ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಕಂಬ

Last Updated 3 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಶಿವರಾಜಕುಮಾರ್, ರವಿಚಂದ್ರನ್, ಜಗ್ಗೇಶ್ ಹಾಗೂ ರಮೇಶ್. ವೃತ್ತಿಜೀವನದ ರಜತ ಸಂಭ್ರಮವನ್ನು ಮೊನ್ನೆ ‘ಮಹಾಶಿವರಾತ್ರಿ’ಯಂದು ಒಟ್ಟಿಗೆ ಹಂಚಿಕೊಂಡ ಈ ನಾಲ್ವರನ್ನು ನೋಡಿದಾಗ ನೆನಪಾಗುವುದು- ಅಪ್ಪನ ಎದೆಮೇಲೆ ಆಡುವ ಮಗಳು ಎದೆಮಟ್ಟ ಬೆಳೆದುನಿಲ್ಲುವ ಬೆರಗಿನ ರೂಪಕ. ಕನ್ನಡದ ಪ್ರೇಕ್ಷಕರ ಕನಸುಗಳಿಗೆ ಹಲವು ವರ್ಷಗಳಿಂದ ಕಚಗುಳಿ ಇಡುತ್ತಿರುವ ಈ ನಾಲ್ವರು ಕಲಾವಿದರು ಹಿರಿಯ ಕಲಾವಿದರ ಸಾಲಿಗೆ ಸದ್ದಿಲ್ಲದೆ ಬಡ್ತಿ ಪಡೆದುಬಿಟ್ಟಿದ್ದಾರೆ. ಇದು ಬೆರಗಲ್ಲದೆ ಮತ್ತಿನ್ನೇನು?

ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ನಾಲ್ವರು ಸಾಗಿಬಂದ ಹಾದಿಯನ್ನು ನೆನಪಿಸಿಕೊಂಡರೆ ಅದು ಕನ್ನಡ ಚಿತ್ರರಂಗದ ಕಳೆದ ಮೂರು ದಶಕಗಳ ಅವಲೋಕನದಂತೆಯೂ ಕಾಣಿಸುತ್ತದೆ. ಈ ನಾಲ್ವರ ವ್ಯಕ್ತಿತ್ವ ಹಾಗೂ ಸಾಧನೆ ಹೊಸ ಪೀಳಿಗೆಯ ನಟರಿಗೆ ತೋರುದೀಪವೂ ಹೌದು.

ಪ್ರಭಾವಳಿಗಳ ಮೀರಿದ ಶಿವರಾಜ್ ಶಿವರಾಜ್‌ಕುಮಾರ್ ಅವರ ‘ಆನಂದ್’ (1986) ಚಿತ್ರವನ್ನು ನೆನಪಿಸಿಕೊಳ್ಳಿ. ಟುವ್ವಿ ಟುವ್ವಿ ಎಂದು ಕುಣಿದ ಹಾರುಗೂದಲಿನ ಹುಡುಗ ಈಗ ‘ಜೋಗಯ್ಯ’. ಈ ಹಾದಿಯಲ್ಲಿ ಶಿವರಾಜ್ ಜೀವತುಂಬಿದ ಪಾತ್ರಗಳಾದರೂ ಎಂಥವು- ಕಣ್ಣಪ್ಪ, ಕುಮಾರರಾಮ, ಭೂಮಿತಾಯಿಯ ಚೊಚ್ಚಿಲ ಮಗ, ಹಳ್ಳಿಮುಕ್ಕ, ಬೇರುಗಳಿಗೆ ಹಂಬಲಿಸುವ ಯುವಕ, ಜೀತದಾಳು, ಅಕ್ಕರೆಯ ಅಣ್ಣ, ಕಿಚ್ಚಿಡುವ ಪ್ರೇಮಿ, ಸೌಹಾರ್ದ ಸಮಾಜದ ಕನಸು ಕಾಣುವ ಪೊಲೀಸ್ ಅಧಿಕಾರಿ, ರಕ್ತಹರಿಸುವ ರೌಡಿ- ಓಹ್, ಎಷ್ಟೊಂದು ಪಾತ್ರಗಳು! ಈಗಲೂ ಶಿವರಾಜ್‌ರ ಪಾತ್ರವೈವಿಧ್ಯದ ದಾಹ ತಣಿದಿಲ್ಲ. ‘ಭಕ್ತ ಕುಂಬಾರ’ನಾಗಿ ನಟಿಸುವ ಆಸೆ ಅವರಿಗಿದ್ದೇ ಇದೆ.

ಶಿವರಾಜ್ ಸಾಗಿಬಂದ ಹಾದಿಯುದ್ದಕ್ಕೂ ಹೂಗಳೇನೂ ಇಲ್ಲ. ರಾಜಕುಮಾರ್ ಮಗ ಎನ್ನುವ ಪ್ರಭಾವಳಿಯಿದ್ದರೂ, ಅದಷ್ಟೇ ಇಪ್ಪತ್ತೈದು ವರ್ಷಗಳ ಕಾಲ ಮುನ್ನಡೆಸುವುದಿಲ್ಲ. ಸ್ವಂತಿಕೆಯಿಂದಾಗಿ, ಬದ್ಧತೆಯಿಂದಾಗಿ ತಮ್ಮನ್ನು ಕಲಾವಿದನಾಗಿ ರೂಪಿಸಿಕೊಂಡಿರುವುದು ಶಿವರಾಜ್ ಅಗ್ಗಳಿಕೆ.

ಕಲಾವಿದನಾಗಿ ಮಾತ್ರವಲ್ಲ, ವ್ಯಕ್ತಿಯಾಗಿಯೂ ಅವರು ತಮ್ಮನ್ನು ತಾವು ಬದಲಿಸಿಕೊಂಡಿದ್ದಾರೆ. ಸಜ್ಜನಿಕೆಯಲ್ಲವರು ಅಪ್ಪನಿಗೆ ತಕ್ಕ ಮಗ. ವೃತ್ತಿಜೀವನದ ಬೆಳ್ಳಿಸಂಭ್ರಮ ಆಚರಿಸಿಕೊಂಡ ಅವರು, ಆ ಸಂಭ್ರಮದಲ್ಲಿ ತಮ್ಮ ಸಹಚರರನ್ನೂ ಕರೆದು ಗೌರವಿಸಿದ್ದು ಈ ಸಜ್ಜನಿಕೆಯಿಂದಲೇ.

ನೂರು ಚಿತ್ರಗಳನ್ನು ಪೂರೈಸಿರುವ ಶಿವರಾಜ್, ಇನ್ನೂರು ಚಿತ್ರಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಅದು ಸಹಜವಾದದ್ದೇ. ನಟನೊಬ್ಬನ ಬದುಕಿನಲ್ಲಿ ಐವತ್ತು ವರ್ಷ ಹಾಗೂ ನೂರು ಸಿನಿಮಾ ಎನ್ನುವ ಸಂಕ್ರಮಣ ಕಾಲ ಆತ್ಮಾವಲೋಕನ ಸಂದರ್ಭವೂ ಹೌದು. ಆತ್ಮಾವಲೋಕನ ಎಂದರೆ ಇನ್ನಷ್ಟು ಒಳ್ಳೆಯ ಚಿತ್ರಗಳ ನಿರೀಕ್ಷೆ-ಸಾಧ್ಯತೆ ಎಂದರ್ಥ.

ಜಗ್ಗೇಶ್: ಅಪ್ಪಟ ಕಲಾವಿದ

‘ನಾನು ಎವರೆಸ್ಟ್ ಇದ್ದಂತೆ. ತುಂಬಾ ಜನ ಹಿಮಾಲಯ ಹತ್ತುತ್ತಾರೆ, ಬಾವುಟ ಹಾರಿಸುತ್ತಾರೆ. ಎವರೆಸ್ಟ್ ಗಲಾಟೆ ಮಾಡೊಲ್ಲ. ಹತ್ತಿ ಬಾವುಟ ಹಾರಿಸಿದವರು ಗಲಾಟೆ ಮಾಡ್ತಾರೆ’ ಎಂದು ಜಗ್ಗೇಶ್ ಒಮ್ಮೆ ಹೇಳಿದ್ದರು.  ‘ಮೊನ್ನೆ ನಮ್ಮ ಹುಡುಗರು ಹೊಸ ಹೇರ್‌ಸ್ಟೈಲ್ ಮಾಡಿಸಿದರು. ಐವತ್ತರ ಹೊಸಿತಿಲಿನ ನನಗೆ ಇದೆಲ್ಲ ಯಾಕ್ರಪ್ಪ ಅಂದೆ. ಅಣ್ಣಾ ಮಾನಸಿಕವಾಗಿ ನೀನಿನ್ನೂ ಹುಡುಗನೇ ಅಂದರು’. ಇದು ಕೂಡ ಜಗ್ಗೇಶ್ ಮಾತೇ. ಈ ಮಾತುಗಳು ಅವರು ಸಾಗಿಬಂದ ಹಾದಿಯ ಸಾಧನೆಯಂತೆಯೂ, ಅವರ ವಿಶಿಷ್ಟ ವ್ಯಕ್ತಿತ್ವದ ಅಭಿವ್ಯಕ್ತಿಯಂತೆಯೂ ಕಾಣಿಸುವುದಿಲ್ಲವೇ?

ಬರುವ ನವೆಂಬರ್‌ಗೆ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಜಡೆ ಮಾಯಸಂದ್ರದ ಜಗ್ಗೇಶ್ ಗಾಂಧಿನಗರಕ್ಕೆ ಬಂದು ಮೂವತ್ತು ವರ್ಷ. ಇಷ್ಟು ವರ್ಷಗಳಲ್ಲಿ, ಯಾವ ಪ್ರಭಾವಳಿಯೂ ಇಲ್ಲದೆ, ಕೇವಲ ಪ್ರತಿಭೆ ಹಾಗೂ ಛಲವನ್ನಷ್ಟೇ ನೆಚ್ಚಿಕೊಂಡು ಜಗ್ಗೇಶ್ ಬೆಳೆದು ಬಂದ ಬಗೆ ಅಚ್ಚರಿ ಹುಟ್ಟಿಸುವಂತಿದೆ.

ಆರಂಭದಲ್ಲಿ ಒಂದೆರಡು ದೃಶ್ಯಗಳಲ್ಲಿ ಮುಖತೋರುವ ಖಳ, ವಿದೂಷಕನ ಪಾತ್ರಗಳಿಗೆ ಸೀಮಿತವಾಗಿದ್ದ ಜಗ್ಗೇಶ್ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದ್ದು ‘ತರ್ಲೆ ನನ್ಮಗ’ ಚಿತ್ರದ ಮೂಲಕ. ಪೂರ್ಣ ಪ್ರಮಾಣದ ನಾಯಕನಾಗಿ ಅವರು ಅಭಿನಯಿಸಿದ್ದ ಈ ಚಿತ್ರದ ನಿರ್ದೇಶಕ ಉಪೇಂದ್ರ! ನಿರ್ದೇಶಕ ಹಾಗೂ ನಾಯಕ- ಇಬ್ಬರಿಗೂ ಜೀವಕೊಟ್ಟ ಚಿತ್ರವದು. ನಂತರ ಬಂದ ‘ಭಂಡ ನನ್ನ ಗಂಡ’, ‘ಜಿಪುಣ ನನ್ನ ಗಂಡ’, ‘ಸೂಪರ್ ನನ್ಮಗ’, ‘ಭಂಡ ಅಲ್ಲ ಬಹದ್ದೂರ್’, ‘ಸರ್ವರ್ ಸೋಮಣ್ಣ’, ‘ಬೇವು ಬೆಲ್ಲ’- ಪ್ರತಿಯೊಂದು ಚಿತ್ರವೂ ಜಗ್ಗೇಶ್ ಪ್ರತಿಭೆಗೆ ಸಾಣೆಹಿಡಿಯುವಂತಿದ್ದವು. 

ಜಗ್ಗೇಶ್‌ರ ಮಾತಿನ ವರಸೆ ಹಾಗೂ ಹಾಸ್ಯಪ್ರಜ್ಞೆ ಅನನ್ಯವಾದುದು. ಜನರ ನಡುವಿನಿಂದಲೇ ತಮ್ಮ ಮಾತುಗಳನ್ನು ಹೆಕ್ಕಿಕೊಳ್ಳುವ ಅವರು ಪ್ರಯೋಗಗಳಿಗೆ ಮುಕ್ತವಾಗಿ ತಮ್ಮನ್ನೊಡ್ಡಿಕೊಳ್ಳುವ ಅಪ್ಪಟ ಕಲಾವಿದ. ‘ಮೇಕಪ್’, ‘ಮಠ’, ‘ಎದ್ದೇಳು ಮಂಜುನಾಥಾ’ ಇಂಥ ಪ್ರಯೋಗಶೀಲ ಚಿತ್ರಗಳು. ಕಿರುತೆರೆಯಲ್ಲಿ ‘ಕಾಗೆ ಹಾರಿಸಿದ್ದು’ ಕೂಡ ಅವರ ಸೃಜನಶೀಲತೆಯ ಒಂದು ಭಾಗವೇ.

ನಿರ್ಭಿಡೆ, ಬಿಚ್ಚುಮಾತು ಹಾಗೂ ಸ್ವಾಭಿಮಾನ ಜಗ್ಗೇಶ್ ವ್ಯಕ್ತಿತ್ವದಲ್ಲಿ ಎದ್ದುಕಾಣುವ ಗುಣಗಳು. ರಾಜಕೀಯದಲ್ಲೂ ಒಂದು ಕೈ ನೋಡಿರುವ ಜಗ್ಗೇಶ್ ಈಗಲೂ ಬೇಡಿಕೆಯಲ್ಲಿರುವ ನಟ.

‘ಮೂವತ್ತು ವರ್ಷದಿಂದ ಸಿನಿಮಾದಲ್ಲಿ ರನ್ನಿಂಗ್ ರೇಸ್ ಮಾಡ್ತಿದ್ದೇನೆ. ಆದರೆ, ಇವತ್ತಿಗೂ ನಾನು ಹೊಸಬ ಎನ್ನುವ ಭಾವನೆಯಿದೆ. ಹೊಸ ಹುಡುಗರಿಂದ ಕಲಿಯುವುದೂ ಸಾಕಷ್ಟಿದೆ’ ಎಂದು ಜಗ್ಗೇಶ್ ಹೇಳುತ್ತಿರುವ ಹೊತ್ತಿಗೇ, ಅವರ ಮಗ ಗುರುರಾಜ್ ನಾಯಕನಾಗಿ ನೆಲೆ ಕಂಡುಕೊಳ್ಳುವ ತುಡಿತದಲ್ಲಿದ್ದಾನೆ. ಬಣ್ಣದ ಕನಸುಗಳನ್ನು ಮಗನಿಗೆ ಬಿಟ್ಟು, ಅಪ್ಪ ಇನ್ನಷ್ಟು ಪ್ರಯೋಗಶೀಲನಾಗಲು ಇದಲ್ಲವೇ ಸಕಾಲ?

ಪ್ರೇಮಲೋಕದಿಂದ ಬಂದ ರವಿ!

ರವಿಚಂದ್ರನ್ ಎಂದರೆ ತಕ್ಷಣ ನೆನಪಾಗುವುದು ‘ಪ್ರೇಮಲೋಕ’. ಅವರನ್ನು ಮಾತನಾಡಿಸಿ: “ಈಗ ನಡೆಯುತ್ತಿರುವುದು ‘ಏಕಾಂಗಿ ರವಿಚಂದ್ರನ್’ ಹಾಗೂ ‘ಪ್ರೇಮಲೋಕ ರವಿಚಂದ್ರನ್’ ನಡುವಿನ ಒದ್ದಾಟ. ನನಗೀಗ ಪ್ರೇಮಲೋಕ ಸಾಕಾಯ್ತು. ಐವತ್ತು ವರ್ಷ ಆಯ್ತು. ಅರ್ಧ ಲೈಫು ಮುಗೀತು. ಅಂಥಾದ್ರಲ್ಲಿ ಇನ್ನೂ ಪ್ರೇಮಲೋಕ ಮಾಡಬೇಕು ಅಂದ್ರೆ ಮನಸ್ಸು ಒಪ್ಪಲ್ಲ” ಎಂದು ವೇದಾಂತದ ಧಾಟಿಯಲ್ಲಿ ಮಾತನಾಡುತ್ತಾರೆ.

ಅರೆ, ರವಿಚಂದ್ರನ್‌ಗೆ ಆಗಲೇ ಐವತ್ತಾ? ಎಂದು ಕಣ್ಣರಳಿಸುವ ಹೊತ್ತಿಗೇನೆ ಅವರು, ‘ಹೂ’ನಂಥ ಕಾಮಕಸ್ತೂರಿಯ ಚಿತ್ರ ಕೊಟ್ಟು ಬೆಚ್ಚಿಬೀಳಿಸುತ್ತಾರೆ. ‘ಮಂಜಿನಹನಿ’ಗಾಗಿ ಬೆವರಹನಿ ಬಸಿದು ಮೆಚ್ಚುಗೆಗಳಿಸುತ್ತಾರೆ. ‘ನನಗೆ ಹೆಡ್‌ವೈಟ್ ಬರಲಿಕ್ಕೆ ಸಾಧ್ಯವೇ ಇಲ್ಲ. ನಾನು ನನ್ನ ಥರ ಬದುಕಲಿಕ್ಕೆ ಇಷ್ಟು ಕಷ್ಟಪಡ್ತಿದ್ದೇನೆ. ನಾನು ಈಗಿರುವ ರೀತಿಗೆ ಖುಷಿಯಾಗಿದ್ದೇನೆ’ ಎನ್ನುತ್ತ ‘ಹಟವಾದಿ’ ಆಗುತ್ತಾರೆ.

ರವಿಚಂದ್ರನ್ ತಲೆ ಕೊಡವಿದರೂ, ‘ಪ್ರೇಮಲೋಕ’, ‘ರಣಧೀರ’ಗಳ ಪ್ರಸ್ತಾಪವಿಲ್ಲದೆ ಅವರ ಬಗೆಗಿನ ಮಾತು ಪೂರ್ಣಗೊಳ್ಳುವುದಿಲ್ಲ. ಯಾರು ಏನೋ ಅಂದರು ಎನ್ನುವ ಹಟಕ್ಕೆ ಬಿದ್ದು ರವಿಚಂದ್ರನ್ ‘ಪ್ರೇಮಲೋಕ’ಕ್ಕೆ ಮನಸು ಮಾಡಿದ್ದು, ಯುವಮನಸಿಗೆ ದನಿಯಾದದ್ದು. ಆನಂತರದ ‘ರಣಧೀರ’ದಲ್ಲೂ ರವಿ ಛಾಪು ಸ್ಪಷ್ಟವಾಗಿತ್ತು. ಯಶಸ್ಸಿನ ಮೇರುವಿನಲ್ಲಿದ್ದಾಗಲೇ ಅವರು ‘ಏಕಾಂಗಿ’ಯಂಥ ಪ್ರಯೋಗಕ್ಕೆ ಕೈಹಾಕಿ ಏಕಾಂಗಿಯಾದರು. ಸಂಗೀತ ಮಾಡಿ ಏಳುಬೀಳು ಕಂಡರು. ಜಗಳ ಆಡಿದರು, ಮತ್ತೆ ಕೈಕುಲುಕಿದರು. ಗೆಲುವು ಸೋಲುಗಳೇನೆ ಇರಲಿ, ಈ ಚಿತ್ರಗಳ ಮೂಲಕ ರವಿಚಂದ್ರನ್ ಸೃಷ್ಟಿಸಿದ ಟ್ರೆಂಡ್ ಇದೆಯಲ್ಲ- ಅದು ಈ ಹೊತ್ತಿನ ಚಿತ್ರಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ. ಇದು ನಟನಾಗಿ, ನಿರ್ದೇಶಕನಾಗಿ ರವಿಚಂದ್ರನ್ ಸಾಧನೆ.

‘ರಾಮಾಚಾರಿ’, ‘ಬಣ್ಣದ ಗೆಜ್ಜೆ’, ‘ಹಳ್ಳಿ ಮೇಷ್ಟ್ರು’, ‘ಮಲ್ಲ’, ‘ಪುಟ್ನಂಜ’, ‘ಚಿನ್ನ’- ಹೀಗೆ ರವಿಚಂದ್ರನ್ ಪ್ರೇಕ್ಷಕರನ್ನು ಕಾಡಲಿಕ್ಕೆ ಸಾಕಷ್ಟು ನೆಪಗಳಿವೆ. ತಾಂತ್ರಿಕವಾಗಿ ಶ್ರೀಮಂತ ಚಿತ್ರಗಳನ್ನು ರೂಪಿಸುವ ಅವರು ಈಗಲೂ ಹೊಸತನಕ್ಕಾಗಿ ತುಡಿಯುವವರು. ‘ಇಪ್ಪತ್ತೈದು ವರ್ಷ ಅನುಭವವಿದ್ದರೂ, ಇಷ್ಟು ಮಾತನಾಡಿದರೂ ಪ್ಲಾಪ್ ಕೊಡ್ತಾನೇ ಇರ್ತೇವೆ. ಗೆಲುವು ಸೋಲು ಬೇರೆ ಮಾತು. ಆದರೆ ನಾವು ಬದಲಾಗ್ತಾ ಹೋಗ್ತೇವೆ. ಒಂದು ತಿಂಗಳಲ್ಲಿ ಸಿನಿಮಾ ಮಾಡ್ತೇನೆ ಬೇಕಾದರೆ. ಅಂಥ ಸಿನಿಮಾ ಬೇಕಾಗಿಲ್ಲ ನನಗೆ’ ಎಂದು ಮಾತನಾಡುವ ರವಿಚಂದ್ರನ್ ಅವರನ್ನಲ್ಲದೆ ಇನ್ನಾರಿಗೆ ತಾನೆ ‘ಕನಸುಗಾರ’ ಎನ್ನುವ ವಿಶೇಷ ಹೊಂದೀತು? ಅಂದಹಾಗೆ, ರವಿ ಕೂಡ ತಮ್ಮ ಮಗನನ್ನು ನಾಯಕನನ್ನಾಗಿಸಲು ಮುಹೂರ್ತ ಹುಡುಕುತ್ತಿದ್ದಾರೆ.

ನಮ್ಮೂರ ಮಂದಾರ

ವೃತ್ತಿಜೀವನದ ರಜತ ಸಂಭ್ರಮದಲ್ಲಿರುವ ರಮೇಶ್ ಅರವಿಂದ್ ತಮ್ಮ ನವಿರು ನಟನೆಯಿಂದಷ್ಟೇ ಅಲ್ಲ, ನವಿರು ವ್ಯಕ್ತಿತ್ವದಿಂದಲೂ ಹೆಸರಾದವರು. ನಟರಾಗಿ, ನಿರ್ದೇಶಕರಾಗಿ, ಚಿತ್ರರಚನಕಾರರಾಗಿ, ಕಿರುತೆರೆ ನಿರೂಪಕರಾಗಿ ರಮೇಶ್ ಅವರದ್ದು ಬಹುಮುಖಿ ಪ್ರತಿಭೆ. ಅವರ ಸಾಹಿತ್ಯಪ್ರೀತಿಯೂ ಲೋಕಪ್ರಸಿದ್ಧವೇ. ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಂಬಂಧಿಸಿದ ಪುಸ್ತಕದ ಬಗ್ಗೆ ಕೇಳುಗರು ತಲೆದೂಗುವಂತೆ ಮಾತನಾಡುವ ಜಾಣ್ಮೆ ಅವರದ್ದು.

ಎಂಜಿನಿಯರಿಂಗ್ ಓದಿರುವ ರಮೇಶರ ಆಸಕ್ತಿಯ ಕ್ಷೇತ್ರಗಳು ದೊಡ್ಡವು. ಅವರ ಬಳಿ ಯಾವ ವಿಷಯದ ಬಗ್ಗೆಯಾದರೂ ಮಾತನಾಡಿ, ಅದಕ್ಕೆ ಪೂರಕವಾಗಿ ಇನ್ನೊಂದು ವಿಷಯ ಹೇಳುತ್ತಾರೆ.

ಕೆ.ಬಾಲಚಂದರ್ ನಿರ್ದೇಶನದ ‘ಸುಂದರ ಸ್ವಪ್ನಗಳು’ ಚಿತ್ರದ ಮೂಲಕ ನೆಲೆಕಂಡ ರಮೇಶ್ ಕನ್ನಡ ಮಾತ್ರವಲ್ಲದೆ ತಮಿಳಿನಲ್ಲೂ ಸೈ ಅನ್ನಿಸಿಕೊಂಡವರು. ಕನ್ನಡದ ಶಿವರಾಜ್‌ಕುಮಾರ್ ಅವರೊಂದಿಗೆ ಇರುವಷ್ಟೇ ಸ್ನೇಹ ಅವರಿಗೆ ಕಮಲ್‌ಹಾಸನ್ ಅವರೊಂದಿಗೂ ಇದೆ, ಪ್ರಕಾಶ್‌ರೈ ಜೊತೆಯೂ ಇದೆ. ಇದು ರಮೇಶ್ ಸ್ನೇಹಜೀವಿ ಎನ್ನುವುದಕ್ಕೆ ಉದಾಹರಣೆ. ಹಾಂ, ವಿಷ್ಣುವರ್ಧನ್ ಕಟ್ಟಿದ್ದ ‘ಸ್ನೇಹಲೋಕ’ ತಂಡದಲ್ಲೂ ರಮೇಶ್ ಸಕ್ರಿಯರಾಗಿದ್ದರು.

ಒಮ್ಮೆ ಚಾಕೊಲೇಟ್ ಹೀರೊ ಆಗಿ, ಮತ್ತೊಮ್ಮೆ ತ್ಯಾಗರಾಜನಾಗಿ ಮಿಂಚಿದ ರಮೇಶ್ ನಟನೆಯ ಚಿತ್ರಗಳ ಪಟ್ಟಿಯಲ್ಲಿ ಎದ್ದುಕಾಣುವ ಹೆಸರುಗಳು ಸಾಕಷ್ಟಿವೆ. ‘ಸುಂದರ ಸ್ವಪ್ನಗಳು’, ‘ಅಮೆರಿಕ ಅಮೆರಿಕ’, ‘ಹೂಮಳೆ’, ‘ಅರಗಿಣಿ’, ‘ಶ್ರೀಗಂಧ’, ‘ಅಮೃತವರ್ಷಿಣಿ’, ‘ನಮ್ಮೂರ ಮಂದಾರ ಹೂವೇ’, ‘ಉಲ್ಟಾ ಪಲ್ಟಾ’, ‘ರಾಮ ಶಾಮ ಭಾಮ’, ಇವು ಕೆಲವು ಉದಾಹರಣೆಗಳಷ್ಟೇ.

ವೃತ್ತಿಜೀವನದ ಬೆಳ್ಳಿಹಬ್ಬವನ್ನು ತಣ್ಣಗೆ ಆಚರಿಸಿಕೊಳ್ಳುತ್ತಿರುವ ರಮೇಶ್ ಈಗ ಮತ್ತೆ ನಿರ್ದೇಶನದ ಯೋಚನೆಯಲ್ಲಿದ್ದಾರೆ. ನಟನೆ ಜೊತೆಗಿದ್ದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT