ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ರಾಜ್ಯಗಳ ಫಲಿತಾಂಶ: ಬಿಜೆಪಿ ಹರ್ಷ

Last Updated 9 ಡಿಸೆಂಬರ್ 2013, 5:27 IST
ಅಕ್ಷರ ಗಾತ್ರ

ಮುಂಡರಗಿ: ಮಧ್ಯಪ್ರದೇಶ, ರಾಜಸ್ಥಾನ ಮತ್ತು ದೆಹಲಿ ರಾಜ್ಯಗಳಲ್ಲಿ ಈಚೆಗೆ ಜರುಗಿದ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸ್ಪಷ್ಟ ಬಹುಮತ ಪಡೆದ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಭಾನುವಾರ ಪಟ್ಟಣದ ಕೊಪ್ಪಳ ಕ್ರಾಸ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಕೆ.ವಿ.ಹಂಚಿನಾಳ, ‘ಕೇಂದ್ರದ ಯುಪಿಎ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದ ಉತ್ತರ ಭಾರತದ ವಿವಿಧ ರಾಜ್ಯಗಳ ಜನತೆಯು ಕಾಂಗ್ರೆಸ್‌ನ್ನು ಧಿಕ್ಕರಿಸಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಆ ಮೂಲಕ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ದೆಶಾಧ್ಯಂತ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಕೇಂದ್ರ ಸರ್ಕಾದರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಹೇಮಗಿರಿಶ ಹಾವಿನಾಳ ಮಾತನಾಡಿ,‘ಕಳೆದ ಹಲವು ತಿಂಗಳ ಹಿಂದೆ ಬಿಜೆಪಿ ವರಿಷ್ಟರು ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದು ಫಲಕಾರಿಯಾಗಿದೆ. ಆಡಳಿತ ನಡೆಸುವಲ್ಲಿ ಯುಪಿಎ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ದೇಶದೆಲ್ಲೆಡೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ದೇಶಾಧ್ಯಂತ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಇಟಗಿ ಮಾತನಾಡಿ, ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ ಮೊದಲಾದ ರಾಜ್ಯಗಳ ವಿಧಾನ ಸಭಾ ಚುನಾವಣಾ ಫಲಿತಾಂಶವು ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ ಬರೆದಿದ್ದು, ಕಾಂಗ್ರೆಸ್‌ ಎಲ್ಲಡೆ ಧೂಳಿಪಟವಾಗಲಿದೆ. ದೇಶದ ಯುವ ಜನತೆ ಸಂಪೂರ್ಣವಾಗಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮಾರು ಹೋಗಿದ್ದು, ಎಲ್ಲ ವರ್ಗದ ಜನರು ಬಿಜೆಪಿಯನ್ನು ಸಾರಾಸಗಟಾಗಿ ಬೆಂಬಲಿಸಲಿದ್ದಾರೆ’ ಎಂದು ತಿಳಿಸಿದರು.

ಪುರಸಭೆ ಸದಸ್ಯ ಸುರೇಶ ಮಾಳೆಕೊಪ್ಪ, ಬಿಜೆಪಿ ಮುಖಂಡರಾದ ದೇವಪ್ಪ ಕಂಬಳಿ, ಮಂಜುನಾಥ ಇಟಗಿ, ಎಸ್‌.ವಿ.ಪಾಟೀಲ, ಆರ್‌.ಎಂ.ತಪ್ಪಡಿ, ಸಿದ್ಧಲಿಂಗನಗೌಡ ಪಾಟೀಲ, ನಾಗಭೂಷಣ ಹಿರೇಮಠ, ಶಂಕರ ಉಳ್ಳಾಗಡ್ಡಿ, ಚಂದ್ರಕಾಂತ ಚಿಕ್ಕಣ್ಣವರ, ವೀರಭದ್ರಯ್ಯ ಕಣವಿಮಠ, ಹನುಮಂತ ಸುಣಗಾರ, ಡೊಣ್ಣಿ ಮೊದಲಾದವರು ಹಾಜರಿದ್ದರು.

ಗಜೇಂದ್ರಗಡದಲ್ಲಿ ವಿಜಯೋತ್ಸವ
ಗಜೇಂದ್ರಗಡ: ಉತ್ತರ ಭಾರತದ ನಾಲ್ಕು ರಾಜ್ಯಗಳ ವಿಧಾನ ಸಭೆ ಫಲಿತಾಂಶದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

‘ಮಧ್ಯಪ್ರದೇಶ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ಪೂರ್ಣ ಬಹುಮತ ಪಡೆದುಕೊಂಡಿರುವ ಬಿಜೆಪಿ ದೆಹಲಿ ಹಾಗೂ ಛತ್ತೀಸ್‌ಗಡ್‌ ರಾಜ್ಯಗಳಲ್ಲಿ ಈ ಹಿಂದಿನ ವಿಧಾನಸಭೆ ಚುನಾವಣೆಗಳಿಗಿಂತ ಹೆಚ್ಚಿನ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದಲ್ಲಿ ಮೋದಿ ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ರಾಷ್ಟ್ರದ ಜನತೆ ಉತ್ಸುಕರಾಗಿದ್ದಾರೆ’ ಎಂದು ಬಿಜೆಪಿ ಹಿರಿಯ ಮುಖಂಡ ಬಿ.ಎಂ.ಸಜ್ಜನರ ಹೇಳಿದರು.

‘ಪಂಚ ರಾಜ್ಯಗಳ ವಿಧಾನ ಸಭೆ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಣ್ಣಿಸಲಾಗಿತ್ತು. ಆದರೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಭಾನುವಾರ ಪ್ರಕಟಗೊಂಡ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಅಭೂತಪೂರ್ಣ ಜನ ಬೆಂಬಲ ದೊರೆತಿದೆ. ಇದರಿಂದಾಗಿ ಕೇಂದ್ರದ ಯುಪಿಎ ಸರ್ಕಾರದ ಮಿತಿ ಮೀರಿದ ಭ್ರಷ್ಟಾಚಾರಕ್ಕೆ ರೋಸಿ ಹೋದ ರಾಷ್ಟ್ರದ ಜನ ದಕ್ಷ ಹಾಗೂ ಪ್ರಾಮಾಣಿಕ ನಾಯಕತ್ವಕ್ಕೆ ಮನ್ನಣೆ ನೀಡಿದ್ದಾರೆ’ ಎಂದರು.

ಬಿಜೆಪಿ ಮುಖಂಡರಾದ ಅಮರೇಶ ಬಳಿಗೇರಿ, ಭಾಸ್ಕರ ರಾಯಬಾಗಿ, ಲಾಲಪ್ಪ ರಾಠೋಡ್‌, ಬಸವರಾಜ ಬಂಕದ, ಕನಕಪ್ಪ ಅರಳಿಗಿಡದ, ಮುತ್ತಣ್ಣ ಚಟ್ಟೇರ್‌, ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಉಪಾಧ್ಯಕ್ಷ ಅಕ್ಕಮ್ಮ ಜಾನಾಯಿ, ಪುರಸಭೆ ಸದಸ್ಯರಾದ ಶರಣಪ್ಪ ರೇವಡಿ, ಪ್ರಭು ಚವಡಿ, ಸುಮಿತ್ರಾ ತೊಂಡಿಹಾಳ, ಬುಡ್ಡೆಪ್ಪ ಮೂಲಿಮನಿ, ಕಳಕಪ್ಪ ಗುಳೇದ, ಷಣ್ಮುಖಪ್ಪ ಚಿಲ್‌ಝರಿ, ಗೀತಾ ಗಾಣಗೇರ, ಶಂಕರ ಪವಾರ್‌, ಯಮನಪ್ಪ ಗಾಯಕವಾಡ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT