ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ಕಾಲಮಿತಿಯೊಳಗೆ ಪ್ರಗತಿ ಸಾಧಿಸಿ

Last Updated 14 ಅಕ್ಟೋಬರ್ 2011, 9:45 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಗತಿಯಲ್ಲಿ ಹಿಂದುಳಿದಿರುವ ಕೆಲವು ಇಲಾಖೆಗಳು ತಮ್ಮ ಕಾರ್ಯದಕ್ಷತೆ ಹೆಚ್ಚಿಸಿಕೊಂಡು ನಿಗದಿತ ಕಾಲಮಿತಿ ಒಳಗಾಗಿ ಶೇ. 75ರಷ್ಟು ಪ್ರಗತಿ ಸಾಧಿಸಬೇಕು. ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿ.ವಿ. ಸದಾನಂದಗೌಡ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 12 ಇಲಾಖೆಗಳು ಶೇ. 20ರಷ್ಟು ಪ್ರಗತಿ ಸಾಧಿಸಿವೆ. ಇದಕ್ಕೆ ಮಳೆಗಾಲ ಸೇರಿದಂತೆ ಬೇರೆ ಬೇರೆ ಕಾರಣಗಳಿರಬಹುದು. ಆದರೆ, ಎಲ್ಲಾ ಶೇ. 75ರಷ್ಟು ಪ್ರಗತಿ ಸಾಧಿಸಲೇಬೇಕು. ಇಲ್ಲದಿದ್ದರೆ ಇಲಾಖೆ ಅನುತ್ತೀರ್ಣ ಎಂದೇ ಪರಿಗಣಿಸಿ, ಆ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳ ಕರ್ತವ್ಯಲೋಪವನ್ನು ಸಹಿಸ ಲಾಗುವುದಿಲ್ಲ ಎಂದು ತಾಕೀತು ಮಾಡಿದರು.

`ಯಡಿಯೂರಪ್ಪ ಅವರ ಕಾಲದಲ್ಲಿ ಎಷ್ಟು ವೇಗದಲ್ಲಿ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದವೋ ಅಷ್ಟೇ ವೇಗದಲ್ಲಿ ನನ್ನ ಕಾಲದಲ್ಲೂ ನಡೆಯಬೇಕು. ಇಲ್ಲದಿದ್ದರೆ ನನಗೆ ಕೆಟ್ಟ ಹೆಸರು ಬರುತ್ತದೆ~ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಬರಪೀಡಿತ ಹಾಗೂ ಅತೀವೃಷ್ಠಿ ಪ್ರದೇಶಗಳ ಸಮಗ್ರ ವರದಿ ನೀಡುವಂತೆ ಈಗಾಗಲೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸ ಬೇಕು ಎಂದರು.

ರಾಜ್ಯದಲ್ಲಿ ಮುಂದಿನ ಎರಡು ತಿಂಗಳಲ್ಲಿ ಹೊಂಡ ಇಲ್ಲದ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಅಗತ್ಯವಿರುವ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಅರಣ್ಯ ಇಲಾಖಾ ಅಧಿಕಾರಿಗಳು ರಾಜ್ಯ ಸರ್ಕಾರ ಕೈಗೊಳ್ಳುವ ಅಭಿವೃದ್ಧಿ  ಕಾಮಗಾರಿಗಳಿಗೆ ಸೂಕ್ತ ರೀತಿಯಲ್ಲಿ ಸಹಕರಿಸುವಂತೆ ತಿಳಿಸಿದ ಅವರು, ಗ್ರಾಮೀಣ ಪ್ರದೇಶದ ನಿರ್ವಸತಿಗರಿಗೆ ವಿವಿಧ ವಸತಿ ಯೋಜನೆ ಅಡಿ ಮನೆ ನಿರ್ಮಿಸಿಕೊಡಲು ಉದ್ದೇಶಿಸಲಾಗಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಬೇರೆ ಬೇರೆ ಕಾರಣಗಳಿಂದಾಗಿ ಮನೆ ನಿರ್ಮಾಣಕ್ಕೆ ಅಡಚಣೆ ಉಂಟಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಇದಕ್ಕಾಗಿ ಪರ್ಯಾಯ ಕ್ರಮ ಕೈಗೊಳ್ಳಲಾಗುವುದಲ್ಲದೆ, ಸಂಬಂಧಿಸಿದ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ, ಮುಂದಿನ ಒಂದು ತಿಂಗಳ ಅವಧಿ ಒಳಗಾಗಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು. 

ಜಿಲ್ಲೆಯಲ್ಲಿ ನಡೆಯುವ ಅನೇಕ  ಕಾಮಗಾರಿಗಳು ಇಲಾಖೆಗಳ ಮತ್ತು ಅಧಿಕಾರಿಗಳ ಸಮನ್ವಯತೆಯ ಕೊರತೆಯಿಂದ ಸಮರ್ಪಕವಾಗಿ ನಡೆಯುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ಪರಸ್ಪರ ಚರ್ಚಿಸಿ, ಸೂಕ್ತ ನಿರ್ಣಯ ಕೈಗೊಂಡು ಅಭಿವೃದ್ಧಿ ಕಾರ್ಯದಲ್ಲಿ ಜವಾಬ್ದಾರಿ ಅರಿತು ಭಾಗಿಗಳಾಗುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿಗೆ ಪ್ರಸಕ್ತ ಸಾಲಿನಲ್ಲಿ ್ಙ 75ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಇದುವರೆಗೂ ಕೇವಲ ್ಙ 45 ಕೋಟಿ  ಮಾತ್ರ ಖರ್ಚಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಈ ಹಿಂದೆ ಕೈಗೆತ್ತಿಕೊಳ್ಳಲಾಗಿರುವ ಯಾವುದೇ ಯೋಜನೆಗಳಿಗೆ, ಕಾಮಗಾರಿಗಳಿಗೆ ಹಣಕಾಸಿನ ಕೊರತೆ ಉಂಟಾಗದಂತೆ ಗಮನ ಹರಿಸಲಾಗುವುದು ಎಂದರು.

 ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಜಿಲ್ಲಾಧಿಕಾರಿ ವಿ. ಪೊನ್ನುರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್‌ಗುಪ್ತ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT