ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರೀ ನುಡಿವರಸೆಯ ಕಟ್ಟೋಣದತ್ತ- 5

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನೆಲದೊಂದಿಗೆ ಹೆಣ್ಣನ್ನು ಸಮೀಕರಿಸುವ ಗಂಡಾಳ್ತನದ ದೃಷ್ಟಿಯನ್ನು ಮಹಿಳಾಕವಿಗಳು ಆಸ್ಫೋಟಿಸುವ ಚೂರಾಗಿಸುವ ಬದಲಾಗಿ ಅದರೊಳಗಿನಿಂದ ಅನ್ಯರೀತಿಯ ನಿಜಗಳನ್ನು ಬೆಳಕಿಗೆ ತರುವ ಮೂಲಕ ಅಂಥ ದೃಷ್ಟಿಯನ್ನು ಮಂಜಾಗಿಸುವ ಯತ್ನ ಮಾಡುವಂತೆ ಕಾಣಿಸುತ್ತದೆ. ಭಾಗೀರಥಿ ಹೆಗಡೆಯವರ ಈ ಸಾಲುಗಳು ತುಂಬ ಕೆಳದನಿಯಲ್ಲಿ ಅಂಥ ಒಂದು ಮುಖದತ್ತ ಗಮನ ಸೆಳೆಯಬಲ್ಲವು:
 
ಮತ್ತು ಮತ್ತೂ ಆಳ ಅಗೆಯಬೇಡ
ಸತ್ತ ನಿನ್ನೆಯ ಮೇಲೆತ್ತಿ
ಮೆತ್ತಿದ ಕೆಸರು ಮಸಿ
ಮುಖ ಮೀಸೆ ತಿದ್ದಿ- ನಿನ್ನದೇ ಉಸಿರೂದಿ
ವರ್ತಮಾನದ ನೆತ್ತಿಯಲಿ
ಧಿಮಿ ಧಿಮಿ ಕುಣಿಸಬೇಡ
 
ಅಲ್ಲವೆನ್ನಲಿಲ್ಲ ಈ ಮುದಿ
ನೆಲದ ಪದರು ಪದರಗಳಲ್ಲಿ
ಸಿಕ್ಕಿಕೊಂಡಿದ್ದೀತು ಅಂದಂದಿನ ಅಡ್ಡ
ಹೆಜ್ಜೆಯುದುರಿಸಿದ
ನಿಷ್ಪಾಪ ಒಂಟಿ ಗೆಜ್ಜೆ
ಅಕಾರಣ ಒಡೆದ ಬಳೆಯೋಡು
ಕಾಣದ ಕೈ ಹರಿದ
ಸರದೊಂದು ಮುತ್ತು
(~ಅಂತರಾಳ~/ಭಾಗೀರಥಿ ಹೆಗಡೆ/ಕವಿತೆ-2000/ಕ. ಸಾ. ಅಕಾಡೆಮಿ/
ಸಂ: ಸ.ಉಷಾ)


`ಭೂಮಿಪದ್ಯಗಳು~ ಎಂಬ ಒಂದು ಕವಿತಾಸಂಕಲನವನ್ನೇ ಪ್ರಕಟಿಸಿರುವ ಭಾಗ್ಯ ಜಯಸುದರ್ಶನ ಅವರ ಕಿರುಗವಿತೆಗಳಲ್ಲಿ ಕಲ್ಪನೆ ಮತ್ತು ವೈಜ್ಞಾನಿಕ ವಾಸ್ತವಗಳು ಸೇರಿಕೊಂಡು ಬರುವ ನುಡಿಬಗೆ ಕುತೂಹಲಕರ. `ಕ್ಷಮಯಾ ಧರಿತ್ರೀ~ ಎನ್ನುವುದು ಒಂದು ಗುಣವಾಚಕವಾಗಿ ಪುಂ- ನುಡಿಗಟ್ಟಾಗಿದ್ದರೆ  ಅದನ್ನು ಒಂದು ನಿಟ್ಟಿನಲ್ಲಿ ಧಿಕ್ಕರಿಸುತ್ತಲೇ ಮತ್ತೊಂದು ರೀತಿಯಲ್ಲಿ ತನ್ನದಾಗಿಸಿಕೊಳ್ಳಲೂ ಮಹಿಳಾ ಕಾವ್ಯ ಇಬ್ಬಗೆಯಲ್ಲಿ ಶೋಧಿಸುವಂತಿದೆ. 
 
 ~ಉಟ್ಟುಡುಗೆಯಲ್ಲೇ
 ಹೊಸತೊಂದು ನಿತ್ಯಬಗೆ
 ತರುವ ಫ್ಯಾಶನ್ ಮೋಡೆಲ್
 ನಿನಗಿಂತ ಬೇರೆ ಯಾರು?
 ನಿನ್ನನ್ನ ಬೆತ್ತಲೆ ಅಂದವರಾರು
 ನಿನ್ನೊಡಲೇ ನಿನ್ನುಡಿಗೆ~
 
`ನಗುವನ್ನು ಕಾರಂಜಿಯಾಗಿ
 ಮಂದಹಾಸವನ್ನು ಸರೋವರವನ್ನಾಗಿ
 ಕೆಚ್ಚನ್ನು ಪರ್ವತ ಶಿಖರವನ್ನಾಗಿ
 ವಿಷಾದವನ್ನು ಮರುಭೂಮಿಯಾಗಿ
 ಕೋಪವನ್ನು ಜ್ವಾಲಾಮುಖಿಯಾಗಿ
 ಪ್ರೀತಿಯನ್ನು ಇಬ್ಬನಿಯಾಗಿ
 ಅಭಿವ್ಯಕ್ತಗೊಳಿಸಿಯೇ
 ಬಿಡುವ ನಿನಗೆ ಕಾಡುವ
 ನೆನಪಿನ ಭಾರವೇ ಇಲ್ಲ~
 
ಕಾವ್ಯದ ಬಗ್ಗೆ ಮಹಿಳಾ ಕವಿಗಳು ತಮ್ಮ ಭಾವ, ವಿಚಾರಗಳನ್ನು ಹಲವು ರೀತಿಗಳಲ್ಲಿ ವ್ಯಕ್ತಮಾಡುತ್ತಾರೆ. ಆದರೆ ಅದು ತಾತ್ಕಾಲಿಕವಾದ ಅನ್ನಿಸಿಕೆಯೋ ಅಥವಾ ಬಲವಾದ ಸತ್ವದ ಕಾವ್ಯನಿಲುವೋ ಎನ್ನುವುದನ್ನು ನಿರ್ಧರಿಸುವುದು ಸುಲಭವಲ್ಲ.

ಭಾಷೆಯನ್ನು ತನ್ನದಾಗಿಸಿಕೊಳ್ಳುವಿಕೆ ಕೂಡ ಬದುಕಿನಷ್ಟೇ ಉಸಿರಿನಷ್ಟೇ ಉತ್ಕಟವಾಗಿ ನಡೆಯಬೇಕಾದ ಪ್ರಕ್ರಿಯೆ. ಹೀಗೆ ತನ್ನದಾಗಿಸಿಕೊಂಡ ಭಾಷೆಯಲ್ಲಿ ಕಟ್ಟಿಕೊಟ್ಟ ಅನುಭವದಲ್ಲಿ ಏನೋ ಮುಖ್ಯವಾದದ್ದು,

ತಾನೂ ಅನುಭವಕ್ಕೆ ತಂದುಕೊಂಡೇ ಅರ್ಥಮಾಡಿಕೊಳ್ಳಬೇಕಾದ್ದು, ಈವರೆಗೆ ತನಗೂ ನಿಗೂಢವಾಗಿದ್ದದ್ದು ಹೊರಬಂದಿದೆ ಎನ್ನುವ ಭಾವನೆಯನ್ನು ಓದುಗರ ಸಂವೇದನೆಗೆ ಅನ್ನಿಸುವಂತೆ ಮಾಡುವುದಕ್ಕೆ ಕಾವ್ಯ ಕಾಯಕ ಒಂದು ತಪಸ್ಸಾಗದೇ ಹೋದರೆ ಸಾಧ್ಯವಾಗದು.

ಇಲ್ಲಿಯೇ ಮಹಿಳಾ ಕಾವ್ಯಕ್ಕೆ ನಿಜವಾದ ಪರೀಕ್ಷೆ ಎದುರಾಗುವುದು. ತನಗೆ ವಿಮರ್ಶೆಯ ಮಾನ್ಯತೆ ಸಿಗುತ್ತಿಲ್ಲವಲ್ಲ ಎನ್ನುವ ಅಳಲು ಕಾಡಿಸುವಷ್ಟು ಅತ್ಯುತ್ಕಟವಾದ ರೀತಿಯಲ್ಲಿ ತಾನು ಬರೆಯಲು ಸಾಧ್ಯವಾಗುತ್ತಿಲ್ಲವಲ್ಲ ಎನ್ನುವುದು ಕಾಡಿಸದೆಯೇ ಇರಬಹುದು.

ಬರಹವು ತನ್ನ ನಿಜವನ್ನು ತೋರಿಸುವ ಎಚ್ಚರಿಸುವ ಬದಲಾಗಿ, ತನ್ನನ್ನೇ ಮೋಹಿಸಿಕೊಳ್ಳುವ `ಮಾಯಾ ಕನ್ನಡಿ~ ಆದರೆ ಕಾವ್ಯ ರಾಶಿ ಬೆಳೆದೀತೇ ಹೊರತು ಹೊಸ ಮಾರ್ಗವನ್ನು ಅದು ಹುಟ್ಟುಹಾಕಲಾರದು. ಈ ಬಗೆಯ ಕಾವ್ಯ ಕಲ್ಪವು ಹೆಣ್ಣಿರಲಿ ಗಂಡಿರಲಿ ಇಬ್ಬರಿಗೂ ಅನಿವಾರ್ಯ, ಅವಶ್ಯಕ. ಕನ್ನಡದ ಅತ್ಯುಚ್ಚ ಚಿಂತಕ ಭಾವುಕ ಚೇತನ ಇಂಥ ಅಗ್ನಿದಿವ್ಯವನ್ನು ಎದುರಿಸಿಯೇ ಹೊಮ್ಮಿರುತ್ತದೆ.

ಭಾಷೆಯೊಂದರೊಳಗೆ ನಾವು ಜನಿಸಿರುತ್ತೇವೆ. ಅದರಲ್ಲಿ ಅರ್ಥವತ್ತಾದ ಸಂವಹನೆಯನ್ನು ಸಾಧಿಸಲು ಆ ಭಾಷೆಯ ಕ್ರಿಯಾ-ವ್ಯವಸ್ಥೆಯನ್ನು ಅರಿಯುವುದು ಅನಿವಾರ್ಯ. ಅದರೊಳಗಿನ ಭೇದಕಾರಕ ಅಂಶಗಳನ್ನೂ ಬಳಸಲೇಬೇಕಾಗುತ್ತದೆ. ನಾನು ಎನ್ನುವುದಕ್ಕೆ ತನ್ನದೇ ಅಸ್ಮಿತೆಯೊಂದು ಬರುವುದೇ ಭಿನ್ನವಾದ ~ನೀನು~ ಎಂಬ ಘಟಕದ ಜೊತೆ ಹೋಲಿಸಿಕೊಂಡಾಗ.

ಭಾಷೆಯ ಒಳಗಿನ ಜೆಂಡರ್ ಅಧಿಕಾರವನ್ನು ಕಳಚಲು ನಿರ್ಲಿಂಗೀಯ ಶಬ್ದರಚನೆ, ಅಥವಾ ಎರಡೂ ಲಿಂಗಗಳಿಗೆ ಒಂದೇ ಪದದ ಬಳಕೆ ಮುಂತಾದ ಹಲವು ಪ್ರಯೋಗಗಳನ್ನು ಸ್ತ್ರೀವಾದಿಗಳು ಜಾಗತಿಕವಾಗಿ ಮುನ್ನೆಲೆಗೆ ತಂದಿರುತ್ತಾರೆ. ಆದರೆ ಇಂಥ ಪ್ರಯೋಗಗಳು ಆಯಾಯಾ ಭಾಷೆಯ ಈಗಾಗಲೇ ಸ್ಥಾಪಿತವಾಗಿರುವ ಸಂರಚನೆಗೆ ತಕ್ಕಂತೆ ಮಾತ್ರವೇ ಸಫಲ ಅಥವಾ ವಿಫಲವಾಗಿರುತ್ತವೆ.

ಕನ್ನಡ ಭಾಷೆಯಲ್ಲಿ ಅದರದೇ ಬಿಗಿಯಾದ ಕಟ್ಟುಗಳಿದ್ದಾವೆ. ಹೊರಗೆ ಎಷ್ಟೇ ಸ್ತ್ರೀಸಂವೇದನೆಯ ಕಾಳಜಿಗಳು ಇಂದು ಕಾಣಿಸಬಹುದು. ಆದರೆ ಗಂಡಾಳ್ತನವನ್ನು ನಿವಾರಿಸುವ ನಿಟ್ಟಿನ ಹೊಸ ಭಾಷಾಪ್ರಯೋಗಗಳನ್ನು ಇಲ್ಲಿನ ಸಾಂಪ್ರದಾಯಿಕ ಸಮಷ್ಟಿ ಚಿತ್ತ  ಒಳಗಿಂದಲೇ ನಿರಾಕರಿಸುತ್ತದೆ. ಸ್ತ್ರೀವಾದಿ ವಿಮರ್ಶೆಯು `ಮಹಿಳಾ ಬರಹಗಾರರು~ ಎನ್ನುವ ಪರಿಭಾಷೆಯೊಂದನ್ನು ಹುಟ್ಟು ಹಾಕಿತು.

ಆದರೆ ಜನರು, ಕಲಿತವರು, ಕೊನೆಗೆ ಸಾಹಿತ್ಯದಲ್ಲೇ ಮುಳುಗೇಳುವ ಬುದ್ಧಿಜೀವಿವರ್ಗ ಕೂಡ ಈ ಪದವನ್ನು “ಮಹಿಳಾ ಲೇಖಕಿಯರು” ಎನ್ನುವ ಹಾಸ್ಯಾಸ್ಪದ ದ್ವಿರುಕ್ತಿಯ ದೋಷ ತುಂಬಿಯೇ ಬಳಸುತ್ತಾ ಬಂದಿದ್ದು ಅಷ್ಟರಮಟ್ಟಿಗೆ ಕಟ್ಟಲಾದ ಹೊಸ ಪದದ ಬಳಕೆಯು ನಿರಾಕೃತವಾದಂತೆಯೇ.

ಬರಿಯ ಕಾವ್ಯ ಯಾವ ಬದಲಾವಣೆಯನ್ನೂ ಮಾಡಲಾರದು. ಆದರೆ ಅದು ಹೊಸ ಚಿಂತನೆಯನ್ನು ಆಗ್ರಹಿಸಬಲ್ಲದು. ಒತ್ತಾಯಿಸಬಲ್ಲದು. ಭಾಷೆ ಮತ್ತು ವ್ಯಕ್ತಿಯ ನಡುವಿನ ಸಂಬಂಧವನ್ನು ವರ್ಜೀನಿಯಾ ಊಲ್ಫ್ ಹೇಳುವ  ವಸ್ತ್ರದ ರೂಪಕ ಚೆನ್ನಾಗಿ ವಿವರಿಸಬಲ್ಲದು.

`ನಾವು ಉಡುವ ಬಟ್ಟೆಗಳು ತುಂಬ ಕ್ಷುಲ್ಲಕವೆನಿಸಬಹುದು.ಆದರೆ ಅವು ನಮ್ಮ ದೇಹವನ್ನು ಬೆಚ್ಚಗಿಟ್ಟು ಕಾಪಾಡುವುದಕ್ಕಿಂತ ಮುಖ್ಯವಾದ ಅಧಿಕಾರಗಳನ್ನು ನಿರ್ವಹಿಸುತ್ತವೆ. ಅವು ನಾವು ಜಗತ್ತನ್ನು ಹೇಗೆ ನೋಡುತ್ತೇವೆ  ಜಗತ್ತು ನಮ್ಮನ್ನು ಹೇಗೆ ನೋಡುತ್ತದೆ ಅನ್ನುವುದನ್ನೂ ಬದಲಾಯಿಸಬಲ್ಲವು.

ಹೀಗೆ ಬಟ್ಟೆಗಳನ್ನು ನಾವು ತೊಡುವುದಿಲ್ಲ; ಅವೇ ನಮ್ಮನ್ನು ತೊಡುತ್ತವೆ. ನಾವು ಅವುಗಳಿಗೆ ತೋಳಿನ ಆಕಾರ , ಎದೆಯ ಆಕಾರ ನೀಡಬಹುದು. ಆದರೆ ಅವು ನಮ್ಮ ಹೃದಯಗಳನ್ನು, ನಮ್ಮ ಮಿದುಳುಗಳನ್ನು, ನಮ್ಮ ನಾಲಿಗೆಗಳನ್ನು ತಮ್ಮಿಷ್ಟಕ್ಕೆ ತಕ್ಕಂತೆ ಎರಕ ಹೊಯ್ಯುತ್ತಿರುತ್ತವೆ...~                

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT