ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆ ಸಮೀಕ್ಷೆ ತಂಡಕ್ಕೆ ಘೇರಾವ್

Last Updated 7 ಜನವರಿ 2012, 5:40 IST
ಅಕ್ಷರ ಗಾತ್ರ

ಹಾಸನ: ತಮ್ಮ ಜಮೀನುಗಳ ಮೂಲಕ ಯಗಚಿ ನಾಲೆ ಹೋಗುತ್ತದೆ ಎಂಬ ವಿಚಾರ ತಿಳಿದ ರೈತರು ನಾಲೆಗಾಗಿ ಸರ್ವೆ ನಡೆಸಲು ಬಂದಿದ್ದವರನ್ನು ತಡೆಗಟ್ಟಿ ಗ್ರಾಮದಲ್ಲೇ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಶಾಂತಿಗ್ರಾಮ ಹೋಬಳಿಯ ದೊಡ್ಡಹೊನ್ನೇನಹಳ್ಳಿಯಲ್ಲಿ ನಡೆದಿದೆ.

ಶುಕ್ರವಾರ ಬೆಳಿಗ್ಗೆ ಗ್ರಾಮಕ್ಕೆ ಬಂದಿದ್ದ ಬೆಂಗಳೂರಿನ ಮಧುಶ್ರೀ ಸಂಸ್ಥೆಯವರು ನಾಲೆಗಾಗಿ ಸರ್ವೆ ಕಾರ್ಯ ಆರಂಭಿಸಿದ್ದರು. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ರೈತರು ಯಾವ ಕಾರಣಕ್ಕೆ ಸರ್ವೆ ನಡೆಸುತ್ತಿದ್ದೀರಿ ಎಂದು ಕೇಳಿದಾಗ, ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು. ಕೈಗಾರಿಕಾ ಅಭಿವೃದ್ಧಿಗಾಗಿ ಮೊದಲೇ ಭೂಮಿ ಕಳೆದುಕೊಂಡಿದ್ದ ರೈತರು ಇದರಿಂದ ದಿಗಿಲುಗೊಂಡು ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದರು.

`ಐಐಟಿ ಮಾಡುವುದಾಗಿ ಸುತ್ತಮುತ್ತಲಿನ ಎಂಟು ಹಳ್ಳಿಗಳ 1057 ಎಕರೆ ಭೂಮಿಯನ್ನು 2007ರ ಜುಲೈ 30ರಂದು ಸ್ವಾಧೀನಪಡಿಸಿಕೊಂಡಿದ್ದರು. ಆಗ ಎಕರೆಗೆ 15ಲಕ್ಷ ರೂಪಾಯಿ ನೀಡುತ್ತೇವೆ ಎಂದಿದ್ದರು. ಆದರೆ ಈವರೆಗೆ ಹಣ ಕೊಟ್ಟಿಲ್ಲ. ಐಐಟಿ ಬಂದಿಲ್ಲ, ಭೂಮಿಯನ್ನಾದರೂ ಮರಳಿಸಿ ಎಂದರೆ, ಅದನ್ನು ಕೆಐಎಡಿಬಿಗೆ ಒಪ್ಪಿಸಿದ್ದಾರೆ. ಈಗ ಈ ಭೂಮಿಯಲ್ಲಿ ನಾವು ಬೆಳೆ ಬೆಳೆಯುತ್ತಿದ್ದರೂ ಅದನ್ನು ನಮ್ಮ ಜಮೀನು ಎನ್ನುವಂತಿಲ್ಲ.

ಸಾಲ ಸಿಗಲ್ಲ, ಏನೂ ಅಭಿವೃದ್ಧಿ ಮಾಡುವಂತಿಲ್ಲ. ಹಿಂದೆ ಮಂಗಳೂರು- ಬೆಂಗಳೂರು ಪೈಪ್‌ಲೈನ್ ಹಾಕಿದಾಗ ಭೂಮಿ ನಮ್ಮ ಹೆಸರಲ್ಲೇ ಇರುತ್ತದೆ. ಮೇಲೆ ನೀವು ಬೆಳೆ ಬೆಳೀಬಹುದು  ಎಂದು ನಂಬಿಸಿ ಗುಂಟೆಗೆ 500 ರೂಪಾಯಿ ಪರಿಹಾರ ನೀಡಿದ್ದರು. ನಂತರ ನೋಡಿದರೆ ಆ ಭೂಮಿಯನ್ನೇ ಸ್ವಾಧೀನಪಡಿಸಿದ್ದರು. ಈಗ ಒಬ್ಬೊಬ್ಬ ರೈತರಲ್ಲಿ ಐದಾರು ಗುಂಟೆ ಭೂಮಿ ಉಳಿದುಕೊಂಡಿದೆ. ಈಗ ನಾಲೆಗೂ ಭೂಮಿ ಹೋದರೆ ನಾವೇನು ಮಾಡಬೇಕು. ನಮಗೆ ನಾಲೆಯೂ ಬೇಡ, ನೀರೂ ಬೇಡ ಎಂದು ರೈತರು ನುಡಿದರು.

ಈಚೆಗೆ ನಗರಾಭಿವೃದ್ಧಿ ಪ್ರಾಧಿಕಾರದವರೂ ಬಂದು ಸರ್ವೆ ಮಾಡಿದ್ದಾರೆ. ಈಪ್ರದೇಶ ತಮ್ಮ ವ್ಯಾಪ್ತಿಗೆ ಬರುತ್ತದೆ ಎಂದಿದ್ದರು. ಇದು ತಿಳಿದೂ ನಾಲೆ ನಿರ್ಮಿಸುವುದು ಸರಿಯಲ್ಲ. ಅದೂ ಅಲ್ಲದೆ ನಾಲೆ ನಿರ್ಮಿಸಿದರೂ ಇಲ್ಲಿವರೆಗೂ ನೀಡು ಬರುತ್ತದೆ ಎಂಬ ಭರವಸೆ ಇಲ್ಲ. ಈಗಾಗಲೇ ಯಗಚಿ  ನಾಲೆಗಳಲ್ಲಿ ನೀರು ಬರುತ್ತಿಲ್ಲ ಎಂದು ಕೂಗು ಎದ್ದಿದೆ. ಅವರಿಗೆ ನೀಡು ಕೊಡುವುದನ್ನು ಬಿಟ್ಟು  ಹೊಸ ನಾಲೆಗಳನ್ನೇಕೆ ಮಾಡುತ್ತಿದ್ದಾರೆ ಎಂದು ರೈತ ಲಕ್ಷ್ಮೇಗೌಡ ಪ್ರಶ್ನಿಸಿದರು.

ಸ್ಥಳಕ್ಕೆ ಜನಪ್ರತಿನಿಧಿಗಳು ಬಂದು ನಾಲೆ ರದ್ದು ಮಾಡುವ ಭರವಸೆ ನೀಡಬೇಕು ಎಂದು ಪ್ರತಿಭಟನಾಕಾರರು ಹಟಹಿಡಿ ದರು. ಮಧ್ಯಾಹ್ನ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಪ್ರತಿಭಟನಾಕಾರರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT