ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ರಾಯರ ‘ಆಂಗ್ಲಕವಿತಾವಳಿ’

ಹಳತು ಹೊನು�
Last Updated 6 ಜೂನ್ 2015, 19:30 IST
ಅಕ್ಷರ ಗಾತ್ರ

ಹಟ್ಟಿಯಂಗಡಿ ಪರಮೇಶ್ವರಯ್ಯಾ ನಾರಾಯಣ ರಾಯರ ‘ಆಂಗ್ಲಕವಿತಾವಳಿ’ ಕೃತಿ 1919ರ ಮಾರ್ಚ್ ತಿಂಗಳಲ್ಲಿ ಮುಂಬಯಿ ನಗರದ ಬಾಂದ್ರ ಸಮೀಪದ ಟರ್ನರ್ ರೋಡಿನಿಂದ ಸ್ವತಹ ಲೇಖಕರಿಂದಲೇ ಪ್ರಕಟಗೊಂಡಿತು. 22 ಪುಟಗಳ, ಕಿರಿಯ ಆಕಾರದ, ಮೂರು ಆಣೆ ಬೆಲೆಯ, ಈ ಕೃತಿಯು ದಕ್ಷಿಣ ಕನ್ನಡದ ಪುತ್ತೂರಿನ ಸದಾನಂದ ಕೋ-ಆಪರೇಟಿವ್ ಪ್ರಿಂಟಿಂಗ್ ವರ್ಕ್ಸ್ ಲಿಮಿಟೆಡ್‌ನಿಂದ ಮುದ್ರಣಗೊಂಡಿದೆ.

ಮುಖಪುಟದ ಮೇಲೆ ಲೇಖಕರು ಇದನ್ನು ‘ಕಾವ್ಯಪ್ರಿಯ ತರುಣರಿಗೆ ಸಮರ್ಪಿತ’ ಎಂದು ಅರ್ಪಿಸಿರುತ್ತಾರೆ. ಲೇಖಕರ ಹೆಸರು ಎಚ್.ನಾರಾಯಣ ರಾವ್, ಬಿ.ಎ. ; ಬಿ.ಎಲ್. ಎಂದಿದೆ. ಮುಖಪುಟದ ಮೇಲೆ ‘ಆವನು ವಿರಮಿಸದೆಲ್ಲ ಮ | ತ್ತಾವನೊ ನೂತನರೂಪೋಪಾಧಿಗಳಿತ್ತಾ || ದೇವನು ಕರ್ಣಾಟದಲು | ಜ್ಜೀವನದೋಜೆಯ ಕವಿತೆಗೆ ಪಾಲಿಸಲನಿಶಂ ||’ ಎನ್ನುವ ಕಂದಪದ್ಯವೊಂದಿದೆ. ಹಟ್ಟಿಯಂಗಡಿ, ಹಟ್ಟಂಗಡಿ ಹಾಗೂ ಹತ್ತಂಗಡಿ ಎನ್ನುವ ರೂಪದಲ್ಲಿ ಆ ಗ್ರಾಮದ ಹೆಸರು ಪ್ರಸಿದ್ಧವಾಗಿದೆ.

ಸಾರಸ್ವತ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಹಟ್ಟಿಯಂಗಡಿ ನಾರಾಯಣ ರಾಯರು (ಜ: ಫೆ. 11, 1863) ತಮ್ಮ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಕಾರ್ಕಳ ಹಾಗೂ ಮಂಗಳೂರಿನಲ್ಲಿ ಮುಗಿಸಿದರು. 1884ರಲ್ಲಿ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಿಂದ ಬಿ.ಎ. ಪದವಿಯನ್ನು ಪಡೆದು ಕೆಲಕಾಲ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. 1895ರಲ್ಲಿ ಮದರಾಸಿನಲ್ಲಿ  ಬಿ.ಎಲ್ ಪದವಿ ಮುಗಿಸಿ ವಕೀಲಿ ವೃತ್ತಿಯಲ್ಲಿದ್ದರು.

ಮದರಾಸು ಹಾಗೂ ಮಂಗಳೂರು ವಿಶ್ವವಿದ್ಯಾಲಯಗಳ ಕನ್ನಡ ಪರೀಕ್ಷಾ ಮಂಡಳಿಗಳ ಸದಸ್ಯರಾಗಿದ್ದ ಅವರು ವಿವಿಧ ಕಾಲಘಟ್ಟಗಳಲ್ಲಿ ‘ಇಂಡಿಯನ್ ಸೋಷಿಯಲ್ ರಿಫಾರ್ಮರ್’, ‘ಈಸ್ಟ್ ಅಂಡ್ ವೆಸ್ಟ್’ ಹಾಗೂ ‘ಇಂಡಿಯನ್ ಸ್ಪೆಕ್ಟೇಟರ್’ ಎನ್ನುವ ಪತ್ರಿಕೆಗಳ ಸಂಪಾದಕರಾಗಿದ್ದರು.

ಕೇರವರ ಮಾಧವ ಎನ್ನುವ ಅಂಕಿತದಿಂದ ‘ಸಭಾಪರ್ವ’ ಎನ್ನುವ ಯಕ್ಷಗಾನ ಕೃತಿಯನ್ನು ರಚಿಸಿದ ಹಟ್ಟಿಯಂಗಡಿ ಮಂಜಯ್ಯ ಹಾಗೂ ಹಲವಾರು ಯಕ್ಷಗಾನ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದ ಹಟ್ಟಿಯಂಗಡಿ ರಾಮಚಂದ್ರಯ್ಯ- ಇವರುಗಳು ನಾರಾಯಣ ರಾಯರ ಬಂಧುಗಳಾಗಿದ್ದರು. ‘ಧ್ರುವಚರಿತ್ರೆ’, ‘ಸುಭದ್ರಾ ಕಲ್ಯಾಣ’ ಮುಂತಾದ ಯಕ್ಷಗಾನ ಕೃತಿಗಳನ್ನು ಬರೆದಿದ್ದ, ಹವ್ಯಕ ಬ್ರಾಹ್ಮಣರಾದ ಹಟ್ಟಿಯಂಗಡಿ ರಾಮಭಟ್ಟರಿಗೂ ನಾರಾಯಣ ರಾಯರಿಗೂ ಯಾವ ಸಂಬಂಧವೂ ಇಲ್ಲ.

ಹಟ್ಟಿಯಂಗಡಿ ನಾರಾಯಣ ರಾಯರು ‘ಆಂಗ್ಲಕವಿತಾವಳಿ’ಯನ್ನು ಒಳಗೊಂಡಂತೆ ಹನ್ನೊಂದು ಪುಸ್ತಕಗಳನ್ನೂ ಹದಿನಂಟು ಲೇಖನಗಳನ್ನೂ ರಚಿಸಿರುತ್ತಾರೆ. ಅವರ ಈ ಕೃತಿಗಳು ವಿವಿಧ ಕಾಲಘಟ್ಟಗಳಲ್ಲಿ ‘ವಾಗ್ಭೂಷಣ’, ‘ಶ್ರೀಕೃಷ್ಣಸೂಕ್ತಿ’, ‘ಸುದರ್ಶನ’, ‘ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’, ‘ಕನ್ನಡ ಕೋಗಿಲೆ’ ಹಾಗೂ ‘ಸ್ವದೇಶಾಭಿಮಾನಿ’ ನಿಯತಕಾಲಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಕೃತಿಗಳು ಇಂತಿವೆ.

‘ಆಂಗ್ಲಕವಿತಾವಳಿ’ (1919), ‘ಇಂಗ್ಲೀಷು-ಕನ್ನಡ ನಿಘಂಟು (1919)’, ‘ಕನ್ನಡ ಕಥಾನಕ’ (1919), ‘ಕನ್ನಡ ಕವಿತೆಯ ಭವಿತವ್ಯ’, ‘ಬ್ರಾಹ್ಮಗೀತಾ’, ‘ಪ್ರಸಿದ್ಧ ಹಿಂದೂದೇಶದ ಸ್ತ್ರೀಯರು’ (1887), ‘ನಲವತ್ಮೂರು ಹಾಡುಗಳು’, ‘ಟ್ರ್ಯಾಕ್‌ಟ್ಸ್ ಆಫ್ ಥಿಂಕರ್ಸ್’, ‘ಕೊಂಕಣಿಚ ಮೂಲಾದರ್ಶು’ (ಕೊಂಕಣಿ-1917), ‘ಕೊಂಕಣಿ ಶಬ್ದಾಂ ಸಂಸ್ಕೃತಚೆ ಮೂಲಸಾಂಗಚೆ’ (ಕೊಂಕಣಿ-1918), ‘ಎಟಿಮಲಾಜಿಕಲ್ ಗ್ಲಾಸರಿ ಆಫ್ ಸದರನ್ ಕೊಂಕಣಿ’ (ಇಂಗ್ಲೀಷು). 

‘ಆಂಗ್ಲಕವಿತಾವಳಿ’ ಕವನ ಸಂಕಲನಕ್ಕೆ ಕನ್ನಡದಲ್ಲಿ ಚಾರಿತ್ರಕ ಮಹತ್ವವಿದೆ. 1926ರಲ್ಲಿ ಬಂದ ಬಿ.ಎಂ. ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತಗಳು’ ಸಂಕಲನಕ್ಕಿಂತ ಮೊದಲು ಕನ್ನಡಕ್ಕೆ ಬಂದ ಇಂಗ್ಲಿಷ್ ಕವಿತೆಗಳ ಅನುವಾದಗಳ ಮೊದಲ ಸಂಕಲನ ಇದು. ಈ ಪುಸ್ತಕದ ಹೆಸರಿನ ಬಗ್ಗೆ ಕುತೂಹಲಕರ  ಮಾಹಿತಿಗಳಿವೆ.

ಈ ಕೃತಿಯು ಮುಂಬಯಿಯಲ್ಲಿ ಪ್ರಕಟಗೊಂಡಿರುವುದರಿಂದ ಇದರ ಪ್ರತಿಗಳು ಅತ್ಯಂತ ದುರ್ಲಭವಾಗಿದ್ದು, ಮುಂದೆ ಹೆಸರಿಸುವ ಎಲ್ಲ ವಿದ್ವಾಂಸರೂ ರಟ್ಟು ಹರಿದ ಪುಸ್ತಕದ ಪ್ರತಿಯೊಂದನ್ನು ನೋಡಿಯೇ ತಮ್ಮ ತೀರ್ಮಾನಗಳಿಗೆ ಬಂದಿರುತ್ತಾರೆ. ಪಂಜೆ ಮಂಗೇಶರಾಯರು, ಗೋವಿಂದ ಪೈಗಳು, ತೀ.ನಂ.ಶ್ರೀ, ಸಿ.ಪಿ.ಕೆ, ಪ್ರಭುಶಂಕರ ಹಾಗೂ ಕೆ.ಎಸ್. ಅನಂತನಾರಾಯಣ ಅವರುಗಳು ಈ ಕೃತಿಯ ಹೆಸರನ್ನು ‘ಆಂಗ್ಲಕವಿತಾಸಾರ’ ಎಂದೇ ಭಾವಿಸಿದ್ದರು. ಅದಕ್ಕೆ ಕಾರಣ ಅವರಿಗೆ ಸಿಕ್ಕಿದ ಕೃತಿಯ ರಕ್ಷಾಪುಟ ಹರಿದುಹೋಗಿದ್ದುದು.

ಆದರೆ ಈ ಕುರಿತು ಸಾಕಷ್ಟು ಶೋಧಿಸಿ ೧೯೮೫ರಲ್ಲಿ ಮೂಲ ಇಂಗ್ಲಿಷ್ ಕವಿತೆಗಳೊಂದಿಗೆ ವಿದ್ವತ್ಪೂರ್ಣವಾಗಿ ಈ ಕೃತಿಯನ್ನು ಪ್ರಕಟಿಸಿದ ವಿದ್ವಾಂಸರಾದ ಮೈಸೂರಿನ ಪಂಡಿತಾರಾಧ್ಯ ಅವರು ‘ಆಂಗ್ಲಕವಿತಾವಳಿ’ ಎನ್ನುವ ಸರಿಯಾದ ಹೆಸರಿನಲ್ಲಿಯೇ ಗ್ರಹಿಸಿ ಪ್ರಕಟಿಸಿದ್ದಾರೆ. ನನ್ನ ಬಳಿ ಇರುವ ಹಟ್ಟಿಯಂಗಡಿ ನಾರಾಯಣ ರಾಯರ ಮೂಲಕೃತಿ ‘ಆಂಗ್ಲಕವಿತಾವಳಿ’ಯ ಇನ್ನೊಂದು ಪ್ರತಿಯ ರಕ್ಷಾಪುಟದ ರಟ್ಟು ಕೂಡಾ ದುರದೃಷ್ಟವಶಾತ್ ಹರಿದುಹೋಗಿದೆ.

‘ಆಂಗ್ಲಕವಿತಾವಳಿ’ ಎನ್ನುವ ಈ ಕೃತಿಯ ಸರಿಯಾದ ಹೆಸರನ್ನು ಪಂಡಿತಾರಾಧ್ಯರ ಜೊತೆಗೆ ಉಲ್ಲೇಖಿಸಿರುವ ವಿದ್ವಾಂಸರೆಂದರೆ ಟಿ.ವಿ. ವೆಂಕಟಾಚಲ ಶಾಸ್ತ್ರೀ ಹಾಗೂ ಕೆ.ಜಿ. ನಾರಾಯಣ ಪ್ರಸಾದ್ ಅವರುಗಳು. ಎಸ್. ಅನಂತ ನಾರಾಯಣರಂತೂ ‘ಆಂಗ್ಲ ಕವಿತಾಸಾರ’ ಹಾಗೂ ‘ಆಂಗ್ಲಕವಿತಾವಳಿ’ ಇವೆರಡೂ ಭಿನ್ನ ಕೃತಿಗಳು ಎಂದೇ ಭಾವಿಸಿದ್ದಾರೆ.

‘ಆಂಗ್ಲಕವಿತಾವಳಿ’ಯಲ್ಲಿ ಒಟ್ಟು ಹದಿನಾರು ಕವಿತೆಗಳಿವೆ. ಅವುಗಳಲ್ಲಿ ‘ಕೊನೆಯ ಮಂಗಳಪದ್ಯ’ ಎನ್ನುವ ಕವಿತೆ ಸ್ವತಂತ್ರ ರಚನೆ. ಉಳಿದ ಹದಿನೇಳೂ ಕವಿತೆಗಳು ವಿವಿಧ ಆಂಗ್ಲ ಕವಿಗಳ ರಚನೆಗಳ ಅನುವಾದಗಳು. ‘ಸುಭಾಷಿತ ಕಲಾಪ’ ಎನ್ನುವ ಕವಿತೆ ಷೇಕ್ಸ್‌ಪಿಯರ್‌ನ ನಾಟಕಗಳ ಭಾಗಗಳ ಅನುವಾದ. ‘ನಂದನ’ ಮತ್ತು ‘ಚಿಂತನ’ ಕವಿತೆಗಳಿಗೆ ಆಕರ ಜಾನ್ ಮಿಲ್ಟನ್‌ನ ಕವನಗಳು ಆಧಾರ.

‘ನಿತ್ಯಸುಖಿ’ ಕವಿತೆ ಸರ್ ಹೆನ್ರಿ ವಾಟ್ಟನ್ ಕವಿಯ ‘ಕ್ಯಾರೆಕ್ಟರ್ ಆಫ್ ಅ ಹ್ಯಾಪ್ಪಿ ಲೈಫ್’ ಕವನದ ಅನುವಾದ. ಜೇಮ್ಸ್ ಥಾಮ್ಸನ್‌ನ ‘ರೂಲ್ ಬ್ರಿಟಾನಿಯಾ’ ಕವಿತೆಯ ಅನುವಾದವೇ ‘ಆಳು ಬೀರತನೇ’. ‘ಭಾವಗಣ’ ಕವಿತೆಗೆ ಮೂಲ ವಿಲಿಯಮ್ ಕಾಲಿನ್ಸ್‌ನ ಕವಿತೆ ಮೂಲವಾದರೆ, ಥಾಮಸ್ ಗ್ರೇ ಕವಿತೆ ‘ಸಮಾಧಿಗತ ಗ್ರಾಮಸ್ಥರು’ ಕವಿತೆಗೆ ಮೂಲ. ಟ್ವಿಂಕಲ್ ಟ್ವಿಂಕಲ್ ಲಿಟ್‌ಲ್ ಸ್ಟಾರ್ ಕವಿತೆ ಬರೆದ ಜೇನ್ ಟೇಲರ್‌ಳ ಕವಿತೆಯ ಅನುವಾದವೇ ‘ಗರ್ವ ನಿರ್ಣಯ’.

ಪಿ.ಬಿ. ಷೆಲ್ಲಿಯ ‘ದಿ ಕ್ಲೌಡ್’ ಕವಿತೆಯ ಭಾಷಾಂತರ ‘ಮುಗಿಲು’. ಅದೇ ಕವಿಯ ಇನ್ನೊಂದು ಕವಿತಾನುವಾದ ‘ನಭ’. ‘ಭಾವನೆ’ ಜಾನ್ ಕೀಟ್ಸ್ ಕವಿತೆಯ ಅನುವಾದವಾಗಿದ್ದರೆ, ‘ಧನ್ಯವೀರ’ ವಡ್‌ಸ್ವರ್ತ್ ಕವಿತೆಯ ಅನುವಾದ. ಲಾಂಗ್‌ಫೆಲೋ ಕವಿತೆಯ ಅನುವಾದ ‘ಜೀವನಗೀತೆ’. ‘ವಿತ್ತಹೀನ ವರದ’ ಕವಿತೆ ವ್ಹಿಟ್ಟಿಯರ್ ಕವಿಯ ಕವಿತಾನುವಾದ. ‘ಕವಿರಾಜ’ ಕವಿತೆಯ ಮೂಲ ಇಮರ್ಸನ್ ಕವಿಯ ರಚನೆ.

ಈ ಕವಿತೆಗಳಲ್ಲಿ ಪ್ರಾಸವನ್ನು ತೊರೆಯದಿದ್ದರೂ, ಪೂರ್ವಕವಿಗಳ ನಿಯಮಗಳನ್ನು ಸೂಕ್ಷ್ಮವಾಗಿ ಅನುಸರಿಸಿಲ್ಲ. ಆದ ಕಾರಣ ವೃತ್ತಗಳಿಗೆ ಹೆಸರು ಹಾಕಿಲ್ಲ. ‘ಬೇಕಾದರೆ ಶಿಥಿಲಕಂದ, ಶಿಥಿಲರಗಳೆ, ಎಂಬಂತೆ ಹೆಸರುಗಳನ್ನು ನಿರ್ಮಿಸಬಹುದು’ ಎಂದು ಗ್ರಂಥಕರ್ತರು ಕವಿತೆಗಳ ಆರಂಭಕ್ಕೆ ಮೊದಲು ಹೇಳಿರುತ್ತಾರೆ. ಪ್ರಾಸವನ್ನು ಕುರಿತು ಅವರು ಜನವರಿ 1919ರ ‘ಸಾಹಿತ್ಯ ಪರಿಷತ್‌ಪತ್ರಿಕೆ’ಯಲ್ಲಿ ಬರೆದ ‘ಕವಿತಾವರ್ಧನ’ ಎನ್ನುವ ಲೇಖನದಲ್ಲಿ– ‘‘ಪ್ರಾಸವಿಲ್ಲದೆ ಕವಿತೆಯನ್ನು ಏಕೆ ಬರೆಯಬಾರದು ಎಂದು ಕೆಲವರು ಕೇಳುತ್ತಾರೆ.

ಏಕೆ ಕೂಡದು? ಹಣೆಗೆ ಬೊಟ್ಟಿಲ್ಲದಿದ್ದರೇನು? ಕನ್ನಡಕ್ಕೆ ಸತತಂ ಪ್ರಾಸಂ ಎಂದು ನೃಪತುಂಗನು ಬರೆದಿರುವನು. ಅಕ್ಷರಮಾತ್ರಾಗಣಗಳನ್ನು ಕಿತ್ತು ಹಾಕಿದರೂ ಪ್ರಾಸವನ್ನು ಬಿಡಲಿಲ್ಲ’’ ಎಂದು ಹೇಳಿ ಪ್ರಾಸದ ಬಗ್ಗೆ ತಮ್ಮ ಒಲವನ್ನು ತೋರಿರುತ್ತಾರೆ. ಇಲ್ಲಿನ ಅನುವಾದಿತ ಕವಿತೆಗಳಲ್ಲಿ ‘ಮುಗಿಲು’ ಕವಿತೆಯನ್ನು ಎಂ. ಅನಂತರಾವ್ ಅವರೂ, ‘ಸುಭಾಷಿತ ಕಲಾಪ’ ಕವಿತೆಯನ್ನು ‘ಜೀವನ ಸಪ್ತಾಂಕ’ ಎನ್ನುವ ಹೆಸರಿನಲ್ಲಿ ಎಂ.ಎನ್. ಕಾಮತರೂ, ಅದೇ ಕವಿತೆಯನ್ನು ಎಸ್.ಜಿ. ಗೋವಿಂದರಾಜೈಂಗಾರ್‌ರವರು ‘ಮನುಷ್ಯನ ಸಪ್ತಯೋವಸ್ಥೆಗಳು’ ಎಂದೂ, ‘ಸಕಾಲಕ್ರಿಯೆ’ ಎಂಬ ಹೆಸರಿನ ಪದ್ಯವನ್ನು ಕಡೆಕಾರು ರಾಜಗೋಪಾಲಕೃಷ್ಣಾಚಾರ್ಯರೂ ಪ್ರತ್ಯೇಕವಾಗಿ ಸ್ವತಂತ್ರವಾಗಿ ಅನುವಾದ ಮಾಡಿರುತ್ತಾರೆ.

ಆ ಅನುವಾದಗಳನ್ನು ಪಂಡಿತಾರಾಧ್ಯರು ತಮ್ಮ ಆವೃತ್ತಿಯಲ್ಲಿ ನೀಡಿರುತ್ತಾರೆ. ‘ಆಂಗ್ಲಕವಿತಾವಳಿ’ ಕೃತಿಯ ಕುರಿತು ಪ್ರಕಟಗೊಂಡ ವಿಮರ್ಶೆಗಳನ್ನೂ ಪಂಡಿತಾರಾಧ್ಯರು ಅನುಬಂಧದಲ್ಲಿ ನೀಡಿದ್ದಾರೆ. ಮೂಲ ‘ಆಂಗ್ಲಕವಿತಾವಳಿ’ ಪುಸ್ತಕದಲ್ಲಿ ಅಚ್ಚಾಗಿರುವ ಪದ್ಯಗಳಲ್ಲಿ ಪದಪದಗಳ ನಡುವೆ ಜಾಗ ಬಿಡದೆ, ಪದ್ಯದ ರೀತಿಗೆ ಬದಲು ಉದ್ದಕ್ಕೆ ಗದ್ಯದ ಮಾದರಿಯಲ್ಲಿ ಪದ್ಯಗಳನ್ನು ಅಚ್ಚುಹಾಕಿ ಕಣ್ಣಿಗೆ ಓದಲು ತುಂಬ ತ್ರಾಸವಾಗುತ್ತದೆ. ಆದರೆ ಪಂಡಿತಾರಾಧ್ಯರು ತಮ್ಮ ಆವೃತ್ತಿಯಲ್ಲಿ ಪದ್ಯಗಳನ್ನು ಸಾಲುಸಾಲಾಗಿ ಬಿಡಿಸಿ ಪದಪದಗಳ ನಡುವೆ ಜಾಗ ಬಿಟ್ಟು ಪದ್ಯಗಳನ್ನು ನಿರಾಳವಾಗಿ ಸಲೀಸಾಗಿ ಓದಲು ಸುಲಭವಾಗಿದೆ.

ನಾರಾಯಣರಾಯರ ಅನುವಾದದ ಮಾದರಿಗಾಗಿ ಲಾಂಗ್‌ಫೆಲೋ ಕವಿ ಬರೆದ ಕವಿತೆಯ ಅನುವಾದ ‘ಜೀವನಗೀತ’ ಕವಿತೆಯ ನಾಲ್ಕು ಸಾಲುಗಳನ್ನು ಗಮನಿಸಬಹುದು.

ಜಗದ ರಣರಂಗದಲಿ ಜೀವಿತದ ಪಾಳ್ಯದಲಿ |                                                                                   
ಯುಗಬದ್ಧ ಪಶುವಲ್ಲ ಕಲಿಯಾಗಿ ಹೋರಾಡು ||                                                                                         
ಮುಗಿದ ಕಾಲವೆ ತೀರಿ ಹೋದುದನು ಮಾನಿಸಲಿ |        
ಬಗೆದದರ ಚಿಂತನವು ನಿನಗೇಕೆ ನೋಡು ||

ಸುಮಾರು ನೂರು ವರ್ಷಗಳ ಹಿಂದೆ ಪ್ರಕಟವಾದ ನಾರಾಯಣ ರಾಯರ ‘ಆಂಗ್ಲಕವಿತಾವಳಿ’ಯಲ್ಲಿ ಎಸ್. ಅನಂತ ನಾರಾಯಣ ಅವರು ಹೇಳುವಂತೆ– ‘‘ಹಟ್ಟಿಯಂಗಡಿ ನಾರಾಯಣ ರಾಯರು ನಡೆಸಿದ ಕಾರ್ಯ ಬಹುಜನರ ಮೇಲೆ  ಪ್ರಭಾವ ಬೀರಿ, ಕವಿಗಳನ್ನು ಸೃಷ್ಟಿಸಲಿಲ್ಲವೆಂಬುದು ನಿಶ್ಚಯ. ಆದರೂ ಇವರ ಕಾರ್ಯ ಮಂಗಳೂರಿನ ಕಡೆಯಲ್ಲಿ ಹೊಸಹಾದಿಯನ್ನು ಕಡಿದು ಸಿದ್ಧಮಾಡಿಕೊಟ್ಟಿತೆಂದು ನಿರ್ವಿವಾದವಾಗಿ ಹೇಳಬಹುದು’’. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT