ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರ್ವೆ: ಆಂಧ್ರ ದಂಪತಿ ಭವಿಷ್ಯ ನಾಳೆ ತೀರ್ಮಾನ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಓಸ್ಲೊ (ಪಿಟಿಐ): ಏಳು ವರ್ಷದ ಮಗನ ಮೇಲೆ `ದೌರ್ಜನ್ಯ ನಡೆಸಿದ ಆರೋಪದಲ್ಲಿ' ಬಂಧಿತರಾಗಿರುವ ಭಾರತೀಯ ದಂಪತಿ ವಲ್ಲಭನೇನಿ ಚಂದ್ರಶೇಖರ್ ಮತ್ತು ಅನುಪಮಾ ವಿರುದ್ಧ ಮಕ್ಕಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ನಾರ್ವೆ ಪೊಲೀಸರು, ಶನಿವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

`ಭಾರತೀಯ ಪೋಷಕರು ತಮ್ಮ ಮಗನನ್ನು ಸರಿಯಾಗಿ ನಡೆಸಿಕೊಳ್ಳದೆ, ನಿರಂತರವಾಗಿ ಮಾನಸಿಕ ಕಿರುಕುಳ, ಬೆದರಿಕೆ ಒಡ್ಡುವ ಮೂಲಕ ದೌರ್ಜನ್ಯ ಎಸಗಿದ್ದಾರೆ. ನಾರ್ವೆಯ ಮಕ್ಕಳ ದೌರ್ಜನ್ಯ ತಡೆ ಕಾಯ್ದೆಯ ಕಲಂ 219ರ ಪ್ರಕಾರ ಇದೊಂದು ಶಿಕ್ಷಾರ್ಹ ಅಪರಾಧ' ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. ಶಿಕ್ಷೆಯಿಂದ ಪಾರಾಗುವ ಉದ್ದೇಶದಿಂದ ದಂಪತಿ ಭಾರತಕ್ಕೆ ಪಾರಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಓಸ್ಲೊ ಪೊಲೀಸರು ತಿಳಿಸಿದ್ದಾರೆ.

ದಂಪತಿಯ ವಕೀಲರ ವಾದವನ್ನು ಆಲಿಸಿದ ಬಳಿಕ ಸೋಮವಾರ (ಡಿಸೆಂಬರ್ 3ರಂದು) ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಆರೋಪ ಸಾಬೀತಾದರೆ ನಾರ್ವೆ ಕಾನೂನಿನ ಪ್ರಕಾರ 15 ರಿಂದ 18 ತಿಂಗಳು ಶಿಕ್ಷೆಯಾಗುವ ಸಂಭವವಿದೆ.

ಚಂದ್ರಶೇಖರ್ ಅವರು ಮೂಲತಃ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಗೆ ಸೇರಿದ್ದು, ಟಿಸಿಎಸ್ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಎಂದು ಕೆಲಸ ಮಾಡುತ್ತಿದ್ದಾರೆ.

ಇವರ ಮಗ ಸಾಯಿ ಶ್ರೀರಾಮ್ ಶಾಲಾ ಬಸ್‌ನಲ್ಲಿ ಹೋಗುವಾಗ ಚಡ್ಡಿಯಲ್ಲಿಯೇ ಮೂತ್ರ ಮಾಡಿಕೊಳ್ಳುತ್ತಿದ್ದ. ಈ ಬಗ್ಗೆ ಶಾಲೆ ಸಿಬ್ಬಂದಿ ಆತನ ತಂದೆಗೆ ದೂರು ಕೊಟ್ಟಿದ್ದರು. ಇದು ಪುನರಾವರ್ತನೆಯಾದಾಗ ಪೋಷಕರು ಮಗನಿಗೆ ಹಾಗೆ ಮಾಡದಂತೆ ಶಿಸ್ತಿನ ಪಾಠ ನೀಡಿ, ಇದೇ ಪ್ರವೃತ್ತಿ ಮುಂದುವರಿಸಿದರೆ ಭಾರತಕ್ಕೆ ಮರಳಿ ಕಳುಹಿಸುವುದಾಗಿ ಎಚ್ಚರಿಸಿದ್ದರು.  ಆದರೆ ಬಾಲಕ ಈ ಬಗ್ಗೆ ಶಾಲಾ ಶಿಕ್ಷಕರಿಗೆ ದೂರು ನೀಡಿದ್ದ. ಅವರು ನೀಡಿದ ಮಾಹಿತಿ ಆಧರಿಸಿ ಪೊಲಿಸರು ಮೊಕದ್ದಮೆ ಹೂಡಿದ್ದಾರೆ.  ಸದ್ಯ ಬಾಲಕ ಹೈದರಾಬಾದ್‌ನ ಸಂಬಂಧಿಗಳ ಮನೆಯಲ್ಲಿದ್ದು, ಕೌನ್ಸೆಲಿಂಗ್ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT