ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕ್ಷೇಪ್ ಟೆನಿಸ್ ಪ್ರೀತಿಗೆ ಒಲಿದ ಫಲ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ನನ್ನ ಜೀವಮಾನದಲ್ಲಿ ಒಮ್ಮೆಯಾದರೂ ಭಾರತ ತಂಡವನ್ನು ಪ್ರತಿನಿಧಿಸಬೇಕು. ಒಂದು ಸಲವಾದರೂ ಡೇವಿಸ್ ಕಪ್‌ನಲ್ಲಿ ಆಡಬೇಕು...'

ಕೆಲ ದಿನಗಳ ಹಿಂದೆ `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ಕರ್ನಾಟಕದ ಟೆನಿಸ್ ಆಟಗಾರ ಬಿ.ಆರ್. ನಿಕ್ಷೇಪ್ ತಮ್ಮ ಮನದ ಆಸೆಯನ್ನು ಹೀಗೆ ವ್ಯಕ್ತಪಡಿಸಿದ್ದರು. ಈಗ ಅವರ ಆಸೆ ಈಡೇರಿದೆ. ಡೇವಿಸ್ ಕಪ್‌ಗೆ ಭಾರತ ತಂಡವನ್ನು ಪ್ರತಿನಿಧಿಸಬೇಕೆನ್ನುವ ಬಾಲಕನ ಕನಸು ಕೈಗೂಡಿದೆ.

ದಕ್ಷಿಣ ಕೊರಿಯಾದಲ್ಲಿ ಏಪ್ರಿಲ್ 22ರಿಂದ ನಡೆಯಲಿರುವ ಜೂನಿಯರ್ (16 ವರ್ಷದೊಳಗಿನವರು) ಡೇವಿಸ್ ಕಪ್ ಟೂರ್ನಿಗೆ ನಿಕ್ಷೇಪ್ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದಾರೆ. ನಿಕ್ಷೇಪ್ ಡೇವಿಸ್ ಕಪ್‌ನಲ್ಲಿ ಪಾಲ್ಗೊಳ್ಳುವುದನ್ನು ಎಐಟಿಎ ಮೂಲಗಳು `ಪ್ರಜಾವಾಣಿ'ಗೆ ಖಚಿತಪಡಿಸಿದ್ದು, ಅಧಿಕೃತ ಅದೇಶ ಹೊರ ಬೀಳುವುದಷ್ಟೇ ಬಾಕಿಯಿದೆ.

ಹಗಲಿರುಳು ಎನ್ನದೇ ಟೆನಿಸ್ ಕೋರ್ಟ್‌ನಲ್ಲೇ ಬಹುತೇಕ ತಮ್ಮ ಬಾಲ್ಯವನ್ನು ಕಳೆದಿರುವ ನಿಕ್ಷೇಪ್‌ಗೆ ಟೆನಿಸ್ ಬಗ್ಗೆ ಅಪಾರ ಪ್ರೀತಿಯಿದೆ. ರ‌್ಯಾಕೆಟ್‌ನಷ್ಟು ಎತ್ತರವಾಗುವ ಮುನ್ನವೇ ಟೆನಿಸ್ ಅಂಗಣದಲ್ಲಿ ಸಾಕಷ್ಟು ಬೆವರು ಹರಿಸಿದ್ದರು. ಇದೀಗ ಈ  ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಬೇಕೆಂಬ ಛಲಕ್ಕೆ ಫಲ ಲಭಿಸಿದೆ. ತಮ್ಮ ಗುರಿಯನ್ನು ಈಡೇರಿಸಿಕೊಳ್ಳಲು ನಿತ್ಯ ನಾಲ್ಕರಿಂದ ಆರು ಗಂಟೆ ಅಭ್ಯಾಸ. ಇಂದು ಒಂದೂರು, ನಾಳೆ ಮತ್ತೊಂದು ಊರು... ಹೀಗೆ ವಿವಿಧ ರಾಜ್ಯಗಳಿಗೆ ತಿರುಗಾಡಿ ವಿವಿಧ ಟೂರ್ನಿಗಳಲ್ಲಿ ತಮ್ಮ ಸಾಮರ್ಥ್ಯ ಮೆರೆದಿದ್ದಾರೆ.

2012ರಲ್ಲಿ ಮುಂಬೈಯಲ್ಲಿ ನಡೆದ ಸೂಪರ್ ಸರಣಿ ಟೆನಿಸ್ ಟೂರ್ನಿಯ 14 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು.  ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಟ್ಯಾಲೆಂಟ್ ಸೀರಿಸ್ ಟೂರ್ನಿಯ 16 ಹಾಗೂ 18 ವರ್ಷದೊಳಗಿನವರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲೂ ಅವರು ಪ್ರಶಸ್ತಿ ಜಯಿಸಿದ್ದರು.

ಹ್ಯಾಟ್ರಿಕ್ ಪ್ರಶಸ್ತಿ: ಇದೇ ವರ್ಷದಲ್ಲಿ ನಡೆದ ಪ್ರಮುಖ ಮೂರು ಟೂರ್ನಿಗಳಲ್ಲಿ ನಿಕ್ಷೇಪ್ ಹ್ಯಾಟ್ರಿಕ್ ಪ್ರಶಸ್ತಿ ಗಳಿಸಿದ್ದರು. ಅಲ್ಲಿ ತಮ್ಮ ಸಾಮರ್ಥ್ಯ ಎನೆಂಬುದನ್ನೂ ಅವರು ತೋರಿಸಿಕೊಟ್ಟಿದ್ದರು.

ಜನವರಿಯಲ್ಲಿ ಮದುರೈ, ಕೋಲ್ಕತ್ತ ಹಾಗೂ ಗ್ವಾಲಿಯರ್‌ನಲ್ಲಿ ನಡೆದ ಎಐಟಿಎ ಟೆನಿಸ್ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಈ ಮೂರು ಪ್ರಶಸ್ತಿಗಳನ್ನು ಜಯಿಸಿದ ವೇಳೆ ಅವರು ಪತ್ರಿಕೆಯೊಂದಿಗೆ ಮಾತನಾಡಿ, `ಸಿಂಗಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆನ್ನುವ ಗುರಿ ಹೊಂದಿದ್ದೇನೆ. ನನ್ನ ಆ ದೊಡ್ಡ ಸಾಧನೆ ಮಾಡಲು ಮೂರು ಪ್ರಶಸ್ತಿಗಳು ಪ್ರೇರಣೆಯಾಗಿವೆ' ಎಂದು ಸಂತಸ ಪಟ್ಟಿದ್ದರು. ಈ ಆಟಗಾರ ಚೆನ್ನೈ ಎಟಿಪಿ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಿ ಸಾಕಷ್ಟು ಪ್ರಭಾವಿತರಾಗಿದ್ದರು. ರಫೆಲ್ ನಡಾಲ್ ಆಟವನ್ನು ನೋಡಿ ಟೆನಿಸ್ ಕ್ರೀಡೆಯತ್ತ ಒಲವು ಬೆಳೆಸಿಕೊಂಡಿದ್ದರು.

ಯುವ ಆಟಗಾರನ ಸಾಧನೆಗೆ 2011ರಲ್ಲಿ ಕೇಂದ್ರ ಸರ್ಕಾರ `ರಾಷ್ಟ್ರೀಯ ಪ್ರಶಸ್ತಿ' ನೀಡಿತ್ತು. ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) 14 ವರ್ಷದೊಳಗಿನವರ ರ‌್ಯಾಂಕಿಂಗ್ ಪಟ್ಟಿಯಲ್ಲಿ ನಿಕ್ಷೇಪ್ ಅಗ್ರಸ್ಥಾನದಲ್ಲಿದ್ದರು. ಪ್ರಸ್ತುತ 16 ವರ್ಷದೊಳಗಿನವರ ವಿಭಾಗದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT