ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಾ ಸ್ಪರ್ಧೆಗೆ ಬೆಂಗಳೂರು ಬಾಲಕರು

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಾವೀಗ ಬದುಕುತ್ತಿರುವ ಭೂಮಿ 2077ಕ್ಕೆ ಅಂತ್ಯಗೊಳ್ಳುತ್ತದೆ ಎಂಬ ವಿಚಾರ ತಿಳಿದರೆ ನೀವು ಏನು ಮಾಡಲು ಸಾಧ್ಯವಿದೆ ?~

 ಈ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳು ಆತಂಕಗೊಳ್ಳಲಿಲ್ಲ. ಬದಲಿಗೆ ಭೂಮಿಗೆ ಪರ್ಯಾಯವಾಗಿ ಯಾವ ಗ್ರಹದಲ್ಲಿ ಬದುಕಲು ಸಾಧ್ಯತೆಗಳಿವೆ, ಆ ವೇಳೆಗೆ ಅಲ್ಲಿ ಬದುಕಲು ಬೇಕಾದ ಅಗತ್ಯಗಳನ್ನು ಸೃಷ್ಟಿಸಿಕೊಳ್ಳುವುದು ಹೇಗೆ ಎಂದು ಆಲೋಚಿಸಿದರು. ಇವರ ಈ ಆಲೋಚನೆಯನ್ನು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ನಾಸಾ~ ಕೂಡಾ ಮಾನ್ಯ ಮಾಡಿದೆ.

ನಾಸಾ ಸಂಘಟಿಸಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸ್ಪರ್ಧೆಯ ಅಂತಿಮ ಸುತ್ತಿಗೆ ನಗರದ ಬಿಷಪ್ ಕಾಟನ್ ಬಾಲಕರ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಸ್ಪರ್ಧೆಯ ಅಂತಿಮ ಸುತ್ತಿಗೆ ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿಗಳ ತಂಡ ಇದಾಗಿದೆ.

ಶುಕ್ರ ಗ್ರಹದ ಮೇಲೆ ಮನುಷ್ಯ ಜೀವನ ನಡೆಸಬಲ್ಲ ಸಾಧ್ಯತೆಗಳ ಕುರಿತು ಶಾಲೆಯ 12 ಜನ ವಿದ್ಯಾರ್ಥಿಗಳ ತಂಡ ಇದೇ 28 ರಂದು ಅಮೆರಿಕಾದಲ್ಲಿನ ನಾಸಾದ ಜಾನ್ಸನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ವಿವರ ಮಂಡಿಸಲಿದೆ. ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿವಿಧ ದೇಶಗಳ 15 ಶಾಲೆಗಳ ವಿದ್ಯಾರ್ಥಿಗಳ ತಂಡಗಳು ಪಾಲ್ಗೊಳ್ಳುತ್ತಿವೆ.

ನಗರದ ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ನಡೆದ ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ತಂಡದ ವಿದ್ಯಾರ್ಥಿಗಳು ಈ ವಿಷಯವನ್ನು ಹಂಚಿಕೊಂಡರು.

`ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಬುಧ ಗ್ರಹದ ಮೇಲೆ ಮಾನವನ ಬದುಕುವಿಕೆಯ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿದ್ದೆವು. ಬುಧ ಗ್ರಹದಲ್ಲಿರುವ ವಾಯು ಸಂಯೋಜನೆಯಲ್ಲಿ ಇರುವ ಅಲ್ಪ ಪ್ರಮಾಣದ ಆಮ್ಲಜನಕವನ್ನು ಬಳಸಿಕೊಂಡು ನೀರನ್ನು ಉತ್ಪಾದಿಸುವ ಬಗ್ಗೆ ಅಧ್ಯಯನ ನಡೆಸಿದ್ದೆವು. ಈಗ ಶುಕ್ರ ಗ್ರಹದಲ್ಲಿ ಮಾನವ ಬದುಕಲು ಸಾಧ್ಯವಿರುವ ಅಂಶಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ.

ಶುಕ್ರ ಗ್ರಹದಲ್ಲಿ ನೀರನ್ನು ಉತ್ಪಾದಿಸುವ ಬಗ್ಗೆ ಅಲ್ಲಿನ ವಾಯು ಸಂಶೋಧನೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ. 12 ಜನ ವಿದ್ಯಾರ್ಥಿಗಳ ತಂಡವನ್ನು ವಿವಿಧ ಭಾಗಗಳಾಗಿ ರೂಪಿಸಿಕೊಂಡಿದ್ದೇವೆ. ಶುಕ್ರ ಗ್ರಹಕ್ಕೆ ಪ್ರವೇಶ, ಅಲ್ಲಿನ ಹೊಸ ಜೀವನ ವಿಧಾನ, ಆಹಾರ ಉತ್ಪಾದನೆ, ವೈಜ್ಞಾನಿಕ ಉಪಕರಣಗಳ ಬಳಕೆ ಮತ್ತು ಹಣಕಾಸಿನ ನಿರ್ವಹಣೆಯ ಬಗ್ಗೆ ಪ್ರತ್ಯೇಕವಾಗಿ ಅಧ್ಯಯನ ನಡೆಸುತ್ತಿದ್ದೇವೆ~ ಎಂದು ವಿದ್ಯಾರ್ಥಿ ಕಾರ್ತಿಕ್ ವೆಂಕಟರಾಮನ್ ಹೇಳಿದರು.

`ನಾಸಾ ಸಂಘಟಿಸುವ ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಜನವರಿಯಲ್ಲಿ ಸ್ಪರ್ಧೆಯ ಪ್ರಾಥಮಿಕ ಆಯ್ಕೆಯ ಸುತ್ತು ದೆಹಲಿಯಲ್ಲಿ ನಡೆಯಿತು.

ಏಷ್ಯಾದ ವಿವಿಧ ದೇಶಗಳ 60 ಶಾಲೆಗಳು ಮೊದಲ ಸುತ್ತಿನಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯ ಅಂತಿಮ ಸುತ್ತಿಗೆ ಭಾರತದಿಂದ ಎರಡು ಶಾಲೆಗಳು ಆಯ್ಕೆಯಾಗಿದ್ದು, ದಕ್ಷಿಣ ಭಾರತದಿಂದ ನಮ್ಮ ತಂಡ ಆಯ್ಕೆಯಾಗಿದೆ~ ಎಂದು ವಿದ್ಯಾರ್ಥಿ ತಂಡದ ಸದಸ್ಯ ಕುನಾಲ್ ವಾಸುದೇವ ತಿಳಿಸಿದರು.

`ದಿನದಿಂದ ದಿನಕ್ಕೆ ಭೂಮಿಯ ಆಯುಷ್ಯದ ಬಗ್ಗೆ ವಿಜ್ಞಾನಿಗಳಲ್ಲೇ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ನಮಗೆ ನೀಡಿದ ವಿಷಯದ ಬಗ್ಗೆ ನಾವು ಸಮರ್ಥವಾಗಿ ಅಧ್ಯಯನ ನಡೆಸಿದ್ದೇವೆ. ಭೂಮಿಯ ಅಂತ್ಯದ ನಂತರವೂ ಮಾನವ ಸಂಕುಲ ಬದುಕಲು ಸಾಧ್ಯವಿರುವ ವಿಷಯಗಳ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಆಸಕ್ತಿ ಇದೆ. ನಾಸಾದ ಸ್ಪರ್ಧೆಯಲ್ಲಿ ವಿಜೇತರಾದರೆ ಈ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹ ಲಭಿಸಲಿದೆ~ ಎಂದು ಅವರು ತಿಳಿಸಿದರು.

`ಶಾಲೆಯ 12ನೇ ತರಗತಿಯ 12 ವಿದ್ಯಾರ್ಥಿಗಳು ತಂಡದಲ್ಲಿದ್ದಾರೆ. ಕಳೆದ ವರ್ಷವೂ ನಾಸಾ ನಡೆಸಿದ ಈ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳೇ ವಿಜೇತರಾಗಿದ್ದರು. ಈ ವರ್ಷದ ಸ್ಪರ್ಧೆಯಲ್ಲೂ ನಮ್ಮ ವಿದ್ಯಾರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಪ್ರತಿ ವಿದ್ಯಾರ್ಥಿಗೆ ಒಂದು ಲಕ್ಷ ರೂಪಾಯಿ ವೆಚ್ಚ ತಗುಲುತ್ತಿದ್ದು, ಅದನ್ನು ವಿದ್ಯಾರ್ಥಿಗಳ ಪೋಷಕರೇ ಭರಿಸುತ್ತಿದ್ದಾರೆ~ ಎಂದು ಶಾಲೆಯ ಅಧ್ಯಾಪಕಿ ಇಂಧೂ ಶಂಕರ್ `ಪ್ರಜಾವಾಣಿ~ಗೆ ತಿಳಿಸಿದರು.

ಆಯ್ಕೆಯಾಗಿರುವ ವಿದ್ಯಾರ್ಥಿಗಳು : ಅಖಿಲ್ ರೇಲೇಕರ್, ಅಕ್ಷಯ್ ಬಂಗ್ಲೋರ್ ನಾಗಭೂಷಣ್, ಅಂಕುರ್ ಬಿಸ್ವಾಸ್, ಅರಿಹಂತ್ ಪ್ರವೀಣ್ ಕೋಚರ್, ಫೆಲಿಕ್ಸ್ ಸ್ಯಾಮುಯೆಲ್ ಎಬೆಂಜರ್ ಡೇನಿಯಲ್, ಕಾರ್ತಿಕ್ ವೆಂಕಟರಾಮನ್, ಕುನಾಲ್ ವಾಸುದೇವ, ಮೊಹಮ್ಮದ್ ಅಮ್ರಾನ್ ಅಮೀನ್, ನಿಖಿಲ್ ಬಲರಾಜ್ ಮಂಖನಿ, ಶಿವ ಕಾರ್ನಾಡ್ ದೇವಯ್ಯ ಮತ್ತು ಯೂಸುಫ್ ರಫೀಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT