ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಅಧಿಕಾರಿಗಳು, 8 ದಲ್ಲಾಳಿಗಳ ಬಂಧನ

Last Updated 18 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೋಂದಣಿ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಮಾಹಿತಿ ಆಧರಿಸಿ ನಗರದ ನಾಲ್ಕು ಉಪನೋಂದಣಿ ಕಚೇರಿಗಳ ಮೇಲೆ ಶುಕ್ರವಾರ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ನಾಲ್ವರು ಉಪ ನೋಂದಣಿ ಅಧಿಕಾರಿಗಳು ಮತ್ತು ಎಂಟು ಮಂದಿ ಖಾಸಗಿ ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.

ಉಪನೋಂದಣಿ ಅಧಿಕಾರಿಗಳಾದ ದಿನೇಶ್ (ನಾಗರಬಾವಿ), ಜಯಮ್ಮ (ರಾಜರಾಜೇಶ್ವರಿನಗರ), ಶಂಕರಮೂರ್ತಿ (ಶಿವಾಜಿನಗರ) ಮತ್ತು ಶಂಕರೇಗೌಡ (ಬನಶಂಕರಿ) ಬಂಧಿತರು. ಉಪ ನೋಂದಣಿ ಕಚೇರಿಗಳಲ್ಲಿ ಕುಳಿತು ಅಧಿಕಾರಿಗಳ ಪರವಾಗಿ ಲಂಚ ಪಡೆಯುತ್ತಿದ್ದ ಮಧ್ಯವರ್ತಿಗಳಾದ ಎಸ್.ರಮೇಶ್, ಮುಕುಂದ್, ನಿಷಾದ್, ಮಹದೇವು, ಶ್ರೀಧರ್, ರಮೇಶ್, ರವಿಕುಮಾರ್ ಮತ್ತು ಸಿದ್ದು ಎಂಬುವರನ್ನೂ ಬಂಧಿಸಲಾಗಿದೆ.

ನಾಲ್ಕು ಉಪ ನೋಂದಣಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಮೂಲಕ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಸುತ್ತಿರುವ ಕುರಿತು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಮಾಹಿತಿ ಕಲೆಹಾಕಿದ್ದರು. ನಾಲ್ಕು ತಂಡಗಳಲ್ಲಿ ಶುಕ್ರವಾರ ಸಂಜೆ ಏಕಕಾಲಕ್ಕೆ ಈ ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದರು. ಈ ಸಂದರ್ಭದಲ್ಲಿ ಉಪ ನೋಂದಣಿ ಕಚೇರಿಗಳ ಒಳಗಡೆಯೇ ಇದ್ದ ದಲ್ಲಾಳಿಗಳು ಮತ್ತು ಅಧಿಕಾರಿಗಳ ಬಳಿ ಲಂಚದ ಹಣ ಪತ್ತೆಯಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿರುವುದನ್ನು ಪುಷ್ಟೀಕರಿಸುವ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಗರಬಾವಿ ಉಪ ನೋಂದಣಿ ಕಚೇರಿ ಮೇಲಿನ ದಾಳಿಯ ನೇತೃತ್ವವನ್ನು ಡಿವೈಎಸ್‌ಪಿ ಫಾಲಾಕ್ಷಯ್ಯ ವಹಿಸಿದ್ದರು. ಅಲ್ಲಿ 56,000 ರೂಪಾಯಿ ಲಂಚದ ಹಣ ಪತ್ತೆಯಾಗಿದ್ದು, ದಿನೇಶ್ ಮತ್ತು ಮುಕುಂದ್ ಅವರನ್ನು ಬಂಧಿಸಲಾಗಿದೆ. ರಾಜರಾಜೇಶ್ವರಿ ನಗರ ಕಚೇರಿ ಮೇಲೆ ಡಿವೈಎಸ್‌ಪಿ ಅಬ್ದುಲ್ ಅಹದ್ ನೇತೃತ್ವದ ತಂಡ ದಾಳಿ ನಡೆಸಿತು. ಅಲ್ಲಿ ರೂ 40,000 ಲಂಚದ ಹಣ ಅಧಿಕಾರಿ ಮತ್ತು ದಲ್ಲಾಳಿ ಬಳಿ ಇತ್ತು. ಈ ಹಿನ್ನೆಲೆಯಲ್ಲಿ ಜಯಮ್ಮ ಮತ್ತು ರಮೇಶ್ ಅವರನ್ನು ಬಂಧಿಸಲಾಯಿತು.

ಡಿವೈಎಸ್‌ಪಿ ಎಸ್.ಗಿರೀಶ್ ನೇತೃತ್ವದ ತಂಡ ಶಿವಾಜಿನಗರ ಕಚೇರಿಯಲ್ಲಿ ಶೋಧ ನಡೆಸಿತು. 12,000 ರೂಪಾಯಿ ಲಂಚದ ಮೊತ್ತ ಪತ್ತೆಯಾಗಿದ್ದು, ಶಂಕರಮೂರ್ತಿ ಮತ್ತು ದಲ್ಲಾಳಿ ನಿಷಾದ್‌ನನ್ನು ಬಂಧಿಸಿದರು. ಬನಶಂಕರಿ ಕಚೇರಿ ಮೇಲಿನ ದಾಳಿಯ ನೇತೃತ್ವವನ್ನು ಡಿವೈಎಸ್‌ಪಿ ಪ್ರಸನ್ನ ವಿ.ರಾಜು ವಹಿಸಿದ್ದರು.

ಅಲ್ಲಿ ರೂ 12,000 ಭ್ರಷ್ಟಾಚಾರದ ಹಣ ಪತ್ತೆಯಾಗಿದೆ. ಶಂಕರೇಗೌಡ ಮತ್ತು ಕಚೇರಿಯೊಳಗಡೆ ಇದ್ದ ಮಹದೇವು, ಶ್ರೀಧರ್, ರಮೇಶ್, ರವಿಕುಮಾರ್, ಸಿದ್ದು ಎಂಬ ದಲ್ಲಾಳಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ನೇತೃತ್ವದಲ್ಲಿ ನಾಲ್ಕು ಕಡೆಗಳಲ್ಲೂ ಕಾರ್ಯಾಚರಣೆ ನಡೆದಿದೆ. ನಾಲ್ವರು ಡಿವೈಎಸ್‌ಪಿಗಳು, ಎಂಟು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 30ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಎಲ್ಲ ಕಚೇರಿಗಳಲ್ಲೂ ಬೃಹತ್ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲು ತನಿಖಾ ತಂಡ ನಿರ್ಧರಿಸಿದೆ.

`ಬಂಧಿತರಾಗಿರುವ ನಾಲ್ವರು ಉಪ ನೋಂದಣಿ ಅಧಿಕಾರಿಗಳು ಮತ್ತು ಎಂಟು ಮಂದಿ ಮಧ್ಯವರ್ತಿಗಳ ವಿಚಾರಣೆ ನಡೆಯುತ್ತಿದೆ. ಪ್ರಾಥಮಿಕ ಹಂತದ ತನಿಖೆ ಪೂರ್ಣಗೊಳಿಸಿದ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು~ ಎಂದು ಲೋಕಾಯುಕ್ತದ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT