ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕನೇ ಸಾಹಸ...

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಾಲ್ವರು ಕಲಾವಿದರು. ನಾಲ್ಕನೇ ಸಾಹಸ... ಬಹುಶಃ ಕೋಲ್ಕತ್ತಾದ ನಾಲ್ವರು ಗೆಳೆಯರ ಚಿತ್ರಕಲೆ ಹಾಗೂ ಶಿಲ್ಪಕಲಾ ಪ್ರದರ್ಶನವನ್ನು ಹೀಗೆ ಬಣ್ಣಿಸಬಹುದು.
 
ಕಲಾವಿದರಾದ ಕೃಷ್ಣಾ ಡೇ, ಚಂದನ್ ದಾಸ್, ಮಿಂಟು ಮಲ್ಲಿಕ್ ಹಾಗೂ ಅನೂಪ್‌ಕುಮಾರ್ ಬಿಸ್ವಾಸ್ ನಗರದಲ್ಲಿ ನಾಲ್ಕನೇ ಬಾರಿಗೆ ಪ್ರದರ್ಶನ ನೀಡುತ್ತಿದ್ದಾರೆ.
ಈ ಹಿಂದೆ ಅವರು ನೀಡಿದ್ದ ಪ್ರದರ್ಶನಗಳಿಗೆ ಅದ್ದೂರಿ ಪ್ರತಿಕ್ರಿಯೆ ದೊರೆತಿತ್ತು.
 
ಇದು ಇವರನ್ನು ಮತ್ತೆ ಬೆಂಗಳೂರಿಗೆ ಕರೆ ತಂದಿತು. ಈ ಬಾರಿ ಪ್ರದರ್ಶನದಲ್ಲಿ ಮೂವರು ಕಲಾವಿದರ ವರ್ಣಚಿತ್ರಗಳು ಹಾಗೂ ಒಬ್ಬರ ಕಂಚಿನ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಮಿಂಟು ಅವರ ಆರು ಕಲಾಕೃತಿಗಳಲ್ಲಿ ಒಬ್ಬಳೇ ಹೆಣ್ಣನ್ನು ಹೋಲುವ ಹಲವು ಬಿಂಬಗಳಿವೆ. ಅಲ್ಲಿ ಕೊಳಲು ಹಿಡಿದ ರಾಧೆಯ ಭಾವವೂ ಒಂದೇ.

ಮಗುವನ್ನು ಹಿಡಿದ ಕಾಳಿಯ ಭಾವವೂ ಒಂದೇ. ಆದರೆ ಉಡುಗೆ ಹಾಗೂ ಅಂಗರಚನೆ ಕೂಡ ಒಂದೇ ರೀತಿ ಇದೆ. `ದೇಹ ಬೇರೆ ಭಾವವೊಂದೇ~ ಎಂಬ ಭಾವವನ್ನು ಸೂಸಿ ಹೊಸತೊಂದು ಹೊಳಹಿಗೆ ಕಾರಣವಾಗುವುದು ಅವರ ಕಲಾಕೃತಿಗಳ ಶಕ್ತಿ.

ಮಿಂಟು ಹುಟ್ಟಿದ್ದು ಪಶ್ಚಿಮ ಬಂಗಾಳದ ಕಂಚ್ರಾಪುರದಲ್ಲಿ. ಕಲ್ಯಾಣಿ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದ ಇವರು ನಂತರ ಹೊರಳಿದ್ದು ಚಿತ್ರಕಲೆಯತ್ತ. ಕೋಲ್ಕತ್ತಾ, ಮುಂಬೈನಲ್ಲಿ ಎರಡು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿರುವ ಇವರು ಒಟ್ಟು ನಾಲ್ಕು ಕಲಾಶಿಬಿರಗಳಲ್ಲಿ ಭಾಗವಹಿಸಿದ್ದಾರೆ.

ಆಮ್‌ಸ್ಟರ್‌ಡ್ಯಾಂ, ದುಬೈ, ನವದೆಹಲಿ, ಬರಾಕ್‌ಪುರ, ಬೆಂಗಳೂರು ಹಾಗೂ ಕೋಲ್ಕತ್ತಾಗಳಲ್ಲಿ ರಾಷ್ಟ್ರೀಯ ಸಮೂಹ ಪ್ರದರ್ಶನಗಳನ್ನು ನೀಡಿದ್ದಾರೆ.

ದೃಶ್ಯಕಲೆಯಲ್ಲಿ ಪದವಿ ಪಡೆದಿರುವ ಕಲಾವಿದ ಅನೂಪ್‌ಕುಮಾರ್ ಬಿಸ್ವಾಸ್ ಅವರ ಆರು ಕಲಾಕೃತಿಗಳು ಪ್ರದರ್ಶನದಲ್ಲಿವೆ. ಇವರ ಇಡೀ ಕಲಾಕೃತಿಗಳು ಹೆಣ್ಣಿನ ನಿರೀಕ್ಷೆ- ತೊಳಲಾಟ, ಬುದ್ಧನ ಪ್ರಶಾಂತತೆಯನ್ನು ಬಿಂಬಿಸುವಂತಹವು.
 
2000ದಿಂದ ಕಲಾಲೋಕದಲ್ಲಿ ಸಕ್ರಿಯರಾಗಿರುವ ಇವರು ಕೋಲ್ಕತ್ತಾದ ನವಾಬ್‌ಗಂಜ್‌ನಲ್ಲಿ ಸ್ಟುಡಿಯೊ ಹೊಂದಿದ್ದಾರೆ. ಕಿಟಕಿಯ ಮುಂದೆ ಕುಳಿತಿರುವ ಕೋಡಂಗಿಯ ಚಿತ್ರ ಇವರ ಸೃಜನಶೀಲತೆಗೆ ಸಾಕ್ಷಿ.

ಹಿನ್ನೆಲೆಯಲ್ಲಿ ನಗರದ ವಿಹಂಗಮ ನೋಟವಿದೆ. ಕೋಡಂಗಿ ಯಾರು ಎಂಬ ಜಿಜ್ಞಾಸೆಯನ್ನು ಹುಟ್ಟುಹಾಕಿ ಕೃತಿ ನೋಡುಗರಿಗೆ ಕಚಗುಳಿ ಇಡುತ್ತದೆ.

ಶಿಲ್ಪಿ ಚಂದನ್‌ದಾಸ್ ತಮ್ಮ ಭಾವನೆಗಳ ಅಭಿವ್ಯಕ್ತಿಗೆ ಕ್ಯಾನ್‌ವಾಸ್ ಬದಲು ಉಳಿ ಹಿಡಿದಿದ್ದಾರೆ. ಹತ್ತಕ್ಕೂ ಹೆಚ್ಚು ಕಂಚಿನ ಶಿಲ್ಪಗಳು ಇವರ ಕೈಯಲ್ಲಿ ಅರಳಿವೆ. ತಾವು ಕಂಡ ವಿವಿಧ ಮುಖಗಳನ್ನು ಉರುಟುರುಟಾಗಿ ಮೂಡಿಸಿ ಗಮನ ಸೆಳೆಯುತ್ತಾರೆ.

ಅಲ್ಲದೆ ಮನುಷ್ಯನ ಸಂತಸವನ್ನು ಬಿಂಬಿಸುವ ಹಲವು ಕಲಾಕೃತಿಗಳು ಇವರಿಂದ ಮೂಡಿ ಬಂದಿವೆ. ಚಂದನ್ ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯದಿಂದ ದೃಶ್ಯಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು. ಈವರೆಗೆ ಎಂಟು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ.
 
ನವದೆಹಲಿ, ಮುಂಬೈ, ಜೈಪುರ, ಹಾಗೂ ಕೋಲ್ಕತ್ತಾದಲ್ಲಿ ಪ್ರಮುಖ ಸಮೂಹ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಬಾಂಬೆ ಆರ್ಟ್ ಸೊಸೈಟಿ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

ಕೃಷ್ಣಾ ಡೇ ಮಿಶ್ರ ಮಾಧ್ಯಮದ ಮೂಲಕ `ಪದ್ಯ~ ಹೇಳಲು ಹೊರಟವರು. ಇಲ್ಲಿ ಪ್ರೇಮವಿದೆ ವಿರಹವಿದೆ. ಮನುಷ್ಯ ಪ್ರೀತಿಯ ಮಹತ್ವವಿದೆ. ರವೀಂದ್ರ ಭಾರತಿ ವಿಶ್ವವಿದ್ಯಾಲಯದಿಂದ ದೃಶ್ಯಕಲೆ ಡಿಪ್ಲೊಮಾ ಪಡೆದ ಇವರು ಪಶ್ಚಿಮ ಬಂಗಾಳದ ಸಂಸ್ಕೃತಿ ಇಲಾಖೆಯಿಂದ ಕಲಾ ತರಬೇತಿ ಪಡೆದವರು.
 
ನೈರುತ್ಯ ರೈಲ್ವೆ ಏರ್ಪಡಿಸಿದ್ದ ಕಲಾ ಶಿಬಿರದಲ್ಲಿ ಭಾಗವಹಿಸಿರುವ ಇವರು ನವದೆಹಲಿ, ಆಗ್ರಾ, ಖರಗ್‌ಪುರ ಹಾಗೂ ಬರಾಕ್‌ಪುರ ಮತ್ತಿತರ ಸ್ಥಳಗಳಲ್ಲಿ 16 ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. ಫ್ರಾನ್ಸ್, ಬೆಂಗಳೂರು, ರಾಂಚಿ, ನವದೆಹಲಿ, ಅಹಮದಾಬಾದ್ ಹಾಗೂ ಕೋಲ್ಕತ್ತಾದಲ್ಲಿ ನಡೆದ ಸಮೂಹ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
 
ಭಾರತೀಯ ಚಿತ್ರಕಲಾ ಕಾಲೇಜಿನಿಂದ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಪಡೆದ ಹೆಗ್ಗಳಿಕೆ ಇವರದು. ನಗರದಲ್ಲಿ ಇದೇ 28ರವರೆಗೆ ಪ್ರದರ್ಶನ ನಡೆಯಲಿದೆ.

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ. ಸಮಯ: ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT