ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಆರೋಪಿಗಳ ಸೆರೆ

ಒಂಟಿ ಮಹಿಳೆ ಕೊಲೆ ಪ್ರಕರಣ ಬಯಲು
Last Updated 4 ಡಿಸೆಂಬರ್ 2013, 6:55 IST
ಅಕ್ಷರ ಗಾತ್ರ

ಗುಡಿಬಂಡೆ: ಕಳೆದ ಒಂದು ತಿಂಗಳಿನಿಂದ ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕ­ಬಳ್ಳಾಪುರ ತಾಲ್ಲೂಕು ಕಾಚೂರು ಗ್ರಾಮದ ನಾಗರತ್ನಮ್ಮ (40) ಕೊಲೆ ಪ್ರಕರಣದ ರಹಸ್ಯ ಕೊನೆಗೂ ಬಯ­ಲಾಗಿದೆ.

ಜಮೀನು ಹಂಚಿಕೆ ವಿವಾದ ಮತ್ತು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಘಟಿ­ಸಿದ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಗುಡಿಬಂಡೆ ಪೊಲೀಸರು ಯಶಸ್ವಿ­ಯಾಗಿದ್ದಾರೆ. 

ಆಂಧ್ರಪ್ರದೇಶದ ಹಿಂದೂಪುರದ ನಾಸೀರ್ ಅಹಮದ್ (36), ಸಿಕಂದರ್ (35), ಪರಗಿಯ ನಿವಾಸಿ ಲಿಂಗಾರೆಡ್ಡಿ (29) ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆಯ ವೀರೇಂದ್ರ (26) ಕೊಲೆ ಆರೋಪಿ­ಗಳಾಗಿದ್ದು, ಅವರಿಂದ ಮಾರುತಿ ಒಮ್ನಿ ವಾಹನ ವಶಪಡಿಸಿಕೊಳ್ಳಲಾಗಿದೆ.

ಕಾಚೂರು ಗ್ರಾಮದ ನಾಗರಾಜ್ ಅವರ ಪತ್ನಿ ನಾಗರತ್ನಮ್ಮ ಮತ್ತು ಮೊಮ್ಮಗ ಯಶವಂತ್‌ ನ. 9ರಂದು ವರ್ಲಕೊಂಡ ಸಮೀಪದ ಬಂಡಹಳ್ಳಿ ಅರಣ್ಯ ಪ್ರದೇಶದಲ್ಲಿ ಹೋಗುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ನಾಗ­ರತ್ನಮ್ಮ ಕತ್ತು ಕುಯ್ದು ಕೊಲೆ ಮಾಡಿ­ದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ನಾಗರಾಜುಗೆ ಇಬ್ಬರು ಪತ್ನಿಯರು. ಮೊದಲನೇ ಪತ್ನಿ ಲಕ್ಷ್ಮಮ್ಮ, ಎರಡನೇ ಪತ್ನಿ ನಾಗರತ್ನಮ್ಮ. ಇಬ್ಬರೂ ಪತ್ನಿಯರ ನಡುವೆ ಜಮೀನಿಗೆ ಸಂಬಂಧಿ­ಸಿದಂತೆ ವಿವಾದ ಮತ್ತು ದ್ವೇಷವಿತ್ತು. ನಾಗರತ್ನಮ್ಮ ಕಡೆಯವರು ಪದೇ ಪದೇ ತಗಾದೆ ತೆಗೆದು ಲಕ್ಷ್ಮಮ್ಮ ಕಡೆಯವ­ರನ್ನು ಪೊಲೀಸ್‌ ಠಾಣೆಗೆ ಕರೆಸಿ­ಕೊಳ್ಳು­ತ್ತಿದ್ದರಂತೆ. ಇಲ್ಲಸಲ್ಲದ ಕಾರಣಗಳಿಗೆ ಇಬ್ಬರ ಮಧ್ಯೆ ತಂಟೆ–ತಕರಾರು ಆಗುತ್ತಿತ್ತಂತೆ. ಇದರಿಂದ ಬೇಸತ್ತ ಲಕ್ಷ್ಮಮ್ಮ, ಆಕೆಯ ಮಕ್ಕಳು ಮತ್ತು ಮೊಮ್ಮಕ್ಕಳು ನಾಗರತ್ನಮ್ಮ ಕೊಲೆಗೆ ಸಂಚು ರೂಪಿಸಲು ಆರಂಭಿಸಿದರು.

ಲಕ್ಷ್ಮಮ್ಮನ ಮಕ್ಕಳಾದ ಬೀರೇಶ್‌ ಮತ್ತು ರಾಜೇಶ್‌ ತಮ್ಮ ಸ್ನೇಹಿತ ಸೂಲಿಬೆಲೆ ವೀರೇಂದ್ರ ಮೂಲಕ ಲಿಂಗಾ­ರೆಡ್ಡಿ ಎಂಬಾತನನ್ನು ಸಂಪರ್ಕಿಸಿದ್ದಾರೆ. ಕೊಲೆಗೆ 2 ಲಕ್ಷ ರೂಪಾಯಿ ಸುಪಾಯಿ ನಿಗದಿಪಡಿಸಿಕೊಂಡಿದ್ದಾರೆ. ಒಟ್ಟು 30 ಸಾವಿರ ರೂಪಾಯಿಯನ್ನು ಕೃತ್ಯಕ್ಕೂ ಮೊದಲು ಕೊಟ್ಟಿದ್ದಾರೆ. ಕೃತ್ಯಕ್ಕೆ ಬಳಸಲು ತಮ್ಮ ಮಾರುತಿ ಒಮ್ನಿಯನ್ನು ಸಹ ಕೊಟ್ಟಿದ್ದಾರೆ. ಹಣ ಪಡೆದ ಇಬ್ಬರೂ ಆರೋಪಿಗಳು ನಂತರ ಹಿಂದೂ­ಪುರದಿಂದ ನಾಸೀರ್‌ ಅಹ­ಮದ್‌ ಮತ್ತು ಸಿಕಂದರ್‌ ಎಂಬುವ­ರನ್ನು ಕೃತ್ಯವೆಸಗಲು ಕರೆಸಿಕೊಂಡಿದ್ದಾರೆ.
ನ.9ರಂದು ನಾಗರತ್ನಮ್ಮ ಮತ್ತು ಮೊಮ್ಮಗ ಯಶವಂತ್‌ ವರ್ಲಕೊಂಡ ಸಮೀಪದ ದೇಗುಲಕ್ಕೆ ಹೋಗಿರು­ವುದನ್ನು ಖಚಿತಪಡಿಸಿಕೊಂಡ ಆರೋಪಿ­ಗಳು ಅವರಿಬ್ಬರನ್ನೂ ಹಿಂಬಾಲಿಸಿ­ದ್ದಾರೆ.

ನಂತರ ಒಮ್ನಿಯಲ್ಲಿ ಅಪಹರಿಸಿ ಬಂಡಹಳ್ಳಿ ಅರಣ್ಯಪ್ರದೇಶಕ್ಕೆ ಕರೆ ತಂದಿ­ದ್ದಾರೆ. ಅಲ್ಲಿ ಆಕೆಯನ್ನು ಮಾರ­ಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮೊಮ್ಮಗ ಯಶವಂತ್‌ ಅಳುತ್ತಿದ್ದದ್ದನ್ನು ಕಂಡು ಅಲ್ಲೇ ಬಿಟ್ಟು ಪರಾರಿ­ಯಾಗಿದ್ದಾರೆ.

ನಂತರ ದೇವನಹಳ್ಳಿ ಸಮೀಪ ನಾಲ್ವರು ಆರೋಪಿಗಳು ರಾಜೇಶ್‌­ನಿಂದ ಬಾಕಿ 1.70 ಲಕ್ಷ ರೂಪಾಯಿ ಸುಪಾರಿ ಹಣ ಪಡೆದುಕೊಂಡಿದ್ದಾರೆ. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಬೀರೇಶ್‌ ಮತ್ತು ರಾಜೇಶ್‌ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದೆವು. ತನಿಖೆ ನಂತರ ಕೊಲೆ ಆರೋಪಿಗಳು ಸಿಕ್ಕಿಬಿದ್ದರೆಂದು ಪೊಲೀಸರು ತಿಳಿಸಿ­ದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಿವಪ್ರಸಾದ್‌, ನಿವೃತ್ತ ಡಿವೈಎಸ್ಪಿ ಎ.ಬಿ.ದೇವಯ್ಯ ಮಾರ್ಗದರ್ಶನದಲ್ಲಿ ಗುಡಿಬಂಡೆ ಸರ್ಕಲ್ ಇನ್‌ಸ್ಪೆಕ್ಟರ್‌ ಶಿವಕುಮಾರ್, ಸಬ್ಇನ್‌ಸ್ಪೆಕ್ಟರ್‌ ನರ­ಸಿಂಹಮೂರ್ತಿ, ಕಾನ್‌ಸ್ಟೆಬಲ್‌­ಗಳಾದ ಅಶತ್ಥ್‌, ಮುರಳಿ, ಶ್ರೀನಾಥ್, ಶ್ರೀಪತಿ ಅವ­ರನ್ನು ಒಳಗೊಂಡ ತಂಡ ಕಾರ್ಯಾ­ಚರಣೆ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT