ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಬಯಲು 40, ಕಾರಂತ 10

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರವೀಂದ್ರ ಕಲಾಕ್ಷೇತ್ರದ ಹೊರ ಆವರಣದಲ್ಲಿ 1972ರ ಫೆಬ್ರುವರಿ 11,12,13ರಂದು ನಡೆದ ಮೂರು ದಿನಗಳ ನಾಟಕೋತ್ಸವಕ್ಕೆ ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ. ಹವ್ಯಾಸಿ ರಂಗಭೂಮಿಗೆ ಸಂಚಲನ ತಂದ ಉತ್ಸವ ಅದು.

ಲಂಕೇಶ್, ಕಂಬಾರರ ನಾಟಕಗಳಿಗೆ ಕಾರಂತರ ನಿರ್ದೇಶನದ ಮಾಂತ್ರಿಕ ಸ್ಪರ್ಶ ಇತ್ತು. ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಅತಿರಥ ಮಹಾರಥರೆನಿಸಿದ ಕಾರ್ನಾಡ್, ವೈಶಾಲಿ, ಸೋಮಶೇಖರರಾವ್, ಉಮೇಶರುದ್ರ, ಎ.ಎನ್. ಪ್ರಸನ್ನ, ಎಲ್. ಕೃಷ್ಣಪ್ಪ, ಚಂದ್ರಕುಮಾರ ಸಿಂಗ್, ಮೋಹನರಾಂ, ನಾಗಾಭರಣ, ಜಿ.ವಿ. ಶಿವಾನಂದ, ಲೋಕನಾಥ್, ಜಿ.ಕೆ.ಗೋವಿಂದರಾವ್, ಭಾರತಿ, ವಿಜಯಾ, ಎಂ.ಸಿ.ಆನಂದ್, ಆರ್. ನಾಗೇಶ್, ವಿ.ರಾಮಮೂರ್ತಿ, ಕೆ.ಮರುಳಸಿದ್ದಪ್ಪ, ಜೆ.ಲೋಕೇಶ್, ನಾಣಿ, ದೊಡ್ಡರಂಗೇಗೌಡ ಮೊದಲಾದವರೆಲ್ಲ ನಟ ನಟಿಯರಾಗಿ, ನೇಪಥ್ಯ ಕಲಾವಿದರಾಗಿ ಭಾಗವಹಿಸಿ ಹೊಸತನದ ನಾಟಕಗಳ ಪ್ರಯೋಗಕ್ಕೆ ನಾಂದಿ ಹಾಡಿದರು.

ದುರಸ್ತಿಗಾಗಿ ಕೆಲಕಾಲ ರವೀಂದ್ರ ಕಲಾಕ್ಷೇತ್ರವನ್ನು ಮುಚ್ಚಿದ್ದ ಕಾರಣಕ್ಕೆ ಬಯಲಿನಲ್ಲಿ ನಾಟಕ ಆಡಬೇಕಾಗಿ ಬಂದದ್ದು ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಒಂದು ಮೈಲಿಗಲ್ಲಾಗುತ್ತದೆ ಎಂದು ಆಗ ಯಾರಾದರೂ ಭಾವಿಸಿದ್ದರೋ.. ಗೊತ್ತಿಲ್ಲ. ಹಾಗೆ ನೋಡಿದರೆ ಗ್ರಾಮೀಣ ನಾಟಕಗಳನ್ನು ಬಯಲು ನಾಟಕಗಳೆಂದೇ ಕರೆಯುತ್ತೇವೆ.

ವೃತ್ತಿರಂಗಭೂಮಿ ನಾಟಕಗಳು, ಯಕ್ಷಗಾನ ಬಯಲಿನಲ್ಲೇ ಕ್ಯಾಂಪ್ ಹಾಕುತ್ತವೆ.  ಬಯಲು ನಾಟಕ ಒಟ್ಟಾರೆ ಕನ್ನಡ ರಂಗಭೂಮಿಗೆ ಹೊಸ ಪರಿಕಲ್ಪನೆಯಲ್ಲ. ಆದರೆ ಹವ್ಯಾಸಿ ರಂಗಭೂಮಿಯಲ್ಲಿ ಇಂತಹ ಆಲೋಚನೆ ಆ ಕಾಲಕ್ಕೆ ಹೊಸದೇ ಆಗಿತ್ತು.

1980-90ರ ದಶಕದಲ್ಲೂ ಕಲಾಕ್ಷೇತ್ರವನ್ನು ದುರಸ್ತಿಯ ನೆಪದಲ್ಲಿ ಕೆಲ ಕಾಲ ಮುಚ್ಚಿದಾಗ ಆವರಣದ ಬಯಲಿನಲ್ಲಿ ನಾಟಕಗಳಾಗಿವೆ. ಆದರೆ ಕಥಾವಸ್ತು, ವಿನ್ಯಾಸ, ನಿರ್ದೇಶನ, ಬೆಳಕು ಎಲ್ಲದರಲ್ಲೂ ಹೊಸ ಪ್ರಯೋಗ ಇದ್ದ ಕಾರಣಕ್ಕೆ 1972ರ ಬಯಲು ನಾಟಕೋತ್ಸವಕ್ಕೆ ಕನ್ನಡ ರಂಗಭೂಮಿಯಲ್ಲಿ ವಿಶೇಷ ಸ್ಥಾನ ಇದೆ.

ಉತ್ಸವವನ್ನು ಸಂಘಟಿಸಿದ್ದು ಲಂಕೇಶ್ ನೇತೃತ್ವದ ಪ್ರತಿಮಾ ನಾಟಕ ರಂಗ. ಲಂಕೇಶರ `ಸಂಕ್ರಾಂತಿ~, `ಈಡಿಪಸ್~(ಸೊಫೋಕ್ಲಿಸ್ ಮಹಾಕವಿಯ ನಾಟಕದ ಕನ್ನಡ ರೂಪಾಂತರ), ಚಂದ್ರಶೇಖರ ಕಂಬಾರರ `ಜೋಕುಮಾರಸ್ವಾಮಿ~ ಆ ಉತ್ಸವದಲ್ಲಿ ಪ್ರಯೋಗ ಕಂಡ ನಾಟಕಗಳು. ಮೂರೂ ನಾಟಕಗಳ ನಿರ್ದೇಶನ ಬಿ.ವಿ.ಕಾರಂತ.

ಇದೇ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜಿ.ಎಸ್. ಶಿವರುದ್ರಪ್ಪ ನೇತೃತ್ವದ ಕನ್ನಡ ಅಧ್ಯಯನ ಕೇಂದ್ರ ಏರ್ಪಡಿಸಿದ್ದ ರಂಗಭೂಮಿ ಕುರಿತ ವಿಚಾರ ಸಂಕಿರಣ ಕನ್ನಡ ರಂಗಭೂಮಿಯ ಮುಂದಿನ ದಿಕ್ಕು ದೆಸೆಗೆ ಮಾರ್ಗಸೂಚಿಯಾಗಿತ್ತು. ಅಲ್ಲಿಂದ ಮುಂದಿನ ದಿನಗಳಲ್ಲಿ ಹವ್ಯಾಸಿ ರಂಗಭೂಮಿ ಗರಿಗಟ್ಟಿಕೊಂಡಿತು. ಪಾಳಿಯಲ್ಲಿ ನಿಂತು ಟಿಕೆಟ್ ತೆಗೆಸಿ ನಾಟಕ ನೋಡುವ ಪ್ರತೀತಿ ಬೆಳೆದದ್ದು 1970-80ರ ದಶಕದಲ್ಲಿ. ಇದೆಲ್ಲಕ್ಕೂ ನೆಪವಾದದ್ದು 1972ರ ಬಯಲು ಉತ್ಸವ.

ಗುಬ್ಬಿ ವೀರಣ್ಣನವರ ನೆರವಿನಿಂದ ಕಾಸಿ ಬನಾರೆಸ್ ವಿವಿಯಲ್ಲಿ ಹಿಂದಿ ಸ್ನಾತಕೋತ್ತರ ಪದವಿ, ದೆಹಲಿ ರಾಷ್ಟ್ರೀಯ ಶಾಲೆಯಲ್ಲಿ ಪದವಿ ಪಡೆದು, ರೆಪರ್ಟರಿಗಳು, ದೇಶದ ವಿವಿಧ ರಂಗತಂಡಗಳಲ್ಲಿ ಭಾಗವಹಿಸಿ ತಾಯ್ನಾಡಿಗೆ ಆಗಮಿಸಿದ್ದ ಕಾರಂತರ ನಿರ್ದೇಶನ ಈ ಮೂರೂ ನಾಟಕಗಳು ಇಲ್ಲಿನ ರಂಗಪ್ರೇಮಿಗಳಿಗೆ ನಾಟಕದ ಹುಚ್ಚು ಹಿಡಿಸಿದವು. ಕಾರಂತರು ಕನ್ನಡದಲ್ಲಿ ನಿರ್ದೇಶಿಸಿದ ನಾಟಕಗಳು ಇದೇ ಮೊದಲಲ್ಲ.

ಆರ್. ನಾಗೇಶ್, ಎಲ್.ಕೃಷ್ಣಪ್ಪ ಮುಂತಾದವರ ಪ್ರಯತ್ನದ ಫಲವಾಗಿ 1968ರಲ್ಲೇ ಕನ್ನಡ ಸಾಹಿತ್ಯ ಕಲಾಸಂಘಕ್ಕೆ ನಾಟಕ ನಿರ್ದೇಶಿಸಿ ನವೀನತೆಯನ್ನು ಪರಿಚಯಿಸಿದ್ದರು. ಆದರೆ ಒಂದು ಆಂದೋಲನದ ಮಾದರಿಯಲ್ಲಿ ನಾಟಕ ಆರಂಭವಾದದ್ದು 1972ರ ಬಯಲು ನಾಟಕೋತ್ಸವದ ನಂತರ.

ಹವ್ಯಾಸಿ ರಂಗಭೂಮಿಯ ಹಿರಿಮೆಯನ್ನು ಬಣ್ಣಿಸುವಾಗ 70, 80ರ ದಶಕಗಳ ವೈಭವ ನೆನೆಯುತ್ತೇವೆ. ಆ ವೈಭವಕ್ಕೆ ಕಾರಂತರು ಒಂದು ನೆಪವಾದರೆ, ಬಯಲು ನಾಟಕೋತ್ಸವ ಮುಖ್ಯ ಕಾರಣವಾಗುತ್ತದೆ. ಈ ಬಯಲು ನಾಟಕೋತ್ಸವಕ್ಕೆ ಇದೀಗ 40. ಕಾರಂತರು ನಿಧನರಾಗಿ 10ವರ್ಷ ಗತಿಸಿವೆ.

ಬೆಂಗಳೂರಿನ ವಿವಿಧ ಹವ್ಯಾಸಿ ರಂಗ ತಂಡಗಳ ನೆರವಿನೊಂದಿಗೆ ಪ್ರತಿಮಾ ರಂಗ ಸಂಶೋಧನಾ ಪ್ರತಿಷ್ಠಾನವು `ಬಯಲು 40, ಕಾರಂತ 10~ರ ನೆನಪಿಗೆ ಇಂದಿನಿಂದ `ಬಿ.ವಿ.ಕಾರಂತ ನೆನಪಿನ ನಾಟಕೋತ್ಸವ~ ಏರ್ಪಡಿಸಿದೆ ಎಂದು ಸಂಚಾಲಕರಾದ ಚಂದ್ರಕುಮಾರ ಸಿಂಗ್, ಎಲ್.ಕೃಷ್ಣಪ್ಪ ತಿಳಿಸಿದ್ದಾರೆ. 9ರಂದು ಸಂಸ ಬಯಲು ರಂಗಮಂದಿರದಲ್ಲಿ ರಾಜ್ಯಸಭೆ ಸದಸ್ಯೆ ಬಿ.ಜಯಶ್ರೀ ಉದ್ಘಾಟಿಸುವ ಸಮಾರಂಭದಲ್ಲಿ ರಂಗಗೀತೆ ಕಾರ್ಯಕ್ರಮ ಇದೆ.

10ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬೆನಕ ತಂಡದ `ಸತ್ತವರ ನೆರಳು~, 11 ಮತ್ತು 12ರಂದು ಮೈಸೂರು ರಂಗಾಯಣದ `ಕತ್ತಲೆ ಬೆಳಕು~, `ಚಂದ್ರಹಾಸ~ ನಾಟಕ ಪ್ರದರ್ಶನ, ಬಿ.ವಿ.ಕಾರಂತರ ಛಾಯಾಚಿತ್ರ, ಭಿತ್ತಿ ಚಿತ್ರ ಪ್ರದರ್ಶನ ಹಾಗೂ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT