ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿಯಂತೆ ಸಿಇಟಿ ಪರೀಕ್ಷೆ: ಆಚಾರ್ಯ

Last Updated 18 ಫೆಬ್ರುವರಿ 2011, 18:05 IST
ಅಕ್ಷರ ಗಾತ್ರ

ಬೆಂಗಳೂರು: ಈಗಾಗಲೇ ನಿಗದಿಯಾಗಿರುವಂತೆ ಏಪ್ರಿಲ್ 27, 28ರಂದು ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾರ್ಚ್ 5ರಿಂದ ಆರಂಭವಾಗಲಿದೆ. ಮೇ 25ರಂದು ಸಿಇಟಿ ಫಲಿತಾಂಶ ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಶುಕ್ರವಾರ ಇಲ್ಲಿ ತಿಳಿಸಿದರು.

ಯಾವುದೇ ಕಾರಣಕ್ಕೂ ಸಿಇಟಿ ಪರೀಕ್ಷೆಯನ್ನು ಮುಂದೂಡುವುದಿಲ್ಲ. ನಿಗದಿಯಂತೆ ಪರೀಕ್ಷೆ ನಡೆಸಲು ಕ್ರಮಕೈಗೊಳ್ಳಲಾಗಿದೆ. ಜೂನ್ ಎರಡರಿಂದ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮತ್ತಿತರ ಕೋರ್ಸ್‌ಗಳಿಗೆ ಕೌನ್ಸೆಲಿಂಗ್ ಆರಂಭವಾಗಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಾರ್ಚ್ 5ರಿಂದ ಏಪ್ರಿಲ್ 5ರವರೆಗೆ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಪರಿಶಿಷ್ಟ ಜಾತಿ/ಪಂಗಡದವರಿಗೆ ರೂ 500 ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 650 ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೇರವಾಗಿ ಅರ್ಜಿ ಸಲ್ಲಿಸುವವರು 750 ರೂಪಾಯಿ ಶುಲ್ಕ ಭರಿಸಬೇಕು. ಮಾರ್ಚ್ 17ರಿಂದ 30ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ಸಿಇಟಿ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ದೂರದರ್ಶನ ಕೇಂದ್ರದ ಮೂಲಕ ಆರು ವಾರಗಳ ವಿಶೇಷ ಸಿಇಟಿ ತರಬೇತಿ ನೀಡಲಾಗುವುದು ಎಂದರು.

ಏ.26ರಂದು ಹೊರನಾಡು ಹಾಗೂ ಗಡಿನಾಡು ವಿದ್ಯಾರ್ಥಿಗಳಿಗೆ ಕನ್ನಡ ವಿಷಯದ ಪರೀಕ್ಷೆ ನಡೆಯಲಿದೆ. 27ರಂದು ಜೀವಶಾಸ್ತ್ರ ಮತ್ತು ಗಣಿತ, 28ರಂದು ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಗುಲ್ಬರ್ಗ, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು ಜೊತೆಗೆ ಈ ಬಾರಿಯಿಂದ ಬೆಳಗಾವಿ, ಚಿತ್ರದುರ್ಗದಲ್ಲೂ ಕೌನ್ಸೆಲಿಂಗ್ ನಡೆಯಲಿದೆ.

ಬದಲಾವಣೆ: ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತಾ ಪರೀಕ್ಷೆಯಲ್ಲಿ ಅಂದರೆ ದ್ವಿತೀಯ ಪಿಯುಸಿಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ 50ರಷ್ಟು ಹಾಗೂ ಪರಿಶಿಷ್ಟ ಜಾತಿ/ಪಂಗಡದವರು ಶೇ 45ರಷ್ಟು ಅಂಕಗಳನ್ನು ಗಳಿಸಿರಬೇಕು. ಭೌತಶಾಸ್ತ್ರ, ಗಣಿತ ಕಡ್ಡಾಯವಾಗಿದ್ದು, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಬಯೋಟೆಕ್ನಾಲಜಿ ಈ ಮೂರರ ಪೈಕಿ ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡಿರಬೇಕು.

ಡಿಪ್ಲೊಮಾದಿಂದ ನೇರವಾಗಿ ಮೂರನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ 50ರಷ್ಟು ಹಾಗೂ ಪರಿಶಿಷ್ಟ ಜಾತಿ/ಪಂಗಡದವರು ಶೇ 45ರಷ್ಟು ಅಂಕಗಳನ್ನು ಪಡೆದಿರಬೇಕು. ಗರಿಷ್ಠ ಶೇ 20ರಷ್ಟು ಸೀಟುಗಳನ್ನು ಡಿಪ್ಲೊಮಾ ಅಭ್ಯರ್ಥಿಗಳಿಗೆ ಮೀಸಲಿಡಲಾಗುತ್ತದೆ.

ಐದು ವರ್ಷದ ವಾಸ್ತುಶಿಲ್ಪ ಕೋರ್ಸ್‌ಗೆ ರಾಷ್ಟ್ರಮಟ್ಟದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಕನಿಷ್ಠ ಶೇ 40ರಷ್ಟು ಅಂಕಗಳನ್ನು ಗಳಿಸಿರಬೇಕು. ಮೂರು ಪ್ರಯತ್ನಗಳಲ್ಲಿ ಗಳಿಸಿದ ಅತಿ ಹೆಚ್ಚು ಅಂಕಗಳನ್ನು ಗಣನೆಗೆ ತೆಗೆದುಕೊಂಡು, ಆ ಅಂಕಗಳನ್ನು ಪಿಯುಸಿ ಅಂಕಗಳೊಂದಿಗೆ ಸೇರಿಸಿ ಸರಾಸರಿ ಅಂಕಗಳ ಆಧಾರ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ.

ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿ, ನೂತನ ವಿಶ್ವವಿದ್ಯಾಲಯ ಸ್ಥಾಪಿಸುವ ಸಂಬಂಧ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT