ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗೂಢ

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

ನನ್ನದು ದುಃಖವೇ ಇಲ್ಲದ, ಸದಾ ಶಾಂತ, ನಿರ್ಲಿಪ್ತ ಮನಸ್ಸು ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಆದರೆ ಅದು ನಿಜ ಅಲ್ಲ. ಮನುಷ್ಯನಿಂದ ಹಾಗಿರಲಿಕ್ಕಾಗುವುದಿಲ್ಲ. ಹಾಗೆಂದರೆ, ಲೋಕಕ್ಕೆ ಕಾಣಿಸಲು ನಾನೊಂದು ಮುಖವಾಡ ಹಾಕಿಕೊಂಡಿದ್ದೇನೆ ಎಂದು ಅರ್ಥವಲ್ಲ. ನಾನು ಇತರರಿಂತ ಭಿನ್ನವಾಗೇನೂ ಇಲ್ಲ.

ಯಾವ ಮನುಷ್ಯನಿಗೂ ತನ್ನ ಮನಸ್ಸಿನ ಬಗ್ಗೆ ಎಲ್ಲ ಹೇಳಲಿಕ್ಕಾಗುವುದಿಲ್ಲ. ಯಾರೂ ಹಾಗೆ ಹೇಳುವುದೂ ಇಲ್ಲ. ಮನುಷ್ಯ ಎಷ್ಟು ವಾಚಾಳಿಯಾಗಿದ್ದರೂ ಕೆಲವೊಂದು ರಹಸ್ಯದೊಂದಿಗೇ ಸಾಯುತ್ತಾನೆ. ಎಲ್ಲ ಹೇಳಿಬಿಟ್ಟಿದ್ದಾನೆ ಅಥವಾ ಎಲ್ಲ ಹೇಳಿಬಿಟ್ಟಿದ್ದಾಳೆ ಎಂದು ಯಾರ ಬಗ್ಗೆಯೂ ಹೇಳಲಿಕ್ಕಾಗದು.
 
ಈ ಸತ್ಯ ಗೊತ್ತಿದ್ದೂ ನನ್ನ ಅಂತರಂಗವನ್ನು ಭೇದಿಸುವ ಪ್ರಯತ್ನ ಮಾಡಿದವರಿದ್ದಾರೆ.ನಾನು ಹೀಗೇ ಎಂದು ಜಾಹೀರು ಮಾಡಿದವರಿದ್ದಾರೆ. ಅದು ಅವರ ಭ್ರಮೆ ಮಾತ್ರ. ನನ್ನೊಳಗೆ ಕೂಡ ಕೆಲವು ರಹಸ್ಯಗಳಿವೆ. ಒಂದೆರಡಲ್ಲ, ನೂರಾರಿವೆ.ಅದೆಲ್ಲ ಹೇಳುವಂಥದಲ್ಲ. ಈಗ ಯಾಕೋ ಒಂದೆರಡನ್ನು ಹೇಳುವ ಮನಸ್ಸಾಗಿದೆ. 

ನಾನು ತಾಯಿತಂದೆಯನ್ನು ಕಳೆದುಕೊಂಡಾಗ ನನಗೆ ಐದು ವರ್ಷವಾಗಿತ್ತು ಎಂದು ನನಗೆ ಗೊತ್ತಿರುವುದು, ನನ್ನ ನೆನಪಿನಿಂದ ಅಲ್ಲ. ನನ್ನನ್ನು ಸಾಕಿ ಸಲಹಿದ್ದು ನನ್ನ ಮಾವ, ನನ್ನ ಅಮ್ಮನ ಅಣ್ಣ. ಈಗ ಅವರು ದೊಡ್ಡ ಪೊಲೀಸ್ ಆಫೀಸರ್.
 
ಬಹಳ ಪೊಲೀಸ್ ಆಫೀಸರುಗಳಂತೆ ಅವರು ಮನೆಯಲ್ಲಿ ಕೂಡ ಪೊಲೀಸ್ ಆಫೀಸರೇ ಎಂದರೆ ಅವರ ವ್ಯಕ್ತಿತ್ವದ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಮಾವ ಮನೆಯಲ್ಲಿರುವಾಗ ನನ್ನ ಅತ್ತೆಯ ಕೊರಳ ದನಿಯನ್ನು ಆ ಮನೆಯೊಳಗೆ ನಾನು ಕೇಳಿದ್ದು ಬಹುತೇಕ ಇಲ್ಲವೆಂದೇ ಹೇಳಬಹುದು.
 
ಮಾವ ಮನೆಯಲ್ಲಿಲ್ಲದಾಗಲೂ ಅತ್ತೆ ದನಿಯೇರಿಸಿ ಮಾತಾಡುವುದಿಲ್ಲ. ತಗ್ಗಿದ ದನಿಯಲ್ಲಿ ಮಾತಾಡುವುದು ಅವಳಿಗೆ ರೂಢಿಯಾಗಿದೆ. ಆಕೆ ಎಷ್ಟು ಮಗು ಮನಸ್ಸಿನವರು ಎಂದರೆ, ಹಸು, ಹಸುವಿನ ಕರು ಎಲ್ಲವನ್ನೂ ತನ್ನ ಮಕ್ಕಳು ಮರಿ ಎಂಬಂತೆ ಪ್ರೀತಿಸುತ್ತಿದ್ದರು. ನನಗೆ ಅವರು ಅತ್ತೆಯಾಗಿರಲಿಲ್ಲ. ಅಮ್ಮನೇ ಆಗಿದ್ದರು.

ನಾನು ಬೆಳೆದುದು ನನ್ನ ಮಾವನ ಮನೆಯಲ್ಲಿಯಾದರೂ ಅದನ್ನು ನಾನು ಗುರುತಿಸುವುದು ನನ್ನ ಅತ್ತೆಯ ಮನೆ ಎಂದು, ಮತ್ತು ನನ್ನ ಮನೆ ಎಂದು. ಆ ಕಾಲದಲ್ಲಿ ಜಿಲ್ಲಾ ಕಾರಾಗೃಹ ನಮ್ಮ ಮನೆಗೆ ಸಮೀಪದಲ್ಲಿತ್ತು. ಈಗ ಎಲ್ಲಿಗೋ ದೂರ ಹೋಗಿದೆ. ಆಗ ನಮ್ಮ ಮನೆಯಿಂದ ಸುಮಾರು ಇನ್ನೂರು ಗಜ ದೂರದಲ್ಲಿ ಒಂದು ಮಾವಿನ ತೋಪು ಇತ್ತು. ಈಗ ಆ ಮಾವಿನ ತೋಪು ಇಲ್ಲ.

ಈಗ ಅಲ್ಲಿ ಒಂದು ಬಹುಮಹಡಿ ಕಟ್ಟಡವಿದೆ. ಅಂದು ಆ ತೋಪಿನಲ್ಲಿ ಮಾವಿನ ಮರಗಳಲ್ಲದೆ ಎತ್ತರೆತ್ತರದ ಬೇರೆ ಮರಗಳು ಕೂಡ ಇದ್ದುವು. ಯಾವುದೋ ಒಂದು ಆಕಾಶದೆತ್ತರದ ಮರದಲ್ಲಿ ಕುಳಿತು ಒಂದು ಕೋಗಿಲೆ ಯಾವಾಗಲೂ ಕೂಗುತ್ತಿತ್ತು.
 
ಆ ಕೋಗಿಲೆಯ ದನಿ ಕೇಳುತ್ತಿರುವಾಗಲೇ ನನಗೆ ಮನುಷ್ಯ ಕಂಡುಕೊಂಡ ಸಂಗೀತ ಕೋಗಿಲೆಯ ದನಿಯಲ್ಲಿ ಕೂಡ ಇದೆ ಎಂದು ಅರ್ಥವಾದುದು. ಕೋಗಿಲೆಯ ಕೂಗಿನ ಜೊತೆ ನನ್ನ ದನಿಯನ್ನು ಸೇರಿಸಲು ಪ್ರಯತ್ನಿಸಿದೆ.

ಅದರ ದನಿಯಲ್ಲಿರುವ ಹರ್ಷವನ್ನು ಅನುಭವಿಸುವ ಯತ್ನದಲ್ಲಿ ನಾನೇ ಆ ದನಿಯಾದೆ. ಅದು ನನ್ನದೇ ದನಿ ಎಂದು ಕಲ್ಪಿಸಿಕೊಂಡೆ. ಹಲವು ಸಲ ಕೋಗಿಲೆಯನ್ನು ಕಾಣಲು ತಲೆಯೆತ್ತಿ ಹುಡುಕಾಟ ನಡೆಸಿದೆ.

 ಕೋಗಿಲೆ ನನಗೆ ಕಾಣಿಸಲೇ ಇಲ್ಲ. ಕೋಗಿಲೆ ಬಹುಶಃ ಯಾವಾಗಲೂ ಯಾರಿಗೂ ಕಾಣಿಸದಂತೆ ಎಲೆಗಳ ಮರೆಯಲ್ಲಿ ಕುಳಿತುಕೊಳ್ಳುತ್ತದೆ. ಆ ರೀತಿಯ ಧ್ಯಾನಸದೃಶ ಸಂಗೀತಕ್ಕೆ ಅಂಥ ಪರಿಪೂರ್ಣ ಏಕಾಂತ ಅಗತ್ಯ ಎಂದುಕೊಂಡೆ. ಕೋಗಿಲೆಯನ್ನು ಕಾಣುವ ಯತ್ನವನ್ನು ತೊರೆದೆ. ಮನುಷ್ಯನ ಕಣ್ಣಿಗೆ ಬೀಳಬಾರದೆಂಬ ಉದ್ದೇಶವೂ ಕೋಗಿಲೆಗೆ ಇರಬಹುದು.  

ಹನ್ನೆರಡು ವರ್ಷ ಪ್ರಾಯವಾಗುವವರೆಗಿನ ನನ್ನ ಬದುಕು ಆ ಮಾವಿನ ತೋಪಿನೊಂದಿಗೆ ಜೋಡಿಕೊಂಡಿದೆ. ಅಷ್ಟೇ ಮುಖ್ಯವಾಗಿ ಜಿಲ್ಲಾ ಕಾರಾಗೃಹದೊಂದಿಗೆ ಕೂಡ. ಈಗ ನನ್ನ ಬದುಕು ಅದೆಲ್ಲದರಿಂದಲೂ ದೂರವಾಗಿದೆ.
 
ಈಗ ನನ್ನ ಜೊತೆ ನನ್ನ ಕುಟುಂಬವಿದೆ. ಆದರೆ ನನ್ನ ಮನಸ್ಸು ದಿನದಲ್ಲಿ ಒಂದಷ್ಟು ಹೊತ್ತು ಆ ಮಾವಿನ ತೋಪಿನಲ್ಲಿ ಮತ್ತು ಆ ಕಾರಾಗೃಹದಲ್ಲಿ ಇದೆ ಎಂದನಿಸುತ್ತದೆ.ಆದರೆ ಈ ರಹಸ್ಯ ಯಾರಿಗೂ ತಿಳಿಯದು.

ನನ್ನ ಪ್ರೀತಿಯ ಮಾವಿನ ತೋಪಿನಲ್ಲಿ ನನಗೆ ಸಿಗುತ್ತಿದ್ದಂಥ ಆನಂದ ನನಗೆ ಎಲ್ಲಿಯೂ ಸಿಗುವಂಥದಲ್ಲ. ಅಲ್ಲಿಗೆ ಹೋಗುವಾಗ ದಾರಿಯ ಪಕ್ಕದಲ್ಲಿ ಜೈಲಿನ ಎತ್ತರವಾದ ಗೋಡೆಯನ್ನು ದಾಟಿ ಹೋಗಬೇಕಾಗಿತ್ತು. ಒಂದು ಬಾರಿ ಆ ಗೋಡೆಯ ಮೇಲಿಂದ ಒಂದು ಗುಲಾಬಿ ಹೂ ಹೊರಗಿಣುಕುತ್ತಿರುವುದನ್ನು ನೋಡಿ ನಾನು ಅಲ್ಲೇ ನಿಂತುಬಿಟ್ಟೆ.
 
ಅದು ದೊಡ್ಡ ಗಾತ್ರದ ಕೆಂಪು ಗುಲಾಬಿ. ಅದು ಗಾಳಿಯಲ್ಲಿ ಜೋಕಾಲಿಯಾಡುವುದನ್ನು ನೋಡುತ್ತಾ ನಾನೇ ಆ ಹೂವಾಗಿದ್ದರೆ ಎಷ್ಟು ಚೆನ್ನ ಎಂದು ನನಗೆ ಅನಿಸಿತು. ನೋಡುತ್ತಾ ಆ ಹೂವು ನಾನೇ ಎಂದನಿಸಿತು.
 
ನಾನು ಆ ಹೂವಿನ ಅಂತರಂಗದೊಳಗೆ ಹೋಗಲಿಲ್ಲ. ನನ್ನ ಅಂತರಂಗದೊಳಗೆ ಅದು ಬರಲಿಲ್ಲ. ಅದು ಒಂದು ಕವಿತೆಯಂತೆ ನನ್ನೊಳಗೆ ಅರಳತೊಡಗಿತು. ನಾನು ಕವಿಯಾಗುತ್ತಿದ್ದೇನೆ ಅನಿಸಿತು. ಕವಿಯಾಗಲು ಆಸೆಪಟ್ಟೆ. ಆ ಹೂವೇ ನಾನಾಗಿಬಿಟ್ಟೆ.

ಒಂದೇ ದಿನ. ಮರುದಿನ ಆ ಹೂವು ಅಲ್ಲಿ ಇರಲಿಲ್ಲ. ಯಾವುದೋ ಒಂದು ತೀವ್ರ ವಿಷಾದ ಭಾವ ನನ್ನಲ್ಲಿ ತುಂಬಿಕೊಂಡಿತು. ಹೂವನ್ನು ಕಳೆದುಕೊಂಡಂತೆ ಅಲ್ಲ, ನನ್ನನ್ನೇ ಕಳೆದುಕೊಂಡಂತೆ ಅನಿಸಿತು. ಹೂವನ್ನು ಯಾರು ಕಿತ್ತರು? ಯಾಕೆ ಕಿತ್ತರು ಎಂದು ಯೋಚಿಸುತ್ತಾ ಹೋಗಿ ಮಾವಿನ ತೋಪಿನಲ್ಲಿ ಕುಳಿತುಕೊಂಡೆ.

ಹೂವಿನ ಬಗ್ಗೆ ಮತ್ತು ಜೈಲಿನ ಬಗ್ಗೆಯೇ ಯೋಚಿಸತೊಡಗಿದೆ. ಜೈಲಿನಲ್ಲಿ ಅಪರಾಧಿಗಳಿರುತ್ತಾರೆ ಎಂದು ನನಗೆ ಕೇಳಿ, ಪತ್ರಿಕೆಗಳನ್ನು ಓದಿ ಗೊತ್ತಿತ್ತು.

ಆದರೆ ಜೈಲಿನಲ್ಲಿರುವ ಕೈದಿಗಳನ್ನು ನಾನು ಕಂಡಿರಲಿಲ್ಲ. ಮಾತ್ರವಲ್ಲ, ಕೋಳ ಎಂದರೇನು, ಅದು ಹೇಗಿರುತ್ತದೆ ಎಂದು ಕೂಡ ಗೊತ್ತಿರಲಿಲ್ಲ. ಜೈಲಿನಲ್ಲಿ ಗುಲಾಬಿ ಗಿಡ ಯಾರು ಬೆಳೆಸುತ್ತಾರೆ ಎಂಬ ಕುತೂಹಲವುಂಟಾಗಿ, ಜೈಲಿನ ಕೈದಿಗಳಿಗೆ ಹೂವು ಬೆಳೆಸುವ ಸ್ವಾತಂತ್ರ್ಯವಿದೆಯೇ ಎಂದು ಚಿಂತಿಸಿದೆ.

ಬಹುಶಃ ಕ್ರೂರ ಮನಸ್ಸುಗಳಲ್ಲಿ ಕರುಣೆಯನ್ನು ತುಂಬಲು ಜೈಲಿನಲ್ಲಿ ಇಂಥ ವ್ಯವಸ್ಥೆ ಮಾಡಿಕೊಂಡಿರಬಹುದೆ? ಇರುವುದು ಒಂದೇ ಗುಲಾಬಿ ಗಿಡವೆ? ಬೇರೆ ಗಿಡಗಳಿಲ್ಲವೆ? ಇತರ ಹೂವಿನ ಗಿಡಗಳಿಲ್ಲವೆ? ಎರಡು ದಿನಗಳ ಬಳಿಕ ಮತ್ತೆ ಒಂದು ಗುಲಾಬಿ ಹೂ ಜೈಲಿನ ಗೋಡೆಯ ಮೇಲಿಂದ ಹೊರಗಿಣುಕುತ್ತಿರುವುದು ಕಾಣಿಸಿತು. ಗಿಡದ ಬಗ್ಗೆ ಕುತೂಹಲವುಂಟಾಯಿತು.

ದಿನಕ್ಕೊಂದೇ ಹೂವೆ? ಬೇರೆ ಹೂವುಗಳು ಮತ್ತು ಮೊಗ್ಗುಗಳಿಲ್ಲವೆ? ತುಸು ತಗ್ಗಿನಲ್ಲಿರಬಹುದೆ? ಅದೇಕೆ ಒಂದು ಹೂವು ಮಾತ್ರ ಗೋಡೆಯ ಮೇಲಿಂದ ಹೊರಗಿಣುಕುತ್ತದೆ? ಜೈಲಿನಿಂದ ಹೊರಹೋಗುವ ಮನಸ್ಸೇ ಅದು?

ಅದು ಬಹುಶಃ ಅಮ್ಮ ಗಿಡದ ಮನಸ್ಸಾಗಿರಬಹುದೆ? ಯೋಚಿಸುತ್ತಾ ಮತ್ತೆ ಆ ಹೂವು ನಾನಾದೆ. ಕೋಗಿಲೆಯ ಹಾಡು ಎಲ್ಲಾ ಯೋಚನೆಗಳನ್ನೂ ತೊಳೆದುಬಿಟ್ಟಿತು. ಪುನಃ ಮನೆಗೆ ಮರಳಿದ ನಂತರ ಆ ಹೂವಿನ ಬಗ್ಗೆ ಒಂದು ಕವಿತೆ ಬರೆಯೋಣವೆನಿಸಿತು.
 
ಕವಿತೆ ಬೇಡ ಹೂವಿಗೆ ಒಂದು ಪತ್ರ ಬರೆಯಬೇಕೆನಿಸಿತು. ನನಗೆ ನಾನೇ ಬರೆಯುವ ಒಂದು ಪತ್ರ. ಪತ್ರ ಬರೆಯಲಾರಂಭಿಸಿದೆ. `ನಿನ್ನನ್ನು ಕಂಡ ಬಳಿಕ ನನಗೆ ನಿನ್ನದೇ ಧ್ಯಾನವಾಗಿದೆ. ನೀನು ನಾನಾಗಿಬಿಟ್ಟಿದ್ದೇನೆ. ಅಥವಾ ನಾನು ನೀನಾಗಿಟ್ಟಿದ್ದೇನೆಯೆ? ನಿನ್ನನ್ನು ಕಳೆದುಕೊಳ್ಳಬಾರದು ಅಂದುಕೊಂಡಿದ್ದೇನೆ.

ಒಮ್ಮೆ ನೀನು ಕಾಣದಾದರೂ ಅದೇ ರೀತಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿ ಎಂಬ ವಿಶ್ವಾಸವಿದೆ. ನಾನು ನನ್ನನ್ನೇ ಪ್ರೀತಿಸುವ ಹಾಗೆ ನಿನ್ನನ್ನು ಪ್ರೀತಿಸುತ್ತೇನೆ. ಮಾತ್ರವಲ್ಲ, ನೀರೆರೆದು ನಿನ್ನನ್ನು ಪೋಷಿಸುವವರನ್ನು ಕೂಡ ಪ್ರೀತಿಸುತ್ತೇನೆ~. ಮುಂದೆ ಏನು ಬರೆಯಬೇಕೆಂದು ಹೊಳೆಯಲಿಲ್ಲ.

ಒಂದು ದಿನ ನಾನು ಮಾವಿನ ತೋಪಿನಲ್ಲಿ ಕುಳಿತುಕೊಂಡಿರುವಾಗ ಅಲ್ಲಿಗೆ ಮಾವ ಬಂದರು. ಅವರ ಕೈಯಲ್ಲಿ ಬಂದೂಕಿತ್ತು. ನಾನು ಒಮ್ಮೆ ನಡುಗಿ ಎದ್ದು ನಿಂತೆ. ಅವರು ಬಂದಿರುವುದು ನನ್ನನ್ನು ಕೊಲ್ಲಲು, ಬಹುಶಃ ನಾನು ಬರೆದಿರಿಸಿದ ಅರ್ಧ ಪತ್ರ ಅವರಿಗೆ ಸಿಕ್ಕಿರಬಹುದು ಎಂದೆಲ್ಲ ಯೋಚನೆ ಬಂತು.

ಮಾವ ನನ್ನ ಹತ್ತಿರ ಏನೂ ಮಾತಾಡಲಿಲ್ಲ. ಮಾವಿನ ತೋಪಿನಲ್ಲಿ ಏನನ್ನೋ ಹುಡುಕುತ್ತಾ ನಡೆದರು. ಸ್ವಲ್ಪ ಹೊತ್ತಿನಲ್ಲಿ ಢಂ ಎಂಬ ಶಬ್ದ ಕೇಳಿಸಿತು. ಒಂದು ಪಕ್ಷಿ ಮರದ ಮೇಲಿಂದ ಕೆಳಗೆ ಬಿತ್ತು. ಕೋಗಿಲೆ ಹೇಗಿದೆ ಎಂದು ನನಗೆ ತಿಳಿದುದು ಅವತ್ತೇ.
ಮಾವ ಕೋಗಿಲೆಯನ್ನು ಕೊಂದದ್ದು ಯಾಕೆ ಎಂದು ಕೇಳುವ ಧೈರ್ಯ ನನಗೆ ಇರಲಿಲ್ಲ.ಅದು ನನಗೆ ತಿಳಿದುದು ಅತ್ತೆ ಕೋಗಿಲೆಯ ಸಾರು ಮಾಡುತ್ತಿರುವುದನ್ನು ನೋಡಿದಾಗಲೇ. ನನಗೆಷ್ಟು ದುಃಖವಾಯಿತೆಂದರೆ ನನಗೆ ಕಣ್ಣೀರೇ ಬರಲಿಲ್ಲ. ಕೆಂಡದಂತೆ ಉರಿಯುವ ಒಣ ದುಃಖ ನನ್ನ ಮೈಮನಸ್ಸುಗಳಲ್ಲಿ  ವ್ಯಾಪಿಸಿತು.

ಕೋಗಿಲೆ ಪಲ್ಯವನ್ನು ತಿನ್ನವುದಂತಿರಲಿ, ನಾನದನ್ನು ಕಣ್ಣುಗಳಿಂದ ನೋಡಲೂ ಇಲ್ಲ. ಆ ರಾತ್ರಿ ನಾನು ನಿದ್ದೆ ಸಹ ಸರಿಯಾಗಿ ಮಾಡಲಿಲ್ಲ. ಕಣ್ಣೀರಿಲ್ಲದ ದುಃಖದಲ್ಲಿ ನನ್ನ ಕಣ್ಣು ಉರಿಯುತ್ತಿತ್ತು.

ಕೋಗಿಲೆಯನ್ನು ಕೊಂದ ಕಾರಣಕ್ಕಾಗಿ ನಾನು ಮಾವನನ್ನು ದ್ವೇಷಿಸಲಿಲ್ಲ. ಬದುಕಿನಲ್ಲಿ ಯಾರನ್ನೂ ದ್ವೇಷಿಸಲಿಕ್ಕಾಗುವುದಿಲ್ಲ. ನಮ್ಮ ಬದುಕಿಗೆ ಯಾವುದೇ ರೀತಿಯ ದ್ವೇಷದ ಅಗತ್ಯ ಇಲ್ಲ. ಮಾವ ನನ್ನ ಪ್ರೀತಿಯ ಕೋಗಿಲೆಯನ್ನು ಕೊಂದಿದ್ದರೂ ಅವರು ನನಗೆ ವಿದ್ಯೆ ಕೊಡಿಸಿದ್ದರು. ಬದುಕುವ ದಾರಿಯನ್ನು ತೋರಿಸಿಕೊಟ್ಟಿದ್ದರು.
 
ಮಾವನ ಆಯ್ಕೆಯಂತೆಯೇ ನನ್ನ ಮದುವೆಯೂ ಆಗಿತ್ತು. ಆದರೆ ಅದು ವಾಸ್ತವದಲ್ಲಿ ಮದುವೆಯಾಗುವ ನಮ್ಮಿಬ್ಬರ ಆಯ್ಕೆಯೇ ಆಗಿತ್ತು. ಮತ್ತು ಆ ಆಯ್ಕೆ ವರ್ಷಗಳ ಹಿಂದೆಯೇ ನಡೆದಿತ್ತು.

ಅದು ಮಾವನಿಗೆ ತಿಳಿದರೆ ನಮ್ಮ ಮದುವೆ ಆಗುವುದೇ ಇಲ್ಲ ಎಂದು ನಮಗೆ ಗೊತ್ತಿತ್ತು. ನಾವೇ ರೂಪಿಸಿದ ತಂತ್ರದ ಮೂಲಕ ಅದು ಮಾವನದೇ ಆಯ್ಕೆಯೆನ್ನುವಂತೆ ನಾವು ಮಾಡಿದೆವು. ಈಗಲೂ ಅದು ನಮ್ಮ ಆಯ್ಕೆಯಾಗಿತ್ತೆಂಬುದು ರಹಸ್ಯವಾಗಿಯೇ ಇದೆ.

ಕೆಲ ದಿನಗಳ ಬಳಿಕ ಮರದ ತುದಿಯಿಂದ ಮತ್ತೆ ಕೋಗಿಲೆಯ ದನಿ ಕೇಳಿಸಿತು. ಅದು ಆ ಕೋಗಿಲೆಯ ಮಗುವಾಗಿರಬಹುದೆ, ಅಮ್ಮನಾಗಿರಬಹುದೆ ಎಂದೆಲ್ಲ ಯೋಚಿಸಿದೆ. ಈಗ ಆ ಕೂಗು ನನ್ನ ಕಣ್ಣಿನಲ್ಲಿ ನೀರು ತಂದಿತು.
 
ಈಗ ಅದು ನನಗೆ ಕೇವಲ ದುಃಖದ ಹಾಡಾಗಿ ಕೇಳಿಸಿತು. ಅದನ್ನು ಆಲಿಸುತ್ತಾ ಮತ್ತೆ ಆ ದನಿಯೇ ನಾನಾಗಿಬಿಟ್ಟೆ. ಆದರೆ ಈಗ ಹರ್ಷದ ದನಿಯ ಬದಲು ಕಣ್ಣುಗಳಲ್ಲಿ ದುಃಖ ಮೌನವಾಗಿ ಪ್ರವಹಿಸಿತು. ಈಗ ನಾನಿರುವಲ್ಲಿ ಜೈಲಿಲ್ಲ, ಹೂವಿಲ್ಲ, ಮಾವಿನ ತೋಪಿಲ್ಲ, ಕೋಗಿಲೆಯಿಲ್ಲ.

ಮೌನವಿಲ್ಲ. ಏಕಾಂತವಿಲ್ಲ. ನನ್ನ ಮನೆಯಿದೆ. ಎಲ್ಲರಿಗೂ ತಿಳಿದಿರುವಂತೆ ನನ್ನ ಜೊತೆ ನನ್ನ ಕುಟುಂಬವಿದೆ. ಆದರೆ ನನ್ನ ಒಳಗೆ ಎಷ್ಟೊಂದು ರಹಸ್ಯಗಳಿವೆ ಎಂದು ನನಗೇ ಆಶ್ಚರ್ಯವಾಗುತ್ತದೆ. ಅದರಲ್ಲಿ ಒಂದನ್ನು ನಾನು ಹೇಳಿಬಿಡುತ್ತೇನೆ. ಮನುಷ್ಯರು ಬೇಡ, ಮನುಷ್ಯರೇ ಇಲ್ಲದ ಲೋಕವೆಲ್ಲಾದರೂ ಇದೆಯೆ, ಅಂಥಲ್ಲಿ ಮನುಷ್ಯ ಆಗಿ ಬದುಕಬಹುದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಿ ಹುಡುಕಿ ಸಾಕಾಗಿದೆ.
 
ಒಂದು ದಿನ ಅತ್ಯಂತ ಮಧುರವಾದ ಒಂದು ಹಾಡು, ಒಂದು ಕವಿತೆ ನನ್ನ ರೇಡಿಯೋದಲ್ಲಿ ಕೇಳಿಸಿತು. ನಾನು ಕವಿತೆಯನ್ನು ಬರೆಯಲು ಪ್ರಯತ್ನಿಸಿದ್ದು, ಕವಿತೆ ಬೇಡ ಎಂದು ನಾಲ್ಕು ಸಾಲುಗಳ ಪತ್ರ ಬರೆದದ್ದು ನೆನಪಿಗೆ ಬಂತು.
 
ಹಾಡು ಆಲಿಸುತ್ತಾ ಆ ಕವಿತೆ ನನ್ನದೇ, ಆ ಹಾಡುಗಾರ ಕೂಡ ನಾನೇ ಎಂದು ಭಾಸವಾಯಿತು. ಭಾಸವಾಯಿತು ಅಲ್ಲ, ಉದ್ದೇಶಪೂರ್ವಕವೆಂದರೆ ಉದ್ದೇಶಪೂರ್ವಕ ಎಂದು ಸೃಷ್ಟಿಸಿಕೊಂಡ ಭಾವನೆ ಅಥವಾ ಭ್ರಮೆ ಅದು! ಭ್ರಮೆಯಷ್ಟು ಸುಖಕರವಾದುದು ಬೇರೊಂದಿಲ್ಲವೆನಿಸಿತು.

ಈಗ ನಾನು ದಿನದಲ್ಲಿ ಬಹಳ ಹೊತ್ತು ಮನುಷ್ಯಲೋಕದಿಂದ ದೂರ ಕೇವಲ ಹಾಡನ್ನು ಆಲಿಸುತ್ತಾ ಕವಿಯಾಗುತ್ತೇನೆ, ಕವಿತೆಯಾಗುತ್ತೇನೆ, ಹಾಡಾಗುತ್ತೇನೆ. ಬೇರೇನೂ ಕೆಲಸವಿಲ್ಲದೆ ಖಾಲಿ ತಲೆಯ ಮೇಲೆ ಕಣ್ಣುಗಳಿರುವ ಕಾರಣದಿಂದ ಏನಾದರೂ ನೋಡಬೇಕು ಎಂಬಂತೆ ನನ್ನನ್ನೇ ನೋಡುತ್ತಾ ಕುಳಿತುಕೊಳ್ಳುವವರಿದ್ದಾರೆ. ಅವರ ನೋಟದಲ್ಲಿ `ಈ ಪ್ರಾಣಿಯೇಕೆ ಹೀಗೆ?~ ಎಂಬ ಪ್ರಶ್ನೆ ನನಗೆ ಕಾಣಿಸುತ್ತದೆ.

ಯಂತ್ರದಿಂದ ಬರುವ ಹಾಡನ್ನು ಆಲಿಸುತ್ತಾ ಎಲ್ಲವನ್ನು ಕಳೆದುಕೊಂಡಿರುವಂತೆ ಅಥವಾ ಈ ಲೋಕವನ್ನು ಬಿಟ್ಟು ಬೇರೆ ಲೋಕಕ್ಕೆ ಹೋಗಿರುವಂತೆ ಕುಳಿತುಕೊಳ್ಳುವುದು ಒಂದು ಬಗೆಯ ಮರುಳು ಎಂದು ಅವರಿಗನಿಸುತ್ತಿರಬಹುದೆ?

ಅನಿಸಲಿ, ನನಗೇನು? ಇನ್ನೊಬ್ಬನೊಳಗಿನ ಸತ್ಯವನ್ನು ತಿಳಿದುಕೊಂಡು ಏನಾಗಬೇಕು ಮನುಷ್ಯನಿಗೆ? ಸತ್ಯ ಎಂದು ಹೇಳಿದ್ದೆಲ್ಲ ಸತ್ಯವಾಗಿರಲಾರದು. ಒಬ್ಬ ವ್ಯಕ್ತಿ ಕಂಡ ಸತ್ಯ ಇನ್ನೊಬ್ಬ ವ್ಯಕ್ತಿಯ ದೃಷ್ಟಿಯಕ್ಕಿಯೂ ಸತ್ಯವಾಗಿರುತ್ತದೆ ಎನ್ನಲಿಕ್ಕಾಗುವುದಿಲ್ಲ.

ಆದರೂ ಸತ್ಯವನ್ನು ಬಚ್ಚಿಡದೆ ಬಯಲು ಮಾಡಬೇಕು, ಬತ್ತಲಾಗಬೇಕು ಎಂದು ಎಲ್ಲರೂ ಹೇಳುತ್ತಾರೆ. ಬಯಲು ಮಾಡುವುದು ದುಃಖಕ್ಕೆ ಪರಿಹಾರವಲ್ಲ. ನಿಗೂಢತೆಯೇ ವಾಸ್ತವ, ಅದೇ ಸತ್ಯ. 

ನನಗೆ ಜಗತ್ತು ಕಾಣುವಂಥ ಒಂದು ರೂಪ ಇದೆ. ಜೈವಿಕವಾದ ಅಸ್ತಿತ್ವಕ್ಕೆ ಸಂಬಂಧಿಸಿದ ಒಂದು ಗುರುತು ಇದೆ. ಆದರೆ ನನ್ನ ಒಳಗೆ ನಾನು ಯಾರು ಎಂದು ಯಾರಿಗೂ ತಿಳಿಯದು. ನನ್ನೊಳಗೆ ನಾನು ಗಂಡೂ ಅಲ್ಲ, ಹೆಣ್ಣೂ ಅಲ್ಲ. ಈ ವಿಚಾರ ನನ್ನ ಬಾಳಸಂಗಾತಿಗೆ ತಿಳಿಯದು, ನನ್ನ ಮಕ್ಕಳಿಗೆ ಕೂಡ ತಿಳಿಯದು.

ನಿಗೂಢವಾಗಿರುವುದರಲ್ಲಿರುವ ಸಂತೋಷ ಏನೆಂಬುದು ನಿಗೂಢವಾಗಿರುವವರಿಗೆ ಮಾತ್ರ ಗೊತ್ತು. ದುಃಖವೆಂಬುದು ಸ್ಥಾಯೀಭಾವವಾಗಿರುವ ಮನುಷ್ಯ ಅಸ್ತಿತ್ವದಲ್ಲಿ ಸಂತೋಷ ಎಂಬುದಿದ್ದರೆ ಇದು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT