ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗಮ, ಮಂಡಳಿ ಅಧ್ಯಕ್ಷರ `ಬರ್ಖಾಸ್ತು'

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರ ನೇಮಕವನ್ನು ರದ್ದುಪಡಿಸುವಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ನಿಗಮ- ಮಂಡಳಿಗಳ ಅಧ್ಯಕ್ಷರ ನೇಮಕವನ್ನು ರದ್ದು ಮಾಡಿ ಸೋಮವಾರ ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿಯವರ ಆದೇಶದ ಪ್ರತಿ ದೊರೆತ ತಕ್ಷಣವೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ತನ್ನ ವ್ಯಾಪ್ತಿಯ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕ್ಕರ ಅವರ ನೇಮಕವನ್ನು ರದ್ದುಪಡಿಸಿದೆ. ಅನಿವಾಸಿ ಭಾರತೀಯರ ಘಟಕದ ಉಪಾಧ್ಯಕ ಗಣೇಶ ಕಾರ್ಣಿಕ್ ಮತ್ತು ಕಂಠೀರವ ಸ್ಟುಡಿಯೊ ಅಧ್ಯಕ್ಷ ಎಂ.ರುದ್ರೇಶ ಅವರ ನೇಮಕವನ್ನೂ ರದ್ದುಪಡಿಸಲಾಗಿದೆ.

ಇತ್ತೀಚೆಗೆ ಜರುಗಿದ ಬಿಜೆಪಿಯ ಪ್ರಮುಖರ ಸಭೆಯಲ್ಲಿ (ಕೋರ್ ಕಮಿಟಿ) ತೆಗೆದುಕೊಂಡ ತೀರ್ಮಾನದಂತೆ ನಿಗಮ, ಮಂಡಳಿಗಳಿಗೆ ಹೊಸಬರನ್ನು ನೇಮಕ ಮಾಡಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಈ ಕಾರಣಕ್ಕೆ ಎಲ್ಲ ನಿಗಮ- ಮಂಡಳಿಗಳ ಅಧ್ಯಕ್ಷರ ನೇಮಕವನ್ನು ರದ್ದುಪಡಿಸಲು ಸೂಚಿಸಲಾಗಿದೆ.

ನಿಗಮ, ಮಂಡಳಿಗಳ ಅಧ್ಯಕ್ಷರಾಗಿದ್ದುಕೊಂಡೇ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ ಜೊತೆ ಹಲವರು ಗುರುತಿಸಿಕೊಂಡಿರುವುದು ಪಕ್ಷಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿತ್ತು. ಅವರನ್ನು ಎತ್ತಂಗಡಿ ಮಾಡುವುದೂ ಸೇರಿದಂತೆ ಪಕ್ಷನಿಷ್ಠ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಪಕ್ಷ ಈ ತೀರ್ಮಾನಕ್ಕೆ ಬಂದಿದೆ. ಎರಡು-ಮೂರು ದಿನಗಳಲ್ಲಿ ಬಿಜೆಪಿ ಪ್ರಮುಖರು ಮತ್ತೊಮ್ಮೆ ಸಭೆ ಸೇರಿ ಹೊಸ ನೇಮಕಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT