ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖಿತಾ ಮೇಲೆ ನಿಷೇಧಕ್ಕೆ ವಿರೋಧ

Last Updated 14 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು:  `ಚಿತ್ರನಟಿ ನಿಖಿತಾ ಮೇಲೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಚಿತ್ರರಂಗದಿಂದ ಮೂರು ವರ್ಷಗಳ ಕಾಲ ಹೇರಿರುವ ನಿಷೇಧವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸಿದ್ದು, ಕೂಡಲೇ ಈ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು~ ಎಂದು ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಇಲ್ಲಿ ನಿರ್ಮಾಪಕ ಸಂಘವನ್ನು ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನಿರ್ಮಾಪಕರ ಸಂಘವು ಕೈಗೊಂಡಿರುವ ನಿರ್ಧಾರ ಏಕಪಕ್ಷೀಯವಾದುದು. ದರ್ಶನ್ ಪತ್ನಿಯ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಲಾಗದ ನಿರ್ಮಾಪಕರ ಸಂಘ, ನಿಖಿತಾ ಮೇಲೆ ನಿಷೇಧ ಹೇರಿರುವುದು ಔಚಿತ್ಯವಲ್ಲ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಾಗಿದೆ. ಇದು ಮಹಿಳಾ ವಿರೋಧಿ ನಿಲುವು~ ಎಂದು ದೂರಿದರು.

`ನಟ ಅಂಬರೀಷ್ ಹಾಗೂ ಜಗ್ಗೇಶ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಒತ್ತಡ ಹೇರಿದ್ದರಿಂದಲೇ ಅವರು ಕೇಸು ವಾಪಸು ತೆಗೆದುಕೊಳ್ಳಲು ಮುಂದಾಗಿದ್ದರು. ಇದನ್ನು ನಿರಾಕರಿಸಿದ ನ್ಯಾಯಾಲಯದ ತೀರ್ಮಾನಕ್ಕೆ ಸ್ವಾಗತವಿದೆ. ನಿರ್ಮಾಪಕರ ಸಂಘವು ನಿಖಿತಾಗೆ ಮೂರು ವರ್ಷ ನಿಷೇಧ ಹೇರಿರುವಂತೆ ನಟ ದರ್ಶನ್‌ಗೂ ಚಿತ್ರರಂಗದಿಂದ ನಿಷೇಧ ಹೇರಬೇಕು~ ಎಂದು ಆಗ್ರಹಿಸಿದರು.

ಅಧ್ಯಕ್ಷೆ ಗೌರಮ್ಮ ಮಾತನಾಡಿ, `ಮಹಿಳೆಯರ ಮೇಲಿನ ದೌರ್ಜನ್ಯಗಳು ಈಚೆಗೆ ಚಿತ್ರರಂಗದಲ್ಲಿ ವರದಿಯಾಗುತ್ತಲೇ ಇವೆ. ಸಾಮಾಜಿಕ ಕಳಕಳಿ ಹೊಂದಿರುವ ನಾಯಕರು ದರ್ಶನ್ ಕೃತ್ಯವನ್ನು ಖಂಡಿಸದೆ, ನಿಖಿತಾ ಅವರನ್ನು ಬಲಿಪಶು ಮಾಡಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯಗಳು ಹೀಗೆ ಮುಂದುವರಿದರೆ ಮಹಿಳೆಯರ ರಕ್ಷಣೆಯಾದರೂ ಹೇಗೆ~ ಎಂದರು.

ನಟಿಯರಾದ ತಾರಾ, ರಮ್ಯಾ ನಿಷೇಧ ಹಿಂತೆಗೆದುಕೊಳ್ಳುವಂತೆ ಹೇಳಿಕೆ ನೀಡುರುವುದು ಸಂತೋಷದ ಸಂಗತಿ. ನಟಿ ನಿಖಿತಾ ಮೇಲೆ ಹೇರಿರುವ ನಿಷೇಧವನ್ನು ಕನ್ನಡ ಚಿತ್ರ ರಂಗದ ಇತರೆ ನಟಿಯರು ಖಂಡಿಸದೆ ಇರುವುದು ನೋವಿನ ಸಂಗತಿ. ನಿಖಿತಾ ಅವರ ಬೆಂಬಲಕ್ಕೆ ಸಂಘಟನೆ ಸಿದ್ದವಿದೆ~ ಎಂದು ಹೇಳಿದರು.

`ಸಂಧಾನ ಕಾರ್ಯಕ್ಕೆ ಮುಂದಾಗಿದ್ದ ನಟ ಅಂಬರೀಷ್ ಹಾಗೂ ಜಗ್ಗೇಶ್ ಕೂಡಲೇ ನಿಖಿತಾ ಮೇಲೆ ವಿಧಿಸಿರುವ ಮೂರು ವರ್ಷಗಳ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಚಲನಚಿತ್ರ ನಿರ್ಮಾಪಕ ಸಂಘದ ಮೇಲೆ ಒತ್ತಡ ಹೇರಬೇಕು~ ಎಂದು ಇದೇ ವೇಳೆ ಮನವಿ ಮಾಡಿದರು.

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಚರ್ಚಿಸಲು ಸಂಘಟನೆಯು ಇದೇ 18 ರಂದು ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ `ಚಿತ್ರರಂಗ ಮತ್ತು ಮಹಿಳಾ ಸಂವೇದನೆ~ ಎಂಬ ವಿಷಯದ ಮೇಲೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಂವಾದದಲ್ಲಿ ನಟಿ ಜಯಮಾಲಾ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ನಿರ್ಮಾಪಕ ಬಿ.ಸುರೇಶ್, ಚಿಂತಕರಾದ ಪ್ರೊ.ಜಿ.ಕೆ.ಗೋವಿಂದರಾವ್, ಕೆ.ಮರುಳಸಿದ್ದಪ್ಪ ಇತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಕನ್ನಡ ಚಲನಚಿತ್ರ ನಿರ್ಮಾಪಕ ಸಂಘ, ಕಲಾವಿದರ ಸಂಘ ಹಾಗೂ ಚಿತ್ರರಂಗದ ಎಲ್ಲಾ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮಿ ಹಾಗೂ ಸಂಘದ ಇತರ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT