ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ‘ಡಾನ್ಸ್‌ ಜಾತ್ರೆ’

Last Updated 19 ನವೆಂಬರ್ 2015, 19:38 IST
ಅಕ್ಷರ ಗಾತ್ರ

ಶಾಂಭವಿ ನೃತ್ಯ ಶಾಲೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ‘ಡಾನ್ಸ್‌ ಜಾತ್ರೆ 2015’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದೇ ಶನಿವಾರ ಮತ್ತು ಭಾನುವಾರ (ನವೆಂಬರ್‌ 21 ಮತ್ತು 22) ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಈ ಜಾತ್ರೆ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಸ್ಕೃತಿ ಸಚಿವಾಲಯ, ನವ ದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ‘ಡಾನ್ಸ್‌ ಜಾತ್ರೆ’ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ನಡೆಯುತ್ತದೆ. ಇದರಲ್ಲಿ ನೃತ್ಯ, ಸಂಗೀತ, ಸ್ಪರ್ಧೆಗಳು, ಡಾನ್ಸ್‌ಗೇಮ್ಸ್‌, ನೃತ್ಯ ಕಾರ್ಯಾಗಾರ, ಹಿರಿಯ ನೃತ್ಯಗಾರರಿಂದ ನೃತ್ಯ ಪ್ರಾತ್ಯಕ್ಷಿಕೆಗಳು ಹಾಗೂ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಳ್ಳಲಿವೆ.

ಬೆಳಗಿನಿಂದ ಸಂಜೆವರೆಗೆ ಮಕ್ಕಳಿಗೆ ಮತ್ತು ಯುವ ಕಲಾವಿದರಿಗೆ ಹಲವಾರು ಸ್ಪರ್ಧೆಗಳು ಮತ್ತು ಕಲೆಗೆ ಸಂಬಂಧಪಟ್ಟ ಇತರೆ ಚಟುವಟಿಕೆಗಳು ನಡೆಯಲಿವೆ. ದೇಶ ಮತ್ತು ವಿದೇಶದ ಕಲಾ ತಂಡಗಳಿಂದ ವಿವಿಧ ನೃತ್ಯ ಪ್ರಕಾರಗಳು ನಿರಂತರವಾಗಿ ನಡೆಯುತ್ತಿರುತ್ತವೆ.

‘ನೃತ್ಯ, ಸಂಗೀತ, ಮತ್ತು ರಂಗಭೂಮಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಲಾ ಶಾಲೆಗಳು ಹೊರ ತಂದಿರುವ ಪುಸ್ತಗಳು, ಸೀಡಿ, ಡಿವಿಡಿ, ಆಭರಣಗಳು ಹಾಗೂ ವಸ್ತ್ರಗಳ ಮಾರಾಟ ಮತ್ತು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ತಮ್ಮ ಶಾಲೆ ಹಾಗೂ ಪರಂಪರೆಯ ಬಗ್ಗೆ ಮಾಹಿತಿ ನೀಡಲು ಮಳಿಗೆಗಳನ್ನು ಹಾಕಲಾಗುತ್ತದೆ. ಅದಕ್ಕೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದೆ’ ಎಂದು ಶಾಂಭವಿ ನೃತ್ಯ ಶಾಲೆಯ ವೈಜಯಂತಿ ಕಾಶಿ ತಿಳಿಸಿದ್ದಾರೆ.

2008ರಲ್ಲಿ ಮೊದಲ ಬಾರಿಗೆ ಈ ‘ಡಾನ್ಸ್‌ ಜಾತ್ರೆ’ಯನ್ನು ಚಿತ್ರಕಲಾ ಪರಿಷತ್ತಿನಲ್ಲೇ ಪ್ರಾರಂಭಿಸಲಾಗಿತ್ತು. ಆಗಿನಿಂದ ಇಲ್ಲಿಯವರೆಗೆ ಪ್ರತಿವರ್ಷ ಇದು ನಡೆಯುತ್ತಲೇ ಇದೆ.  

ಕಾರ್ಯಾಗಾರಗಳ ವಿವರ
ಶನಿವಾರ ಬೆಳಿಗ್ಗೆ 10.30ಕ್ಕೆ ಪುಣೆಯ ಶಮಾ ಭಾಟೆ ಅವರಿಂದ ‘ಕಥಕ್‌’ ಕುರಿತು ಕಾರ್ಯಾಗಾರ ನಡೆಯಲಿದೆ. ನಂತರ 11.30ಕ್ಕೆ ಬೆಂಗಳೂರಿನ ಉಷಾ ದಾತರ್‌ ಅವರಿಂದ ‘ಮೋಹಿನಿಆಟ್ಟಂ’, 12.30ಕ್ಕೆ ನಗರದ ಲೋಕೇಶ್‌ ನಾಯ್ಕ್‌ ಅವರಿಂದ ‘ಇನ್‌ಸೈಟ್‌ ಇನ್‌ಟು ಡಾನ್ಸ್ ಫಿಟ್‌ನೆಸ್‌’, ಮಧ್ಯಾಹ್ನ 2.30ಕ್ಕೆ ಸೋಮಶೇಖರ್‌ ಜೋಯಿಸ್‌ ಅವರಿಂದ ‘ಫನ್‌ ವಿಥ್‌ ಕೊನ್ನಕೋಲ್‌’, 3.30ಕ್ಕೆ ಅಮೆರಿಕದ ರಮ್ಯಾ ರಾಮನಾರಾಯಣ್‌ ಅವರಿಂದ ‘ಬಿಯಾಂಡ್ ದ ಫ್ರಂಟೀಯರ್ಸ್‌ ಆಫ್‌ ಟ್ರೆಡಿಷನ್‌’, ಸಂಜೆ 4.30ಕ್ಕೆ ಮಧು ನಾಗರಾಜ್‌  ಅವರಿಂದ ‘ಸಮಕಾಲೀನ ಕಾರ್ಯಾಗಾರ’ ನಡೆಯಲಿದೆ.

ಸಂಜೆ 6.30ಕ್ಕೆ ನಗರದ ತಾಂಡವ ತಂಡದಿಂದ ಭರತನಾಟ್ಯ, 7.15ಕ್ಕೆ ವೈಜಯಂತಿ ಕಾಶಿ ಹಾಗೂ ತಂಡದವರಿಂದ ಕೂಚಿಪುಡಿ, ರಾತ್ರಿ 8ಕ್ಕೆ ಶಮಾ ಭಾಟೆ ಹಾಗೂ ತಂಡದವರಿಂದ ಕಥಕ್‌ ಪ್ರದರ್ಶನ. ಭಾನುವಾರ ಬೆಳಿಗ್ಗೆ 10.30ಕ್ಕೆ ಅಮೆರಿಕದ ವಿದ್ಯಾ ಸುಬ್ರಹ್ಮಣಿಯಂ ಅವರಿಂದ ‘ನೃತ್ಯ–ರಂಗಭೂಮಿ ನಂಟು’, 11.30ಕ್ಕೆ ತ್ರಿಶೂರಿನ ಕುಟ್ಟಿಯಟ್ಟಂ ಕೇಂದ್ರದಿಂದ ‘ಕುಟ್ಟಿಯಟ್ಟಂ’, ಮಧ್ಯಾಹ್ನ 12.30ಕ್ಕೆ ಮುಂಬೈನ ವೈಭವ್‌ ಅರೆಕರ್‌ ಅವರಿಂದ ‘ಭರತನಾಟ್ಯ’, 2.30ಕ್ಕೆ ನಗರದ ರಾಮಕೃಷ್ಣ ಅವರಿಂದ ‘ಆರ್ಟ್ ಆಫ್ ಡಾನ್ಸ್‌ ಮೇಕಪ್‌ ಅಂಡ್‌ ಮೋರ್‌’, 3.30ಕ್ಕೆ ಇಂಪಾಲದ ಜಗಿ ಮಾರುಪ್‌ ಅವರಿಂದ ‘ಮಣಿಪುರಿ’ ಹಾಗೂ ನಗರದ ರೋಹಿತ್‌ ಸೌದ್‌ ಅವರಿಂದ ‘ಜೂಂಬಾ’ ಕುರಿತು ಕಾರ್ಯಾಗಾರ ನಡೆಯಲಿದೆ.

ಸಂಜೆ 6.30ಕ್ಕೆ  ಕುಟ್ಟಿಯಟ್ಟಂ ಕೇಂದ್ರದ ವತಿಯಿಂದ ‘ಕುಟ್ಟಿಯಟ್ಟಂ’, 7.15ಕ್ಕೆ ವೈಭವ್‌ ಅರೆಕರ್‌ ಮತ್ತು ತಂಡದವರಿಂದ ‘ಭರತನಾಟ್ಯ’ ಹಾಗೂ ರಾತ್ರಿ 8ಕ್ಕೆ ಜಗಿ ಮಾರುಪ್ ಮತ್ತು ತಂಡದವರಿಂದ ‘ಮಣಿಪುರಿ’ ನೃತ್ಯ ಪ್ರದರ್ಶನ.  ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ.  
*
ಶನಿವಾರ ಸಂಜೆ 6ಕ್ಕೆ ಜಾತ್ರೆಯ ಉದ್ಘಾಟನೆ ನಡೆಯಲಿದ್ದು, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸತ್ಯವತಿ ಹಾಗೂ ಕೇರಳ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಸೂರ್ಯ ಕೃಷ್ಣಮೂರ್ತಿ ಭಾಗವಹಿಸಲಿದ್ದಾರೆ. ಪ್ರತಿದಿನ ಬೆಳಿಗ್ಗೆ 10.30 ರಿಂದ ಸಂಜೆ 5.30 ರವರೆಗೆ ಕಾರ್ಯಾಗಾರಗಳು ಹಾಗೂ ಸಂಜೆ  6.30 ರಿಂದ ರಾತ್ರಿ 8.30 ರವರೆಗೆ ನೃತ್ಯ ಪ್ರದರ್ಶನಗಳು ನಡೆಯಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT