ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ, ನಾಡಿದ್ದು ಮುಷ್ಕರ

Last Updated 18 ಫೆಬ್ರುವರಿ 2013, 20:09 IST
ಅಕ್ಷರ ಗಾತ್ರ

ಬೆಂಗಳೂರು: ಹಲವು ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫೆ.20ರಿಂದ 48 ಗಂಟೆಗಳ ಕಾಲ ನಡೆಸಲಿರುವ ರಾಷ್ಟ್ರವ್ಯಾಪಿ ಮುಷ್ಕರದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದ್ದು, ರಾಜ್ಯದ ಬೊಕ್ಕಸಕ್ಕೆ ರೂ.1,800 ಕೋಟಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ಈ ವರ್ಷದಲ್ಲಿ ಕೈಗೊಳ್ಳುತ್ತಿರುವ ಮೊದಲ ಮುಷ್ಕರ ಇದಾಗಿದೆ. ಆಟೊ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಬ್ಯಾಂಕ್ ನೌಕರರು ತಮ್ಮದೇ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಿಪಿಎಂ ಮತ್ತು ಅಖಿಲ ಭಾರತ ಟ್ರೇಡ್ ಕಾರ್ಮಿಕ ಸಂಘಟನೆ ಕರೆ ನೀಡಿರುವ ಮುಷ್ಕರದಲ್ಲಿ ಕೈಜೋಡಿಸಲಿದ್ದಾರೆ. ವಿದ್ಯಾರ್ಥಿಗಳು, ನೌಕರರು, ಸಣ್ಣಪುಟ್ಟ ವ್ಯಾಪಾರಸ್ಥರು ಸೇರಿದಂತೆ ಬಹುತೇಕ ಸಾರ್ವಜನಿಕರು ಸಮೂಹ ಸಾರಿಗೆ ಮೇಲೆ ಅವಲಂಬಿತರಾಗಿರುವುದರಿಂದ ತೀವ್ರ ಸಮಸ್ಯೆ ಉಂಟಾಗಬಹುದು.

ಇನ್ನು ಶಾಲೆ, ಕಾಲೇಜು ವಿದ್ಯಾರ್ಥಿಗಳು, ನೌಕರರು ಬಸ್ ಹಾಗೂ ಆಟೊ ಸೌಲಭ್ಯವಿಲ್ಲದೇ ತೊಂದರೆ ಅನುಭವಿಸುವ ಸಂಭವ ಹೆಚ್ಚಿದೆ. ಮನರಂಜನೆ ತಾಣಗಳಾದ ಸಿನಿಮಾ, ಶಾಪಿಂಗ್ ಮಾಲ್, ಅಂಗಡಿ ಮುಂಗಟ್ಟುಗಳಿಗೆ ಮುಷ್ಕರದ ಬಿಸಿ ತಟ್ಟಲಿದೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಬಿಎಂಟಿಸಿ ಬಸ್ ಅವಲಂಬಿಸಿರುವ ಶಾಲೆಗಳ ಮೇಲೆ ಮುಷ್ಕರ ನೇರ ಪರಿಣಾಮ ಬೀರಲಿದೆ.

ಹಣದುಬ್ಬರ ಹಿನ್ನೆಲೆಯಲ್ಲಿ ವೇತನ ಹೆಚ್ಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ಬ್ಯಾಂಕ್ ಚಟುವಟಿಕೆ ಬಹುತೇಕ ಸ್ಥಗಿತಗೊಳ್ಳಲಿದೆ.

ಇನ್ನು ಒಲಾ ಕ್ಯಾಬ್ಸ್ ಸಂಸ್ಥೆ (ದೂ:33553355) ಆಟೊ ದರಕ್ಕೆ ಅನುಗುಣವಾಗಿ ಕ್ಯಾಬ್ ಸೇವೆ ಒದಗಿಸುತ್ತೇವೆ ಎಂದು ಹೇಳಿಕೊಂಡಿದೆಯಾದರೂ, ಈ ಸೇವೆ ಪಡೆ 24 ಗಂಟೆ ಮುಂಚಿತವಾಗಿ ಕರೆ ಮಾಡಿ ಸೇವೆ ಪಡೆಯಬೇಕಿದೆ.

ಹೆಸರು ಕಳುಹಿಸಿಕೊಡಿ: ಕೇಂದ್ರ
(ನವದೆಹಲಿ ವರದಿ): 
ಬೆಲೆ ಏರಿಕೆ ವಿರೋಧಿಸಿ ಇದೇ 20 ಹಾಗೂ 21ರಂದು ದೇಶವ್ಯಾಪಿ ಮುಷ್ಕರ ಕೈಗೊಳ್ಳಲು ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದು, ಒಂದು ವೇಳೆ ನೌಕರರು ಇಂತಹ ಪ್ರತಿಭಟನೆಯಲ್ಲಿ ಪಾಲ್ಗೊಂಡಲ್ಲಿ ಅದೇ ದಿನವೇ ಅಂತಹ ನೌಕರರ ಹೆಸರುಗಳನನ್ನು ಕಳುಹಿಸಿಕೊಡಲು ಕೇಂದ್ರ ಸರ್ಕಾರ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟಪ್ಪಣೆ ನೀಡಿದೆ.

ಮುಷ್ಕರದಲ್ಲಿ ಪಾಲ್ಗೊಂಡ ನೌಕರರ ಸಂಬಳ ಕಡಿತಗೊಳಿಸುವುದು ಸೇರಿದಂತೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಈ ಸಂಬಂಧ ಎಚ್ಚರಿಕೆ ನೀಡಿದೆ.

ಶಾಲಾ ರಜೆ: ಡಿ.ಸಿ ವಿವೇಚನೆಗೆ
ಸ್ಥಳೀಯ ಪರಿಸ್ಥಿತಿ ಆಧರಿಸಿ ಶಾಲೆಗಳಿಗೆ ರಜೆ ನೀಡಬೇಕೇ, ಬೇಡವೇ ಎಂಬ ಬಗ್ಗೆಆಯಾ ಜಿಲ್ಲಾಧಿಕಾರಿ ಗಳು ತೀರ್ಮಾನ ತೆಗೆದು ಕೊಳ್ಳಲಿದ್ದಾರೆ. ರಜೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಜಿಲ್ಲಾಧಿಕಾರಿ ಗಳಿಗೆ ಇದೆ.
-ಎಸ್.ಆರ್.ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT