ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೇನೂ ಬಳೆ ತೊಟ್ಟಿಲ್ಲ

Last Updated 15 ಅಕ್ಟೋಬರ್ 2012, 4:45 IST
ಅಕ್ಷರ ಗಾತ್ರ

ಮಾಗಡಿ: ಕುಂಬಳಕಾಯಿ ಕಳ್ಳ ಎಂದರೆ ಬಾಲಕೃಷ್ಣ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿರುವ ಕೆಪಿಸಿಸಿ ಸದಸ್ಯ ಎ.ಮಂಜು, ಸುಮ್ಮನೇ ನಮ್ಮನ್ನು ಕೆಣಕಬೇಡಿ. ನಾವೇನೂ ಬಳೆ ತೊಟ್ಟಿಲ್ಲ ಎಂದು ಎಚ್ಚರಿಸಿದ್ದಾರೆ.

ನಾರಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭಾನುವಾರ ನಡೆದ `ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲಕೃಷ್ಣ ವಿರುದ್ಧ ತೀವ್ರ ಹರಿಹಾಯ್ದರು.

ಬಾಗೇಗೌಡರಿಗೆ ವಿಧಾನ ಪರಿಷತ್ ಸೀಟು ಸಿಕ್ಕದಂತೆ ಮಾಡಿದವರು ನೀವು. ಬಿಡದಿ ಬ್ಯಾಟಪ್ಪನೊಂದಿಗೆ ನೆಲಮಂಗಲದ ಕೃಷ್ಣಪ್ಪನಿಗೆ ಎಂ.ಎಲ್.ಸಿ ಸೀಟು ಕೊಡಿಸಲು ಪಡೆದ ಕೋಟಿ ರೂಗಳು ಎಷ್ಟೆಂದು ನಮಗೆ ಅರಿವಿದೆ.  ಬೆಂಗಳೂರಿನ ಶೇಷಾದ್ರಿಪುರಂ, ರಾಜಾಜಿನಗರ, ನೆಲಮಂಗಲ, ಕನಕಪುರಗಳಲ್ಲಿಯೂ ನೀವು ಗಳಿಸಿರುವ ಚರ ಮತ್ತು ಸ್ಥಿರ ಆಸ್ತಿಯ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಬಹಿರಂಗ ಪಡಿಸುತ್ತೇನೆ ಎಂದರು.

ಪ್ರಾಣ ಕೊಟ್ಟಾದರೂ ಸರಿಯೇ ಕಾಂಗ್ರೆಸ್ ಕಾರ್ಯಕರ್ತರನ್ನು ರಕ್ಷಣೆ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಹಾಪ್‌ಕಾಮ್ಸ ಮಾಜಿ ನಿರ್ದೇಶಕ ಮಂಜೇಶ್ ಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಜೆಡಿಎಸ್ ಅಟ್ಟಹಾಸವನ್ನು ಮಟ್ಟಹಾಕಲು ಕಾಂಗ್ರೆಸ್ ಯುವಕರ ಪಡೆಯನ್ನು ಸಿದ್ಧಗೊಳಿಸಬೇಕಿದೆ ಎಂದು ಹೇಳಿದರು.

ಮೂರು ಬಾರಿ ಶಾಸಕರಾಗಿರುವ ಬಾಲಕೃಷ್ಣ ತಮ್ಮ ಅಧಿಕಾರದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಯಾವುದೇ ಸಹಾಯ ಮಾಡಿಲ್ಲ. ಬದಲಾಗಿ ತಾಲ್ಲೂಕಿನ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಇತರೆಡೆಗಳಲ್ಲಿ ತಮ್ಮ ಸ್ವಜಾತಿಯವರನ್ನೇ ನೇಮಿಸಿಕೊಂಡು ಮೆರೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ತಿಪ್ಪಸಂದ್ರ ಹೋಬಳಿಯ ಕಾಡಚಿಕ್ಕನಹಳ್ಳಿಯಲ್ಲಿ 48 ಮನೆಗಳಿವೆ. ಅಲ್ಲಿ 106 ಜನ ಪೊಲೀಸರನ್ನು ಕಾವಲು ಹಾಕಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸದಂತೆ ಅಡ್ಡಿಪಡಿಸಿ ಅಧಿಕಾರದ ದರ್ಪ ಮೆರೆದಿದ್ದಾರೆ ಎಂದರು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜುಟ್ಟನಹಳ್ಳಿ ಜಯರಾಮ್ ಮಾತನಾಡಿ, ಬಾಲಕೃಷ್ಣ ಅವರು ಕೆ.ಪಿ.ಸಿ.ಸಿ ಸದಸ್ಯ ಎ.ಮಂಜು ವಿರುದ್ಧ ವಿನಾಕಾರಣ ಟೀಕೆ ಮಾಡುವುದನ್ನು ಬಿಡಬೇಕು. ಮಂಜು ಅರ್ಹತೆ ಕೇಳೋಕೆ ನೀವ್ಯಾರು ಎಂದು ಖಾರವಾಗಿ ಪ್ರಶ್ನಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಗಂಗಾಧರ್, ರಂಗಹನುಮಯ್ಯ, ರಾಜು, ಜಿ.ಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ನಟರಾಜ್ ಗೌಡ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ಮಂಜುನಾಥ್, ಕುದೂರಿನ ಪುರುಷೋತ್ತಮ, ಮಾನಗಲ್ ಶಿವಲಿಂಗಯ್ಯ ಇತರರು ಮಾತನಾಡಿದರು.

ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಮಾದಿಗೊಂಡನಹಳ್ಳಿ, ಕುದೂರು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ `ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ~ ಕಾರ್ಯಕ್ರಮ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT