ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ವಿಜಯನಗರದ ಗತವೈಭವ

Last Updated 4 ಫೆಬ್ರುವರಿ 2011, 6:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಜಯನಗರ ಸಾಮ್ರಾಜ್ಯದ ಗತವೈಭವದ ಕುರಿತು ಪರಿಚಯ ಮಾಡುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ರಾಜ್ಯದ 20 ಜಿಲ್ಲೆಗಳಲ್ಲಿ ‘ವಿಜಯನಗರ ಸಾಮ್ರಾಜ್ಯ’ದ ಕುರಿತು ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ನಡೆಸುತ್ತಿದೆ. ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆದಿದ್ದು, ಚಿಕ್ಕಬಳ್ಳಾಪುರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ತಿಂಗಳ 5 ಮತ್ತು 6ರಂದು ಆಯೋಜಿಸಿದೆ. ಅಂದು ಸಂಜೆ 7.30 ರಿಂದ 8.30ರವರೆಗೆ ಕಾರ್ಯಕ್ರಮ ನಡೆಯಲಿದೆ.

ವಿಜಯನಗರ ಸಾಮ್ರಾಜ್ಯ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ವರ್ಷಾಚರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮವು ಗತಿಸಿದ ಇತಿಹಾಸ ಮತ್ತು ಸಾಮ್ರಾಜ್ಯದ ಕುರಿತು ಹಲವು ಉಪಯುಕ್ತ ಮಾಹಿತಿ ನೀಡಲಿದೆ. ಈ ಕಾರ್ಯಕ್ರಮ ವೀಕ್ಷಿಸಲು ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಈ ಧ್ವನಿ-ಬೆಳಕಿನ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದ ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾದ ವಿದ್ಯುತ್ ದೀಪಗಳು, ಆಗಾಗ್ಗೆ ಕೇಳಿ ಬರುವ ಹಿಮ್ಮೇಳ ಧ್ವನಿಗಳು, ಐತಿಹಾಸಿಕ ಸ್ಮಾರಕಗಳು, ಘಟನೆಗಳ ವಿವರಣೆ ಮುಂತಾದವು ಕಾರ್ಯಕ್ರಮಕ್ಕೆ ಮೆರುಗು ತರಲಿವೆ. ಇದು ಜಿಲ್ಲೆಯ ವಿಶಿಷ್ಟ ಕಾರ್ಯಕ್ರಮಗಳಲ್ಲಿ ಒಂದಾಗಲಿದೆ ಎಂದು ಅವರು ವಿವರಿಸಿದರು.

‘ಇದು ಸಂಚಾರಿ ಧ್ವನಿ-ಬೆಳಕಿನ ಕಾರ್ಯಕ್ರಮವಾಗಿದ್ದು, ಐತಿಹಾಸಿಕ ಸ್ಮಾರಕಗಳ ಸಮೂಹವನ್ನು ಒಂದೆಡೆ ಕೃತಕವಾಗಿ ನಿರ್ಮಿಸುವುದು ದೇಶದಲ್ಲೇ ಪ್ರಥಮ ಪ್ರಯತ್ನವಾಗಿದೆ. ಕೃತಕ ಸ್ಮಾರಕಗಳು ಹಂಪಿಯ ಚಿತ್ರಣ ಮತ್ತು ವಾತಾವರಣವನ್ನು ಸೃಷ್ಟಿಸಲಿದ್ದು, ವಿಶಿಷ್ಟ ಮಾದರಿಯ ನೈಜ ಪ್ರದರ್ಶನ ಇದಾಗಲಿದೆ.

ಕೃಷ್ಣದೇವರಾಯರ ಜೀವನ, ಕಾಲ ಮತ್ತು ಅಧಿಕಾರದಲ್ಲಿನ ಘಟನೆಗಳ ಬಗ್ಗೆ ಈ ಕಾರ್ಯಕ್ರಮವು ಸಂಪೂರ್ಣ ಪರಿಚಯ ನೀಡಲಿದೆ. ವಿಜಯನಗರ ಸಾಮ್ರಾಜ್ಯದ ಮೇಲೆ ನಡೆದ ಆಕ್ರಮಣಗಳು, ಆಡಳಿತ ಕೌಶಲ್ಯತೆ ಮತ್ತು ಪ್ರಮುಖ ಸಾಧನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆಗಿನ ಕಾಲದ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ಪರಿಚಯದ ಜೊತೆಗೆ ಸಾಮ್ರಾಜ್ಯಕ್ಕೆ  ಭೇಟಿ ನೀಡಿದ ವಿದೇಶಿಯರು-ಮಹನೀಯರ ಬಗ್ಗೆಯೂ ಕಿರು ಪರಿಚಯ ದೊರೆಯಲಿದೆ ಎಂದು ಅವರು ತಿಳಿಸಿದರು.

ಹಂಪಿಯಲ್ಲಿನ ಪ್ರಮುಖ ಸ್ಮಾರಕಗಳನ್ನು ಕೃತಕವಾಗಿ ತಯಾರಿಸಲಾಗಿದ್ದು, ಅವುಗಳಲ್ಲಿ ಪ್ರಮುಖವಾದವುಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು. ವಿಠಲನ ದೇವಸ್ಥಾನ, ಕಲ್ಲಿನ ರಥ, ಕಮಲ ಮಹಲ್, ಉಗ್ರನರಸಿಂಹ, ಕಡಲೇಕಾಳು ಗಣೇಶ, ಸಾಸಿವೆಕಾಳು ಗಣೇಶ, ವಿರೂಪಾಕ್ಷ ದೇವಾಲಯ, ಹಂಪಿ ಬಜಾರ್, ಆನೆಗಳ ಲಾಯ, ಅಂಜನಾದ್ರಿ ಬೆಟ್ಟ, ಅಕ್ಕತಂಗಿ ಬಂಡೆ, ತುಂಗಭದ್ರೆ ನದಿ ಮುಂತಾದವುಗಳನ್ನು ಕೃತಕವಾಗಿ ತಯಾರಿಸಲಾಗಿದ್ದು, ಜನರಿಗೆ ಮಾಹಿತಿಯ ಜೊತೆಗೆ ಮನರಂಜನೆಯೂ ಸಿಗಲಿದೆ ಎಂದು ಅವರು ತಿಳಿಸಿದರು. ಚಲನಚಿತ್ರ ನಟರಾದ ಮುರಳಿ, ಕೆ.ಎಸ್.ರವೀಂದ್ರನಾಥ, ಅನುಪ್ರಭಾಕರ, ಸುಧಾರಾಣಿ, ಚಂಪಾ ಶೆಟ್ಟಿ, ಟಿ.ಎಸ್.ನಾಗಾಭರಣ, ಶರತ್ ಲೋಹಿತಾಶ್ವ, ಬಿ.ವಿ.ರಾಜಾರಾಂ, ಕಲಾಗಂಗೋತ್ರಿ ಕಟ್ಟಿ ಅವರ ಧ್ವನಿಯನ್ನು ಪ್ರದರ್ಶನಕ್ಕೆ ಬಳಸಿಕೊಳ್ಳಲಾಗಿದೆ. ಹಿನ್ನೆಲೆಗಾಯಕರಾದ ರಾಜೇಶಕೃಷ್ಣ, ಹೇಮಂತ್‌ಕುಮಾರ್, ಚೇತನ್ ಮತ್ತು ನಂದಿತಾ ಅವರು ಗೀತೆಗಳನ್ನು ಹಾಡಿದ್ದಾರೆ. ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬರಲಿದೆ ಎಂದು ಡಾ. ಮಂಜುಳಾ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT