ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ತಂಡಗಳು ಸೆಮಿಫೈನಲ್‌ಗೆ

ನೆಸ್ಲೆ ಕಪ್ ಹಾಕಿ ಪಂದ್ಯಾವಳಿ-2012
Last Updated 15 ಡಿಸೆಂಬರ್ 2012, 10:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕಿಕ್ಕಿರಿದು ಸೇರಿದ್ದ ಕ್ರೀಡಾಭಿಮಾನಿಗಳ ಮಧ್ಯೆ ಶುಕ್ರವಾರ ಆರಂಭವಾದ ನೆಸ್ಲೆ ಕಪ್ ಹಾಕಿ ಪಂದ್ಯಾವಳಿಯ ರೋಚಕ ಪಂದ್ಯಗಳು ನಡೆದವು. ಕಾಕೋಟುಪರಂಬು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್, ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಬೇರೂಳಿನಾಡ್ ಕಂಡಗಾಲ, ಸೋಮವಾರಪೇಟೆಯ ಡಾಲ್ಫಿನ್ ಹಾಕಿ ಕ್ಲಬ್ ಹಾಗೂ ಹಾತೂರು ಸ್ಪೋರ್ಟ್ಸ್ ಕ್ಲಬ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದವು.

ಬೆಳಿಗ್ಗೆ ನಡೆದ ಮೊದಲ ಪಂದ್ಯದಲ್ಲಿ ಕಾಕೋಟುಪರಂಬು ತಂಡ 6-3 ಗೋಲುಗಳ ಅಂತರದಲ್ಲಿ ಮಡಿಕೇರಿ ವಾಂಡರರ್ಸ್‌ (ಬ್ಲೂ) ತಂಡವನ್ನು ಸೋಲಿಸಿತು. ಜಯಗಳಿಸಿದ ತಂಡದ ಪರವಾಗಿ ಕರನ್ (9ನೇ ನಿಮಿಷ), ಸತ್ಯ (15), ಅಯ್ಯಪ್ಪ (28), ಮನೋಜ್ ಬೆಳ್ಳಿಯಪ್ಪ (51), ರಿನಯ್ ಪೂವಣ್ಣ (60) ನಿಮಿಷದಲ್ಲಿ ಗೋಲು ಗಳಿಸಿದರು. ಪರಾಭವಗೊಂಡ ತಂಡದ ಪರವಾಗಿ ದೀಪಕ್ ಜೋಯಿ (5), ಮೋಹನ್ ನಾಯರ್ (30) ಮತ್ತು (53)ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.

ಎರಡನೇ ಪಂದ್ಯದಲ್ಲಿ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಬೇರಳಿನಾಡ್ ತಂಡವು ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ವಿರುದ್ಧ 4-2 ಅಂತರದಲ್ಲಿ ಜಯ ಗಳಿಸಿತು. ಗೆದ್ದ ತಂಡದ ಪರವಾಗಿ ಚಿರಾಗ್ (9ನೇ ನಿಮಿಷ), ನಿತಿನ್ ತಿಮ್ಮಯ್ಯ (20), ಕಾರ್ಯಪ್ಪ (26), ಚಿರಾಗ್ (52) ನಿಮಿಷದಲ್ಲಿ ಗೋಲು ಗಳಿಸಿದರು. ಸೋತ ತಂಡದ ಪರವಾಗಿ ಬಿದ್ದಪ್ಪ (16) ಮತ್ತು (55)ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಮೂರನೇ ಪಂದ್ಯದಲ್ಲಿ ಮೂರ್ನಾಡು ರೂರಲ್ಸ್ ಫ್ರೆಂಡ್ಸ್ ವಿರುದ್ಧ ಸೋಮವಾರಪೇಟೆ ಡಾಲ್ಫಿನ್ ಕ್ಲಬ್ 3-2 ಅಂತರದಲ್ಲಿ ರೋಚಕ ಜಯ ಸಾಧಿಸಿತು. ಡಾಲ್ಫಿನ್ ಪರ ಕುಶಾ( 4ನೇ ನಿಮಿಷದಲ್ಲಿ), ಪೂವಣ್ಣ (7) ಮತ್ತು (25)ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮೂರ್ನಾಡು ಪರ ಅಪ್ಪಯ್ಯ (20)ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಅಯ್ಯಪ್ಪ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಗಳಿಸಿದರು.

ರೋಚಕ ಸಡನ್‌ಡೆತ್
ನಾಲ್ಕನೆ ಸರದಿಯಲ್ಲಿ ನಾಪೋಕ್ಲು ಶಿವಾಜಿ ಹಾಕಿ ಕ್ಲಬ್ ಮತ್ತು ಹಾತೂರು ಸ್ಪೋರ್ಟ್ಸ್ ಕ್ಲಬ್ ನಡುವೆ ನಡೆದ ಹೋರಾಟ ಅತ್ಯಂತ ರೋಚಕವಾಗಿತ್ತು. ನಿಗದಿತ ಅವಧಿಯವರೆಗೂ ಎರಡೂ ತಂಡಗಳು ಗೋಲು ಗಳಿಸಲಿಲ್ಲ. ಇದರಿಂದಾಗಿ ಎರಡೂ ತಂಡಗಳಿಗೆ ಪೆನಾಲ್ಟಿ ಶೂಟ್‌ಔಟ್ ನೀಡಲಾಯಿತು. ಪೆನಾಲ್ಟಿ ಶೂಟ್‌ಔಟ್‌ನಲ್ಲಿಯೂ ಇತ್ತಂಡಗಳು 2-2 ಗೋಲು ಗಳಿಸಿ ಮತ್ತೆ ಸಮಬಲ ಪ್ರದರ್ಶಿಸಿದವು.

ನಂತರ ಸಡನ್‌ಡೆತ್‌ನಲ್ಲಿ ಶಿವಾಜಿ ತಂಡದ ದಿವಾಯ್ ಅವಕಾಶವನ್ನು ಕೈಚೆಲ್ಲಿದರು. ಹಾತೂರು ತಂಡದ ಚರ್ಮಣ್ಣ ಗೋಲುಪೆಟ್ಟಿಗೆಗೆ ಚೆಂಡು ನುಗ್ಗಿಸಿ ಗೆಲುವು ಸಾಧಿಸಿದರು.

ಕೊಡಗು ಹಾಕಿ ಸಂಸ್ಥೆಯ ಪದಾಧಿಕಾರಿಗಳಾದ ಸುಬ್ರಮಣಿ ಮತ್ತು ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಅರುಣ್ ಕುಮಾರ್ ವೀಕ್ಷಕ ವಿವರಣೆ ನೀಡಿದರು.

ಉದ್ಘಾಟನೆ: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡಗು ಜಿಲ್ಲಾ ಹಾಕಿ ಸಂಸೆಯು ಬ್ಲೂ ಸ್ಟಾರ್ ಹಾಕಿ ಸಂಸ್ಥೆ ಸಹಕಾರದೊಂದಿಗೆ ಆಯೋಜಿಸಲಾಗಿರುವ `19ನೇ ವರ್ಷದ ನೆಸ್ಲೆ ಕಪ್ ಹಾಕಿ ಪಂದ್ಯಾವಳಿ'ಗೆ  ಕೊಡಗು ಜಿಲ್ಲಾ ಹಾಕಿ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಶುಕ್ರವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನೆಸ್ಲೆ ಸಂಸ್ಥೆಯ ಖರೀದಿ ವಿಭಾಗದ ವ್ಯವಸ್ಥಾಪಕ ಗುರುರಾಜ್, ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ಯಶ್‌ವಂತ್, ಸಿಎಚ್‌ಎ ಉಪಾಧ್ಯಕ್ಷ ಬಿ.ಎಂ. ಸುರೇಶ್ ಉಪಸ್ಥಿತರಿದ್ದರು.

ಪಂದ್ಯ ಪ್ರಾರಂಭವಾದ ಕ್ಷಣದಿಂದ ಆಟ ಮುಗಿಯುವ ತನಕ ನೆಸ್ಲೆ ಕಾಫಿ ಸಂಸ್ಥೆಯವರು ಎಲ್ಲ ಕ್ರೀಡಾ
ಪ್ರೇಮಿಗಳಿಗೆ ನೆಸ್ಲೆ ಕಾಫಿಯನ್ನು ಉಚಿತವಾಗಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT