ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಪರೀಕ್ಷಾ ಮೇಲ್ವಿಚಾರಕರ ವಜಾ

ಬೆಂಗಳೂರು ವಿವಿ ಪದವಿ ಮೌಲ್ಯಮಾಪನ ಕೇಂದ್ರಗಳಲ್ಲಿ ಅವ್ಯವಹಾರ ಆರೋಪ
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ನಾಲ್ಕು ಪದವಿ ಮೌಲ್ಯಮಾಪನ ಕೇಂದ್ರಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಲ್ವರು ಪರೀಕ್ಷಾ ಮೇಲ್ವಿಚಾರಕರನ್ನು ಆ ಸ್ಥಾನದಿಂದ ವಜಾ ಮಾಡಲಾಗಿದೆ. ಮೌಲ್ಯಮಾಪನ ಕೇಂದ್ರಗಳಿಗೆ ಹಠಾತ್ ಭೇಟಿ ನೀಡಲು ಐವರು ಸಿಂಡಿಕೇಟ್ ಸದಸ್ಯರನ್ನು ಒಳಗೊಂಡ ನಿಯಂತ್ರಣ ಸಮಿತಿಯನ್ನು ರಚಿಸಲಾಗಿದೆ.

ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ನಡೆದ ಮುಂದುವರಿದ ಸಿಂಡಿಕೇಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯಿತು.

ಬಿಸಿಎ ಮೌಲ್ಯಮಾಪನ ನಡೆಯುತ್ತಿರುವ ರಾಜಾಜಿನಗರದ ಮರಿಯಪ್ಪ ಕಾಲೇಜಿನ ಮೇಲ್ವಿಚಾರಕ ಕೆ.ಬಿ. ಲೋಕೇಶ್ ಅವರನ್ನು ಬದಲಿಸಿ ನಗರದ ಕೆಎಲ್‌ಇ ಪದವಿ ಕಾಲೇಜಿನ ಪ್ರಾಂಶುಪಾಲರನ್ನು, ವಿಜ್ಞಾನ ವಿಭಾಗದ ಮೌಲ್ಯಮಾಪನ ನಡೆಯುತ್ತಿರುವ ಮಹಾರಾಣಿ ಪದವಿ ಕಾಲೇಜಿನ ಮೇಲ್ವಿಚಾರಕರನ್ನು ಬದಲಿಸಿ ಪ್ರಾಂಶುಪಾಲ ಭೈರಪ್ಪ ಅವರನ್ನು ನೇಮಕ ಮಾಡಲಾಗಿದೆ.

ವಾಣಿಜ್ಯ ವಿಭಾಗದ ಮೌಲ್ಯಮಾಪನ ನಡೆಯುತ್ತಿರುವ ಜಯನಗರದ ಸಿಟಿ ಕಾಲೇಜಿನ ಮೇಲ್ವಿಚಾರಕಿ ವಿಜಯಲಕ್ಷ್ಮಿ ಅವರ ಸ್ಥಾನಕ್ಕೆ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರನ್ನು ನೇಮಿಸಲಾಗಿದೆ. ಯುನೈಟೆಡ್ ಮಿಷನ್ ಕಾಲೇಜಿನ ಮೇಲ್ವಿಚಾರಕ ರಮಣ ರೆಡ್ಡಿ ಅವರನ್ನು ಮೇಲ್ವಿಚಾರಕ ಸ್ಥಾನದಿಂದ ವಜಾ ಮಾಡಲಾಗಿದೆ.

ಪದವಿ ವಿಭಾಗದ ಮೌಲ್ಯಮಾಪನ ನಡೆಯುತ್ತಿರುವ ಎಲ್ಲ ಕೇಂದ್ರಗಳಿಗೆ ಹಠಾತ್ ಭೇಟಿ ನೀಡಲು ಹಾಗೂ ಅವ್ಯವಹಾರ ನಡೆಯದಂತೆ ಕಣ್ಗಾವಲು ವಹಿಸಲು ಸಿಂಡಿಕೇಟ್ ಸದಸ್ಯ ಸಿ.ಕೆ. ಜಗದೀಶ ಪ್ರಸಾದ್ ಅಧ್ಯಕ್ಷತೆಯಲ್ಲಿ ವಿಶೇಷ ನಿಯಂತ್ರಣ ಸಮಿತಿಯನ್ನು ರಚಿಸಲಾಗಿದೆ. ಸಿಂಡಿಕೇಟ್ ಸದಸ್ಯರಾದ ಪ್ರೊ.ನಾರಾಯಣಸ್ವಾಮಿ, ಶ್ರೀನಿವಾಸ ಮಾನೆ, ವೇದಮೂರ್ತಿ ಹಾಗೂ ಎಂ.ಬಿ.ಗಿರೀಶ್ ಅವರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. 

ನಾಲ್ಕು ಮೌಲ್ಯಮಾಪನ ಕೇಂದ್ರಗಳಲ್ಲಿ ಪ್ರತಿ ವಿದ್ಯಾರ್ಥಿಯಿಂದ 3,000 ರೂಪಾಯಿ ಹಾಗೂ 5,000 ರೂಪಾಯಿ ಲಂಚ ಪಡೆದು ಅಧಿಕ ಅಂಕ ನೀಡಲಾಗುತ್ತಿದೆ ಎಂದು ಶುಕ್ರವಾರ ನಡೆದ ವಿವಿಯ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಸದಸ್ಯರು ಆರೋಪಿಸಿದ್ದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜ್ಞಾನಜ್ಯೋತಿ ಸಭಾಂಗಣದ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನೆ ಸಂದರ್ಭ ಅವ್ಯವಹಾರದಲ್ಲಿ ಭಾಗಿಯಾಗಿರುವವರ  ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿತ್ತು. ಸಿಂಡಿಕೇಟ್ ಸಭೆಯಲ್ಲೂ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದ ಹಿನ್ನೆಲೆಯಲ್ಲಿ ವಿವಿ ಈ ತೀರ್ಮಾನಕ್ಕೆ ಬಂದಿದೆ.

`ಈ ಅವ್ಯವಹಾರದಲ್ಲಿ ಕುಲಸಚಿವ (ಮೌಲ್ಯಮಾಪನ) ಪ್ರೊ.ಆರ್.ಕೆ.ಸೋಮಶೇಖರ್ ಪ್ರಮುಖ ಆರೋಪಿ. ಅವರನ್ನು ಈ ಸ್ಥಾನದಿಂದ ವಜಾ ಮಾಡಿ ಅವ್ಯವಹಾರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು' ಎಂದು ಸಿಂಡಿಕೇಟ್ ಸದಸ್ಯ ಸಿ.ಕೆ.ಜಗದೀಶ ಪ್ರಸಾದ್ ಆಗ್ರಹಿಸಿದರು.

ಕಾರ್ಯಪಡೆ ವರದಿಗೆ ಅಸ್ತು: ಬಿ.ಇಡಿ ಕಾಲೇಜುಗಳ ಗುಣಮಟ್ಟ ಪರಿಶೀಲಿಸಿ ಕರಣ್ ಕುಮಾರ್ ನೇತೃತ್ವದ ಬಿ.ಇಡಿ ಕಾರ್ಯಪಡೆ ನೀಡಿರುವ ಮಧ್ಯಂತರ ವರದಿಗೆ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಅಲ್ಲದೆ, ಬಿ.ಇಡಿ ಕಾಲೇಜುಗಳು ಮೂಲಸೌಕರ್ಯ ಸಮಸ್ಯೆಯನ್ನು ಸರಿಪಡಿಸಲು 3 ತಿಂಗಳ ಕಾಲಾವಕಾಶ ನೀಡಲು ನಿರ್ಧರಿಸಲಾಯಿತು. ಕಾರ್ಯಪಡೆಯ ವರದಿಗೆ ಸಿಂಡಿಕೇಟ್ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಲ್ಕು ಕಾರ್ಯಸೂಚಿಗೆ ಎಂಟು ಗಂಟೆ!
ಮುಂದುವರಿದ ಸಿಂಡಿಕೇಟ್ ಸಭೆಯ ಮುಂದಿದ್ದ ಕಾರ್ಯಸೂಚಿಗಳು ನಾಲ್ಕು. ಈ ಕಾರ್ಯಸೂಚಿಗಳಿಗೆ ಅನುಮೋದನೆ ನೀಡಲು ಸಿಂಡಿಕೇಟ್ ತೆಗೆದುಕೊಂಡ ಅವಧಿ ಎಂಟು ಗಂಟೆ!

ಸೋಮವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಸಭೆ ರಾತ್ರಿ 7.10 ವರೆಗೂ ಮುಂದುವರಿಯಿತು. ಮೌಲ್ಯಮಾಪನ ಕೇಂದ್ರಗಳಲ್ಲಿನ ಅವ್ಯವಹಾರದ ಕುರಿತಾಗಿಯೇ ಸಂಜೆ ನಾಲ್ಕು ಗಂಟೆವರೆಗೂ ವ್ಯಾಪಕ ಚರ್ಚೆ ನಡೆಯಿತು. ಸಿಂಡಿಕೇಟ್ ಸದಸ್ಯರ ಒಕ್ಕೊರಲ ಒತ್ತಾಯಕ್ಕೆ ಮಣಿದ ಹಂಗಾಮಿ ಕುಲಪತಿ ಅವರು ವಿಶೇಷ ಸಮಿತಿಯನ್ನು ರಚಿಸಲು ಒಪ್ಪಿಗೆ ಸೂಚಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT