು. ಇದರ ಸೇವೆ ಉಚಿತವಲ್ಲ. ಒಂದೊಂದಕ್ಕೂ ಒಂದೊಂದು ಬಗೆಯ ಶುಲ್ಕ ತೆರಬೇಕು.

ಶ್ವಾನ ಪಾರ್ಕ್ ವಿಳಾಸ: 27/3, ಚಿಕ್ಕಬೆಳ್ಳಂದೂರು, ಸರ್ಜಾಪುರ ರಸ್ತೆ, ಅನನ್ಯ ಫೌಂಡೇಷನ್ ಬಳಿ. ಮಾಹಿತಿಗೆ: 98452 07866, www.pawnclaw.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT