ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕನೇ ಸುತ್ತಿಗೆ ನಡಾಲ್, ಫೆಡರರ್

ಟೆನಿಸ್: ಅಜರೆಂಕಾ, ಇವನೋವಿಚ್‌ಗೆ ಗೆಲುವು
Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಎಎಫ್‌ಪಿ): ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತು ಪ್ರವೇಶಿಸಿದರು.

ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ನಡಾಲ್ 6-4, 6-3, 6-3 ರಲ್ಲಿ ಕ್ರೊವೇಷ್ಯದ ಇವಾನ್ ಡೊಡಿಗ್ ವಿರುದ್ಧ ಸುಲಭ ಗೆಲುವು ಪಡೆದರು. ಹಾರ್ಡ್‌ಕೋಟ್ ಅಂಗಳದಲ್ಲಿ ನಡಾಲ್‌ಗೆ ದೊರೆತ ಸತತ 18ನೇ ಜಯ ಇದಾಗಿದೆ.

ಏಳನೇ ಶ್ರೇಯಾಂಕದ ಫೆಡರರ್ 6-3, 6-0, 6-2 ರಲ್ಲಿ ಫ್ರಾನ್ಸ್‌ನ ಅಡ್ರಿಯಾನ್ ಮನಾರಿನೊ ಅವರನ್ನು ಮಣಿಸಿದರು. ಇದೀಗ ನಡಾಲ್ ಹಾಗೂ ಫೆಡರರ್ ಕ್ವಾರ್ಟರ್ ಫೈನಲ್‌ನಲ್ಲಿ ಪರಸ್ಪರ ಎದುರಾಗುವ ಸಾಧ್ಯತೆ ಹೆಚ್ಚಿದೆ. ಇವರಿಬ್ಬರು ಅಮೆರಿಕ ಓಪನ್ ಟೂರ್ನಿಯಲ್ಲಿ ಒಮ್ಮೆಯೂ ಎದುರಾಗಿಲ್ಲ.

ಜರ್ಮನಿಯ ಫಿಲಿಪ್ ಕೊಲ್‌ಶ್ರೈಬರ್ 6-4, 3-6, 7-5, 7-6 ರಲ್ಲಿ ಅಮೆರಿಕದ ಜಾನ್ ಇಸ್ನೆರ್‌ಗೆ ಆಘಾತ ನೀಡಿದರು. ಎರಡನೇ ಶ್ರೇಯಾಂಕದ ಇಸ್ನೆರ್ ಎರಡನೇ ಸೆಟ್ ಗೆಲ್ಲುವಲ್ಲಿ ಮಾತ್ರ ಯಶ ಕಂಡರು.

ಪುರುಷರ ಸಿಂಗಲ್ಸ್ ವಿಭಾಗದ ಇತರ ಪಂದ್ಯಗಳಲ್ಲಿ ಸ್ಪೇನ್‌ನ ಟಾಮಿ ರಾಬ್ರೆಡೊ 7-6, 6-1, 4-6, 7-5 ರಲ್ಲಿ ಜರ್ಮನಿಯ ಡೇನಿಯಲ್ ಇವಾನ್ಸ್ ವಿರುದ್ಧವೂ, ಸ್ಪೇನ್‌ನ ಡೇವಿಡ್ ಫೆರರ್ 6-4, 6-3, 4-6, 6-4 ರಲ್ಲಿ ಕಜಕಸ್ತಾನದ ಮಿಖಾಯಲ್ ಕುಕುಶ್‌ಕಿನ್ ಎದುರೂ, ಕೆನಡಾದ ಮಿಲೋಸ್ ರೋನಿಕ್ 6-7, 6-4, 6-3, 6-4 ರಲ್ಲಿ ಸ್ಪೇನ್‌ನ ಫೆಲಿಸಿಯಾನೊ ಲೊಪೆಜ್ ಮೇಲೂ ಗೆಲುವು ಪಡೆದರು.

ಅಜರೆಂಕಾ ಜಯಭೇರಿ: ಎರಡನೇ ಶ್ರೇಯಾಂಕದ ಆಟಗಾರ್ತಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಪ್ರಯಾಸದ ಗೆಲುವಿನ ಮೂಲಕ ಮೂರನೇ ಸುತ್ತು ಪ್ರವೇಶಿಸಿದರು. ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದರೂ ತಿರುಗೇಟು ನೀಡಿದ ಅವರು 6-7, 6-3, 6-2 ರಲ್ಲಿ ಫ್ರಾನ್ಸ್‌ನ ಅಲೈಜ್ ಕಾರ್ನೆಟ್ ವಿರುದ್ಧ ಗೆದ್ದರು.

ಸರ್ಬಿಯದ ಅನಾ ಇವನೋವಿಚ್ 4-6, 7-5, 6-4 ರಲ್ಲಿ ಅಮೆರಿಕದ ಕ್ರಿಸ್ಟಿನಾ ಮೆಕಾಲೆ ಅವರನ್ನು ಮಣಿಸಿದರೆ, ಇಟಲಿಯ ಕ್ಯಾಮಿಲಾ ಜಾರ್ಜಿ 4-6, 6-4, 6-3 ರಲ್ಲಿ ಡೆನ್ಮಾರ್ಕ್‌ನ ಕ್ಯಾರೊಲಿನ್ ವೊಜ್‌ನಿಯಾಕಿ ವಿರುದ್ಧ ಅಚ್ಚರಿಯ ಗೆಲುವು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT