ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಯಡಿಯೂರಪ್ಪ ಜಿಲ್ಲೆಗೆ

Last Updated 3 ಫೆಬ್ರುವರಿ 2012, 10:05 IST
ಅಕ್ಷರ ಗಾತ್ರ

ಯಾದಗಿರಿ: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಪ್ರಥಮ ಬಾರಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಜಿಲ್ಲೆಯ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ.
ಫೆ.4ರಂದು ಸಂಜೆ 5 ಗಂಟೆಗೆ ಹೆಲಿಕಾಪ್ಟರ್ ಮೂಲಕ ಯಾದಗಿರಿಗೆ ಆಗಮಿಸಲಿರುವ ಯಡಿಯೂರಪ್ಪ, ಅಂದು ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಫೆ. 5ರಂದು ಬೆಳಿಗ್ಗೆ 8 ಗಂಟೆಗೆ ಸೇಡಂ ತಾಲ್ಲೂಕಿನ ಯಾನಾಗುಂದಿಗೆ ತೆರಳಿ, ಮಾತಾ ಮಾಣಿಕೇಶ್ವರಿ ದೇವಿಯವರ ದರ್ಶನ ಪಡೆಯುವರು. ಬೆಳಿಗ್ಗೆ 10 ಗಂಟೆಗೆ ನಗರಕ್ಕೆ ಹಿಂದಿರುಗಿ, ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಮೇಲ್ನೋಟಕ್ಕೆ ಇದೊಂದು ಔಪಚಾರಿಕ ಭೇಟಿ ಎಂದು ಹೇಳಲಾಗುತ್ತಿದ್ದರೂ, ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಾಲ್ಕು ಬಾರಿ ಜಿಲ್ಲೆಗೆ ಆಗಮಿಸಿದ್ದ ಯಡಿಯೂರಪ್ಪ, ಕಳೆದ ಜುಲೈ 30ರಂದು ಜಿಲ್ಲೆಯಲ್ಲಿ ಅನ್ನದಾತನ ಮನೆಯಂಗಳದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕ್ರಮವೂ ನಿಗದಿಯಾಗಿತ್ತು.

ಆದರೆ ಅದೇ ವೇಳೆಗೆ ಆರಂಭವಾದ ರಾಜಕೀಯ ಬೆಳವಣಿಗೆ ಹಾಗೂ ಗಣಿ ವರದಿಯ ಹಿನ್ನೆಲೆಯಲ್ಲಿ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು.

ಇದೀಗ ಅಧಿಕಾರ ಇಲ್ಲದೇ ಇರುವ ಸಂದರ್ಭದಲ್ಲಿ ಜಿಲ್ಲೆಗೆ ಯಡಿಯೂರಪ್ಪ ಆಗಮಿಸುತ್ತಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ. ಈಗಾಗಲೇ ಪಕ್ಷದ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡುತ್ತಿರುವ ಬಿ.ಎಸ್. ಯಡಿಯೂರಪ್ಪ ಜಿಲ್ಲೆಗೆ ಆಗಮಿಸುತ್ತಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ. 

ರಾಜ್ಯ ಬಿಜೆಪಿಯಲ್ಲಿ ಎದ್ದಿದ್ದ ಆಂತರಿಕ ಗೊಂದಲಗಳು ಇದೀಗ ತೆರೆ ಕಂಡಿದ್ದು, ಪಕ್ಷದ ಸಂಘಟನೆಗಾಗಿ ಎಲ್ಲರೂ ಶ್ರಮಿಸುವುದಾಗಿ ಹೇಳಿಕೆಗಳನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ರಾಜ್ಯದ ಎಲ್ಲೆಡೆಯೂ ತಮ್ಮ ಪ್ರವಾಸ ಆರಂಭಿಸಿದ್ದಾರೆ. ಅದೇ ರೀತಿ ಯಾದಗಿರಿಗೂ ಆಗಮಿಸಲಿದ್ದಾರೆ ಎಂಬ ಮಾತುಗಳನ್ನು ಪಕ್ಷದ ಮುಖಂಡರು ಹೇಳುತ್ತಿದ್ದಾರೆ.

ಇನ್ನೊಂದೆಡೆ ವಿಧಾನಸಭೆಗೆ ಯಾವುದೇ ಹಂತದಲ್ಲಿ ಚುನಾವಣೆ ಎದುರಾಗಲಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದು, ಈ ಸಂದರ್ಭದಲ್ಲಿ ಯಡಿಯೂರಪ್ಪನವರು ಜಿಲ್ಲೆಗೆ ಬರುತ್ತಿರುವುದು ಪಕ್ಷಕ್ಕೆ ಇನ್ನಷ್ಟು ಬಲ ತುಂಬಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಯಾದಗಿರಿಯನ್ನು ಜಿಲ್ಲೆಯನ್ನಾಗಿ ಮಾಡಿದ ಯಡಿಯೂರಪ್ಪ ಅವರ ಬಗ್ಗೆ ಜಿಲ್ಲೆಯ ಜನರಲ್ಲಿ ಸಾಕಷ್ಟು ವಲಯವಿದ್ದು, ಈ ಭಾಗದಲ್ಲಿ ಯಡಿಯೂರಪ್ಪನವರ ಪ್ರಭಾವನ್ನು ತೋರಿಸುವ ಪ್ರಯತ್ನವೂ ಇದಾಗಿರಬಹುದು ಎಂದು ಹೇಳಲಾಗುತ್ತಿದೆ.

ಯಾನಾಗುಂದಿಗೆ ಭೇಟಿ: ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರ ಕಳೆದುಕೊಂಡಿರುವ ಯಡಿಯೂರಪ್ಪ, ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ದರ್ಶನ ಪಡೆಯಲು ಆಗಮಿಸುತ್ತಿರುವುದು ವಿಶೇಷವಾಗಿದೆ.

ಈ ಹಿಂದೆಯೂ ಹಲವಾರು ರಾಜಕೀಯ ಮುಖಂಡರು ಯಾನಾಗುಂದಿಗೆ ಭೇಟಿ ನೀಡಿದ್ದಾರೆ. ಅದೇ ರೀತಿ ಯಡಿಯೂರಪ್ಪನವರು ಯಾನಾಗುಂದಿಗೆ ಆಗಮಿಸಲಿದ್ದಾರೆ. ಮುಂದಿನ ರಾಜಕೀಯ ನಡೆಯನ್ನು ರೂಪಿಸುವ ನಿಟ್ಟಿನಲ್ಲಿ ಮಾತಾಜಿಯವರ ಆಶೀರ್ವಾದ ಪಡೆಯಲು ಯಡಿಯೂರಪ್ಪನವರು ಆಗಮಿಸುತ್ತಿದ್ದಾರೆ ಎನ್ನುವ ಮಾತುಗಳು ದಟ್ಟವಾಗಿವೆ.

ಮುದನೂರಿನ ದೇವರ ದಾಸಿಮಯ್ಯನವರ ಸಹಸ್ರಮಾನೋತ್ಸವದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ, ಸುಮಾರು 10 ತಿಂಗಳ ನಂತರ ಯಾದಗಿರಿಗೆ ಆಗಮಿಸುತ್ತಿದ್ದು, ಜಿಲ್ಲೆಯ ಮಟ್ಟಿಗೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT