ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗಮದ ಅಧ್ಯಕ್ಷರ ವಿರುದ್ಧ ಶಾಸಕರ ಟೀಕೆ

Last Updated 7 ಅಕ್ಟೋಬರ್ 2011, 5:50 IST
ಅಕ್ಷರ ಗಾತ್ರ

ಚಾಮರಾಜನಗರ: `ಶಿಲ್ಪಿ ಸಮೃದ್ಧಿ ಯೋಜನೆಯಡಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ 10 ಲಕ್ಷ ರೂ ನೀಡಿದೆ. ಆದರೆ, ಡಾ.ಬಿ.    ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರು ತಮ್ಮ ವಿವೇಚನಾ ಕೋಟಾದಡಿ ಸೌಲಭ್ಯ ನೀಡಲಾಗುತ್ತಿದೆ ಯೆಂದು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದು ಸರಿಯಲ್ಲ~ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ದೂರಿದ್ದಾರೆ.

100 ಮಂದಿ ಕರಕುಶಲ ಕರ್ಮಿಗಳಿಗೆ ಸಾಲ ಸೌಲಭ್ಯ ನೀಡಲು ತಾಲ್ಲೂಕಿನ ಕೋಳಿಪಾಳ್ಯ ಗ್ರಾಮದಲ್ಲಿ ಅ. 7ರಂದು ಸಮಾರಂಭ ಹಮ್ಮಿಕೊಳ್ಳ ಲಾಗಿದೆ. ಪ್ರತಿ ಫಲಾನುಭವಿಗೆ 10 ಸಾವಿರ ರೂ ಸಹಾಯಧನ ಸೇರಿದಂತೆ 20 ಸಾವಿರ ರೂ ಸಾಲ ನೀಡಲಾಗುತ್ತದೆ. ಕೇಂದ್ರ ಸರ್ಕಾರದ 10 ಲಕ್ಷ ರೂ ಹಾಗೂ ನಿಗಮದಿಂದ 10 ಲಕ್ಷ ರೂ ವಿನಿಯೋಗಿಸಿ ಸವಲತ್ತು ವಿತರಿಸ ಲಾಗುತ್ತಿದೆ. ಆದರೆ, ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಅವರು, ಅಧ್ಯಕ್ಷರ ವಿವೇಚನಾ ಕೋಟಾದಡಿ ಸೌಲಭ್ಯ ವಿತರಿಸುತ್ತಿರುವುದಾಗಿ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಫಲಾನುಭವಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

`ಸವಲತ್ತು ವಿತರಣೆಗೆ ನನ್ನ ವಿರೋಧವಿಲ್ಲ. ಆದರೆ, ಫಲಾನುಭವಿ ಗಳ ಆಯ್ಕೆಗೆ ಯಾವುದೇ ಗ್ರಾಮ ಸಭೆ ನಡೆಸಿಲ್ಲ. ಜತೆಗೆ, ಕ್ಷೇತ್ರದ ಶಾಸಕರನ್ನು ಗಣನೆಗೆ ತೆಗೆದುಕೊಂಡು ಫಲಾನುಭವಿ ಪಟ್ಟಿ ಸಿದ್ಧಪಡಿಸಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೂ ಮಾಹಿತಿ ನೀಡಿಲ್ಲ. ತಮಗೆ ಇಷ್ಟ ಬಂದಿರುವ ಫಲಾನುಭವಿ ಗಳನ್ನು ಆಯ್ಕೆ ಮಾಡಿಕೊಂಡು ಸೌಲಭ್ಯ ವಿತರಿಸುತ್ತಿದ್ದಾರೆ~ ಎಂದು ಆರೋಪಿಸಿದ್ದಾರೆ.

ಆಹ್ವಾನ ಪತ್ರಿಕೆಯಲ್ಲೂ ಕೇಂದ್ರ ಸರ್ಕಾರ ಅನುದಾನ ನೀಡಿರುವ ಬಗ್ಗೆ ಪ್ರಸ್ತಾವವಿಲ್ಲ. ಕ್ಷೇತ್ರದ ವ್ಯಾಪ್ತಿ ಹಲವು ಮಂದಿ ಕರಕುಶಲ ಕರ್ಮಿಗಳಿದ್ದಾರೆ. ಎಲ್ಲರನ್ನು ಪರಿಗಣಿಸಿ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ. ಕೇಂದ್ರ ಸರ್ಕಾರ ಅನುದಾನ ನೀಡಿದೆ. ಹಾಗಾಗಿ, `ಅಧ್ಯಕ್ಷರ ವಿವೇಚನಾ ಕೋಟಾ~ದ ಹೆಸರಿನಡಿ ಸೌಲಭ್ಯ ಕಲ್ಪಿಸಲು ಬರುತ್ತದೆಯೇ? ಎಂದು ಪುಟ್ಟರಂಗಶೆಟ್ಟಿ ಪ್ರಶ್ನಿಸಿದ್ದಾರೆ.

ಇಂದು ಸವಲತ್ತು ವಿತರಣೆ: ತಾಲ್ಲೂಕಿನ ಕೋಳಿಪಾಳ್ಯ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಮುಂಭಾಗ ಶಿಲ್ಪಿ ಸಮೃದ್ಧಿ ಯೋಜನೆಯಡಿ ಅ. 7ರಂದು ಮಧ್ಯಾಹ್ನ 12ಗಂಟೆಗೆ ಸವಲತ್ತು ವಿತರಣಾ ಸಮಾರಂಭ ನಡೆಯಲಿದೆ.
ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದಾರೆ. ಡಾ.ಬಿ.ಆರ್.  ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಸಂಸದ ಆರ್. ಧ್ರುವನಾರಾಯಣ ಇತರರು ಪಾಲ್ಗೊಳ್ಳಲಿದ್ದಾರೆ. ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT