ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕೇ ದಿನಕ್ಕೆ ಕಿತ್ತು ಬಂತು ಡಾಂಬರು: ಎಲ್ಲಿದೆ ಸ್ವಾಮಿ ಗುಣಮಟ್ಟ?

Last Updated 17 ಸೆಪ್ಟೆಂಬರ್ 2013, 8:08 IST
ಅಕ್ಷರ ಗಾತ್ರ

ಕೆಜಿಎಫ್‌: ಕೆಲವು ದಿನಗಳಿಂದ ಬೀಳು­ತ್ತಿರುವ ಮಳೆಯಿಂದಾಗಿ ಲೋಕೋ­ಪ­ಯೋಗಿ ರಸ್ತೆ ಮತ್ತು ಜಿಲ್ಲಾ ಪಂಚಾ­ಯಿತಿಗೆ ಸೇರಿದ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು, ಇತ್ತೀಚೆಗೆ ನಿರ್ಮಿಸಿದ ರಸ್ತೆಗಳ ಕಾಮಗಾರಿ ಗುಣಮಟ್ಟವನ್ನು ಎತ್ತಿ ತೋರುತ್ತಿವೆ.

ಕೆಜಿಎಫ್–ಬಂಗಾರಪೇಟೆ ರಸ್ತೆ ಹೊರನೋಟಕ್ಕೆ ಉತ್ತಮವಾಗಿ ಕಂಡು ಬಂದರೂ ಅಲ್ಲಲ್ಲಿ ಎದ್ದು ಕಾಣುವ ದೊಡ್ಡ ಗುಂಡಿಗಳು ವಾಹನ ಚಾಲಕ­ರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ರಸ್ತೆ ಮಧ್ಯದಲ್ಲಿ ಕಂಡು ಬರುವ ಹಳ್ಳವನ್ನು ತಪ್ಪಿಸಲು ರಸ್ತೆಯ ಬದಿಗೆ ಹೋದರೆ, ಅಲ್ಲಿ ನೀರಿನಿಂದ ಕೊರಕಲು ಉಂಟಾ­ಗಿದೆ. ಅಕಸ್ಮಾತ್‌ ಕೊರಕಲಿಗೆ ವಾಹನ ಬಿದ್ದರೆ ಅಪಘಾತ ಕಟ್ಟಿಟ್ಟ ಬುತ್ತಿ ಎಂಬ ಸ್ಥಿತಿಯಿದೆ.

ರಸ್ತೆಯ ಅಂಚಿನಲ್ಲಿ ಮೊದಲಿ­ನಿಂದಲೂ ಇದ್ದ ರಾಜಕಾಲುವೆಗಳನ್ನು ಮುಚ್ಚಿದ ಕಾರಣ ಈ ಮಾರ್ಗದಲ್ಲಿ ರಸ್ತೆ ಬದಿಯ ಮಳೆ ನೀರು ಮತ್ತು ಚರಂಡಿ ನೀರು ನೇರವಾಗಿ ರಸ್ತೆಗೆ ಬರುತ್ತದೆ. ಕೆಲ ಕಾಲ ರಸ್ತೆಯಲ್ಲಿ ನೀರು ನಿಂತರೆ ಡಾಂಬರು ಕಿತ್ತು ಬರುತ್ತದೆ. ಕ್ರಮೇಣ ಅಲ್ಲಿ ಹಳ್ಳ ಉಂಟಾಗುತ್ತದೆ. ರಾಬರ್ಟ್‌ಸನ್‌ಪೇಟೆ–ಊರಿಗಾಂ ರಸ್ತೆ ಇದಕ್ಕೆ ಉತ್ತಮ ನಿದರ್ಶನವಾಗಿದೆ.

ಹಳ್ಳಗಳನ್ನು ತಪ್ಪಿಸಲು ವಾಹನ ಚಾಲಕ ಸಂಚಾರ ನಿಯಮ ಉಲ್ಲಂಘಿಸಿ ಚಾಲನೆ ಮಾಡುವ ಅನಿವಾರ್ಯಕ್ಕೆ ಸಿಲುಕುತ್ತಾರೆ. ಇಂತಹ ಘಟನೆಗಳು ಅಪಘಾತಕ್ಕೆ ಮತ್ತೊಂದು ಕಾರಣ­ವಾಗಿದೆ. ರಸ್ತೆ ಪಕ್ಕದಲ್ಲಿರುವ ರಾಜಕಾಲುವೆ­ಗಳನ್ನು ಯಥಾವತ್ತಾಗಿ ಇಡುವ ಕೆಲಸಕ್ಕೆ ಲೋಕೋಪಯೋಗಿ ಇಲಾಖೆ ಮುಂದಾ­ಗಿಲ್ಲ. ರಸ್ತೆ ಬದಿಯಲ್ಲಿ ಕಟ್ಟಡಗಳನ್ನು ಕಟ್ಟುವ ಮಂದಿ ರಾಜಕಾಲುವೆಯನ್ನು ಮುಚ್ಚಿದ ಪ್ರಕರಣಗಳು ಸಾಕಷ್ಟು ಮುಖ್ಯ ರಸ್ತೆಗಳಲ್ಲಿ ಕಂಡು ಬಂದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೊನೆ ಪಕ್ಷ ಬೆಮಲ್‌ನಗರದಲ್ಲಿರುವ ಜೋಡಿ ರಸ್ತೆಯನ್ನು ಕೆಜಿಎಫ್‌ ಕಡೆಗೆ ಮತ್ತೊಂದು ಬದಿಯಲ್ಲಿ ಬಂಗಾರಪೇಟೆ ಕಡೆಗೆ ವಿಸ್ತರಣೆ ಮಾಡಬೇಕಾಗಿತ್ತು. ಅತ್ಯಂತ ಜನದಟ್ಟಣೆ ಇರುವ ಈ ಮಾರ್ಗದಲ್ಲಿ ಸಣ್ಣಪುಟ್ಟ ಅಪಘಾತಗಳು ಪ್ರತಿನಿತ್ಯ ಸಂಭವಿಸುತ್ತಿದ್ದು, ಲೋಕೋಪ­ಯೋಗಿ ಇಲಾಖೆ ವಾಹನ ಚಾಲಕರ ಸುರಕ್ಷತೆಗೆ ಹೆಚ್ಚು ನಿಗಾ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ­ವಾಗಿದೆ.

ಇತ್ತ ಲೋಕೋಪಯೋಗಿ ಇಲಾಖೆ ರಸ್ತೆಗಳು ಈ ರೀತಿಯ ಆರೋಪಕ್ಕೆ ಒಳಗಾಗಿದ್ದರೆ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ಮತ್ತಷ್ಟು ಅಧ್ವಾನವಾಗಿವೆ. ಘಟ್ಟಕಾಮಧೇನಹಳ್ಳಿ ಮತ್ತು ಘಟ್ಟರಾಗಡಹಳ್ಳಿ ನಡುವೆ ಕೇವಲ ನಾಲ್ಕು ದಿನಗಳ ಹಿಂದೆ ಹಾಕಿದ ರಸ್ತೆಯಂತೂ ಸಂಪೂರ್ಣವಾಗಿ ಹಾಳಾಗಿದೆ. ರಸ್ತೆಯಲ್ಲಿ ಡಾಂಬರು ಮಿಶ್ರಿತ ಮಣ್ಣು ಎದ್ದು ಕಾಣುತ್ತಿದ್ದು, ಮಳೆ ಬಂದರೆ ಈಗ ಹಾಕಿರುವ ಡಾಂಬರು ರಸ್ತೆಯಲ್ಲಿ ವಾಹನಗಳು ಹೂತು ಹೋಗುವ ಸಂಭವ ಇದೆ ಎಂದು ಘಟ್ಟರಾಗಡಹಳ್ಳಿ ನಿವಾಸಿಗಳು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT