ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕರ ಹಂತಕ್ಕೆ ಕರ್ನಾಟಕದ ಲಗ್ಗೆ

Last Updated 15 ಫೆಬ್ರುವರಿ 2011, 18:45 IST
ಅಕ್ಷರ ಗಾತ್ರ

ವಿಜಾಪುರ: ಐತಿಹಾಸಿಕ ನಗರದ ಅಂಗಳದಲ್ಲಿ ಕರ್ನಾಟಕ ತಂಡಗಳು 37ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕುವುದನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ!

ಮಂಗಳವಾರ ಸಂಜೆ ನಡೆದ ಎಂಟರ ಘಟ್ಟದ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದ ಆತಿಥೇಯ ಬಾಲಕ ಮತ್ತು ಬಾಲಕಿಯರ ತಂಡಗಳು ಸೆಮಿಫೈನಲ್‌ಗೆ ಸಾಗಿದವು.
ಹೊನಲು ಬೆಳಕಿನಲ್ಲಿ ನಡೆದ ಪಂದ್ಯದಲ್ಲಿ ನಿಖಿಲ್ ಗೌಡ ಬಳಗವು 25-17, 25-10, 25-9ರಿಂದ ಮಹಾರಾಷ್ಟವನ್ನು ಮತ್ತು ಕೆ.ವಿ. ಮೇಘನಾ ನಾಯಕತ್ವದ ಬಾಲಕಿಯರ ತಂಡವು 25-8, 25-13, 25-14ರಿಂದ ಹರಿಯಾಣ ಬಾಲಕಿಯರ ವಿರುದ್ಧ ಗೆಲುವು ಸಾಧಿಸಿದವು.

ಮಂಕಾದ ಮಹಾರಾಷ್ಟ್ರ: ಲೀಗ್ ಹಂತದ ಸಿ ಗುಂಪಿನಿಂದ ಮಹಾ ರಾಷ್ಟ್ರದ ಮೈಕೆಲ್ ಧವೆ ನಾಯಕತ್ವದ ತಂಡವು ಕರ್ನಾಟಕದ ಆಕ್ರಮಣದ ಮುಂದೆ ಬೆದರಿದರು. ಮೂರು ಸೆಟ್‌ಗಳ ಆರಂಭದಲ್ಲಿ ಸಮಬಲ ಶೂರತ್ವ ಮೆರೆಯುವ ಪ್ರಯತ್ನ ಮಾಡಿದರೂ, ನಿಖಿಲ್ ಗುಂಪಿಗೆ ಸುಲಭವಾಗಿ ಶರಣಾಯಿತು.

ಮಹಾರಾಷ್ಟ್ರದ ಆಟಗಾರರ ನಡುವಿನ ಹೊಂದಾಣಿಕೆ ಮತ್ತು ಸಂಯೋಜನೆಯ ಕೊರತೆಯನ್ನು  ಸಮರ್ಥವಾಗಿ ಉಪಯೋಗಿಸಿಕೊಂಡ      ಕರ್ನಾಟಕ ತಂಡ ಗೆಲುವನ್ನು ಒಲಿಸಿಕೊಂಡಿತು.

ಕರ್ನಾಟಕದ ಲಿಬ್ರೊ ಎಂ. ವಿನೋದ್ ನೀಡಿದ ಉತ್ತಮ ರಕ್ಷಣೆ, ಬಿ. ಮನೋಜ್, ಮೊಹ್ಮದ್ ಅಕೀಬ್, ಕೆ. ಸಂದೀಪ್ ಪ್ರದರ್ಶಿಸಿದ ಸ್ಮ್ಯಾಷ್ ಮತ್ತು ಸ್ಲೋಡ್ರಾಪ್‌ಗಳಿಗೆ ಮಹಾ ರಾಷ್ಟ್ರದ ಹುಡುಗರ ಬಳಿ ಉತ್ತರವೇ ಇರಲಿಲ್ಲ.

ಚೆಂಡನ್ನು ಅಂಕಣದಿಂದ ಸಾಕಷ್ಟು ಬಾರಿ ಹೊರಗೆ ಹೊಡೆದ ಮಹಾ ರಾಷ್ಟ್ರದ ಆಟಗಾರರು ಟೂರ್ನಿ ಯಿಂದಲೂ ಹೊರಬಿದ್ದರು.
ಗಾಯದ ಮೇಲೆ ಬರೆ ಎಳೆದಂತೆ ತಂಡದ ಪ್ರಮುಖ ಆಟಗಾರ ನೂರುಲ್ ಇಸ್ಲಾಂ ಎರಡನೇ ಸೆಟ್‌ನಲ್ಲಿ ಕಾಲಿಗೆ ಪೆಟ್ಟು ತಿಂದು ಹೊರಹೋದರು. ಅವರ ಬದಲಿಗೆ ಸಲ್ಮಾನ್‌ಖಾನ್ ಆಡಿದರು. ಈ ಸೆಟ್‌ನಲ್ಲಿ 6-6ರಿಂದ ಕರ್ನಾಟಕದೊಂದಿಗೆ ಸಮಬಲ ಸಾಧಿಸಿತ್ತು. ಆದರೆ ನಂತರ ಆತಿಥೇ ಯರು ಸತತ 12 ಪಾಯಿಂಟ್ ಕಲೆ ಹಾಕಿದರೂ ಮಹಾರಾಷ್ಟ್ರ ಏಳಕ್ಕೇರಿರಲಿಲ್ಲ.  

ಮೂರನೇ ಸೆಟ್‌ನಲ್ಲಿ ಹೆಚ್ಚಿನ ಪ್ರತಿರೋಧ ಒಡ್ಡಲು ಮಹಾರಾಷ್ಟ್ರಕ್ಕೆ ಅವಕಾಶವನ್ನೇ ಕರ್ನಾಟಕದ ಆಟ ಗಾರರು ನೀಡಲಿಲ್ಲ. ಲೀಗ್ ಹಂತದ ‘ಎ’ ಗುಂಪಿನಲ್ಲಿ ಒಂದೂ ಪಂದ್ಯ ಸೋಲದೇ ನಾಲ್ಕರ ಘಟ್ಟಕ್ಕೆ ಬಂದಿದ್ದ ಆತಿಥೇಯ ಬಾಲಕರು ಸೆಮಿಫೈನಲ್‌ಗೂ ಲಗ್ಗೆ ಹಾಕುವುದರೊಂದಿಗೆ, ಬ್ಯಾಂಡ್, ಬಾಜಾದ ಸಂಭ್ರಮದ ಸದ್ದು ಮೈದಾನದಲ್ಲಿ ಪ್ರತಿಧ್ವನಿಸಿತು. 

ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಕೇರಳ ತಂಡವು 22-25, 25-20, 25-18, 25-19ರಿಂದ ಉತ್ತರಾಖಂಡವನ್ನು ಸೋಲಿಸಿತು. ಬುಧವಾರ ಕೇರಳ ತಂಡವು ಕರ್ನಾಟಕವನ್ನು ಎದುರಿಸಲಿದೆ.

ಬಾಲಕಿಯರ ಬಲ: ಆತಿಥೇಯ ಬಾಲಕಿಯರ ಬಲದ ಮುಂದೆ ಹರಿಯಾಣದ ಆಟಗಾರ್ತಿಯರು ಪ್ರತಿರೋಧವನ್ನೇ ಒಡ್ಡಲಿಲ್ಲ.
ನಾಯಕಿ ಮೇಘನಾ, ಲಿಫ್ಟರ್ ಅಭಿಲಾಷಾ, ಅನಿತಾ ಪಾಟೀಲ, ಗಾನವಿಯ ಆಟದ ಮುಂದೆ ಹರಿಯಾಣದ  ಸೀಮಾ ನಾಯಕತ್ವದ ತಂಡವು ಮಂಡಿಯೂರಿತು.
ಲೀಗ್‌ನ ಎ ಗುಂಪಿನಿಂದ ಎಂಟರ ಘಟ್ಟಕ್ಕೆ ಬಂದಿದ್ದ ಹರಿಯಾಣದ ಆರತಿ, ಅಮಿತಾ, ಪೂಜಾರಾಣಿ ಸ್ವಲ್ಪಮಟ್ಟಿಗೆ ಪ್ರತಿರೋಧ ಒಡ್ಡುವ ಪ್ರಯತ್ನ ಮಾಡಿದರೂ ತಂಡದಲ್ಲಿ ಸಂಯೋಜನೆ ಕೊರತೆಯಿತ್ತು.

ಮೇಘಾ ಮತ್ತು ಗಾನವಿಯ ಸ್ಮ್ಯಾಷ್‌ಗಳಿಗೆ ಹರಿಯಾಣದ ಹುಡುಗಿಯರು ಬೆನ್ನು ತೋರಿಸಿದರು. ಂದು ಕ್ವಾರ್ಟರ್‌ಫೈನಲ್‌ನಲ್ಲಿ ಪಶ್ಚಿಮ ಬಂಗಾಳ ತಂಡವು 25-23, 27-25, 25-8ರಿಂದ ರಾಜಸ್ತಾನ ತಂಡವನ್ನು ಸೋಲಿಸಿ ನಾಲ್ಕರ ಹಂತಕ್ಕೆ ಪ್ರವೇಶಿಸಿತು. ಕಳೆದ ವರ್ಷ ರನ್ನರ್ಸ್ ಅಪ್ ಆಗಿದ್ದ ತಂಡ ಈ ಬಾರಿಯೂ ಫೈನಲ್ ತಲುಪುವ ನಿರೀಕ್ಷೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT