ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಮತ ಎಣಿಕೆಗೆ ಸಿದ್ಧತೆ

Last Updated 3 ಜನವರಿ 2011, 6:25 IST
ಅಕ್ಷರ ಗಾತ್ರ

ಬೆಂಗಳೂರು: ಗುಲ್ಬರ್ಗ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಅಂಕಲಗಿಯ ಎರಡು ಮತಗಟ್ಟೆ ಗಳಲ್ಲಿ ಸೋಮವಾರ ಮರು ಮತದಾನ ನಡೆಯಲಿದ್ದು, ಇದರೊಂದಿಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯ ಮತದಾನ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಮಂಗಳವಾರ ರಾಜ್ಯದಾದ್ಯಂತ ಮತ ಎಣಿಕೆ ನಡೆಯಲಿದ್ದು,ಸಕಲ ಸಿದ್ಧತೆ ನಡೆಸಲಾಗಿದೆ.

ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲೆಯ ಏಳು ತಾಲ್ಲೂಕು ಪಂಚಾಯಿತಿಗಳಿಗೆ ಶನಿವಾರ ಮತದಾನ ನಡೆದಿತ್ತು. ಈ ಸಂದರ್ಭದಲ್ಲಿ ಅಫಜಲಪುರ ತಾಲ್ಲೂಕಿನ ಅಂಕಲಗಿಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ದುಷ್ಕರ್ಮಿಗಳು ಎರಡು ವಿದ್ಯುನ್ಮಾನ ಮತಯಂತ್ರಗಳನ್ನು ಧ್ವಂಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿ ಮರು ಮತದಾನ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿತ್ತು.

ಒಂದೇ ಊರಿನಲ್ಲಿರುವ ಎರಡು ಮತಗಟ್ಟೆಗಳಲ್ಲಿ ಸೋಮವಾರ ಮರು ಮತದಾನ ನಡೆಯಲಿದೆ. ಅಲ್ಲಿ ಮತ್ತೆ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಹಾಗೂ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಸ್ಥಳೀಯ ಜಿಲ್ಲಾಡಳಿತಕ್ಕೆ ಆಯೋಗ ಆದೇಶಿಸಿದೆ.

ಒಟ್ಟು 1,013 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮತ್ತು 3,659 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಡಿಸೆಂಬರ್ 26ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 12 ಜಿಲ್ಲೆಗಳ 375 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮತ್ತು 1,341 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಡಿಸೆಂಬರ್ 31ರಂದು 17 ಜಿಲ್ಲೆಗಳ 595 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮತ್ತು 2,163 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಗುಲ್ಬರ್ಗ ಜಿಲ್ಲೆಯ 43 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮತ್ತು 155 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆದಿದೆ.

1,013 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ 4,091 ಅಭ್ಯರ್ಥಿಗಳು ಕಣದಲ್ಲಿದ್ದರು. 3,659 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ 13,082 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈಗ ಎಲ್ಲ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಅಡಗಿದೆ.

ಎಣಿಕೆಗೆ ಸಿದ್ಧತೆ: ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳನ್ನು 171 ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆಯಲ್ಲಿ ಇಡಲಾಗಿದೆ. ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಎಣಿಕೆ ಕೇಂದ್ರಗಳಲ್ಲಿ ಮಂಗಳವಾರ ಬೆಳಿಗ್ಗೆ ಎಂಟು ಗಂಟೆಯಿಂದ ಏಕಕಾಲಕ್ಕೆ ಮತ ಎಣಿಕೆ ಆರಂಭವಾಗಲಿದೆ.

ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಮತ ಎಣಿಕೆಗೆ ಒಂದು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಕ್ಷೇತ್ರ ವೊಂದರ ಮತ ಎಣಿಕೆ ಮೂರು ಟೇಬಲ್‌ಗಳಲ್ಲಿ ನಡೆಯುತ್ತದೆ. ಮತ ಎಣಿಕೆ ಸಿಬ್ಬಂದಿ ಮತ್ತು ಕೇಂದ್ರಗಳ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ.

‘ಈ ಬಾರಿ ಪಂಚಾಯಿತಿ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡಿರುವುದರಿಂದ ಮತ ಎಣಿಕೆ ಪ್ರಕ್ರಿಯೆ ಸುಲಭವಾಗಲಿದೆ. ತ್ವರಿತವಾಗಿ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು ಮಧ್ಯಾಹ್ನದ ವೇಳೆಗೆ ಬಹುತೇಕ ಕ್ಷೇತ್ರಗಳ ಫಲಿತಾಂಶ ಲಭ್ಯವಾಗಲಿದೆ’ ಎಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಡಿ.ಕೆ.ರವೀಂದ್ರನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮತ ಎಣಿಕೆಯ ದಿನ ಫಲಿತಾಂಶವನ್ನು ಆಯೋಗದ ವೆಬ್‌ಸೈಟ್‌ನಲ್ಲಿ ನೀಡಲಾಗುವುದು. ಜಿಲ್ಲಾ ಮಾಹಿತಿ ಕೇಂದ್ರಗಳ ಮೂಲಕ ನಿರಂತರವಾಗಿ ಮಾಹಿತಿ ‘ಅಪ್‌ಲೋಡ್’ ಮಾಡಲಾಗುವುದು. ಅದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ ಮೂಲಕ ಆಯೋಗದ ವೆಬ್‌ಸೈಟ್ http://karsec.gov.in ಗೆ ಪೂರೈಸಲಾಗುವುದು ಎಂದು ವಿವರಿಸಿದರು.

ಬಿಗಿ ಭದ್ರತೆ: ಮತ ಎಣಿಕೆ ಕೇಂದ್ರಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಮತದಾನ ನಡೆದ ದಿನವೇ ಎಣಿಕೆ ಕೇಂದ್ರಗಳಲ್ಲಿ ಮತಯಂತ್ರಗಳನ್ನು ಇಡಲಾಗಿದ್ದು, ಭಾರಿ ಸಂಖ್ಯೆಯ ಪೊಲೀಸರು ನಿಗಾ ಇಟ್ಟಿದ್ದಾರೆ. ಮಂಗಳವಾರ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿನ ಪೊಲೀಸರನ್ನೂ ನಿಯೋಜಿಸಲು ಆಯೋಗ ನಿರ್ಧರಿಸಿದೆ.

‘ಮತ ಎಣಿಕೆ ಕೇಂದ್ರಗಳಿಗೆ ಭದ್ರತೆಗೆ ಅಗತ್ಯ ಇರುವಷ್ಟು ಪೊಲೀಸರನ್ನು ಈಗಾಗಲೇ ನಿಯೋಜಿಸಲಾಗಿದೆ. ಉಳಿದಂತೆ ಸ್ಥಳೀಯವಾಗಿ ಪರಿಸ್ಥಿತಿ ಅವಲೋಕಿಸಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸುವ ಅಧಿಕಾರವನ್ನು ಸ್ಥಳೀಯ ಜಿಲ್ಲಾಧಿಕಾರಿ ಮತ್ತು ಎಸ್‌ಪಿಗೆ ನೀಡಲಾಗಿದೆ.

ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಅವರು ನಮ್ಮನ್ನು ಸಂಪರ್ಕಿಸಿದರೆ ಅಗತ್ಯ ವ್ಯವಸ್ಥೆ ಮಾಡುತ್ತೇವೆ’ ಎಂದು ರವೀಂದ್ರನಾಥ್ ತಿಳಿಸಿದರು.

ಮದ್ಯ ಮಾರಾಟ ನಿಷೇಧ: ಮತ ಎಣಿಕೆ ಕೇಂದ್ರಗಳಿರುವ ಜಿಲ್ಲೆಗಳಲ್ಲಿ ಸೋಮವಾರ ರಾತ್ರಿ 10.30ರಿಂದ ಮಂಗಳವಾರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ಮತ್ತು ಸಾಗಣೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಸೋಮವಾರ ರಾತ್ರಿಯಿಂದಲೇ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಆಯೋಗ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT