ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂದ ನಿಲವಿನ ಘನ

ಕಥೆ
Last Updated 9 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

1  ರಣ ರಣ ಅಂತ ಬಿಸುಲು ಸುರೀತಿರೊ ಕಾರಣದಿಂದಾಗಿ ಹಾರೀಗೇರಿ ಊರಿನ ಕೆರೆ-ಬಾವಿಗಳೆಲ್ಲ ಬತ್ತಿಹೋಗಿ, ಗುಬ್ಬಿ ಕುಡಿಯಲು ಸಹ ಒಂದು ಹನಿ ನೀರು ಇಲ್ಲದಾಗಿರುವ ಕಡು ಬೇಸಗೆಯ ಈ ದಿನಗಳಲ್ಲಿ ಹನುಮಪ್ಪನ ಗುಡಿಯ ಪಂಚ ಕಮೀಟಿಯವರು ನೀರೋಕುಳಿ ಜಾತ್ರೆಯನ್ನು ಮಾಡಲು ನಿಶ್ಚಯಿಸಿದ ಸುದ್ದಿ ಈಗ ತಿಂಗಳ್ಹಿಂದೆಯೇ ಮಾಯವ್ವನ ಕಿವಿಗೆ ಬಿದ್ದಿತ್ತು! ಆಗಲೇ, ಆ ಹಾರ್‌ಬಾತ್ಮಿಯನ್ನು ಕೇಳಿ ಆಕೆಯ ಎದೆಯೊಳಗೆ ಚೇಳು ಹರಿದಾಡಿದಂಗಾಗಿತ್ತಾದರೂ ಸಹ ಭಯದಿಂದ ಅಳ್ಳಕಾಗಿದ್ದ ತನ್ನ ಮನಸ್ಸನ್ನು ಒಂದು ನೆಲೆಯಲ್ಲಿ ಹೆಂಗೋ ಗಟ್ಟಿ ಮಾಡಿಕೊಂಡಿದ್ದಳು.

ಹಾಗೆಯೇ, ತನ್ನಷ್ಟಕ್ಕೆ ತಾನೇ, `ಇದೆಲ್ಲ ಆಗದ ಮಾತೆಳು....' ಎಂದು ಮನದೊಳಗೆ ಅಂದುಕೊಂಡು ಸಮಾಧಾನಪಟ್ಟಿದ್ದಳು. ಅದಕ್ಕೇ, ಆ ನಂತರದ ದಿನಗಳಲ್ಲಿ ನೀರೋಕುಳಿ ಜಾತ್ರೆಯ ವಿಷಯದಲ್ಲಿ ಊರ ತುಂಬ ಹರಿದಾಡುತ್ತಿದ್ದ ಇಂಥ ಗಾಳಿ ಮಾತುಗಳನ್ನೆಲ್ಲ ಆಕೆ, ಒಂದು ರೀತಿಯ ಹುಂಬ ಧೈರ್ಯದ ಮೇಲೆಯೇ ಕೇಳಿಯೂ ಕೇಳದವರಂತೆ ಮಾಡಿ, ತನ್ನ ಕುಂಡೆಗೆ ಒರೆಸಿಕೊಂಡು ಬಿಡುತ್ತಿದ್ದಳು.

ಆದರೆ, ಹನುಮಪ್ಪನ ವಾರದ ದಿನವಾದ ಕಳೆದ ಶನಿವಾರದಂದು, ಮಾಯವ್ವ, ನಸುಕೀಲೆ ಎದ್ದು; ಜಳಕ ಮಾಡಿದವಳೆ ಹನುಮಪ್ಪನಿಗೆ ಕೈ ಮುಗುದು ಬರಲೆಂದು ಗುಡಿಗೆ ಹೋಗಿದ್ದಳು. ಆ ಹೊತ್ತಲ್ಲಿ, ಆಗಷ್ಟೇ ಪೂಜೆ ಮುಗಿಸಿಕೊಂಡು; ಗರ್ಭಗುಡಿಯಿಂದ ಹೊರಬಂದು, ಗುಡಿಯ ಪ್ರಾಂಗಣದಲ್ಲಿ ನಿಂತಿದ್ದ ಪೂಜೇರಿ ಮಾರುತಿಯು ಆಕೆಗೆ ಎದುರಾಗಿ, `ಮಾಯವ್ವ, ಈ ಸಲ ನೀರೋಕುಳಿ ಜಾತ್ರೆ ನಡೀತದ! ಹಂಗಂತ ಕಮೀಟಿ ಜನ್ರು ತೀರ್ಮಾನ ತಗೊಂಡಾರು.

ಯಾವುದಕ್ಕೂ ನಿನ್ಗ ಗೊತ್ತಿರ‌್ಲೆಂತ ಹೇಳ್ದೆ, ನೋಡವ್ವ.....' ಎಂದಿದ್ದ. ಆ ಕ್ಷಣದಲ್ಲಿ, ಆತ ಅಂದ ಮಾತುಗಳನ್ನು ಕೇಳಿ, ಮಾಯವ್ವನ ಎದೆಯೇ ಒಡೆದು ಹೋದಂಗಾಗಲು ಬೆಚ್ಚಿಬಿದ್ದಳು. ಇದರಿಂದಾಗಿ, ಆಕೆ, ಹನುಮಪ್ಪನಿಗೆ ಕೈ ಮುಗಿಯಲೆಂದು ಗುಡಿಯೊಳಗೆ ಹೋಗುವುದನ್ನೂ ಸಹ ಮರೆತು; ನಿಂತ ಕಾಲ ಮೇಲೆಯೇ ತಿರುಗಿ ಮನೆಗೆ ಬಂದವಳೆ ಕೋಣೆಯನ್ನು ಹೊಕ್ಕು ಗರಬಡಿದವರ‌್ಹಂಗೆ ಕುಂತುಬಿಟ್ಟವಳು ಆವೊತ್ತಿನಿಂದ ಕೇರಿಯ ಜನರ ಕಣ್ಣಿಗೂ ಸಹ ಬಿದ್ದಿರಲಿಲ್ಲ.

ಅಷ್ಟಕ್ಕೂ, ಇಂದು ಬೆಳಿಗ್ಗೆ, ಖುದ್ದು ಮಾನಿಂಗಯ್ಯನೇ ಮನೆಗೆ ಬಂದು ಹೋದಾಗಿನಿಂದ ಆಕೆಯ ಎದೆಯೊಳಗೆ ನೀರಾಡಿದಂಗಾಗಿತ್ತು. ಹೀಗಾಗಿ, ಆಗಿನಿಂದಲೂ ಅನ್ನ-ನೀರು ತೊರೆದು; ಮೇಲೆ ಸೂರಿಗೆ ಕಣ್ಣು ನೆಟ್ಟು, ಚಿಂತೆಯೊಳಗೆ ಮುಳಗಿಹೋಗಿದ್ದ ಮಾಯವ್ವನಿಗೆ ನಿದ್ದೆ ಅಂಬೋದು ಮರೀಚಿಕೆಯಾಗಿರಲು ಅದೇ ಆಕೆಯ ಕಣ್ಣ ಗೊಂಬೆಯ ಮುಂದೆ ಹಗಲೂ-ರಾತ್ರಿಯನೂ ಒಂದು ಮಾಡಿ, ಮಾಯವ್ವನ ಎದೆಯೊಳಗೆ ತುಂಬುಕೊಂಡಿದ್ದ ಚಿಂತೆಗಳನ್ನೆಲ್ಲ ಥಕಥೈ.....ಥಕಥೈ..... ಎಂದು ಕುಣಿಸುತ್ತಿತ್ತು!

2 ಅನಾದಿಕಾಲದಲ್ಲಿ ಸೃಷ್ಟಿಯಾದ ಈ ಭೂಮಿಯ ಒಂದು ಮೂಲೆಯಲ್ಲಿ, ಅದರ ಕಿರುಬೆರಳ ಉಗುರ ಸಂಧಿಯಲ್ಲಿರಬಹುದಾದಷ್ಟೇ ಜಾಗೆಯಲ್ಲಿ ರೂಪಗೊಂಡಂತಿದ್ದ ಹಾರೀಗೇರಿ ಎಂಬ ಈ ಊರು, ಒಂದಾನೊಂದು ಕಾಲದಲ್ಲಿ ಇಲ್ಲಿನ ಜನರ ಆರಾಧ್ಯದೈವವಾಗಿರುವ ಹನುಮಪ್ಪನಿಗೆ, ಗುಡಿಯ ಪಂಚಕಮೀಟಿ ವತಿಯಿಂದ ನೆರವೇರಿಸುತ್ತಿದ್ದ ನೀರೋಕುಳಿ ಜಾತ್ರೆಯಿಂದಾಗಿ ಸುತ್ತಲಿನ ಹಳ್ಳಿಗಳಲ್ಲೆಲ್ಲ ಹೆಸರಾಗಿತ್ತು.

ಪ್ರತೀವರ್ಷ ದವನದ ಹುಣ್ಣಿವಿಯಂದು ಜರುಗುವ ಕಡೇ ದಿನದ ನೀರೋಕುಳಿ ಜಾತ್ರೆಯನ್ನು ನೋಡಲೆಂದು ಆಸುಪಾಸಿನ ಊರುಗಳಿಂದ ಜನರು ಎತ್ತಿನಗಾಡಿಗಳಲ್ಲಿ ಬರುತ್ತಿದ್ದರು. ಅಷ್ಟೊಂದು ಫೇಮಸ್ಸಾಗಿದ್ದ ಈ ಜಾತ್ರೆಯು ಯಶಸ್ವಿಯಾಗಿ ನೆರವೇರುವುದಕ್ಕೆ ಊರ ಜನರೂ ಸಹ ಅಷ್ಟೇ ಸಹಕಾರ ಕೊಡುತ್ತಿದ್ದರು. ಮೂರು ದಿನಗಳವರೆಗೆ ಜರುಗುವ ಈ ನೀರೋಕುಳಿ ಜಾತ್ರೆಯ ಆ ಕಡೇದಿನದ ಓಕುಳಿಯನ್ನು, ಡೊಂಬರ ಹೆಂಗಸರ ಮೇಲೆ ಓಕುಳಿ ಆಡುವ ಗಂಡಸರು; ಓಕುಳಿ ಕೊಂಡದಲ್ಲಿನ ನೀರನ್ನು, ಒಂದು ಕೊನೆಯ ಚುಂಗಿನಿಂದ ಬಲಗೈಗೆ ಬಿಗಿಯಾಗಿ ಕಟ್ಟಿಕೊಂಡಿರುತ್ತಿದ್ದ ಚೌರಸಾಕಾರದ ದಪ್ಪನೆಯ ಕೆಸರು ಮೆತ್ತಿದ ಬಟ್ಟೆಯಲ್ಲಿ ಹಿಡಿದು; ಅದ ಎರಡೂ ಕೈಗಳಿಂದ ಹೆಗಲ ಮೇಲೆ ಹೊತ್ತು ತಂದು; ಆ ಹೆಂಗಸರನ್ನು ರಸ್ತೆಯಲ್ಲಿ ಓಡಾಡಿಸಿಕೊಂಡು ಹೋಗಿ; ನೀರೆರಚಿ, ಮೋಜು ಮಾಡುತ್ತಲೇ ನಿಂತು ನೋಡುತ್ತಿದ್ದ ಜನರನ್ನು ಖುಷಿಪಡಿಸುತ್ತಿದ್ದರು.

ಹೀಗೆ, ನೀರೆರಚಿಸಿಕೊಳ್ಳುವ ಡೊಂಬರ ಹೆಂಗಸರನ್ನು ಹನುಮಪ್ಪನಿಗೆ ಮೀಸಲಿಟ್ಟ ಸೇವಕಿಯಕರೆಂದು ತೀರ್ಮಾನಿಸಿದ್ದ ಗುಡಿಯ ಪಂಚ ಕಮೀಟಿಯವರು, ಅವರಿಗೆಂದೇ ಊರ ಹೊರಗೆ ಜಾಗ ಕಲ್ಪಿಸಿಕೊಟ್ಟು, ಹಾರೀಗೇರಿಯಲ್ಲೇ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದ್ದರು. ಮತ್ತು ಅವರ ಉದರ ಪೋಷಣೆಗೆ ಪಂಚಕಮೀಟಿಯವರೇ ವರ್ಷಕ್ಕೆ ಇಂತಿಷ್ಟು ಅಂತ ಕಾಳು-ಕಡಿ ಕೊಡುತ್ತಿದ್ದರು.

ಸದರೀ ವಿಷಯ ಹೀಗಿತ್ತಾದ್ದರಿಂದಲೇ, ಪ್ರತೀ ವರ್ಷ ನೀರೋಕುಳಿ ಜಾತ್ರೆಯ ಸಂದರ್ಭದಲ್ಲಿ ಹನುಮಪ್ಪನ ಗುಡಿಯ ಪಂಚಕಮೀಟಿಗೆ ಚೇರ‌್ಮನ್ ಆಗಿದ್ದವನು, ಖುದ್ದು ಹನುಮಪ್ಪನ ಗುಡಿಯ ಪೂಜೇರಿಯೊಂದಿಗೆ ಹೋಗಿ, ಡೊಂಬರ ಐದಾರು ಮನೆತನಗಳಿಗೆಲ್ಲ ಹಿರಿಯಳಂತಿದ್ದ ಕೆಂಚವ್ವನಿಗೆ ವೀಳ್ಯ ಕೊಟ್ಟು ಬರುತ್ತಿದ್ದ. ಹಾಗೆ, ಕೆಂಚವ್ವ, ಒಮ್ಮೆ ವೀಳ್ಯ ಹಿಡಿದರೆ ತೀರಿತು. ಆಕೆಯೂ ಸೇರಿದಂಗೆ ಉಳಿದ ಡೊಂಬರ ಹೆಂಗಸರೆಲ್ಲರೂ ನೀರೋಕುಳಿ ಆಡುವ ಗಂಡಸರಿಂದ ತಮ್ಮ ಮೈಗೆ ನೀರೆರಚಿಸಿಕೊಳ್ಳಲೇಬೇಕಿತ್ತು! ಹೀಗೆ, ಹನುಮಪ್ಪನ ಗುಡಿಯ ಪಂಚಕಮೀಟಿಯ ಮಾತಿನ ಮೇಲೆ ಪ್ರತೀ ವರ್ಷ ನೀರೋಕುಳಿ ಜಾತ್ರೆ ನಡೀತ್ತಿತ್ತು.

ಆದರೆ, ಈಗ, ಆರೇಳು ತಿಂಗಳ್ಹಿಂದೆ ಕೆಂಚವ್ವ, ಇದ್ದಕ್ಕಿದ್ದಂಗೆ ತನ್ನನ್ನು ಇನ್ನಿಲ್ಲದಂಗೆ ಕಾಡತೊಡಗಿದ ಚಿಂತೆಯಿಂದಾಗಿ ಈ ಲೋಕದಲ್ಲಿ ಇನ್ನಿಲ್ಲವಾಗಿದ್ದಳು, ಖರೇ.....! ಆದರೆ, ಆಕೆ, ಹೀಗೆ ಶಾಶ್ವತವಾಗಿ ಊರಾಚೆಗಿರೊ ಸ್ಮಶಾನದಲ್ಲಿ ಠಿಕಾಣಿ ಹೂಡುವ ಮುಂಚಿನ ನಾಕಾರು ವರ್ಷಗಳ ಹಿಂದೆಯೇ ನಾಕಕ್ಷರ ಕಲುತು, ಡೊಂಬರ ಕೇರಿಯಲ್ಲೆಲ್ಲ ಶಾಣ್ಯಾ ಎನಿಸಿಕೊಂಡಿದ್ದ ಅದೇ ಕೆಂಚವ್ವನ ತಂಗಿಯ ಮಗ ರಮೇಶನಿಂದಾಗಿ ಹನುಮಪ್ಪನ ಗುಡಿಯ ಪಂಚ ಕಮೀಟಿಯ ವತಿಯಿಂದ ನಡೆಯುತ್ತಿದ್ದ ನೀರೋಕುಳಿ ಜಾತ್ರೆಯೂ ಕೂಡ ನಿಂತುಹೋಗಿತ್ತು! ಮತ್ತು, ಇದರಿಂದಾಗಿಯೇ ಕೆಂಚವ್ವನ ಮಗಳು, ಮಾಯವ್ವ ಈಗ ಇನ್ನಿಲ್ಲದ ಸಂಕಟಕ್ಕೆ ಒಳಗಾಗುವಂತಾಗಿತ್ತು!

ಪ್ರತೀವರ್ಷ, ಹನುಮಪ್ಪನ ನೀರೋಕುಳಿ ಜಾತ್ರೆಯ ಸಂದರ್ಭದಲ್ಲಿ, ನೀರೋಕುಳಿಯಾಡುವ ಗಂಡಸರಿಂದ ಮೈಮೇಲೆ ನೀರೆರಚಿಸಿಕೊಳ್ಳುವುದು; ಆ ಮೂಲಕ ಈ ಊರಿನ ದೈವವೆನಿಸಿದ್ದ ಹನುಮಪ್ಪನ ಸೇವೆ ಮಾಡುವುದು ಒಂದು ರೀತಿಯಲ್ಲಿ ತಮಗೊದಗಿ ಬಂದ ಪರಮ ಪ್ರತಿಷ್ಠೆಯ ಕಾಯಕವೆಂದೇ ಡೊಂಬರ ಜನಾಂಗದವರು ಅಂದುಕೊಂಡಿದ್ದರು. 

ಆದರೆ, ಇದರಿಂದಾಗಿಯೇ ಈ ವ್ಯವಸ್ಥೆಯ ದೃಷ್ಟಿಯಲ್ಲಿ ಹೀನಾಯ ಬದುಕನ್ನು ಬಾಳುತ್ತಿದ್ದ ಈ ಊರಿನ ಡೊಂಬರ ಜನಾಂಗದ ಹೆಂಗಸರಿಗೆಲ್ಲ ಹಿರಿಯಳಂತಿದ್ದ ಕೆಂಚವ್ವನ ತಂಗಿಯ ಮಗ, ರಮೇಶನು ಸಾಲೆಯ ಕಟ್ಟೆ ಏರಿದ್ದು ಆ ಜನಾಂಗಕ್ಕೆ ಅಷ್ಟೇ ಅಲ್ಲ.... ಈ ಊರ ಜನರಿಗೂ ಸಹ ಅಚ್ಚರಿಯ ಸಂಗತಿಯಾಗಿತ್ತು!

ಮೊದ ಮೊದಲಿಗೆಲ್ಲ ರಮೇಶನು ಸಾಲೆಗೆ ಹೋಗಲಾರಂಭಿಸಿದ ಸಂಗತಿಯ ಬಗ್ಗೆ ಕೆಂಚವ್ವನಾಗಲಿ ಮತ್ತು ಆತನ ಅಪ್ಪ-ಅವ್ವನಾಗಲಿ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ವರ್ಷದಿಂದ ವರ್ಷಕ್ಕೆ ಆತ, ಪಾಸಾಗುತ್ತ ನಡೆದಾಗ ಆತನಿಗೆ ಪಾಠ ಮಾಡುತ್ತಿದ್ದ ಮಹೇಂದ್ರಕರ ಮಾಸ್ತರರು ಖುದ್ದು ಕೆಂಚವ್ವನ ಮನೆತಂಕ ಬಂದು, ರಮೇಶನ ಶಾಣ್ಯಾತನದ ಬಗ್ಗೆ ಕೆಂಚವ್ವನ ಮುಂದೆ ತಾಸುಗಟ್ಟಲೇ ಕುಂತು ಹೇಳಿದ್ದಷ್ಟೇ ಅಲ್ಲದೇ ಯಾವುದೇ ಕಾರಣಕ್ಕೂ ರಮೇಶನನ್ನು ಸಾಲೆ ಬಿಡಿಸಬಾರದು ಎಂದು ತಾಕೀತು ಮಾಡಿ ಹೋಗಿದ್ದರು.

ಆಗಲೇ, ಕೆಂಚವ್ವನಿಗೂ ಹಾಗೂ ಆತನ ಅಪ್ಪ-ಅವ್ವನಿಗೂ ನಮ್ಮ ಜನಾಂಗದಲ್ಲೇ ರಮೇಶನು ಸಾಲೆ ಕಲಿತು ದೊಡ್ಡ ಸಾಹೇಬನಾಗುತ್ತಾನೆ ಎಂಬ ವಿಶ್ವಾಸ ಮೂಡತೊಡಗಿತು. ಅದಕ್ಕೇ, ಸ್ವತಃ ಕೆಂಚವ್ವನೇ ಮುತುವರ್ಜಿ ವಹಿಸಿ ಆತನಿಗೆ ಸಾಲೆ ಕಲಿಸತೊಡಗಿದಳು. ಹೀಗಾಗಿ, ರಮೇಶನು ನೋಡು ನೋಡುತ್ತಿದ್ದಂಗೆ ಮುಂದಿನ ದಿನಗಳಲ್ಲಿ ಹತ್ತನೇ ತರಗತಿಯನ್ನು ಸೆಕೆಂಡು ಕ್ಲಾಸಿನಲ್ಲಿ ಪಾಸು ಮಾಡಿಕೊಂಡು, ಕಾಲೇಜು ವಿದ್ಯಾಭ್ಯಾಸಕ್ಕೆಂದು ಬೆಳಗಾವಿ ಶಹರಕ್ಕೆ ಹೊಂಟುಹೋದ.

ಆದರೆ, ಯಾವಾಗ ರಮೇಶನು ಬೆಳಗಾವಿ ಶಹರದತ್ತ ಮುಖ ಮಾಡಿದನೊ ಆಗಲೇ ಹನುಮಪ್ಪನ ಗುಡಿಯ ಪಂಚಕಮೀಟಿಯ ಚೇರ‌್ಮನ್ ಮಾನಿಂಗಯ್ಯನ ಎದೆಯೊಳಗೆ ಇನ್ನಿಲ್ಲದ ಸಂಕಟವೊಂದು ಶುರುವಾಗಿಬಿಟ್ಟಿತು! ಅದಕ್ಕೆ ಕಾರಣವೂ ಇತ್ತು. ಈ ಹಿಂದೊಮ್ಮೆ, ನೀರೋಕುಳಿ ಜಾತ್ರೆಯ ಸಂದರ್ಭದಲ್ಲಿ, ಮಾನಿಂಗಯ್ಯನು, ಪೂಜೇರಿ ಮಾರುತಿಯೊಂದಿಗೆ ಕೆಂಚವ್ವನ ಮನೆಗೆ ಹೋಗಿದ್ದ.

ಆಗ, ಆತ, ಕೆಂಚವ್ವನಿಗೆ ವೀಳ್ಯ ಕೊಡುವ ಸಂದರ್ಭದಲ್ಲಿ, ಅಲ್ಲೇ ಪಡಸಾಲೆಯಲ್ಲಿ ಗಣಿತದ ಲೆಕ್ಕ ಬಿಡಿಸುತ್ತ ಕುಂತಿದ್ದ ರಮೇಶನು, ಇದ್ದಕ್ಕಿದ್ದಂಗೆ ಎದ್ದು ನಿಂತವನೆ, ಮಾನಿಂಗಯ್ಯನ ಮುಖದ ಮೇಲೆ ಸಿಟ್ಟಿನಲಿ ದೃಷ್ಟಿ ನೆಟ್ಟು, `ಯವ್ವ, ನೀವೆಲ್ಲ ಮೈಮ್ಯಾಲೆ ಬ್ಯಾರೆ ಗಂಡ್ಸುರ ಕೈಲೆ ನೀರು ಎರ‌್ಚಿಸಿಕೊಳ್ಳುದು ಯಾಕೊ ಚೆಂದ ಕಾಣಂಗಿಲ್ಲಂತ ನನ್ಗ ಅನ್ನಿಸ್ಲಿಕತ್ತೆದ! ಅದಕ್ಕ, ನೀ-ವೀಳ್ಯ ಹಿಡಿಬ್ಯಾಡವ್ವೊ.....' ಎಂದು ಕೆಂಚವ್ವನಿಗೆ ಅಂದಿದ್ದ. ಆಗ, ಕೆಂಚವ್ವನೇ, `ಲೇ, ತಮ್ಮ, ರಮೇಸ್ಯಾ..... ಹಂಗೆಲ್ಲ ದೈವದ ಮಾತು ಮೀರಿ ಏನೂ ಮಾಡ್ಲಿಕ್ಕೆ ಬರಂಗಿಲ್ಲ.

ನೀ, ಇನ್ನೂ ಸಣ್ಣಾಂವಿದ್ದೀ. ನಿನ್ಗ ಇದೆಲ್ಲ ತಿಳೆಂಗಿಲ್ಲ, ಸುಮ್ಕಿರು....' ಎಂದು ಆತನನ್ನು ಸಮಾಧಾನಪಡಿಸಿದ್ದಳು. ಆದರೆ, ಈ ಘಟನೆ ಮಾತ್ರ ಮಾನಿಂಗಯ್ಯನ ಎದೆಯೊಳಗೆ ಅಲುಗಾಡದ ಹೆಬ್ಬಂಡೆಯಂಗೆ ಕುಂತುಬಿಟ್ಟಿತ್ತು!

3  ಕಾಲೇಜು ವಿದ್ಯಾಭ್ಯಾಸಕ್ಕೆಂದು ಬೆಳಗಾವಿ ಶಹರಕ್ಕೆ ಬಂದ ರಮೇಶನು, ಅಲ್ಲಿ ಪ್ರತಿಷ್ಠಿತ ಕಾಲೇಜೊಂದರಲ್ಲಿ ಕಲಾ ವಿಭಾಗಕ್ಕೆ ಪ್ರವೇಶ ಪಡಕೊಂಡ ಮೇಲೆ ಕ್ರಮೇಣ ಆತನೊಳಗೆ ಇನ್ನಿಲ್ಲದ ಬದಲಾವಣೆಗಳು ಆಗತೊಡಗಿದವು. ಆ ಕಾಲೇಜಿನಲ್ಲಿ ಸಮಾಜಶಾಸ್ತ್ರವನ್ನು ಬೋಧಿಸುತ್ತಿದ್ದ ಪ್ರೊ. ಸಿದ್ದಾಪೂರ ಅವರ ಸಮಾಜವಾದಿ ಮನೋಧೋರಣೆಯ ಪ್ರಭಾವಕ್ಕೆ ಒಳಗಾದ ಆತ, ಅವರ ಮೆಚ್ಚಿನ ಶಿಷ್ಯನಾಗಿ ಗುರುತಿಸಿಕೊಂಡ. ಹೀಗಾಗಿ, ದಿನ ಕಳೆದಂಗೆ ಆತನ ಒಳ ಮನಸ್ಸು, ಆತನಿಗೇ ತಿಳಿಯದಂಗೆ ಪರಿವರ್ತನೆಗೀಡಾಗಿ ಬಿಟ್ಟಿತು.

ಮತ್ತು, ಇದೇ ಕಾರಣವಾಗಿ ತನ್ನೂರಿನಲ್ಲಿ ಜರುಗುತ್ತಿದ್ದ ನೀರೋಕುಳಿ ಜಾತ್ರೆಯಂಥ ಅನಿಷ್ಟ ಪದ್ಧತಿಯನ್ನು ದೈವದ ಹೆಸರಿನಲ್ಲಿ ನಿಯಮಿತವಾಗಿ ಜಾರಿಯಲ್ಲಿಡುವುದರ ಮೂಲಕ ತನ್ನ ಜನಾಂದ ಜನರನ್ನು ಈ ಸಮಾಜ ಹೀನಾಯ ಸ್ಥಿತಿಗೆ ತಳ್ಳಿದೆ ಎಂಬ ಕಟುಸತ್ಯ ಸಂಗತಿ ರಮೇಶನ ಅರಿವಿಗೆ ಬಂದದ್ದೇ ಒಳಗೊಳಗೆ ಇನ್ನಿಲ್ಲದಂಗೆ ಸಂಕಟಪಡತೊಡಗಿದ.

ಕ್ರಮೇಣ, ಆ ಸಂಕಟದಲ್ಲೇ ದಿನವೂ ಬೇಯತೊಡಗಿದ. ವಿಷಯ ಹೀಗಿರುವಾಗ, ಮುಂದೆ ಊರಲ್ಲಿ ಜರುಗಲಿದ್ದ ನೀರೋಕುಳಿಯ ಜಾತ್ರೆಯ ಸಂದರ್ಭದಲ್ಲೇ ರಮೇಶನ ಕಾಲೇಜು ವಿದ್ಯಾಭ್ಯಾಸವೂ ಮುಗುದು, ಆತ ಹಾರೀಗೇರಿಗೆ ಬರುವಂತಾಯಿತು. ಆಗಲೇ, ಆತನ ಬದುಕು ಮಹತ್ತರವಾದ ತಿರುವೊಂದನ್ನು ಪಡಕೊಳ್ಳುವುದಕ್ಕೆ ಕಾರಣವಾದ ಘಟನೆಯೊಂದು ನಡೆಯಿತು!

ಅದು, ಇನ್ನೇನು ನೀರೋಕುಳಿ ಜಾತ್ರೆಯು ಇನ್ನೆರಡು ದಿನಗಳಿರುವಾಗಲೇ ಎಂದಿನಂತೆ ಹನುಮಪ್ಪನ ಗುಡಿಯ ಪಂಚಕಮೀಟಿ ಚೇರ‌್ಮನ್, ಮಾನಿಂಗಯ್ಯನು ವೀಳ್ಯ ಕೊಡಲೆಂದು ಪೂಜೇರಿ ಮಾರುತಿಯೊಂದಿಗೆ ಕೆಂಚವ್ವನ ಮನೆಗೆ ಬಂದಾಗ ರಮೇಶನು ಇನ್ನಿಲ್ಲದ ತಕರಾರು ಎತ್ತಿದ್ದ. ಆ ಹೊತ್ತಲ್ಲಿ, ಆತ ಕೆಂಚವ್ವನಿಗೆ, `ಯವ್ವ, ಈ ನೀರೋಕುಳಿ ಜಾತ್ರೆ ಅನ್ನೂದು ಈ ಸಮಾಜಕ್ಕಂಟಿದ ಹೇಸ್ಗಿ ತರ‌್ಸೂ ಮೈಮ್ಯಾಲಿನ ಕುರು ಇದ್ದಂಗ.

ನೀವೆಲ್ಲ, ಓಕುಳಿ ಆಡೂ ಗಂಡ್ಸುರಿಂದ ಮೈಮ್ಯಾಲೆ ನೀರು ಎರ‌್ಚಿಸಿಕೊಳ್ಳುದು ಒಂದು ರೀತಿಲೆ ಉಚ್ಛ ಜನಾಂಗದವ್ರ ನಮ್ಮ್ಯಾಲೆ ಮಾಡ್ತಿರೊ ದೌರ್ಜನ್ಯ! ಇಂಥದೆಲ್ಲ ನಿಲ್ಲಬೇಕು. ಇದಾಗ್ಬೇಕಾದ್ರ.... ಮೊದಲಿಗಿ ನಿಮ್ಮ ಮನ್ಸು ಬದಲಾಗ್ಬೇಕು! ಅದು, ಈಗಿಂದಲೇ ಸುರು ಆಗ್ಲಿ. ಅದಕ್ಕ, ಈ ಸಲ ನೀ,-ವೀಳ್ಯ ಹಿಡಿಬ್ಯಾಡವ್ವೊ.....' ಎಂದು ತಿಳಿಸಿ ಹೇಳಿದ್ದ. ಆ ಗಳಿಗೆಯಲ್ಲಿ, ಕೆಂಚವ್ವನಿಗೂ ಸಹ ಸಾಲೆ ಕಲಿತು, ಶಾಣ್ಯಾ ಎನಿಸಿಕೊಂಡಿದ್ದ ರಮೇಶನ ಮಾತುಗಳು ಸರಿಯೆನಿಸಲು ಆಕೆ, ವೀಳ್ಯ ಪಡೆಯಲು ಹಿಂದೇಟು ಹಾಕಿದಳು.

ಯಾವಾಗ, ಹೀಗೆ ಕೆಂಚವ್ವನೇ ವೀಳ್ಯ ಪಡೆಯಲು ಹಿಂದೇಟು ಹಾಕಿದಳೊ ಆಗಲೇ, ರಮೇಶನು, `ಲೇ, ಚೇರ‌್ಮನ್ನಾ, ಈ ಸಲ ನಮ್ಮ ಜನಾಂಗದ ಹೆಣ್ಮಕ್ಳು ನೀರೋಕುಳಿ ಜಾತ್ರ್ಯಾಗ ಭಾಗ ತಗೋದಿಲ್ಲ! ನೀವೇನು ಮಾಡ್ಕೊಂತಿರೊ ಮಾಡ್ಕೊಹೋಗ್ರಿ....' ಎಂದು ಮಾನಿಂಗಯ್ಯನಿಗೆ ಕಡ್ಡಿ ತುಂಡು ಮಾಡಿದಂಗೆ ಅಂದುಬಿಟ್ಟ! ಇದರಿಂದ ಅನುಮಾನಿತನಾದ ಮಾನಿಂಗಯ್ಯನಿಗೆ ಆ ಕ್ಷಣದಲ್ಲಿ ಏನು ಮಾಡಬೇಕೆಂದು ತೋಚದೆ ಗಲಿಬಿಲಿಗೊಳಗಾದನು.

ಆದರೂ ಅರೆಕ್ಷಣದಲ್ಲಿ, ಬೆವರಿಳಿಯುತ್ತಿದ್ದ ತನ್ನ ಮುಖವನ್ನು ಧೋತರದ ಚಾಳಿಯಿಂದ ಒರೆಸಿಕೊಳ್ಳುತ್ತ; ನಿಂತಲ್ಲೇ ಸುಧಾರಿಸಿಕೊಂಡವನೆ, `ಏಯ್, ರಮ್ಯಾ, ಮಗನ.... ಪಂಚಕಮೀಟಿ ಮಾತು ಮೀರಿ ನಡೀಲಿಕ್ಕೆ ಆಗೂದಿಲ್ಲಲೇ! ನಿಮ್ಮನ್ನೆಲ್ಲ ಈ ಊರಾಗ ತಂದುಬಿಟ್ಟವ್ರ ನಾವ ಅನ್ನೂದು ನಿನ್ಗ ನೆಪ್ಪಿರ‌್ಲಿಲೇ.....' ಎಂದು ರಮೇಶನ ಮೇಲೇರಿ ಹೋದ. ಆ ವೇಳೆಯಲ್ಲಿ, ಮಾನಿಂಗಯ್ಯನ ಈ ತೆರನಾದ ವರ್ತನೆಯಿಂದ ರಮೇಸನಿಗೆ ಸಿಟ್ಟು ಉಕ್ಕೇರಿ ಬರಲು, `ಲೇ, ಮಾನಿಂಗಯ್ಯ, ಇನ್ನೊಂದ್ಮಾತು ಮಾತಾಡ್ದೆಂದ್ರ..... ನಮ್ಮ ಜನಾಂಗದ ಹೆಂಗ್ಸರ ಮ್ಯಾಲೆ ದೌರ್ಜನ್ಯ ಮಾಡ್ಲಿಕತ್ತೆದೆಂತ ನಿನ್ಮ್ಯಾಲೆ ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ, ಹುಷಾರ್.....1 ಈಗ, ಬಾಯ್ಮುಚ್ಕೊಂಡು ಸುಮ್ಕ ಹೋಗು. 

ಇಲ್ದಿದ್ರ.... ನಿನ್ನ ಜನ್ಮ ನಾಯಿಗಿ ಬ್ಯಾಡಾಕ್ಕೇತಿ, ನೋಡು.....' ಎಂದವನೇ ಮಾನಿಂಗಯ್ಯನ ಕುತ್ತಿಗೆಗೆ ಕೈಹಾಕಿ ಹೊರದಬ್ಬಿದ. ಆಗ, ಈ ಘಟನೆಯನ್ನು ಕಣ್ಣಾರೆಕಂಡು, ನಡುಗಿಹೋದ ಪೂಜೇರಿ ಮಾರುತಿಯು, ಇದು ಆಗದ ಕೆಲಸವೆಂದು ಮನದೊಳಗೆ ಅಂದುಕೊಂಡವನೆ, ಮಾನಿಂಗಯ್ಯನನ್ನು ಸಮಾಧಾನಪಡಿಸಿ ಕರೆದುಕೊಂಡು ಬರುವುದರ ಮೂಲಕ ಮುಂದೆ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದ.

ಅಂದೇ ಕೊನೆಯಾಯಿತು! ಈ ಘಟನೆ ನಡೆದ ನಂತರದಲ್ಲಿ ಹಾರೀಗೇರಿ ಊರಿನಲ್ಲಿ ಪ್ರತೀವರ್ಷ ಜರುಗುತ್ತಿದ್ದ ನೀರೋಕುಳಿ ಜಾತ್ರೆಯು ನಿಂತುಹೋಯಿತಾದರೂ ಇದಕ್ಕೆಲ್ಲ ಕಾರಣನಾದ ರಮೇಶನು ಮಾತ್ರ ಮಾನಿಂಗಯ್ಯನ ಕಣ್ಣೊಳಗೆ ಶಾಶ್ವತವಾಗಿ ಉಳಕೊಂಡು ಬಿಟ್ಟ!

4  ಯಾವಾಗ ರಮೇಶನು ನೀರೋಕುಳಿ ಜಾತ್ರೆಯನ್ನು ನಿಲ್ಲಿಸಿ ಬಿಟ್ಟನೊ ಆಗಲೇ, ಆತ, ಹಾರೀಗೇರಿ ಉರಲ್ಲಿರೊ ಎಲ್ಲ ಜಾತಿ ಮತಗಳನ್ನು ಮೀರಿ ಆ ಊರಿನ ಸಮಸ್ತ ಯುವಕರಿಗೆಲ್ಲ ಕ್ರಾಂತಿಕಾರಿ ವ್ಯಕ್ತಿಯಂತೆ ಕಾಣತೊಡಗಿದ. 

ಇದರಿಂದಾಗಿ, ಅವರೆಲ್ಲ ರಮೇಶನನ್ನು ಬುದ್ಧ - ಬಸವ - ಅಂಬೇಡ್ಕರರ ಸಾಲಿನಲ್ಲಿಟ್ಟು ನೋಡತೊಡಗಿದರಷ್ಟೇ ಅಲ್ಲ .... ಬರಬರುತ್ತ ಅತನ ಸಮಾಜ ಪರಿವರ್ತನೆಯ ವಿಚಾರಗಳಿಗೆ ಮಾರು ಹೋದರು. ಹೀಗಾಗಿ, ಒಂದು ರೀತಿಯಲ್ಲಿ ಊರಿನಲ್ಲಿರೊ ಯುವಕರ ಕಣ್ಣಲ್ಲಿ ರಮೇಶನು ಹೀರೊ ಆಗಿಬಿಟ್ಟನಲ್ಲದೆ ಅವರೆಲ್ಲ ದಿನವೂ ಆತನ ಬೆನ್ನಿಂದೆ ಸುತ್ತತೊಡಗಿದರು.

ಹೀಗೆ, ರಮೇಶನು ಎಲ್ಲ ಜಾತಿಯ ಯುವಕರ ದೃಷ್ಟಿಯಲ್ಲಿ ಆದರ್ಶಪ್ರಾಯನಾಗಿ ಮೆರೆಯುತ್ತಿರುವಾಗಲೇ ಸರ್ಕಾರದ ಮಟ್ಟದಲ್ಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆಗಳು ಘೋಷಣೆಯಾದವು! ಆಗಲೇ, ಈ ವ್ಯವಸ್ಥೆಯಲ್ಲಿ ತೀರ ಹೀನಾಯ ಬದುಕನ್ನು ಬಾಳುತ್ತಿದ್ದ ತಮ್ಮ ಡೊಂಬರ ಜನಾಂಗವನ್ನು ಉದ್ಧಾರ ಮಾಡಬೇಕೆಂಬ ಕನಸು ಕಾಣುತ್ತಿದ್ದ ರಮೇಶನಿಗೆ ಈ ಚುನಾವಣೆ ಅಂಬೋದು ಒಂದು ಅವಕಾಶವಾಗಿ ಒದಗಿ ಬಂದಿತೆನಿಸಿತು. ಹೀಗಾಗಿ, ಆತ, ನಾಗನೂರ ಓಣಿಯ ವಾರ್ಡ್‌ನಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಮನಸ್ಸು ಮಾಡಿದ.

ಹೀಗೆ, ಈ ಸಲದ ಹಾರೀಗೇರಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಲು ರಮೇಶನು ಒಲವು ತೋರಿದ ಸುದ್ದಿ ಊರ ತುಂಬೆಲ್ಲ ಪುಂಖಾನು ಪುಂಖವಾಗಿ ಹರಿದಾಡತೊಡಗಲು ಮಾನಿಂಗಯ್ಯ ಒಳಗೊಳಗೆ ಕುದ್ದು ಹೋದ. ಜೊತೆಗೆ, ರಮೇಶನಿಗಿರುವ ಯುವಜನರ ಬೆಂಬಲವನ್ನು ಕಂಡು ಬೆಚ್ಚಿ ಬಿದ್ದ. ಅಲ್ಲದೇ, ಈತನನ್ನು ಹೀಗೇ ಬಿಟ್ಟರೆ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ತಮ್ಮನ್ನೇ ಆಳುವ ದೊರೆಯಾಗಿ ಬಿಡುತ್ತಾನೆಂದು ಮಾನಿಂಗಯ್ಯನಿಗೆ ಖಾತ್ರಿಯಾಗಿ ಬಿಡಲು ರಮೇಶನನ್ನು ಈ ಊರಲ್ಲಿ ಅಷ್ಟೇ ಅಲ್ಲ .... ಈ ಲೋಕದಲ್ಲೇ ಇನ್ನಿಲ್ಲವಾಗಿಸುವ ಸಂಚೊಂದನ್ನು ರೂಪಿಸಿದ.

ಆತ, ಹೀಗೆ ಸಂಚು ರೂಪಿಸಿದ ಕೆಲವೇ ದಿನಗಳಲ್ಲಿ, ಇತ್ತ ಅದೊಂದು ದಿನ, ರಮೇಶನು ಯಾವುದೋ ಕೆಲಸದ ಮೇಲೆ ಬೆಳಗಾವಿ ಶಹರಕ್ಕೆ ಹೋಗಿ ಬರುತ್ತೇನೆಂದು ಕೆಂಚವ್ವನಿಗೆ ಹೇಳಿ ಹೋದವನು, ದಿನಗಳ್ಹಿಂದೆ ದಿನಗಳು ಸರಿದು ಹೋಗಲಾರಂಭಿಸಿದವು ವಿನಃ ರಮೇಶನು ಮಾತ್ರ ಮರಳಿ ಹಾರೀಗೇರಿಗೆ ಬರಲೇ ಇಲ್ಲ! ಇದರಿಂದಾಗಿ, ಕೆಂಚವ್ವನು, ಆತನ ಬರುವಿಕೆಗಾಗಿ ಕಾದು ಕುಳಿತಳಾದರೂ ಫಲ ಮಾತ್ರ ಶೂನ್ಯವಾಯಿತು.

ಹೀಗಾಗಿ, ಆಕೆ, ರಮೇಶನ ನೆನಪಲ್ಲೇ ಅನ್ನ - ನೀರು ತೊರೆದು, ಹಾಸುಗೆ ಹಿಡಿದವಳು ಅದೇ ಚಿಂತೆಯಲ್ಲಿ ಅದೊಂದು ದಿನ ಸ್ಮಶಾನದ ಹಾದಿ ಹಿಡಿದು ಬಿಟ್ಟಳು! ಆದರೆ, ಗುಂಡು ಕಲ್ಲಿನಂತಿದ್ದ ಕೆಂಚವ್ವ, ಹೀಗೆ ಏಕಾ ಏಕಿ ಸತ್ತು ಹೋಗುವುದಕ್ಕೆ ತಾನು ಗೊತ್ತು ಮಾಡಿದ ಹಂತಕರಿಂದ ದೂರದ ಆಂಧ್ರದ ಗಡಿಯ, ಯಾವುದೋ ಒಂದು ಹಳ್ಳಿಯ ಹೊರಬಯಲಿನಲ್ಲಿ ರಮೇಶನ ಹೆಣ ಸುಟ್ಟು ಕರಕಲಾದದ್ದೇ ಕಾರಣವಾಯಿತು - ಎಂಬ ಘೋರ ಸತ್ಯ ಸಂಗತಿ ಮಾತ್ರ ಮಾನಿಂಗಯ್ಯನಿಗಷ್ಟೇ ಗೊತ್ತಿತ್ತೆ ವಿನಃ ಖುದ್ದು ಕೆಂಚವ್ವನಿಗೂ ಗೊತ್ತಿರಲಿಲ್ಲ. ಹೀಗಾಗಿ, ಊರ ಜನರೆಲ್ಲ ಮಹತ್ವಾಕಾಂಕ್ಷಿಯಾಗಿದ್ದ ರಮೇಶನು ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕೆಂದುಕೊಂಡು ಹಾರೀಗೇರಿ ಊರನ್ನೇ ತೊರೆದು ಬೆಂಗಳೂರಿಗೆ ಹೋಗಿರಬೇಕೆಂದು ಕೊಂಡಿದ್ದರು!

***
ರಮೇಶನು ಇನ್ನೊಂದು ಹಾರೀಗೇರಿ ಊರಿನ ಹಾದಿಯನ್ನು ತುಳಿಯಲಾರ ಎಂದು ಖಚಿತವಾಗಿ ಅರಿತಿದ್ದ ಮಾನಿಂಗಯ್ಯನು, ಈ ಸಲ, ಮಳೆಯೂ ಕೂಡ ಆಗದೆ ರಣ ರಣ ಅಂತ ಸುರೀತಿರೊ ಬಿಸುಲಿನಿಂದಾಗಿ ಹಾರೀಗೇರಿ ಊರೊನ ಕೆರೆ - ಬಾವಿಗಳೆಲ್ಲ ಬತ್ತಿ ಹೋಗಿ, ಗುಬ್ಬಿ ಕುಡಿಯಲು ಸಹ ನೀರು ಇಲ್ಲದಾಗಿರುವ ಕಡು ಬೇಸಗೆಯ ಈ ದಿನಗಳಲ್ಲಿ ನೀರೋಕುಳಿ ಜಾತ್ರೆಯನ್ನು ನೆರವೇರಿಸಲೇಬೇಕೆಂದು ತನ್ನ ಮನದೊಳಗೆ ನಿರ್ಧರಿಸಿಕೊಂಡು ಕುಂತುಬಿಟ್ಟಿದ್ದ! ಯಾಕೆಂದರೆ, ಹನುಮಪ್ಪನ ಗುಡಿಯ ಪಂಚ ಕಮೀಟಿಗೆ ಚೇರ‌್ಮನ್ ಆಗಿದ್ದ ಆತ, ಕಳೆದ ನಾಕಾರು ವರ್ಷದಿಂದ ನಿಂತು ಹೋಗಿದ್ದ ನೀರೋಕುಳಿ ಜಾತ್ರೆಯನ್ನು ಮರು ಪ್ರಾರಂಭಿಸುವುದು ಮತ್ತು ಆ ಮೂಲಕ ರಮೇಶನಿಂದಾಗಿ ತನಗಾದ ಅವಮಾನವನ್ನು ನಿವಾರಿಸಿಕೊಳ್ಳುವುದು ತನ್ನ ಪ್ರತಿಷ್ಠೆಯ ಸಂಗತಿಯೆಂದುಕೊಂಡಿದ್ದ ಅದಕ್ಕೇ, ಆತ, ಈಗ ತಿಂಗಳಿಂದೆಯೇ ಅದೊಂದು ದಿನ ಪಂಚ ಕವಿಗೋಟೆಯಲ್ಲಿದ್ದವರನ್ನೆಲ್ಲ ಗುಡಿಗೆ ಕರೆಸಿ; ಮೀಟಿಂಗು ಮಾಡಿ, ಅವರಿಂದ ನೀರೋಕುಳಿ ಜಾತ್ರೆ ನೆರವೇರಿಸಲು ಒಪ್ಪಿಗೆ ಪಡೆದಿದ್ದ.

ಕ್ರಮೇಣ, ಇದು ಊರಲ್ಲೆಲ್ಲ ಸುದ್ದಿಯಾಗಿ ಹರಿದಾಡತೊಡಗಲು ಮಾಯವ್ವನ ಕಿವಿಗೂ ಬಿದ್ದಿತ್ತು. ಆದರೆ, ಈ ಹಾರ್‌ಬಾತ್ಮಿಯ ಬಗ್ಗೆ ತಲೆ ಕೆಡಿಸಿಕೊಂಡಿರದಿದ್ದ ಆಕೆ, ತನ್ನಷ್ಟಕ್ಕೆ ತಾನೇ, `ಇದೆಲ್ಲ ಆಗದ ಮಾತೆಳು ...' ಎಂದು ಮನದೊಳಗೆ ಅಂದುಕೊಂಡು ಸಮಾಧಾನ ಪಟ್ಟಿದ್ದಳು.

ಆದರೆ, ನೀರೋಕುಳಿ ಜಾತ್ರೆ ಇನ್ನೇನು ವಾರೊಪ್ಪತ್ತಿನಲ್ಲಿ ಬಂದೇ ಬಿಟ್ಟಿತು ಎಂದು ಕೊಳ್ಳುತ್ತಿರುವಾಗಲೇ ಮಾನಿಂಗಯ್ಯನು, ಇಂದು ಬೆಳಿಗ್ಗೆ, ಪೂಜಾರಿ ಮಾರುತಿಯೊಂದಿಗೆ ಮಾಯವ್ವನ ಮನೆಗೆ ಬಂದು, ನೀರೋಕುಳಿ ಜಾತ್ರೆಗೆಂದು ಒತ್ತಾಯ ಪೂರ್ವಕವಾಗಿ ಆಕೆಗೆ, ವೀಳ್ಯ ಕೊಟ್ಟು, `ಲೇ, ಮಾಯವ್ವ, ನಿಮ್ಮವ್ವ ಇದ್ದಾಗ ಹೆಂಗನಡೀತಿತ್ತಲ್ಲ .... ಹಂಗ ಈ ಸಲನೂ ನೀರೋಕುಳಿ ಜಾತ್ರೆ ನಡೀಬೇಕು. ಅದಕ್ಕೆಲ್ಲ ನಿಮ್ಮ ಹೆಂಗ್ಸರನ್ನು ಒಪ್ಪಿಸೊ ಜವಾಬ್ದಾರಿ ನಿಂದ ನೋಡು ....' ಎಂದು ತಾಕೀತು ಮಾಡಿ ಹೋಗಿದ್ದ.

ತಣ್ಣಗೆ ಮಡುಗಟ್ಟಿದ ನಿಶಬ್ದದಲಿ ಗೋಡೆಯ ಮೇಲಿದ್ದ ಹಲ್ಲಿ, `ಲೊಚ್ .... ಲೊಚ್....' ಎಂದು ನುಡಿದಾಗ ಮೇಲೆ ಸೂರಿಗೆ ಕಣ್ಣು ನೆಟ್ಟು ಕುಂತಿದ್ದ ಮಾಯವ್ವ, ತಟ್ಟನೆ ದೃಷ್ಟಿ ಕದುಲಿಸಿ, ಸುತ್ತಲೂ ಕಣ್ಣಾಡಿಸಿದಳು.ಆಗ, ತನ್ನವ್ವ ಕೆಂಚಪ್ಪನಿಲ್ಲದ ಭಣಗುಡುತ್ತಿದ್ದ ಮನೆಯು, ತನ್ನನ್ನೇ ಕಂಡು ಅಣಕಿಸಿದಂಗಾಗಲು ಒಳಗೊಳಗೆ ಸಂಕಟಪಟ್ಟಳು. ಆ ಸಂಕಟದಿಂದಾಗಿ, ಮಾನಿಂಗಯ್ಯನ ಮೇಲೆ ಸಿಟ್ಟು ಉಕ್ಕೇರಿ ಬರಲು ಕಟಕಟನೆ ಹಲ್ಲು ಕಡಿದಳು. ಆಗಲೇ, ಈಗ ವರ್ಸೊಪ್ಪತ್ತಿನ್ಹೆಂದೆ ಇದ್ದಕ್ಕಿದ್ದಂಗೆ ಕಣ್ಮರೆಯಾಗಿದ್ದ ತನ್ನ ಚಿಗವ್ವನ ಮಗ, ರಮೇಶನು ಆಕೆಯ ಕಣ್ಮುಂದೆ ಬಂದು ನಿಂತಂಗಾಯಿತು ಆ ಹೊತ್ತಿನಲ್ಲಿ, ಆತ, - `ಯಕ್ಕ, ಆ ತಾಯ್ಗಂಡ ಸೂಳಿ ಮಗ .... ಮಾನಿಂಗಯ್ಯನ ಮಾತು ಕೇಳ್ವ್ಯಾಡ! ನೀನು, ಆವುನಿಗಂಜಿ ನೀರೋಕುಳ್ಯಾಗ ಭಾಗ ತಗೋಬ್ಯಾಡ ನಾ, ಆಗಿದ್ರ .... ಇಟ್ಟೊತ್ತಿಗಾಗ್ಲೆ ಆ ಲೌಡಿ ಮಗನ್ನ ಅಡ್ಡಡ್ಡ ಸೀಳಿ ಹಾಕ್ತಿದ್ದೆ, ಖರೇ....! ಆದ್ರ, ಏನು ಮಾಡ್ಲಿ? ಅವನು, ಪಿತೂರಿ ನಡ್ಸಿ.... ನನ್ನ ದೇಹನ ಇಲ್ದಂಗ ಮಾಡಿಬಿಟ್ಟಾನು! ಹಿಂಗಾಗಿ, ನನ್ನ ಆತ್ಮ ... ಅಂತರ್‌ಪಿಶಾಚಿಯಂಗ್ ಈ ಊರು ಸುತ್ತಮುತ್ತನ ಗಾಳ್ಯಾಗ ಸುತ್ಲಿಕತ್ತೆದೆ! ಆದ್ರ, ನೀ ಹೆದರ್ಬ್ಯಾಡ.

ನನ್ನ ಆತ್ಮ ಯಾವತ್ತೂ ನಿನ್ನ ಬೆನ್ನಿಂದನ ಆಸ್ರಾಗಿ ಇರ‌್ತದ. ಅವುನು ಏನು ಹರ‌್ಕೊಂತಾನೊ ಹರ‌್ಕೊಳ್ಲಿ, ಹಾದ್ರಗಿತ್ತಿ ಮಗ....' ಎಂದು ಮಾಯವ್ವನಿಗೆ ಅಂದಂಗಾಯಿತು. ಅದ ಕೇಳಿದ ಮರುಕ್ಷಣವೇ ಆಕೆಯ ದೇಹದೊಳಗೆ ರಮೇಶನೇ ಹೊಕ್ಕಂತಾಗಲು ಕುಂತಲ್ಲೇ ಮಿಸುಕಾಡಿದಳು. ಹಾಗೇ ದೀರ್ಘವಾದ ನಿಟ್ಟುಸುರೊಂದನ್ನು ಗಾಳಿಯಲ್ಲಿ ತೇಲಿ ಬಿಟ್ಟ ಮರುಕ್ಷಣವೇ ಅದೇ ಗಾಳಿಯನ್ನು ಒಮ್ಮೆ ದೀರ್ಘವಾಗಿ ಒಳ ಎಳೆದುಕೊಂಡವಳೆ ತನ್ನೆರಡೂ ಕೈಗಳನ್ನು ಮೇಲೆತ್ತಿ; ಇಡಿಯಾಗಿ ದೇಹವನ್ನೊಮ್ಮೆ ಬಿಲ್ಲಿನಂತೆ ಬಾಗಿಸಿ, ಅತ್ತಿತ್ತ ಗಾಳಿಯಲ್ಲಿ ತೇಲಾಡಿಸಿದಳು.

ಆಕೆ, ಕ್ಷಣ ಹೊತ್ತು ಅದೇ ಭಂಗಿಯಲ್ಲಿರುವಾಗಲೇ ಮನದೊಳಗೆ ಒಂದು ನಿರ್ಧಾರಕ್ಕೆ ಬಂದವಳೇ, ನೀರೋಕುಳಿ ಜಾತ್ರೆಯನ್ನು ನಡೆಸುವ ನೆಪದಲ್ಲಿ; ಹನುಮಪ್ಪನ ಗುಡಿಯ ಪಂಚ ಕಮೀಟಿಯನ್ನು ಮುಂದಿಟ್ಟುಕೊಂಡು ತಮ್ಮ ಜನಾಂಗದ ಮೇಲೆ ದೌರ್ಜನ್ಯವೆಸಗುತ್ತಿರುವ ಮಾನಿಂಗಯ್ಯನ ವಿರುದ್ಧ ದೂರು ಕೊಡಲು ಕುಡಚಿ ಪೊಲೀಸು ಸ್ಟೇಷನ್ನಿಗೆ ಹೋಗಲೆಂದು ನಾಳೆ ಹುಟ್ಟಲಿರುವ ನಸುಕಿಗಾಗಿ ಕಾಯತೊಡಗಿದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT