ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವಿಕನಿಗೊಂದು ಆತ್ಮೀಯ ಕೋರಿಕೆ

Last Updated 20 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಇನ್ನೂ ಮುಂದೆ ಸತತ 41 ದಿನಗಳ ಕಾಲ  ಕ್ರೀಡಾಭಿಮಾನಿಗಳಿಗೆ ಭಾರತ ತಂಡದ ಆಟಗಾರರದ್ದೇ ಜಪ. ಕ್ರಿಕೆಟ್ ಅಭಿಮಾನಿಗಳಿಗೆ ನಿದ್ರೆ ಬರಲೊಲ್ಲದು. ಬೇರೆ ಯಾವ ಕೆಲಸ ಮಾಡಲು ಮನಸ್ಸೇ ಇಲ್ಲದಂತಾಗಿದೆ. ಚಾನೆಲ್ಲು ತಿರುವಿದರೆ ಟಿವಿಯಲ್ಲಿ ಭಿನ್ನ ಭಿನ್ನ ಬಗೆಯ ಸಾಕಷ್ಟು ವರ್ಣರಂಜಿತ ಕಾರ್ಯಕ್ರಮಗಳು ಮೂಡಿ ಬರುತ್ತಿವೆ. ಆದರೂ ಅವರಿಗೆ ಭಾರತ ತಂಡದ ತ್ತಲೇ ಚಿತ್ತ. ಕುಳಿತರು, ನಿಂತರೂ ಆಟದ್ದೇ ಧ್ಯಾನ.

ಭಾರತ ಟ್ರೋಫಿಯನ್ನು ಎತ್ತಿ ಹಿಡಿಯಬೇಕು ಎನ್ನುವ ಕನಸು ಅವರದ್ದು. ಅದಕ್ಕಾಗಿ ನಿದ್ದೆಯನ್ನು ಕೂಡಾ ತ್ಯಾಗ ಮಾಡುತ್ತಿದ್ದಾರೆ. ಈ ನಲವತ್ತೊಂದು ದಿನಗಳಲ್ಲಿ ಭಾರತ ಅದ್ಭುತ ಆಟವಾಡಿದರೆ 28 ವರ್ಷಗಳ ಬಳಿಕ ನಮ್ಮ ದೇಶಕ್ಕೊಂದು ವಿಶ್ವಕಪ್ ಒಲಿದು ಬರಲಿದೆ. ಒಲಿದು ಬರಬೇಕು ಎಂದು ಕ್ರೀಡಾಭಿಮಾನಿಗಳು ದೇವಸ್ಥಾನ ಗಳಲ್ಲಿ ಪೂಜೆ, ಹೋಮ ಮಾಡಿಸುತ್ತಿದ್ದಾರೆ.

ಭಾರತದ ಸಾರಥ್ಯವನ್ನು ಹೊತ್ತಿರುವ ‘ದೋನಿ’ ತಮ್ಮ ಯಾನವನ್ನು ಯಶಸ್ಸಿಯಾಗಿ ಮುಗಿಸಿ ದೇಶಕ್ಕೆ ವಿಶ್ವಕಪ್ ತಂದು ಕೊಡುತ್ತಾರೆ.1983ರಲ್ಲಿ ಲಾರ್ಡ್ಸ್ ಅಂಗಳದಲ್ಲಿ ಕಪಿಲ್‌ದೇವ್ ಕಪ್ ಎತ್ತಿ ಹಿಡಿದ ಕ್ಷಣವನ್ನು ಈ ಸಲ ದೋನಿ ಎತ್ತಿ ಹಿಡಿಯುವುದನ್ನು ಕಣ್ಣಾರೆ ನೋಡಬೇಕು ಎನ್ನುವ ಕಾತರದಲ್ಲಿದ್ದಾರೆ ಕ್ರಿಕೆಟ್ ಅಭಿಮಾನಿಗಳು. ‘ಮಹಿ’ ಪಡೆ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವುದೇ ಎಂಬುದನ್ನು ತಿಳಿಯಲು ನಿತ್ಯದ ಹಲವು ಕೆಲಸಗಳನ್ನು ಬಿಟ್ಟು ಕ್ರೀಡಾಪ್ರೇಮಿಗಳು ಭಾರತ ತಂಡದ ಯಶಸ್ಸಿಗೆ ಹರಕೆ ಹೋರುತ್ತಿದ್ದಾರೆ.

‘ಭಾರತಕ್ಕೆ ಈ ಸಲದ ವಿಶ್ವಕಪ್ ಗೆಲ್ಲುವ ಸಾಮ ರ್ಥ್ಯವಿದೆ. ಭಾರತ ಈಗ ಬಲಿಷ್ಠ ತಂಡವಾಗಿದೆ. ಕ್ಷೇತ್ರ ರಕ್ಷಣೆಯಲ್ಲಿ ಹೆಚ್ಚು ಸುಧಾರಣೆ ಕಂಡಿದೆ. ಉಪಖಂಡದಲ್ಲಿಯೇ ಟೂರ್ನಿ ನಡೆಯುವುದರಿಂದ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವೇ ಭಾರತ. ಸಚಿನ್‌ಗೆ ಬಹುತೇಕ ಇದು ಕೊನೆಯ ವಿಶ್ವಕಪ್ ಆದ್ದರಿಂದ ದೋನಿ ಪಡೆ ಟ್ರೋಫಿ ಗೆಲ್ಲಬೇಕು. ಸಚಿನ್‌ಗೆ ವಿಶ್ವಕಪ್ ಗೆಲ್ಲಿಸಿಕೊಡುವ ಸಾಮರ್ಥ್ಯ ವಿದೆ’ ಹೀಗೆ ಕ್ರಿಕೆಟ್ ಪಂಡಿತರ ಹೇಳಿಕೆಗಳನ್ನು ಪತ್ರಿಕೆಯಲ್ಲಿ ಓದಿ ಕ್ರೀಡಾಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

‘ನಮಗೆ ಜಾತಿಯ ಹಂಗಿಲ್ಲ. ಸಮಯದ ಪರಿವಿಲ್ಲ. ಯಾವ ದೇವರಿಗೂ ಕೈ ಮುಗಿಯಲು ಹಿಂದೆ ಮುಂದೆ ನೋಡುವುದಿಲ್ಲ. ನಮ್ಮ ಪ್ರಾರ್ಥನೆಯೊಂದು ಈಡೇರಲು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ದೇವಸ್ಥಾನ ಸುತ್ತುತ್ತಿದ್ದೇವೆ. ಹೋಮ, ಹವನ, ಯಜ್ಞ ಕುಂಡಗಳ ಮೊರೆ ಹೋಗಿದ್ದೇವೆ. ದೇಶದ ಯಾವ ಮೂಲೆಯಲ್ಲಿಯೂ ದೇವರಿಗೆ ಪ್ರಾರ್ಥನೆಯೊಂದಿದ್ದರೆ ಅದು ‘ಭಾರತ ವಿಶ್ವಕಪ್ ಗೆಲ್ಲಲಿ’ ಎನ್ನುವುದು ಮಾತ್ರ’ ಎನ್ನುತ್ತಾರೆ ಕ್ರಿಕೆಟ್ ಪ್ರೇಮಿಯೊಬ್ಬರು.

ಭಾರತ ತಂಡದ ಯಶಸ್ಸಿಗೆ ದೇಶದ ತುಂಬೆಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಇನ್ನೂ ಕೆಲವರು ಕ್ರಿಕೆಟ್ ಪ್ರೇಮದ ಜ್ವರ ಹಚ್ಚಿಕೊಂಡು ರಾಷ್ಟ್ರ ಧ್ವಜದ ಬಣ್ಣವನ್ನು ಮುಖದ ಮೇಲೆ ಹಚ್ಚಿಸಿಕೊಂಡು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಕೇಶರಾಶಿಯಲ್ಲಿ ಟ್ರೋಫಿಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.

‘ಬದುಕಿನಲ್ಲಿ ವೈಯಕ್ತಿಕ ಕಷ್ಟಗಳಿದ್ದರೂ ಭಾರತ ತಂಡದ ಮೇಲಿನ ಪ್ರೀತಿಗೆ ಕೊರತೆಯಿಲ್ಲ. ನಮ್ಮ ಅಭಿಮಾನಕ್ಕೆ ಎಲ್ಲೆಯಿಲ್ಲ. ಏಕೆಂದರೆ ದೋನಿ ಪಡೆ ಟ್ರೋಫಿ ಗೆಲ್ಲುತ್ತದೆ ಎನ್ನುವ ವಿಶ್ವಾಸ ನಮ್ಮದು. ದೇಶದ ಮೂಲೆ ಮೂಲೆಗಳಲ್ಲಿ ನಿಮಗೋಸ್ಕರ ನಡೆಯುತ್ತಿರುವ ಪ್ರಾರ್ಥನೆ, ಪೂಜೆಗೆ ಫಲ ದೊರೆಯುತ್ತದೆ ಎನ್ನುವ ವಿಶ್ವಾಸ ನಮ್ಮದು’ ಎನ್ನುತ್ತಾರೆ ಕ್ರಿಕೆಟ್ ಪ್ರೇಮಿಗಳು. ಮುಂದಿನ 41 ದಿನಗಳ ಕಾಲ ನಡೆಯುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ದೇಶದ ಎಲ್ಲೆಡೆ ಅಭಿಮಾನಿಗಳಿಂದ ಪ್ರೀತಿಯ ಕೋರಿಕೆಗಳು ಬರುತ್ತಿವೆ.

ಭಾರತಕ್ಕೆ ವಿಶ್ವಕಪ್ ಒಲಿದು ಬರಲಿ ಎನ್ನುವುದು ಕ್ರೀಡಾ ಪ್ರೇಮಿಗಳ ಹಾರೈಕೆ ಹಾಗೂ ಕೋರಿಕೆ. ಭಾರತದ ಯಶಸ್ಸಿಗೆ ಶುಭಕೋರುತ್ತಾ ಅಭಿಮಾನ ವ್ಯಕ್ತಪಡಿಸುವ ದೇಶದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಕನಸು ನನಸಾಗುವುದೇ? ಕಾದು ನೋಡಬೇಕಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT