ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ

Last Updated 30 ಮಾರ್ಚ್ 2011, 19:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ ಒಂದರಿಂದ 13ರವರೆಗೆ ನಡೆಯುವ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 53 ಸಾವಿರ ಮಂದಿ ಹೆಚ್ಚಾಗಿದ್ದು, ಒಟ್ಟು 8,73,154 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಒಟ್ಟು 2,951 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಪೈಕಿ 445 ಕೇಂದ್ರಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಜಾಗೃತದಳಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 21,815 ಮಂದಿ ಖಾಸಗಿ ಹಾಗೂ 76,752 ಮಂದಿ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆಗೆ ಕುಳಿತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ವರ್ಷ ಹೊಸದಾಗಿ 55 ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ವದಂತಿಗಳಿಗೆ ಕಿವಿಗೊಡಬೇಡಿ: ತಾಲ್ಲೂಕು ಖಜಾನೆಗಳ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ ಆರಂಭಕ್ಕೂ ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಶ್ನೆಪತ್ರಿಕೆಗಳು ಬಹಿರಂಗವಾಗಲು ಸಾಧ್ಯವೇ ಇಲ್ಲ. ಒಂದು ವೇಳೆ ಯಾರಾದರೂ ಕಿಡಿಗೇಡಿಗಳು ವದಂತಿಗಳನ್ನು ಹಬ್ಬಿಸಿದರೆ ಅದಕ್ಕೆ ಕಿವಿಗೊಡಬಾರದು ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕ ಡಿ.ವೆಂಕಟೇಶಯ್ಯ ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೆ ಒಳಗಾಗಬಾರದು. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಮಂಡಳಿ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಹಣ ಮಾಡುವ ಉದ್ದೇಶದಿಂದ ಕೆಲವರು ವದಂತಿಗಳನ್ನು ಹಬ್ಬಿಸುವ ಸಾಧ್ಯತೆಗಳು ಇರುತ್ತವೆ. ಇಂತಹ ವದಂತಿಗಳಿಗೆ ಆಸ್ಪದ ನೀಡದೆ ಪರೀಕ್ಷೆ ಬರೆಯುವತ್ತ ಗಮನಹರಿಸಬೇಕು ಎಂದು ಅವರು ವಿನಂತಿಸಿದರು.

ಮೌಲ್ಯಮಾಪನ: ಏಪ್ರಿಲ್ 18ರಿಂದ 206 ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದ್ದು, 42 ಸಾವಿರ ಶಿಕ್ಷಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. 8-10 ದಿನಗಳಲ್ಲಿ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದ್ದು, ಮೇ ತಿಂಗಳ ಮೊದಲ  ಅಥವಾ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT