ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕರ ಪೋರ ಅಮೆರಿಕದಲ್ಲಿ ಮೇಯರ್!

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಈತ ಇನ್ನೂ ನಾಲ್ಕು ವರ್ಷದ ಪೋರ. ಪೂರ್ವ ಪ್ರಾಥಮಿಕ ಶಾಲೆ ಪೂರ್ಣಗೊಳಿಸಿಲ್ಲ. ಆದರೆ, ಅಮೆರಿಕದಲ್ಲಿ ಮೇಯರ್ ಆಗಿ ಪುನರಾಯ್ಕೆಯಾಗಿದ್ದಾನೆ!

ಈ ವಿಷಯ ಕೇಳಿ ಎಂತಹವರು ಹುಬ್ಬೇರಿಸುವುದು ಸಹಜ. ಆದರೆ, ಇದು ನಿಜ. ಅಂದಹಾಗೆ ಮಿನ್ನೆಸೋಟಾದ ಚಿಕ್ಕ ನಗರ ಡೋರ್‌ಸೆಟ್‌ನ ಮೇಯರ್ ಆಗಿದ್ದು ರಾಬರ್ಟ್ ಬಾಬಿ ಟಫ್ಟ್ಸ್. ಬಾಬಿ ಮೂರು ವರ್ಷದವನಿದ್ದಾಗ ಮೊದಲ ಬಾರಿಗೆ ಮೇಯರ್ ಆಗಿ ಆಯ್ಕೆಯಾಗಿದ್ದ.

ಯಾವುದೇ ರೀತಿಯ ಸ್ಥಳೀಯ ಸರ್ಕಾರ ಅಥವಾ ಆಡಳಿತವಿರದ ನಗರ ಡೋರ್‌ಸೆಟ್. ಈ ನಗರದ ಜನಸಂಖ್ಯೆ ಕೇವಲ 22ರಿಂದ 28. ಇಷ್ಟು ಜನರು ತಮಗೇ ಬೇಕಾದ ಸಚಿವರು ಮತ್ತು ಮೇಯರ್‌ರನ್ನು ಆಯ್ಕೆ ಮಾಡುತ್ತಾರೆ. ಇಷ್ಟ ಬಂದಷ್ಟು ಬಾರಿ ತಮಗೆ ಸೂಕ್ತವೆನಿಸಿದ ಮೇಯರ್‌ಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಒಂದು ಮತಕ್ಕೆ ಒಂದು ಡಾಲರ್ ಹಣ ಪಾವತಿಸಬೇಕು ಎನ್ನುವುದು ವಿಶೇಷ. ಇದಕ್ಕಾಗಿ ನಗರದಾದ್ಯಂತ ಹಲವು ಅಂಗಡಿಗಳಲ್ಲಿ ಮತಪೆಟ್ಟಿಗೆಗಳನ್ನು ಇಡಲಾಗಿದೆ. ಇದರಿಂದ ಸಂಗ್ರಹವಾದ ಹಣವನ್ನು ಡೋರ್‌ಸೆಟ್ ಜನರಿಗಾಗಿ ಉತ್ಸವ ಸಂಘಟಿಸಲು ಬಳಸಿಕೊಳ್ಳಲಾಗುತ್ತದೆ. ಮೇಯರ್ ಆಗಿ ಆಯ್ಕೆಯಾಗಿರುವ ಬಾಬಿ ತನ್ನ ಸಂಭ್ರಮವನ್ನು ಐಸ್‌ಕ್ರೀಂ ಸವಿದು ಆಚರಿಸಿಕೊಂಡಿದ್ದಾನೆ.

`ಇತರರಿಗಿಂತ ನಾನು ಬೇಗ ಎದ್ದೇಳುತ್ತೇನೆ' ಎಂಬ ಬಾಬಿ ಹೇಳಿಕೆಯನ್ನು ಉಲ್ಲೇಖಿಸಿ ಡಬ್ಲ್ಯುಸಿಸಿಒ ವರದಿ ಮಾಡಿದೆ. `ಡೋರ್‌ಸೆಟ್‌ನ ಪುಟ್ಟ ಆಡಳಿತಗಾರ ದಿನವಿಡೀ ಸುತ್ತಾಟ ನಡೆಸಿದ್ದು ಮತ್ತು ಸತತವಾಗಿ ಸಂದರ್ಶನಗಳನ್ನು ನೀಡುತ್ತಿರುವುದರಿಂದ ಸ್ವಲ್ಪ ದಣಿದಿದ್ದಾನೆ' ಎಂದು ಬಾಬಿ ತಾಯಿ ಎಮ್ಮಾಟಫ್ಟ್ಸ್ ಹೇಳಿದ್ದಾರೆ.

`ಮೊದಲ ಬಾರಿಗೆ ಬಾಬಿ ಮೇಯರ್ ಆಗಿದ್ದಾಗ 750 ಡಾಲರ್ (45 ಸಾವಿರ ರೂಪಾಯಿ) ಸಂಗ್ರಹಿಸಿದ್ದ. ಅದು ಕೂಡ ಬೇಸಿಗೆ ನಡಿಕೆ ಮೂಲಕ. ಭಾನುವಾರ ತನ್ನ ಟೀ-ಶರ್ಟ್ ಮಾರಾಟದಿಂದ ಬಂದ ಹಣವನ್ನು ಯಾವುದಾದರೂ ಸಂಸ್ಥೆಗೆ ದೇಣಿಗೆ ನೀಡಲು ಯೋಜಿಸಿದ್ದಾನೆ' ಎಂದು ತಿಳಿಸಿದ್ದಾರೆ.

`ಎರಡನೇ ಅವಧಿಯಲ್ಲಿ ಬಾಬಿ ಫರ್ಗೊದ ಕೆಂಪು ನದಿ ಕಣಿವೆಯಲ್ಲಿರುವ ರೋನಾಲ್ಡ್ ಮ್ಯಾಕ್‌ಡೊನಾಲ್ಡ್ ಮನೆಗಾಗಿ ದೇಣಿಗೆ ಸಂಗ್ರಹಿಸಲಿದ್ದಾನೆ. ಅಲ್ಲದೇ ಡೋರ್‌ಸೆಟ್‌ಗೆ ಸ್ವಾಗತ ಕಮಾನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾನೆ' ಎಂದು ಎಮ್ಮಾ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT