ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆದಿನ:ಕೊಪ್ಪಳಕ್ಕೆ ರಾಜಕೀಯ ಮುಖಂಡರ ದಂಡು

Last Updated 9 ಸೆಪ್ಟೆಂಬರ್ 2011, 11:15 IST
ಅಕ್ಷರ ಗಾತ್ರ

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆಗೆ ನಾಮಪತ್ರ ಸಲ್ಲಿಸಲು ಸೆ. 9 ಕೊನೆಯ ದಿನವಾಗಿದ್ದು, ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಅಂದು ನಾಮಪತ್ರ ಸಲ್ಲಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಅಂದು ನಗರಕ್ಕೆ ಬಂದಿಳಿಯಲಿದ್ದಾರೆ.

ಪಕ್ಷೇತರರು, ಇತರ ಪಕ್ಷಗಳ ಅಭ್ಯರ್ಥಿಗಳು ಹಾಗೂ ಟಿಕೆಟ್ ವಂಚಿತರಾಗಿ ಬಂಡಾಯದ ಬಾವುಟ ಹಾರಿಸಲು ಯತ್ನಿಸುವವರು ಸಹ ನಾಮಪತ್ರ ಸಲ್ಲಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಬೆಳಿಗ್ಗೆ 11 ಗಂಟೆಗೆ ಬನ್ನಿಕಟ್ಟಿ ಬಳಿ ಇರುವ ಗೌರಿಶಂಕರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಪಾದಯಾತ್ರೆ ಮೂಲಕ ತಹಸೀಲ್ದಾರ ಕಚೇರಿಗೆ ಆಗಮಿಸುವರು. ಮಧ್ಯಾಹ್ನ 1.30 ಗಂಟೆಗೆ ನಾಮಪತ್ರ ಸಲ್ಲಿಸುವರು.

ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ  ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ನೀರಾವರಿ ಸಚಿವ ಬಸವರಾಜ ಬೋಮ್ಮಾಯಿ, ಜಿಲ್ಲಾ ಉಸ್ತುವರಿ ಸಚಿವ ಲಕ್ಷ್ಮಣ ಸವದಿ, ಜವಳಿ ಸಚಿವ ವರ್ತೂರ್ ಪ್ರಕಾಶ್, ರಾಷ್ಟ್ರೀಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈಶ್ವರಚಂದ್ರ ಹೊಸಮನಿ, ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣನವರ್, ಎಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥ ಲ್ಕಾಪುರೆ, ರಾಷ್ಟ್ರೀಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಮೋಹನ ರೆಡ್ಡಿ, ಸಂಸದರು, ಶಾಸಕರು ಸೇರಿದಂತೆ ಎಲ್ಲಾ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು.

ನಾಮಪತ್ರ ಸಲ್ಲಿಸಿದ ನಂತರ ಸಾರ್ವಜನಿಕ ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಈ ಎಲ್ಲಾ ನಾಯಕರು ಪಾಲ್ಗೊಳ್ಳುವರು ಎಂದು ಬಿಜೆಪಿ ವಕ್ತಾರ ಹಾಲೇಶ ಕಂದಾರಿ ತಿಳಿಸಿದ್ದಾರೆ.

ಹಿಟ್ನಾಳ್ ನಾಮಪತ್ರ: ಕಾಂಗ್ರೆಸ್ ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳ್ ಅಂದು ಬೆಳಿಗ್ಗೆ 10 ಗಂಟೆಗೆ ಸಿರಸಪ್ಪಯ್ಯ ಸ್ವಾಮಿ ಮಠದಲ್ಲಿ ಪೂಜೆ ಸಲ್ಲಿಸುವರು. ನಂತರ ಮೆರವಣಿಗೆಯಲ್ಲಿ ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತದ ಮೂಲಕ ಹಾಯ್ದು  ತಹಸೀಲ್ದಾರ ಕಚೇರಿಗೆ ಆಗಮಿಸಿ 1.35 ಗಂಟೆಗೆ ನಾಮಪತ್ರ ಸಲ್ಲಿಸುವರು.

ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಬಸವರಾಜ ರಾಯರೆಡ್ಡಿ, ವೀಕ್ಷಕ ಸಿ.ಎ.ಬಾವಾ, ಜಿಲ್ಲೆಯಲ್ಲಿನ ಪಕ್ಷದ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ನಾಗರಳ್ಳಿ ತಿಳಿಸಿದ್ದಾರೆ.

ಇನ್ನು, ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾಲಿಪಾಟೀಲ ಸಹ ಸೆ. 9ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ಗವಿಮಠದಿಂದ ಮೆರವಣಿಗೆಯಲ್ಲಿ ಮೂಲಕ ಹೊರಡು ಗಡಿಯಾರ ಕಂಬ, ಜವಾಹರ್ ರಸ್ತೆ, ಅಶೋಕ ವೃತ್ತದ ಮೂಲಕ ಹಾಯ್ದು ತಹಸೀಲ ಕಚೇರಿ ತಲುಪಲಾಗುವುದು. ನಂತರ 3 ಗಂಟೆ ಒಳಗಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದು ಪ್ರದೀಪಗೌಡ ಮಾಲಿಪಾಟೀಲ ತಿಳಿಸಿದ್ದಾರೆ.

ಪಕ್ಷದ ಜಿಲ್ಲಾ ಅಧ್ಯಕ್ಷ ನಾಗಪ್ಪ ಸಾಲೋಣಿ, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಸೇರಿದಂತೆ ಇತರ ಮುಖಂಡರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.

ಜೆಡಿಎಸ್ ಟಿಕೆಟ್‌ನಿಂದ ವಂಚಿತರಾಗಿರುವ ಕೆ.ಎಂ.ಸೈಯದ್ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಗವಿಮಠದಿಂದ ಜವಾಹರ್ ರಸ್ತೆ ಮೂಲಕ ತಹಸೀಲ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸುವರು. ಪಕ್ಷದ ಕಾರ್ಯಕರ್ತರು, ವೀಕ್ಷಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT