ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕೋಬಾರ್‌ಗೆ ಬದಲಿ ಮಾರ್ಗ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜರಾವ ಬುಡಕಟ್ಟು ಜನಾಂಗವನ್ನು ಶೋಷಿಸುವುದನ್ನು ತಪ್ಪಿಸುವ ಸಲುವಾಗಿ ಅಂಡಮಾನ್‌ನಿಂದ ನಿಕೋಬಾರ್‌ನತ್ತ  ಹೋಗಲು ಸಮುದ್ರ ಹಾಗೂ ವಾಯು ಮಾರ್ಗವನ್ನೇ ಅವಲಂಬಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಪ್ರಸಕ್ತ ಹೆದ್ದಾರಿ (ಎನ್‌ಎಚ್ 223) ಸುಮಾರು ಮುನ್ನೂರು ಕಿ.ಮೀ ದೂರವಿದ್ದು, ರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾಯ್ದು ಹೋಗುತ್ತದೆ. ಈ ಮಾರ್ಗ ಮಧ್ಯೆ ಜರಾವ ಬುಡಕಟ್ಟು ಜನಾಂಗದವರ ವಾಸಸ್ಥಾನವೂ ಇದೆ.
ಈ ಮಾರ್ಗದಲ್ಲಿ ಸಂಚಾರ ನಿಷೇಧಿಸಿದರೆ, ಪರ್ಯಾಯ ಮಾರ್ಗ ಅನಿವಾರ್ಯ ಎಂದು ಬುಡಕಟ್ಟು ವ್ಯವಹಾರಗಳ ಸಚಿವ ವಿ.ಕಿಶೋರ್ ಚಂದ್ರ  ಸುದ್ದಿ ಸಂಸ್ಥೆಗೆ ತಿಳಿಸಿದರು.

ಪರ್ಯಾಯ ಸಮುದ್ರ ಮಾರ್ಗವು ಸರ್ವಋತು ಮಾರ್ಗವಾಗಲಿದೆಯೇ ಎನ್ನುವುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಒಂದೊಮ್ಮೆ ಈ ಮಾರ್ಗ ಸರ್ವಋತು ಮಾರ್ಗವಾದರೆ ಈ ಮಾರ್ಗವನ್ನೇ ಅನುಸರಿಸಲಾಗುವುದು ಎಂದರು.

ಎರಡೂ ದ್ವೀಪಗಳ ನಡುವೆ ಸಂಪರ್ಕಕ್ಕೆ ಸದ್ಯ ಹೆಲಿಕಾಪ್ಟರ್ ಸೇವೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆಹಾರ, ಔಷಧ ಪೂರೈಕೆ, ರೋಗಿಗಳನ್ನು ಕರೆದೊಯ್ಯುವುದು ಮುಂತಾದ ಸೇವೆಗೆ ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತಿದೆ ಎಂದರು.

ನಿಕೋಬಾರ್ ದ್ವೀಪಕ್ಕೆ ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಹೆದ್ದಾರಿ ಮಾರ್ಗವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬೆಂಗಾವಲು ಇರುತ್ತದೆ. ಜತೆಗೆ ಚಿತ್ರೀಕರಣ ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದೂ ಅವರು ಹೇಳಿದರು.

ಜರಾವ ಜನರ ಶೋಷಣೆ: ಕ್ರಮಕ್ಕೆ ಸೂಚನೆ

ನವದೆಹಲಿ (ಪಿಟಿಐ): ಅಂಡಮಾನ್- ನಿಕೋಬಾರ್ ದ್ವೀಪದ ಜರಾವ ಬುಡಕಟ್ಟು ಜನರ ಅರೆನಗ್ನ ನೃತ್ಯದ ಚಿತ್ರೀಕರಣ ಕುರಿತು ಕಳವಳ ವ್ಯಕ್ತಪಡಿಸಿರುವ ಪರಿಶಿಷ್ಟ ವರ್ಗದ ರಾಷ್ಟ್ರೀಯ ಆಯೋಗ, ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅಲ್ಲಿನ ಆಡಳಿತಕ್ಕೆ ಸೂಚಿಸಿದೆ.

ಅಲ್ಲದೆ ಘಟನೆ ಕುರಿತು ಆಯೋಗಕ್ಕೆ ಶೀಘ್ರವೇ ಸಮಗ್ರ ವರದಿ ಸಲ್ಲಿಸುವಂತೆಯೂ ಸೂಚಿಸಿದೆ. ಘಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವರದಿ ನೀಡಲು ತಾಕೀತು ಮಾಡಿದೆ. ಕಲ್ಕತ್ತ ಹೈಕೋರ್ಟ್‌ನ ನಿರ್ದೇಶನದ ಪ್ರಕಾರ ಪ್ರವಾಸಿಗರಿಂದ ಜರಾವ ಬುಡಕಟ್ಟು ಜನರಿಗೆ ರಕ್ಷಣೆ ನೀಡಬೇಕು ಮತ್ತು ಇಂತಹ ಚಟುವಟಿಕೆಗೆ ಕಾರಣರಾದವರನ್ನು ಪತ್ತೆ ಮಾಡಿ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಂಡಮಾನ್ ಮತ್ತು ನಿಕೋಬಾರ್ ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಪರಿಶಿಷ್ಟ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ರಾಮೇಶ್ವರ ಒರಾನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT