ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯ್ಕಲ್‌ನಲ್ಲಿ ನಾಗರಪಂಚಮಿ !

Last Updated 7 ಆಗಸ್ಟ್ 2011, 11:05 IST
ಅಕ್ಷರ ಗಾತ್ರ

ಯಾದಗಿರಿ: ನಾಗರ ಪಂಚಮಿಯು ನಾಗದೇವತೆಯ ಆರಾಧನೆಗೆ ಮೀಸಲಾದ ಹಬ್ಬ. ಎಲ್ಲೆಡೆ ಕಲ್ಲಿನ ನಾಗ ದೇವತೆಗೆ ಹಾಲೆರೆದು ಜನರು ಭಕ್ತಿಯನ್ನು ಸಮರ್ಪಿಸುತ್ತಾರೆ. ಕೆಲವೆಡೆ ನಿಜನಾಗರಕ್ಕೂ ಹಾಲು ಹಾಕಿ ಧನ್ಯತೆಯನ್ನು ಮೆರೆಯುತ್ತಾರೆ. ಆದರೆ ಪಂಚಮಿಯಂದೇ ನಾಗದೇವತೆ ಮನೆಗೆ ಬಂದರೇ?

ಶಹಾಪುರ ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿ ನಾಗರ ಪಂಚಮಿಯಂದು ನಾಗರ ಹಾವೊಂದು ಪ್ರತ್ಯಕ್ಷವಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಮಧ್ಯಾಹ್ನದ ಹೊತ್ತಿಗೆ ಬಸವರಾಜಪ್ಪಗೌಡ ವಡ್ವಡಿಗಿ ಅವರ ಮನೆಯ ಗೋಡೆಯ ಬಳಿ, ನಾಗರ ಹಾವು ಹೆಡೆ ಎತ್ತಿ ಆಟ ಆಡುತ್ತಿತ್ತು.

ಮನೆಯಲ್ಲಿನ ಜನರು ಅಚ್ಚರಿಯಿಂದ ನಾಗಪ್ಪನ ದರ್ಶನ ಪಡೆದು ಧನ್ಯತೆಯ ಭಾವವನ್ನು ಮೆರೆದರು. ಕೆಲವೊಬ್ಬರು ಇದೇನು ಹಾವು ಬಂದಿದೆ ಎಂದು ಹೆದರುತ್ತಲೇ ಹಿಂದೆ ನಿಂತುಕೊಂಡೇ ನಾಗರ ಹಾವನ್ನು ನೋಡಿದರು.

ಸುಮಾರು ಮೂರ‌್ನಾಲ್ಕು ಗಂಟೆ ಮನೆಯಲ್ಲಿಯೇ ಉಳಿದ ನಾಗರ ಹಾವು, ಅಲ್ಲಿಯೇ ಹೆಡೆ ಎತ್ತಿ ಆಟ ಆಡಿತು. ಭಕ್ತರಿಗಂತೂ ಎಲ್ಲಿಲ್ಲದ ಸಂತೋಷ. ಪಂಚಮಿಯಂದು ನಿಜವಾದ ನಾಗಪ್ಪ ಮನೆಗೆ ಬಂದರೆ ಎಂತಹ ಅದೃಷ್ಟ ಎಂದು ಜನರು ಮಾತನಾಡಿಕೊಂಡಿದ್ದು ಆಯಿತು.

ಊರೆಲ್ಲ ಸುದ್ದಿ ಹರಡುತ್ತಿದ್ದಂತೆಯೇ ಜನರು ತಂಡೋಪತಂಡವಾಗಿ ಬಸವರಾಜಪ್ಪಗೌಡರ ಮನೆಗೆ ಬಂದು ನಾಗಪ್ಪನ ದರ್ಶನ ಪಡೆದರು. ನಾಲ್ಕು ಗಂಟೆಯಾದರೂ ಮನೆಯಿಂದ ನಾಗರ ಹಾವು ಕದಲದೇ ಇರುವುದರಿಂದ ಭಯಗೊಂಡ ಮನೆಯವರು, ಹಾವನ್ನು ಚೀಲದಲ್ಲಿ ಹಾಕಿಕೊಂಡು ಗ್ರಾಮದ ಹೊರಗಡೆ ಬಿಟ್ಟು ಬಂದರು.
ಅಂತೂ ನಾಗರ ಪಂಚಮಿಯ ಹಬ್ಬದಂದೇ ನಾಗಪ್ಪ ದರ್ಶನ ನೀಡಿರುವುದು ಭಾಗ್ಯವೇ ಸರಿ ಎಂದು ಮನೆಯವರು ಅಂದುಕೊಂಡರೆ, ನೋಡಿದವರಲ್ಲಿ ಒಂದೆಡೆ ಭಕ್ತಿ, ಇನ್ನೊಂದೆಡೆ ಭಯ ಸ್ಪಷ್ಟವಾಗಿ ಕಾಣುತ್ತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT