ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಗೆ ನೀರು ಬಿಡಲು ಆಗ್ರಹ

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಮಂಡ್ಯ: ವಿಶ್ವೇಶ್ವರಯ್ಯ ನಾಲೆಯ 9ನೇ ಸೀಳು ನಾಲೆಗೆ ನೀರು ಬಿಡದಿರುವುದನ್ನು ಖಂಡಿಸಿ ತಾಲ್ಲೂಕಿನ ಕೊತ್ತತ್ತಿ ನೀರು ಬಳಕೆದಾರರ ಸಹಕಾರ ಸಂಘ ಹಾಗೂ ನಾಲಾ ವ್ಯಾಪ್ತಿಯ ಇನ್ನಿತರ ರೈತರು ನಗರದಲ್ಲಿರುವ ಕಾವೇರಿ ನೀರಾವರಿ ನಿಗಮದ ಕಾರ್ಯಾಲಯ ಮುಂದೆ ಶನಿವಾರ ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ಗೇಜ್ ಇಲ್ಲದ ಕಾರಣ 9ನೇ ಸೀಳು ನಾಲೆಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಪರಿಣಾಮ ಬೆಳೆದು ನಿಂತಿರುವ ಬೆಳೆ ಒಣಗುತ್ತಿದೆ. ಕೂಡಲೇ ಸಮರ್ಪಕ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನೀರು ನಿರ್ವಹಣೆಯನ್ನು ಅಲ್ಲಿನ ಅಧಿಕಾರಿಗಳು ಸರಿಯಾಗಿ ಮಾಡುತ್ತಿಲ್ಲ. ಈ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಈಗ ನಾವೇ ಹೋರಾಟಕ್ಕೆ ಇಳಿಯಬೇಕಾಗಿದೆ. ನೀರು ಬಿಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಮದ್ದೂರು ಶಾಖೆಗೆ 1,300 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಆದರೆ ಕಾವೇರಿ ಶಾಖೆಗೆ ಕೇವಲ 450 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಉಳಿದ ನೀರನ್ನು ಸಂಪರ್ಕ ನಾಲಾ ಮುಖಾಂತರ ಮುಂದಕ್ಕೆ ಕೊಡಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

9ನೇ ಸೀಳು ನಾಲೆಗೆ ನೀರು ಬಿಡಲು ಸೂಕ್ತ ಕ್ರಮಕೈಗೊಳ್ಳುವುದಾಗಿ ನಿಗಮದ ಅಧಿಕಾರಿಯೊಬ್ಬರು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ಸಂಘದ ಅಧ್ಯಕ್ಷ ಮಹೇಶ್, ನಂಜುಂಡೇಗೌಡ, ಬೋರೇಗೌಡ, ಶಂಕರಲಿಂಗೇಗೌಡ, ಬಸವರಾಜಪ್ಪ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT