ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವ್ಯಾರಿಗೂ ಕಮ್ಮಿಯಿಲ್ಲ ಎಂದು ಪುಟಿದೆದ್ದವರು!

Last Updated 7 ಜನವರಿ 2012, 6:15 IST
ಅಕ್ಷರ ಗಾತ್ರ

ಮೈಸೂರು: ನಾವ್ಯಾರಿಗೂ ಕಮ್ಮಿಯಿಲ್ಲ. ನಮಗೂ ಓಡುವುದು, ಜಿಗಿಯುವುದು, ಭಾರದ ಗುಂಡು ಎಸೆಯುವುದು ಗೊತ್ತು ಎನ್ನುವ ಆತ್ಮವಿಶ್ವಾಸ ಆ ಮಕ್ಕಳ ಕಂಗಳಲ್ಲಿ ಪುಟಿಯುತ್ತಿತ್ತು. ಆ ಎಲ್ಲವನ್ನೂ ಯಶಸ್ವಿಯಾಗಿ ಮಾಡಿ ತೋರಿದರು!

ವಿಶ್ವೇಶ್ವರನಗರದ ಸೇಂಟ್ ಥಾಮಸ್ ಶಾಲೆಯ ಅಂಗಳದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ದೈಹಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೈಸೂರು ಜಿಲ್ಲಾಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅಂಗವಿಕಲರ ಕ್ರೀಡಾಕೂಟ ಮುಖ್ಯಾಂಶವಿದು.

ಬೆಳಿಗ್ಗೆ ಉದ್ಘಾಟನೆ ಸಮಾರಂಭವನ್ನು ಬಿಸಿಲಿನಲ್ಲಿಯೇ ಕುಳಿತು ವೀಕ್ಷಿಸಿದ ಮಕ್ಕಳ ಉತ್ಸಾಹ ಬತ್ತಿರಲಿಲ್ಲ. ನಂತರ ನಡೆದ 14 ವರ್ಷದೊಳಗಿನವರ ಶಾಟ್‌ಪಟ್, ವ್ಹೀಲ್‌ಚೇರ್ ಶಾಟ್‌ಪಟ್, ಓಟಗಳಲ್ಲಿ ಹುರುಪಿನಿಂದ ಭಾಗವಹಿಸಿದರು.

ಹುಣಸೂರು, ನಂಜನಗೂಡು, ತಿ.ನರಸೀಪುರ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಬಸ್‌ಗಳಲ್ಲಿ ಬಂದ ಈ ಮಕ್ಕಳು ಸಂಜೆಯವರೆಗೂ ಆಟೋಟಗಳಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಹನಿರ್ದೇಶಕ ಮತ್ತು ವಿಭಾಗೀಯ ಕಾರ್ಯದರ್ಶಿ ಕುಮಾರಸ್ವಾಮಿ, `ಕ್ರೀಡೆಗಳಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅನುಕೂಲವಾಗುತ್ತದೆ. ಅಂಗವಿಕಲ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ~ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಸುಬ್ಬೇಗೌಡ, ಸೇಂಟ್ ಥಾಮಸ್ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆವರೆಂಡ್ ಫಾದರ್ ಸಜೀ ಥಾಮಸ್, ನರಸಿಂಹಯ್ಯ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT