ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರದನ ಕೈಯಲ್ಲಿ ಪುಂಗಿ!

Last Updated 25 ಜುಲೈ 2013, 19:59 IST
ಅಕ್ಷರ ಗಾತ್ರ

ನೆಯಲ್ಲಿ ಸೂತಕದ ಕಳೆ. ಯಜಮಾನ ತೀರಿ ಹೋಗಿದ್ದಾನೆ. ಆದರೆ ಸಾವಿನ ಸೂತಕದ ಛಾಯೆಯ ನಡುವೆಯೂ ಮನೆಮಂದಿಯ ನಡುವೆ ತಿಕ್ಕಾಟ. ಬೆಂಗಳೂರಿನ ಹೊರವಲಯದ `ಆರ್‌ಎಸ್ ಗೌಡ ಸ್ಟುಡಿಯೊ'ದ ಮನೆಯೊಂದರಲ್ಲಿ `ಪುಂಗಿದಾಸ' ಚಿತ್ರತಂಡ ಚಿತ್ರೀಕರಣದಲ್ಲಿ ಬಿಜಿಯಾಗಿತ್ತು.

ಹೆಸರೇ ಹೇಳುವಂತೆ ಇದು ಸುಳ್ಳಿನ ಕಂತೆಯ ಚಿತ್ರ. `ಪುಂಗಿದಾಸ' ಆಗಿರುವುದು ಕೋಮಲ್. `ಲೋಕಕಲ್ಯಾಣಕ್ಕಾಗಿ ನಾರದ ಸುಳ್ಳು ಹೇಳಿದರೆ, ನಾನು ಮನೆಯ ಕಲ್ಯಾಣಕ್ಕಾಗಿ ಸುಳ್ಳು ಹೇಳುತ್ತೇನೆ' ಎಂಬ ವಿವರಣೆ ಕೋಮಲ್ ಅವರದ್ದು.

ಅಜ್ಜನ ಸಾವಿನೊಂದಿಗೆ 11 ದಿನದಲ್ಲಿ ನಡೆಯುವ ಘಟನೆಗಳ ಕಥೆ `ಪುಂಗಿದಾಸ' ಚಿತ್ರದ್ದು. ಇದರಲ್ಲೊಂದು ಪ್ರೇಮಕಥನವೂ ಬೆಸೆದುಕೊಂಡಿದೆ. ಕಥೆ ಜರುಗುವ ಅವಧಿ ಕಡಿಮೆಯಿದ್ದರೂ ಚಿತ್ರದಲ್ಲಿ ಖ್ಯಾತನಾಮ ಕಲಾವಿದರ ದಂಡೇ ಇದೆ. ನಾಯಕನ ಅಜ್ಜನ ಸಾವಿನೊಂದಿಗೆ ತೆರೆದುಕೊಳ್ಳುವ ಕಥೆಯಿದು.

ಅಜ್ಜನ ಪಾತ್ರ ನಿರ್ವಹಿಸಿರುವವರು ಆರ್.ಎನ್. ಸುದರ್ಶನ್. ಅವರ ಅನುಪಸ್ಥಿತಿಯಲ್ಲಿ ಚಿತ್ರೀಕರಣಕ್ಕಾಗಿ ಮೂರು ದಿನ ಚಟ್ಟದ ಮೇಲೆ ಮಲಗುವ ಕಷ್ಟಗಳನ್ನು ಅವರು ಸಹಿಸಿಕೊಂಡ ಬಗೆಯನ್ನು ಕೋಮಲ್ ವಿವರಿಸಿದರು. ಕೋಮಲ್ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜೇಂದ್ರ ಕಾರಂತ್ ಅವರಿಗೆ ಪಾತ್ರದ ತೂಕ ಸವಾಲಿನದು ಎನಿಸಿದೆ. ಅನಂತನಾಗ್‌ರಂಥ ಕಲಾವಿದರಿಗೆ ಸೂಕ್ತವಾದ ಪಾತ್ರವಿದು ಎನ್ನುವುದು ಅವರ ಅಭಿಪ್ರಾಯ.

ದಶಕದ ಬಳಿಕ ನಟಿ ಸಾಹುಕಾರ್ ಜಾನಕಿ ಮತ್ತೆ ಬಣ್ಣಹಚ್ಚುತ್ತಿದ್ದಾರೆ. ರಾಜಕೀಯದ ನೆಪದಲ್ಲಿ ಚಿತ್ರರಂಗದಿಂದ ದೂರವುಳಿದಿದ್ದ ಬಿ.ಸಿ. ಪಾಟೀಲ್ ಸಹ `ಪುಂಗಿದಾಸ'ನ ಮೂಲಕ ಪುನರ್ ಪ್ರವೇಶ ಮಾಡಿದ್ದಾರೆ.

`ಮಸ್ತಿ 2' ಎಂಬ ಹಿಂದಿ ಚಿತ್ರದಲ್ಲಿ ನಟಿಸಿದ್ದ ಮುಂಬೈ ಮೂಲದ ಆಸ್ಮಾ ಚಿತ್ರದ ನಾಯಕಿ. ಇಲ್ಲಿನ ಚಿತ್ರರಂಗದ ಬಗ್ಗೆ ಅಷ್ಟಾಗಿ ತಿಳಿವಳಿಕೆ ಇಲ್ಲದಿದ್ದರೂ ಹಿರಿಯ ಕಲಾವಿದರ ನಂಟು ಅವರಿಗೆ ಖುಷಿ ನೀಡಿದೆ.

ತಾವು ನೋಡಿರುವ ಅತ್ಯುತ್ತಮ ಚಿತ್ರಕಥೆಗಳಲ್ಲಿ `ಪುಂಗಿದಾಸ' ಕೂಡ ಒಂದು ಎಂದು ಕೋಮಲ್‌ಗೆ ಅನಿಸಿದೆ. `ರ್‍ಯಾಂಬೋ' ಖ್ಯಾತಿಯ ಶ್ರೀನಾಥ್‌ರ ಶ್ರಮವನ್ನು ಕೋಮಲ್ ಶ್ಲಾಘಿಸಿದರು. ನಗುತ್ತಲೇ ಅಳಿಸುವ ಕಲೆ `ಪುಂಗಿದಾಸ'ನದ್ದಂತೆ. ಮಳೆ ವಿರಾಮ ಪಡೆದುಕೊಂಡ ಬಳಿಕ ಮೈಸೂರು, ಕೇರಳಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಉದ್ದೇಶಿಸಿದೆ.

ಈ ಚಿತ್ರವನ್ನು ತಮಿಳಿಗೂ ರೀಮೇಕ್ ಮಾಡಲು ನಿರ್ದೇಶಕರು ಉದ್ದೇಶಿಸಿದ್ದಾರೆ. ನಟ ಸಂತಾನಂಗೆ ಕಥೆ ಇಷ್ಟವಾಗಿದೆ. ಕನ್ನಡದಲ್ಲಿ ಮುಗಿದ ಬಳಿಕ ತಮಿಳಿನಲ್ಲಿ ಚಿತ್ರವನ್ನು ಕೈಗೆತ್ತಿಕೊಳ್ಳುವುದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT