ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ರೈತರಿಂದ ಸುವರ್ಣ ಸೌಧಕ್ಕೆ ಮುತ್ತಿಗೆ

ಭತ್ತ, ಮೆಕ್ಕೆಜೋಳ, ಕಬ್ಬಿಗೆ ವೈಜ್ಞಾನಿಕ ಬೆಲೆಗೆ ಒತ್ತಾಯ
Last Updated 3 ಡಿಸೆಂಬರ್ 2013, 5:30 IST
ಅಕ್ಷರ ಗಾತ್ರ

ದಾವಣಗೆರೆ: ಭತ್ತ, ಮೆಕ್ಕೆಜೋಳ ಮತ್ತು ಕಬ್ಬಿಗೆ ಸೂಕ್ತ ವೈಜ್ಞಾನಿಕ ಬೆಲೆ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಏರಲು ಡಿ.4ರಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ, ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಜೆಪಿ ಮುಖಂಡ, ಮಾಜಿ ಸಚಿವ ರೇಣುಕಾಚಾರ್ಯ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೆಪಮಾತ್ರಕ್ಕೆ ಖರೀದಿ ಕೇಂದ್ರಗಳು ಉದ್ಘಾಟನೆಯಾಗಿವೆ. ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರೊಂದಿಗೆ ಬಹಳ ಹೋರಾಟ, ಪ್ರತಿಭಟನೆ ನಡೆದರೂ ಸರ್ಕಾರ ಸಕಾಲಕ್ಕೆ ರೈತರ ನೆರವಿಗೆ ಧಾವಿಸುತ್ತಿಲ್ಲ. ಹೊದ ವರ್ಷ ಕ್ವಿಂಟಲ್‌ ಭತ್ತಕ್ಕೆ ₨ 2,300 ಬೆಂಬಲ ಬೆಲೆ ದೊರೆತಿತ್ತು. ಈ ಬಾರಿ ಕೇವಲ ₨ 1,310 ಹಾಗೂ ₨ 290 ಸಹಾಯ ಧನ ಘೋಷಿಸ ಲಾಗಿದೆ. ಇದು ರೈತ ಬೆಳೆ ಬೆಳೆ ಯಲು ಮಾಡಿದ ಖರ್ಚಿಗೆ ಸಾಕಾ ಗುತ್ತಿಲ್ಲ ಎಂದು ಆರೋಪಿಸಿದರು.

ರಸಗೊಬ್ಬರ, ಕೀಟನಾಶಕ, ಡೀಸೆಲ್‌ ದರ ಹಾಗೂ ಭತ್ತ ಕಟಾವು ಮಾಡಲು ನೀಡುವ ಬಾಡಿಗೆ ಸೇರಿದಂತೆ ಕೃಷಿ ಚಟುವಟಿಕೆಗಳ ಪರಿಕರಗಳ ಬೆಲೆ ಅಧಿಕವಾಗಿದ್ದು, ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ತುಂಬಾ ಕಡಿಮೆ. ಭತ್ತಕ್ಕೆ ಕನಿಷ್ಠ ₨ 2,300. ಮೆಕ್ಕೆಜೋಳಕ್ಕೆ ₨ 1,800 ಹಾಗೂ ಕಬ್ಬು ಟನ್‌ಗೆ ₨ 3,500 ಬೆಂಬಲ ಬೆಲೆ ಘೋಷಿಸಬೇಕು. ಬಹುತೇಕ ಜಲಾಶಯಗಳು ತುಂಬಿವೆ. ಹೀಗಾಗಿ ರೈತರಿಗೆ ಕನಿಷ್ಠ 10 ಗಂಟೆ ವಿದ್ಯುತ್‌ ನೀಡಬೇಕು ಎಂದು ಆಗ್ರಹಿಸಿದರು.

ಸುವರ್ಣ ಸೌಧದ ಎದುರು ಆತ್ಮಹತ್ಯೆ ಮಾಡಿಕೊಂಡ ರೈತ ವಿಠ್ಠಲ ಅರಭಾವಿ ಕುಟುಂಬಕ್ಕೆ ಸರ್ಕಾರ ಘೋಷಣೆ ಮಾಡಿರುವ  ₨ 10 ಲಕ್ಷ ಪರಿಹಾರದ ಹಣ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ರೈತ ವಿರೋಧಿ ಸರ್ಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ, ರೈತ ವಿರೋಧಿ. ಒಂದು ವರ್ಗಕ್ಕೆ ‘ಅನ್ನಭಾಗ್ಯ’ ನೀಡಿ, ಇಡೀ ರೈತ ವರ್ಗದ ಭಾಗ್ಯವನ್ನೇ ಕಿತ್ತುಕೊಂಡಿದೆ. ಸರ್ಕಾರದಲ್ಲಿಯೇ ಒಗ್ಗಟ್ಟು ಇಲ್ಲ. ಹೀಗಾಗಿ ತಪ್ಪು ಯೋಜನೆಗಳ ನಿರ್ಣಯದಿಂದ ರೈತರ
ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಕೆಜೆಪಿ ಜಿಲ್ಲಾ ಘಟದ ಅಧ್ಯಕ್ಷ ಮಾಡಾಳ್‌ ವಿರುಪಾಕ್ಷಪ್ಪ  ದೂರಿದರು.

ಸಿದ್ದರಾಮಯ್ಯ ಮತ ಬ್ಯಾಂಕ್‌ ರಾಜಕಾರಣದ ಉದ್ದೇಶದಿಂದ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಇದು ಮೂಲ ಕಾಂಗ್ರೆಸ್‌ಗರಿಗೆ ಇಷ್ಟವಾಗುತ್ತಿಲ್ಲ. ಸಿದ್ದರಾಮಯ್ಯ ಸಮರ್ಪಕ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಕೆಜೆಪಿ ಮುಖಂಡ ಜಗದೀಶ್‌, ಸಿದ್ದಣ್ಣ, ವೀರಭದ್ರಪ್ಪ, ಬಸವರಾಜು, ಕಡ್ಲೆಬಾಳು ಬಸವರಾಜು ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

10ಕ್ಕೆ ಕೆಜೆಪಿ ಸಭೆ
ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಡಿ.10ರಂದು ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಎನ್‌ಡಿಎ ಭಾಗವಾಗುವ ಕುರಿತು ಈಗಾಗಲೇ ಬಿಜೆಪಿ ಹೈಕಮಾಂಡ್‌ಗೆ ನಮ್ಮ ನಿರ್ಣಯದ ಬಗ್ಗೆ ತಿಳಿಸಿದ್ದೇವೆ. ಯಡಿಯೂರಪ್ಪ ಅವರ ತೀರ್ಮಾನವೇ ಅಂತಿಮ.

– ಮಾಡಾಳ್‌ ವಿರುಪಾಕ್ಷಪ್ಪ, ಕೆಜೆಪಿ ಜಿಲ್ಲಾ ಘಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT