ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೇ ನಿಷ್ಠಾವಂತ ಕಾರ್ಯಕರ್ತರು

Last Updated 17 ಫೆಬ್ರುವರಿ 2012, 10:55 IST
ಅಕ್ಷರ ಗಾತ್ರ

ಯಾದಗಿರಿ: ಪಕ್ಷವು ಕಾಂಗ್ರೆಸ್‌ಗೆ ನೀಡಿದ ಮಾತಿನಂತೆ ನಡೆದುಕೊಂಡಿದ್ದೇವೆ. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರರೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು, ನಾವೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ಜೆಡಿಎಸ್‌ನ ನಗರಸಭೆಯ 14 ಸದಸ್ಯರು ಹೇಳಿದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರವಿ ಬಾಪುರೆ, ರಾಜಶೇಖರ ಬಾನಾ, ನಗರಸಭೆ ಉಪಾಧ್ಯಕ್ಷ ನರಸಿಂಗ ಲಿಂಗೇರಿ ಸೇರಿದಂತೆ ಜೆಡಿಎಸ್‌ನ 14 ನಗರಸಭೆ ಸದಸ್ಯರು, ನಾಗರತ್ನಾ ಅನಪೂರ ಅವರ ಬಳಿ ಹಣವನ್ನು ಪಡೆದು ಅಧ್ಯಕ್ಷರನ್ನಾಗಿ ಮಾಡಿದ ಜೆಡಿಎಸ್ ಹಿರಿಯ ನಾಯಕರು, ನಮಗೆ ಶೋಕಾಸ್ ನೋಟಿಸ್ ನೀಡಲು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ದೂರಿದರು.

ಈ ಹಿಂದೆ ಎ.ಸಿ. ಕಾಡ್ಲೂರ ಅವರು ಜೆಡಿಎಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಸದ್ಯಕ್ಕೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ನಾಗನಗೌಡ ಕಂದಕೂರರೇ, ಪಕ್ಷೇತರ ಅಭ್ಯರ್ಥಿ ಡಾ. ವೀರಬಸವಂತರೆಡ್ಡಿ ಮುದ್ನಾಳರಿಗೆ ಬೆಂಬಲ ಸೂಚಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. 15 ತಿಂಗಳ ನಂತರವೂ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಇರುವುದರಿಂದ ಅನಿವಾರ್ಯವಾಗಿ ನಾಗರತ್ನಾ ಅನಪೂರರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಬೇಕಾಯಿತು ಎಂದು ತಿಳಿಸಿದರು.

ಎರಡನೇ ಅವಧಿಯ 30 ತಿಂಗಳಲ್ಲಿ ತಲಾ 15 ತಿಂಗಳು ಇಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. 15 ತಿಂಗಳ ನಂತರ ನಾಗರತ್ನಾ ಅನಪೂರ ರಾಜೀನಾಮೆ ನೀಡಿ, ಮತ್ತೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಾಗಿತ್ತು. ಆದರೆ ನಾಗರತ್ನಾ ಅನಪೂರ ಅವರ ರಾಜೀನಾಮೆ ಪಡೆಯದೇ, ಅವರನ್ನೇ ಮುಂದುವರಿಸುವ ಪ್ರಯತ್ನವನ್ನು ಜೆಡಿಎಸ್ ನಾಯಕರು ಮಾಡಿದರು.
 

ಜಿಲ್ಲಾ ಘಟಕದ ಅಧ್ಯಕ್ಷರ ಈ ವರ್ತನೆಯ ವಿರುದ್ಧ ಧ್ವನಿ ಎತ್ತಿ, ನಾಗರತ್ನಾ ಅನಪೂರ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದೇವೆ ಎಂದು ಹೇಳಿದರು.

ಅಭ್ಯರ್ಥಿಯನ್ನು ಸೂಚಿಸಲಿಲ್ಲ: ಫೆ.1 ರಂದು ನಡೆದ ನಗರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು, ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಯನ್ನು ಸೂಚಿಸಲಿಲ್ಲ. ಹಾಗಾಗಿ ಜೆಡಿಎಸ್‌ನಿಂದ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿಲ್ಲ. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಲಲಿತಾ ಅನಪೂರ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಪಕ್ಷದ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಸೂಚಿಸದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿಲ್ಲ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರಿಂದ ಅನಿವಾರ್ಯವಾಗಿ ಜೆಡಿಎಸ್‌ನ ನರಸಿಂಗ ಲಿಂಗೇರಿ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.

ನಾಗರತ್ನಾ ಅನಪೂರ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ 21 ಸದಸ್ಯರ ಅವಶ್ಯಕತೆ ಇತ್ತು. ಇದಕ್ಕಾಗಿ ಕಾಂಗ್ರೆಸ್‌ನ 9 ಸದಸ್ಯರ ಸಹಕಾರ ಕೋರಿದ್ದೇವೆ. ನಂತರ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ಹಾಗೂ ಜೆಡಿಎಸ್‌ಗೆ ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆಯೇ ಈಗ ಕಾಂಗ್ರೆಸ್‌ನವರು ಅಧ್ಯಕ್ಷರಾಗಿದ್ದು, ಜೆಡಿಎಸ್‌ನವರು ಉಪಾಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.

ಮಾತಿನಂತೆ ನಡೆದುಕೊಂಡಿದ್ದೇವೆ: ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಈ ಹಿಂದೆ ವರಿಷ್ಠರು ಮಾಡಿದ ತಪ್ಪನ್ನು ತಿದ್ದಿಕೊಳ್ಳಲಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಮೂಲಕ ಪಕ್ಷದ ತತ್ವ-ಸಿದ್ಧಾಂತಗಳನ್ನು ಎತ್ತಿ ಹಿಡಿದಿದ್ದೇವೆ. ಹಾಗಾಗಿ ನಾವೇ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರು ಎಂದು ಹೇಳಿದರು.

ನಗರಸಭೆಯ ಮೊದಲ 30 ತಿಂಗಳ ಅವಧಿಯಲ್ಲಿ ಜೆಡಿಎಸ್‌ನ ಕೆಲ ಸದಸ್ಯರು ಬೇರೆ ಪಕ್ಷಕ್ಕೆ ಹೋಗಲಿದ್ದಾರೆ ಎಂಬ ವದಂತಿ ಆರಂಭವಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಜೆಡಿಎಸ್‌ಗೆ ಬೆಂಬಲ ನೀಡಿದ್ದರು. ಆ ಸಂದರ್ಭದಲ್ಲಿ ಎರಡನೇ ಅವಧಿಯ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಲು ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ಮಧ್ಯೆ ಒಪ್ಪಂದವಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಒಪ್ಪಂದವನ್ನು ಮುರಿದು ಹಾಕಲಾಯಿತು.
 
ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಹಾಗೂ ಜೆಡಿಎಸ್ ಮುಖಂಡ ನಾಗನಗೌಡ ಕಂದಕೂರರು ಸೇರಿ, ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ಸಿಗದಂತೆ ಮಾಡಿದರು. ಇದೀಗ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಆಗ ಮಾಡಿದ ತಪ್ಪನ್ನು ಸರಿಪಡಿಸಲಾಗಿದೆ ಎಂದು ಬಣ್ಣಿಸಿದರು.

ಎಚ್‌ಡಿಕೆ ಭೇಟಿ: ಜೆಡಿಎಸ್‌ನ 14 ಸದಸ್ಯರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಎಲ್ಲ ವಿವರಣೆ ನೀಡಿದ್ದೇವೆ ಎಂದು ತಿಳಿಸಿದರು.
ತಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಪಕ್ಷದ ಜಿಲ್ಲಾ ಘಟಕದ ಮುಖಂಡರ ವರ್ತನೆಯ ವಿರುದ್ಧ ಧ್ವನಿ ಎತ್ತಿದ್ದೇವೆ. ಮಾತಿನಂತೆ ನಡೆದುಕೊಳ್ಳದೇ ಇರುವುದನ್ನು ರಾಜ್ಯ ಮುಖಂಡರಿಗೆ ವಿವರಿಸಿದ್ದೇವೆ ಎಂದು ತಿಳಿಸಿದರು.

ಮಹ್ಮದ್ ಇಸಾಕ್, ಫಯಾಜ್ ಅಹ್ಮದ್, ಮಲ್ಲಯ್ಯ ಗೊಂದೆನೂರ, ಝಕೀಯೋದ್ದೀನ್, ಇನಾಯತುಲ್ ರೆಹಮಾನ್, ಯಂಕಪ್ಪ ಹಾರರಗೇರಿ, ಶರಮೊದ್ದೀನ್ ಸಾಹೇಬ, ಗರಮೋದ್ದೀನ್ ಶೇರು, ಬಸವರಾಜ ಅರುಣಿ, ಆನಂದ ಮಿಲ್ಟ್ರಿ, ಚಂದ್ರಶೇಖರ ಸೌದ್ರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT