ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ನಮ್ಮ ಮೆಟ್ರೊ ಬರ್ತ್‌ಡೇ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಗರದ ಗರಿಮೆ ಮತ್ತಷ್ಟು ಹೆಚ್ಚಿಸಿದ ಕೀರ್ತಿ ಪಡೆದಿರುವ `ನಮ್ಮ ಮೆಟ್ರೊ~ ಇದೇ 20ರಂದು ತನ್ನ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದೆ. ಮೆಟ್ರೊ ಹಳಿಗಳ ಮೇಲೆ ಓಡಾಡಲು ಆರಂಭಿಸಿ ವರ್ಷವಾದರೂ ವಾರಾಂತ್ಯದಲ್ಲಿ ಪ್ರಯಾಣಿಸುವವರೇ ಹೆಚ್ಚು.

ದಿನನಿತ್ಯ ಪ್ರಯಾಣಿಕರ ಓಡಾಟಕ್ಕೆ, ಟ್ರಾಫಿಕ್‌ನಿಂದ ವಿಮುಕ್ತಿ ಹೊಂದುವ ಉದ್ದೇಶ ಹೊಂದಿದ್ದರೂ ಮೆಟ್ರೊ ನಿಲ್ದಾಣಗಳು ಪ್ರವಾಸಿ ತಾಣಗಳಾಗಿಯೇ ಗುರುತಿಸಿಕೊಂಡಿರುವುದು ಇಲ್ಲಿನ ವಿಶೇಷ. ಕೋಲ್ಕತ್ತ, ದೆಹಲಿ ಬಳಿಕ ಮೆಟ್ರೊ ಸೇವೆ ನೀಡುತ್ತಿರುವ ಮೂರನೇ ಮಹಾನಗರ ಎಂಬ ಹೆಗ್ಗಳಿಕೆ ಪಡೆದಿರುವ `ಮೆಟ್ರೊ~ ದಾರಿಯ ಸಿಂಹಾವಲೋಕನಕ್ಕಿದು ಸಕಾಲ.

ಎಂ.ಜಿ ರಸ್ತೆಯಿಂದ ಬೈಯಪ್ಪನಹಳ್ಳಿಗೆ ಹನ್ನೊಂದು ನಿಮಿಷದಲ್ಲಿ ತಲುಪುವ ವೇಗವಾಹಕ ಈಗಾಗಲೇ ಜನಸ್ನೇಹಿ ಪಟ್ಟ ಪಡೆದುಕೊಂಡಿದೆ. ನೆಲದಿಂದ ಮೇಲೆ ಚಲಿಸುವುದರಿಂದ ಬಹುತೇಕರಿಗಿದು ವಿಮಾನ ಪ್ರಯಾಣದ ಅನುಭವ ನೀಡುತ್ತದಂತೆ!

ಪಯಣಿಸುವವರು
ಈವರೆಗೆ (ಅ.11) ನಮ್ಮ ಮೆಟ್ರೊದಲ್ಲಿ 79,28,647 ಮಂದಿ ಪ್ರಯಾಣಿಸಿದ್ದಾರೆ. ದಿನನಿತ್ಯ ಹದಿನಾಲ್ಕರಿಂದ ಹದಿನಾರು ಸಾವಿರ ಮಂದಿ ಮೆಟ್ರೊದಲ್ಲಿ ಪಯಣಿಸಿದರೆ ವಾರಾಂತ್ಯದಲ್ಲಿ ಇಪ್ಪತ್ತರಿಂದ ಇಪ್ಪತ್ತೈದು ಸಾವಿರಕ್ಕೇರುತ್ತದೆ. ಮೊದಲ ತಿಂಗಳು ದಿನವೂ ನಲ್ವತ್ತೈದರಿಂದ ಐವತ್ತು ಸಾವಿರ ಮಂದಿ ಪ್ರಯಾಣಿಸಿದ್ದಾರಂತೆ. (ದೀಪಾವಳಿಯ ದಿನ 80ಸಾವಿರ ಮಂದಿ ಪ್ರಯಾಣಿಸಿದ್ದರಂತೆ!) ಮೆಟ್ರೊದ ಈವರೆಗಿನ ಆದಾಯ 11ಕೋಟಿ 18 ಲಕ್ಷ 32ಸಾವಿರ ರೂಪಾಯಿ. (ಅ.11ರವರೆಗೆ)

ನಿಂತಿದ್ದೆಷ್ಟು ಬಾರಿ?
ಪ್ರತಿ ಹತ್ತು ನಿಮಿಷಕ್ಕೊಮ್ಮೆ ಅತ್ತಿಂದಿತ್ತ ಓಡಾಡುವ ಮೆಟ್ರೊ ಈವರೆಗೆ ನಿಂತಿದ್ದು ಮೂರು ಬಾರಿ ಮಾತ್ರ. 17 ವರ್ಷದ ಜಯನಗರದ ಹುಡುಗನೊಬ್ಬ ರಾತ್ರಿ 8.45ರ ವೇಳೆಗೆ ರೈಲು ನಿಲ್ದಾಣಕ್ಕೆ ಬರಲು ಇನ್ನೇನು ಒಂದೂವರೆ ಮೀಟರ್ ದೂರವಿದೆ ಎನ್ನುವಷ್ಟರಲ್ಲಿ ಹೈವೋಲ್ಟೇಜ್ ಹಳಿಗಳ ಮೇಲೆ ಹಾರಿದ್ದ. ವೇಗವಾಗಿ ಬರುತ್ತಿದ್ದ ಮೆಟ್ರೊ ಚಾಲಕ ಈ ಆಕಸ್ಮಿಕ ಆಘಾತವನ್ನು ನಿರೀಕ್ಷಿಸಿರಲಿಲ್ಲ. ಆತನ ದೇಹದ ಮೇಲೆ ರೈಲು ಹರಿದಿದ್ದರಿಂದ ದಾರುಣವಾಗಿ ಮೃತಪಟ್ಟಿದ್ದ. ಆ ಬಳಿಕ ಮೆಟ್ರೊ ಓಡಲಿಲ್ಲ.

ಎರಡನೇ ಬಾರಿ ಸ್ಥಗಿತಗೊಂಡಿದ್ದು ಹಳಿಗಳ ಮೇಲೆ ಬಿದ್ದಿದ್ದ ಕಾಗದದ ತುಣುಕೊಂದರಿಂದ. ದೂರದಿಂದಲೇ ಅದನ್ನು ಕಂಡ ಚಾಲಕ ಬ್ರೇಕ್ ಒತ್ತಿ ರೈಲನ್ನು ನಿಲ್ಲಿಸಿದ್ದರು. ಸಿಬ್ಬಂದಿ ಅದನ್ನು ಪರಿಶೀಲಿಸಿ ಮಾಮೂಲಿ ಕಸವೆಂದು ತೆಗೆದೆಸೆದ ಬಳಿಕವೇ ಮೆಟ್ರೊ ಮುಂದೆ ಚಲಿಸಿದ್ದು (ನಿಲ್ದಾಣದೊಳಗೆ ತಿಂಡಿ ತಿನಿಸು ನಿಷೇಧವಾಗಲು ಕಾರಣವೂ ಇದೇ). ಈಚೆಗೆ ರಾಜ್ಯ ಬಂದ್ ವೇಳೆ ಮೂರನೇ ಬಾರಿ ಮೆಟ್ರೊ ಸಂಚಾರ ಸ್ಥಗಿತಗೊಂಡಿತ್ತು.

ಭಾಷೆ ಅವಾಂತರ
ಮೆಟ್ರೊ ಸಂಚಾರ ಆರಂಭವಾಗುವ ಮೊದಲೇ ಕನ್ನಡದ ಅವಗಣನೆ ಮಾಡಲಾಗಿದೆ ಎಂಬ ದೂರಿಗೆ ಒಳಗಾಗಿದ್ದ ಬಿಎಂಆರ್‌ಸಿಎಲ್ (ಬೆಂಗಳೂರು ಮೆಟ್ರೊ ರೈಲು ನಿಗಮ) ತಡವಾಗಿ ತನ್ನ ತಪ್ಪು ತಿದ್ದಿಕೊಂಡಿತು. ವೆಬ್‌ಸೈಟ್‌ನಲ್ಲೆಗ  ರೈಲಿನ ಸಂಚಾರದ ಎಲ್ಲಾ ಮಾಹಿತಿಯನ್ನು ಕನ್ನಡದಲ್ಲಿಯೂ ನೀಡುತ್ತಿದೆ. ರೈಲಿನ ಎಲ್ಲ ವಿವರಗಳಿಗೆ ತ್ರಿಭಾಷಾ ಸೂತ್ರದ ಮೊರೆ ಹೋಗಲಾಗಿದೆ. ಎಲೆಕ್ಟ್ರಾನಿಕ್ ಬೋರ್ಡ್‌ಗಳೂ ಕನ್ನಡ-ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ನೀಡುತ್ತಿವೆ.

ಮಾಲ್‌ಗಳು ಬರಲಿವೆ
ಮೆಟ್ರೊ ನಿಲ್ದಾಣಗಳನ್ನು ಸಂಪೂರ್ಣ ವಾಣಿಜ್ಯ ಸಂಕೀರ್ಣ ಮಾಡುವ ಉದ್ದೇಶದಿಂದ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಮೊದಲನೇ ಹಂತವಾಗಿ ಎಂ.ಜಿ ರಸ್ತೆಯಲ್ಲಿ ಕಾಫಿ ಶಾಪ್ ತಯಾರಾಗುತ್ತಿದೆ. ನವೆಂಬರ್ ಎರಡನೇ ವಾರದೊಳಗಾಗಿ ಇದು ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ. ಇತರೆ ನಾಲ್ಕು ನಿಲ್ದಾಣಗಳಲ್ಲಿ ಮಳಿಗೆಗಳಿಗಾಗಿ ಕೆಲವೇ ದಿನಗಳಲ್ಲಿ ಟೆಂಡರ್‌ಕರೆಯಲಾಗುವುದು. ಎಂ.ಜಿ ರಸ್ತೆಯ ಮೆಟ್ರೊ ನಿಲ್ದಾಣದಲ್ಲಿ ಕಲಾಕೃತಿಗಳೂ ಜಾಗ ಪಡೆಯಲಿವೆ. ಸದ್ಯದಲ್ಲೇ ಆರ್ಟ್ ಗ್ಯಾಲರಿಯೂ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು ಬಿಎಂಆರ್‌ಸಿಎಲ್‌ನ ಮಾರ್ಕೆಟಿಂಗ್ ಮ್ಯಾನೇಜರ್ ವಸಂತ ರಾವ್. ಅಂದ ಹಾಗೆ ಎಂ.ಜಿ ರಸ್ತೆಯಲ್ಲಿ ಆರಂಭಗೊಳ್ಳಲಿರುವ ಕಾಫಿ ಶಾಪ್‌ನ ತಿಂಗಳ ಬಾಡಿಗೆ 2.73 ಲಕ್ಷವಂತೆ!

ಪ್ರಯಾಣ ದರ
ಮೆಟ್ರೊ ಪ್ರಯಾಣ ದರ ಹತ್ತರಿಂದ ಹದಿನೈದು ರೂಪಾಯಿ ಒಳಗಿದೆ. ಅಂದರೆ ಟ್ರಿನಿಟಿಗೆ 10, ಹಲಸೂರು-ಇಂದಿರಾನಗರಕ್ಕೆ 12, ವಿವೇಕಾನಂದ ರಸ್ತೆಗೆ 13, ಬೈಯಪ್ಪನಹಳ್ಳಿಗೆ 15 ರೂಪಾಯಿ ದರ ನಿಗದಿಪಡಿಸಲಾಗಿದೆ. ನಿತ್ಯ ಪಯಣಿಸುವವರಿಗಾಗಿ ಪಾಸ್ ಸೌಲಭ್ಯವೂ ಇದ್ದು, ಶೇ 21ರವರೆಗೆ ರಿಯಾಯಿತಿ ಪಡೆಯಬಹುದು. ಬಿಎಂಟಿಸಿ ಬಸ್ ಹಾಗೂ ಮೆಟ್ರೊಗೆ ಒಂದೇ ಟಿಕೆಟ್ ಕೊಳ್ಳುವ ಅವಕಾಶವೂ ಇಲ್ಲಿದೆ. ಟ್ರಿಪ್ ಆಧಾರದ ಮೇಲೆಯೂ ರಿಯಾಯಿತಿಗಳಿವೆ. ಟಿಕೆಟ್ ದರ ಹೆಚ್ಚಿಸುವ ಯೋಜನೆ ಸದ್ಯಕ್ಕಿಲ್ಲವಂತೆ.

ಟರ್ನ್ ಆಗುತ್ತಾ?
ಎಂ.ಜಿ ರಸ್ತೆ ಹಾಗೂ ಬೈಯಪ್ಪನಹಳ್ಳಿಗಳಲ್ಲಿ ರೈಲು ತಿರುಗಿ ಬರುತ್ತದೆ ಎಂದು ಹೇಳುವುದುಂಟು. ವಾಸ್ತವವಾಗಿ ಅವು ತಿರುಗುವುದೇ ಇಲ್ಲ. ಎರಡೂ ಕಡೆ ಹಳಿಗಳನ್ನು ಸ್ವಲ್ಪ ಎತ್ತರಕ್ಕೆ ಏರಿಸಿದ್ದು, ಅಪ್‌ಲೈನ್ ಹಾಗೂ ಡೌನ್‌ಲೈನ್ ಎಂದು ಹೆಸರಿಡಲಾಗಿದೆ. ಅವುಗಳ ಮೂಲಕವೇ ರೈಲು ಟ್ರ್ಯಾಕ್ ಬದಲಿಸುತ್ತದೆ. ಈ ರೈಲಿಗೆ ಹಿಂಭಾಗ-ಮುಂಭಾಗಗಳಿಲ್ಲ. ಎರಡೂ ಕಡೆ ಎಂಜಿನ್ ಹಾಗೂ ಚಾಲಕನ ಕ್ಯಾಬಿನ್ ಇದೆ. ಎಂ.ಜಿ ರಸ್ತೆಯಲ್ಲಿ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಒಂದು ನಿಮಿಷ ನಿಲ್ಲುವ ರೈಲಿನಿಂದ ಚಾಲಕ ಎದ್ದು ಬಂದು ಇನ್ನೊಂದು ತುದಿಯ ಎಂಜಿನ್ ಹಿಡಿಯುತ್ತಾರೆ. ಕೆಳಗಿನ ಹಳಿ ಮೇಲೆ ಮರಳಿ ಬರುವ ರೈಲನ್ನೇ `ಟರ್ನ್ ಆಗಿ ಬಂತು~ ಎಂದು ಹೇಳುವುದು ಮಾತಿಗಷ್ಟೇ ಸೀಮಿತ.

ಸ್ವಚ್ಛತೆಗೆ ಮಹತ್ವ
ಎಲ್ಲಾ ನಿಲ್ದಾಣಗಳಲ್ಲೂ ಸ್ವಚ್ಛತೆಗೆ ಪ್ರಥಮ ಆದ್ಯತೆ. ನಿಲ್ದಾಣದಲ್ಲಿ ಗೂಡು ಕಟ್ಟಿರುವ ಪಾರಿವಾಳಗಳ ಹಿಕ್ಕೆ ತೆಗೆಯುವುದೇ ಸವಾಲಾಗಿದೆ. ಪ್ರತಿ ಮೂರು ಗಂಟೆಗೊಮ್ಮೆ ಪ್ಲಾಟ್‌ಫಾರಂ ಗುಡಿಸಿ ಸ್ವಚ್ಛವಾಗಿಡುತ್ತೇವೆ. ಕೆಲವು ಕಿಡಿಗೇಡಿಗಳು ಚೂಯಿಂಗಂ ತಿಂದು ಹಳಿಗಳಿಗೆ ಉಗಿಯುತ್ತಾರೆ. ಕೊನೆಯ ರೈಲು ಹೋದ ಬಳಿಕ ವಿದ್ಯುತ್ ಸ್ಥಗಿತಗೊಳಿಸಿ ಸ್ವಚ್ಛಗೊಳಿಸುತ್ತೇವೆ ಎನ್ನುತ್ತಾರೆ ಸಿಬ್ಬಂದಿಯೊಬ್ಬರು.

ಇದರೊಂದಿಗೆ..
ಎಲ್ಲಾ ಮೆಟ್ರೊ ನಿಲ್ದಾಣಗಳಲ್ಲೂ ಬ್ಯಾಗ್ ತಪಾಸಣೆ ನಡೆಸುವ ಸ್ಕ್ಯಾನರ್ ಅಳವಡಿಸಲಾಗಿದೆ.

ವ್ಯಕ್ತಿಯೊಬ್ಬ ಗರಿಷ್ಠ 15ಕೆಜಿ ತೂಕದ ವಸ್ತುಗಳನ್ನು ಕೊಂಡೊಯ್ಯಲಷ್ಟೇ ಅನುಮತಿ.

ಒಂದು-ಎರಡು ರೂಪಾಯಿ ನಾಣ್ಯ ಅಪರೂಪವಾಗುತ್ತಿರುವ ಕಾರಣಕ್ಕೆ ಎಂ.ಜಿ ರಸ್ತೆಯ ನಿಲ್ದಾಣದಲ್ಲಿ ಕಾಯಿನ್ ವೆಂಡಿಂಗ್ ಮೆಷಿನ್ ಅಳವಡಿಸಲಾಗಿದೆ.

ಎಂ.ಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಬಣ್ಣದ ಕಾರಂಜಿ, ಪುಟಾಣಿ ಉದ್ಯಾನ ಈಚೆಗಷ್ಟೇ ಅನಾವರಣಗೊಂಡಿದೆ.

ಮುಂಜಾನೆಯಿಂದಲೇ ಎಲ್ಲಾ ನಿಲ್ದಾಣಗಳಲ್ಲೂ ಶಾಸ್ತೀಯ ಲಘು ಸಂಗೀತ ಧ್ವನಿಸುತ್ತದೆ.

ನಿತ್ಯ ಪ್ರಯಾಣಿಕರು ಹೀಗಂತಾರೆ
ಈ ಹಿಂದೆ ಹಲಸೂರಿನಿಂದ ಬೈಯಪ್ಪನಹಳ್ಳಿಗೆ ತಲುಪಲು ಒಂದು ಗಂಟೆ ಬೇಕಿತ್ತು. ಈಗ ಏಳು ನಿಮಿಷ ಸಾಕು. ಟ್ರಾಫಿಕ್ ಸಮಸ್ಯೆಯೂ ಇಲ್ಲ. ನಿತ್ಯ ಪ್ರಯಾಣಿಸುವ ನನ್ನಂಥವರಿಗೆ ಮೆಟ್ರೊ ವರದಾನವಾಗಿದೆ. 
-ನಾರಾಯಣಸ್ವಾಮಿ, ಹಿರಿಯ ನಾಗರಿಕ

ಮೆಟ್ರೊ ಓಡಾಡಲು ಆರಂಭಿಸಿದ ಬಳಿಕ ಸಮಯ ಹಾಗೂ ಹಣ ಉಳಿತಾಯ ಸಾಧ್ಯವಾಗಿದೆ. ನನ್ನ ಮನೆ ಇಂದಿರಾನಗರದಲ್ಲಿ. ಎಂ.ಜಿ ರಸ್ತೆಯ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದೇನೆ. ಇದಕ್ಕೂ ಮುನ್ನ ಈ ನಾಲ್ಕು ಕಿಮೀ ಕ್ರಮಿಸಲು 45ನಿಮಿಷ ತೆಗೆದುಕೊಳ್ಳುತ್ತಿದ್ದೆ. ಈಗ 15 ನಿಮಿಷ ಸಾಕು. ಬಸ್‌ನಂತೆ ಒಂದು ಮಿಸ್ ಆದರೆ ಮತ್ತೊಂದಕ್ಕೆ ಅರ್ಧ ಗಂಟೆ ಕಾಯಬೇಕಾಗಿಲ್ಲ. ಮುಂದಿನ ಎಂಟು ನಿಮಿಷದಲ್ಲಿ ಮತ್ತೊಂದು ರೈಲು ಬಂದೇ ಬರುತ್ತದಲ್ಲಾ...
-ದೀಪಾ ಶೆಣೈ, ನಿತ್ಯ ಪ್ರಯಾಣಿಕರು.

ಅಪವಾದಗಳೇನು?
ಯಾವುದೇ ನಿಲ್ದಾಣದಲ್ಲಿ ಶೌಚಾಲಯಗಳಿಲ್ಲ. ಅವಸರವಾದರೂ ಪರಿಹಾರವಿಲ್ಲ ಎಂಬುದು ಬಹುತೇಕರ ದೂರು.

ಹೆಚ್ಚಿನ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯವಿಲ್ಲ.

ಎಂ.ಜಿ ರಸ್ತೆಯೂ ಸೇರಿದಂತೆ ಕೆಲವು ನಿಲ್ದಾಣಗಳಲ್ಲಿ ಗಾಜಿನ ತಡೆಗೋಡೆ ಇಲ್ಲ. ಹೀಗಾಗಿ ಮಳೆ ನೀರು ನೇರವಾಗಿ ಒಳನುಗ್ಗುತ್ತದೆ. 

ಪ್ರತಿ ನಿಲ್ದಾಣದಲ್ಲಿ ನಾಲ್ಕು ಸ್ಟೀಲ್ ಕುರ್ಚಿಗಳಿದ್ದು, ಅವುಗಳಲ್ಲಿ ಹನ್ನೆರಡು ಮಂದಿ ಕೂರಬಹುದು. ಇನ್ನುಳಿದಂತೆ ಪಿಲ್ಲರ್ ಕೆಳಭಾಗದಲ್ಲಿ ಎಂಟರಿಂದ ಹತ್ತು ಮಂದಿ ಕೂರಬಹುದು. ಸುಸ್ತಾಗಿ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿಲ್ಲ ಎಂಬುದು ಹಲವರ ಅಳಲು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT